ಚೆನ್ನೈ: ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಸಹಾಯಕ ಪೊಲೀಸ್ ಅಧೀಕ್ಷಕ (ಎಎಸ್‌ಪಿ) ಬಲ್ವೀರ್ ಸಿಂಗ್ ವಿರುದ್ಧ ಕಲ್ಲಿನಿಂದ ಹೊಡೆದು ಹಾಗೂ ಇಕ್ಕಳದಿಂದ ಹಲ್ಲುಗಳನ್ನು ಕಿತ್ತ ಆರೋಪ ಮಾಡಲಾಗಿದೆ. ಕೆಲವರು ತಮ್ಮ ವೃಷಣಗಳನ್ನು ಜಜ್ಜಿದ್ದಾರೆ ಎಂಬ ಆರೋಪವನ್ನೂ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಯನ್ನು ಸೇವೆಯಿಂದ 'ಕಡ್ಡಾಯ ಕಾಯುವಿಕೆಯಲ್ಲಿ' ಇರಿಸಲಾಗಿದೆ.
ಬಲ್ವೀರ್ ಸಿಂಗ್ ಅವರು ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ್ದ ಬಗ್ಗೆ ಜಿಲ್ಲೆಯ ಅಂಬಾಸಮುದ್ರಂನ ಕನಿಷ್ಠ ಹತ್ತು ಮಂದಿ ಹೇಳಿಕೊಂಡಿದ್ದಾರೆ. ಈ ಸಂಬಂಧ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಕ್ರಮ ಕೈಗೊಂಡಿದ್ದಾರೆ.
ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಜಗಳದ ವಿಚಾರವಾಗಿ ತಮ್ಮನ್ನು ಹಾಗೂ ಇತರ ಆರು ಮಂದಿಯನ್ನು ಅಂಬಾಸಮುದ್ರಂ ಪೊಲೀಸ್ ಠಾಣೆಯಲ್ಲಿ ಬಂಧಿಸಿದ್ದ ವೇಳೆ ಎಎಸ್‌ಪಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಹೇಳಿಕೆ ನೀಡಿ ಮೂವರು ವಿಡಿಯೊ ಬಿಡುಗಡೆ ಮಾಡಿದ್ದಾರೆ.
'ಬಿಳಿ ಬಣ್ಣದ ಕೈಗವಸು ತೊಟ್ಟಿದ್ದ ಎಎಸ್‌ಪಿ ನನ್ನನ್ನು ಕರೆದು, ಕಲ್ಲಿನಿಂದ ಹಲ್ಲುಗಳಿಗೆ ಹೊಡೆದರು. ನನ್ನೊಂದಿಗೆ ಬಂದಿದ್ದ ನನ್ನ ಸಹೋದರರೂ ಸೇರಿದಂತೆ ಇತರರಿಗೂ ಇದೇ ರೀತಿ ಹಿಂಸೆ ನೀಡಲಾಯಿತು.ಇತ್ತೀಚೆಗಷ್ಟೇ ಮದುವೆಯಾಗಿದ್ದ ನನ್ನ ಸಹೋದರ ಹಾಸಿಗೆ ಹಿಡಿದಿದ್ದಾನೆ' ಎಂದು ಚೆಲ್ಲಪ್ಪ ಎಂಬುವವರು ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ.
ವಿಡಿಯೊದಲ್ಲಿ ಕಾಣಿಸಿಕೊಂಡಿರುವ ಇತರರೂ ಎಎಸ್‌ಪಿ ವಿರುದ್ಧ ಇದೇರೀತಿಯ ಆರೋಪ ಮಾಡಿದ್ದಾರೆ. ತಿರುನಲ್ವೇಲಿ ಜಿಲ್ಲಾಧಿಕಾರಿ ಕೆ.ಪಿ. ಕಾರ್ತಿಕೇಯನ್ ಅವರು ಈ ಸಂಬಂಧ ತನಿಖೆಗೆ ಭಾನುವಾರ ಆದೇಶಿಸಿದ್ದಾರೆ. ಡಿಜಿಪಿ ಅವರು, ಬಲ್ವೀರ್ ಅವರನ್ನು ಕಡ್ಡಾಯ ಕಾಯುವಿಕೆಯಲ್ಲಿರಿಸಿ ಸೋಮವಾರ ಆದೇಶ ಹೊರಡಿಸಿದ್ದಾರೆ.
'ತಿರುನಲ್ವೇಲಿ ಜಿಲ್ಲೆಯ ಅಂಬಾಸಮುದ್ರಂ ಉಪವಿಭಾಗದ ಎಎಸ್‌ಪಿ ಹಾಗೂ ಐಪಿಎಸ್ ಅಧಿಕಾರಿ ಬಲ್ವೀರ್ ಸಿಂಗ್ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಮುಖ್ಯ ಅಧಿಕಾರಿ ಹುದ್ದೆಯ ಕಾಯುವಿಕೆಯಲ್ಲಿರಿಸಲಾಗಿದೆ' ಎಂದು ಮಾರ್ಚ್ 27ರಂದು (ಸೋಮವಾರ) ಪ್ರಕಟಿಸಿದ್ದಾರೆ.
ಪೊಲೀಸ್ ಕಸ್ಟಡಿಯಲ್ಲಿ ಜನರಿಗೆ ಚಿತ್ರಹಿಂಸೆ ನೀಡುವ ಪ್ರಕರಣಗಳು ತಮಿಳುನಾಡಿನಲ್ಲಿ ಸಾಕಷ್ಟು ಎಂಬಂತೆ ವರದಿಯಾಗುತ್ತಿವೆ. 2020ರಲ್ಲಿ ಬೆಳಕಿಗೆ ಬಂದ ಇಂಥದೇ ಪ್ರಕರಣವೊಂದರಲ್ಲಿ ತಂದೆ–ಮಗ ಮೃತಪಟ್ಟಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.