ಶುಕ್ರವಾರ, ಅಕ್ಟೋಬರ್ 29, 2021
20 °C
ಬಿಜೆಪಿ ಸಂಸದ ವರುಣ್ ಗಾಂಧಿ ಟ್ವೀಟ್ ಮಾಡಿದ ವಿಡಿಯೊ

ರೈತರ ಮೇಲೆ ನುಗ್ಗಿದ ಜೀಪ್: ವಿಡಿಯೊಗಳು ವೈರಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ವಾಹನಗಳನ್ನು ನುಗ್ಗಿಸಿರುವ ವಿಡಿಯೊ ವೈರಲ್ ಆಗಿದೆ. ಬಿಜೆಪಿ ಸಂಸದ ವರುಣ್ ಗಾಂಧಿ ಅವರು ಮಂಗಳವಾರ ಬೆಳಿಗ್ಗೆ ವಿಡಿಯೊ ಒಂದನ್ನು ಟ್ವೀಟ್ ಮಾಡಿದ್ದಾರೆ. ಪ್ರತಿಭಟನೆಯ ನಂತರ ವಾಪಸಾಗುತ್ತಿದ್ದ ರೈತರ ಮೇಲೆ, ಹಿಂಬದಿಯಿಂದ ಬಂದು ವಾಹನ ನುಗ್ಗಿಸಿರುವ ದೃಶ್ಯಗಳು ಅದರಲ್ಲಿವೆ.

ಈ ವಿಡಿಯೊವನ್ನು ಹಲವರು ಹಂಚಿಕೊಂಡಿದ್ದರಾದರೂ, ವರುಣ್ ಗಾಂಧಿ ಅವರು ಟ್ವೀಟ್ ಮಾಡಿರುವ ವಿಡಿಯೊ 44 ಸೆಕೆಂಡ್‌ಗಳಷ್ಟು ದೀರ್ಘವಾದುದು ಮತ್ತು ದೃಶ್ಯಗಳು ಸ್ಪಷ್ಟವಾಗಿವೆ.

ಪ್ರತಿಭಟನೆಯಿಂದ ರೈತರು ವಾಪಸಾಗುತ್ತಿದ್ದಾರೆ. ಸಚಿವ ಮಿಶ್ರಾ ಅವರಿಗೆ ತೋರಿಸಿದ್ದ ಕಪ್ಪು ಬಾವುಟಗಳನ್ನು ಮಡಿಚಿಟ್ಟುಕೊಂಡು ರೈತರು, ಪರಸ್ಪರ ಮಾತನಾಡುತ್ತಾ ಹೋಗುತ್ತಿದ್ದಾರೆ. ಆಗ ಅವರ ಹಿಂಬದಿಯಿಂದ ವೇಗವಾಗಿ ಬಂದ ಬೂದು ಬಣ್ಣದ ಮಹೀಂದ್ರಾ ಥಾರ್ ಜೀಪ್‌, ರೈತರನ್ನು ಗುದ್ದಿಕೊಂಡು ವೇಗವಾಗಿಯೇ ಮುಂದೆ ಹೋಗುತ್ತದೆ. ನಡೆದುಹೋಗುತ್ತಿದ್ದ ರೈತರು ಚೆಲ್ಲಾಪಿಲ್ಲಿಯಾಗಿ ಬೀಳುತ್ತಾರೆ. ಇಬ್ಬರು ರೈತರು ಅದೇ ಥಾರ್‌ ಜೀಪ್‌ನ ಬಾನೆಟ್‌ ಮೇಲೆ ಬೀಳುತ್ತಾರೆ. ಒಬ್ಬರ ತಲೆ ಜೀಪಿನ ಮುಂದಿನ ಗಾಜಿಗೆ ಅಪ್ಪಳಿಸುತ್ತದೆ.

ಆ ಎಲ್ಲರೂ ರಸ್ತೆಗೆ ಚೆಲ್ಲಾಪಿಲ್ಲಿಯಾಗಿ ಬೀಳುತ್ತಾರೆ. ಥಾರ್ ಜೀಪ್ ಅನ್ನು ಹಿಂಬಾಲಿಸಿ, ಕಪ್ಪು ಬಣ್ಣದ ಟೊಯೋಟಾ ಫಾರ್ಚೂನರ್ ಬರುತ್ತದೆ. ಕೆಳಕ್ಕೆ ಬಿದ್ದಿದ್ದ ಒಬ್ಬ ರೈತನ ಮೇಲೆ ಅದು ಹಾದುಹೋಗುತ್ತದೆ. ಅದನ್ನು ಹಿಂಬಾಲಿಸಿ ಬಿಳಿ ಬಣ್ಣದ ಮಹೀಂದ್ರಾ ಸ್ಕಾರ್ಪಿಯೊ ಹೋಗುತ್ತದೆ. ಕೆಲವೇ ಕ್ಷಣಗಳಲ್ಲಿ ಜೀಪ್‌ ರಸ್ತೆ ಬದಿಗೆ ಸರಿದು ನಿಲ್ಲುತ್ತದೆ. ಗಾಯಗೊಂಡ ರೈತರ ಆಕ್ರಂದನವೂ ಈ ವಿಡಿಯೊದಲ್ಲಿ ದಾಖಲಾಗಿದೆ. ಈ ವಿಡಿಯೊವನ್ನು ಈಗ 3 ಲಕ್ಷಕ್ಕೂ ಹೆಚ್ಚು ಬಾರಿ ಹಂಚಿಕೊಳ್ಳಲಾಗಿದೆ.

ಈ ಘಟನೆಗೂ ಮುನ್ನ ನಡೆದ ಎರಡು ಘಟನೆಗಳ ವಿಡಿಯೊ ಸಹ ಬುಧವಾರ ಮಧ್ಯಾಹ್ನದ ನಂತರ ವೈರಲ್ ಆಗಿವೆ. ಲಖಿಂಪುರ ಗುರುದ್ವಾರದ ಬಳಿ ಕಪ್ಪು ಬಾವುಟ ಪ್ರದರ್ಶಿಸುತ್ತಾ ನಿಂತಿದ್ದ ರೈತರನ್ನು ಕೇಂದ್ರ ಸಚಿವ ಅಜಯ್ ಮಿಶ್ರಾ ಅವರು ಅಣಕಿಸುವ ದೃಶ್ಯ ಒಂದು ವಿಡಿಯೊದಲ್ಲಿ ಇದೆ. ಕಪ್ಪು ಬಾವುಟ ಪ್ರದರ್ಶಿಸುತ್ತಿದ್ದ ರೈತರ ಗುಂಪನ್ನು ಹಾದುಹೋಗುವಾಗ ಸಚಿವ ಅಜಯ್ ಮಿಶ್ರಾ ಅವರು ಪ್ರಯಾಣಿಸುತ್ತಿದ್ದ ಬಿಳಿ ಬಣ್ಣದ ಟೊಯೊಟಾ ಇನೋವಾ ಕ್ರಿಸ್ಟಾ ನಿಲ್ಲುತ್ತದೆ. ಅದರ ಗಾಜನ್ನು ಇಳಿಸುವ ಅಜಯ್ ಮಿಶ್ರಾ ಅವರು, ರೈತರತ್ತ ಸೋಲಿನ ಸಂಜ್ಞೆ ಮಾಡುತ್ತಾರೆ. ನಂತರ ಅಲ್ಲಿಂದ ನಿರ್ಗಮಿಸುತ್ತಾರೆ. 

ಮತ್ತೊಂದು ವಿಡಿಯೊದಲ್ಲಿ ರೈತರ ಗುಂಪಿನ ಮಧ್ಯೆ ಥಾರ್, ಫಾರ್ಚೂನರ್ ಮತ್ತು ಸ್ಕಾರ್ಪಿಯೋ ಎಸ್‌ಯುವಿಗಳು ವೇಗವಾಗಿ ಹೋಗುವ ದೃಶ್ಯವಿದೆ. ಈ ಘಟನೆಯ ನಂತರವೇ ರೈತರ ಮೇಲೆ ವಾಹನ ನುಗ್ಗಿಸಲಾಗಿದೆ ಎಂದು ಹಲವರು ಟ್ವೀಟ್‌ನಲ್ಲಿ ಆರೋಪಿಸಿದ್ದಾರೆ.

ರೈತರ ಮೇಲೆ ನುಗ್ಗಿಸಲಾದ ಮಹೀಂದ್ರಾ ಥಾರ್‌ನಿಂದ ಇಬ್ಬರು ಇಳಿದು ಓಡುತ್ತಿರುವ 10 ಸೆಕೆಂಡ್‌ಗಳ ದೃಶ್ಯವಿರುವ ಮತ್ತೊಂದು ವಿಡಿಯೊ ವೈರಲ್ ಆಗಿದೆ. ಹೀಗೆ ನಿಂತಿರುವ ಥಾರ್‌ನ ಚಕ್ರದಡಿಯಲ್ಲಿ ರೈತನೊಬ್ಬ ಸಿಲುಕಿರುವ ದೃಶ್ಯ ಈ ವಿಡಿಯೊದಲ್ಲಿ ಇದೆ. ಮಹೀಂದ್ರಾ ಥಾರ್‌ನಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬನನ್ನು ರೈತರು ಹಿಡಿದು ಥಳಿಸುತ್ತಿರುವ ದೃಶ್ಯಗಳಿರುವ ಮತ್ತೊಂದು ವಿಡಿಯೊ ಸಹ ವೈರಲ್ ಆಗಿದೆ.

‘ವರುಣ್ ಕಾಂಗ್ರೆಸ್ ಸೇರಲಿ’

ವರುಣ್ ಗಾಂಧಿ ಅವರು ಈ ವಿಡಿಯೊವನ್ನು ಟ್ವೀಟ್ ಮಾಡಿರುವುದು ಬಿಜೆಪಿಯಲ್ಲಿ ಹಲವರನ್ನು ಕೆರಳಿಸಿದೆ. ಇದೇ ವಿಡಿಯೊವನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹ ಟ್ವೀಟ್ ಮಾಡಿದ್ದಾರೆ. ಇದೂ ಸಹ ಬಿಜೆಪಿಯ ಹಲವರನ್ನು ಕೆರಳಿಸಿದೆ.

ನೆಹರೂ ಕುಟುಂಬದವರಾದ ವರುಣ್ ಗಾಂಧಿ ಅವರು ತಮ್ಮ ನಿಜಬಣ್ಣ ತೋರಿಸಿದ್ದಾರೆ. ಬಿಜೆಪಿ ವಿರುದ್ಧ ಟ್ವೀಟ್ ಮಾಡಿದ್ದಾರೆ. ಅವರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಲಿ ಎಂದು ಬಿಜೆಪಿಯ ಹಲವು ಕಾರ್ಯಕರ್ತರು ಟ್ವೀಟ್ ಮಾಡಿದ್ದಾರೆ.

ಭೂಪೇಶ್ ಬಘೆಲ್ ಧರಣಿ

ಉತ್ತರ ಪ್ರದೇಶದ ರಾಜಧಾನಿ ಲಖನೌನ ವಿಮಾನ ನಿಲ್ದಾಣಕ್ಕೆ ಬಂದಿಳಿದ ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್ ಬಘೆಲ್‌ ಅವರನ್ನು ಉತ್ತರ ಪ್ರದೇಶ ಪೊಲೀಸರು ತಡೆಹಿಡಿದಿದ್ದಾರೆ. ಆಗ ಅದನ್ನು ವಿರೋಧಿಸಿ ಬಘೇಲ್ ಅವರು ವಿಮಾನ ನಿಲ್ದಾಣದಲ್ಲಿಯೇ ಧರಣಿ ಕೂತಿದ್ದಾರೆ.

ಸೋಮವಾರವೂ ಲಖನೌಗ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ಬಘೆಲ್ ಅವರನ್ನು ವಿಮಾನದಿಂದ ಇಳಿಯಲು ಉತ್ತರ ಪ್ರದೇಶ ಪೊಲೀಸರು ಅವಕಾಶ ನೀಡಿರಲಿಲ್ಲ. ಹೀಗಾಗಿ ಅವರು ವಾಪಸಾಗಿದ್ದರು. ಮಂಗಳವಾರ ಮತ್ತೆ ಬಂದ ಬಘೆಲ್ ಅವರು ವಿಮಾನ ನಿಲ್ದಾಣದ ನಿರ್ಗಮನ ಗೇಟ್‌ವರೆಗೂ ಬಂದರು. ಆದರೆ ಅಲ್ಲಿ ಪೊಲೀಸರು ಅವರನ್ನು ತಡೆದು ನಿಲ್ಲಿಸಿದರು. ಈ ಘಟನೆಯ ವಿಡಿಯೊವನ್ನು ಬಘೆಲ್ ಅವರೇ ಟ್ವೀಟ್ ಮಾಡಿದ್ದಾರೆ.

ಆಗ ಬಘೆಲ್ ಅವರು, ‘ತಮ್ಮಾ, ನನ್ನನ್ನು ಏಕೆ ತಡೆಯುತ್ತಿದ್ದೀಯ’ ಎಂದು ಪೊಲೀಸ್ ಅಧಿಕಾರಿಯನ್ನು ಪ್ರಶ್ನಿಸಿದರು. ಆಗ ಮತ್ತೊಬ್ಬ ಅಧಿಕಾರಿ ಹತ್ತಿರ ಬಂದು, 'ಲಖಿಂಪುರದಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ಅಲ್ಲಿಗೆ ಹೊರಗಿನವರ ಪ್ರವೇಶ...' ಎಂದು ಓದಿದರು. ಹಿರಿಯ ಅಧಿಕಾರಿ, ಆ ಕಿರಿಯ ಅಧಿಕಾರಿಯನ್ನು ತಡೆದರು. 

ಬಘೆಲ್ ಅವರು, ‘ಏನಿದೆ ಓದಿ, ಓದಿ ಮುಂದಕ್ಕೆ’ ಎಂದರು. ನಂತರ, ‘ನನ್ನನ್ನು ಏಕೆ ತಡೆಯುತ್ತಿದ್ದೀರಿ ಎಂಬುದರ ಆದೇಶವೆಲ್ಲಿ? ನಿಷೇಧಾಜ್ಞೆ ಇರುವುದು ಲಖಿಂಪುರದಲ್ಲಿ. ನಾನು ಈಗ ಇರುವುದು ಲಖನೌನಲ್ಲಿ. ನಾನು ಹೋಗುತ್ತಿರುವುದು ಸೀತಾಪುರಕ್ಕೆ. ನೀವು ನನ್ನನ್ನು ಏಕೆ ತಡೆಯುತ್ತೀರಿ’ ಎಂದು ಪ್ರಶ್ನಿಸಿದರು.

ನಿಮ್ಮನ್ನು ತಡೆಯುವಂತೆ ಆದೇಶವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಆಗ ಬಘೆಲ್ ಅವರು ‘ಹೌದಾ’ ಎಂದು ಹೇಳಿ. ಅಲ್ಲೇ ನೆಲದಮೇಲೆ ಧರಣಿ ಕೂತರು. ಕುರ್ಚಿಯಲ್ಲಿ ಕೂರುವಂತೆ ಅಧಿಕಾರಿಗಳು ಕುರ್ಚಿ ನೀಡಿದರೂ ಅದನ್ನು ನಿರಾಕರಿಸಿದರು. ಹಲವು ಗಂಟೆಗಳ ಕಾಲ ಅವರು ಹಾಗೆಯೇ ಧರಣಿ ಕೂತರು. ಧರಣಿ ನಡೆಸುತ್ತಲೇ ಮಾಧ್ಯಮ ಮಿತ್ರರ ಜತೆ ಫೋನ್‌ ಮೂಲಕ ಮಾಧ್ಯಮಗೋಷ್ಠಿ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಲಖನೌನಲ್ಲಿ ಕಾರ್ಯಕ್ರಮ ನಡೆಸುತ್ತಿದ್ದಾರೆ. ಅವರಿಗೆ ನಿಷೇಧಾಜ್ಞೆ ಅನ್ವಯವಾಗುವುದಿಲ್ಲವೇ ಎಂದು ಬಘೆಲ್ ಪ್ರಶ್ನಿಸಿದ್ದಾರೆ.

ಘಟನೆಗೆ ಧರ್ಮದ ಬಣ್ಣ

ರೈತರ ಮೇಲೆ ಜೀಪ್ ನುಗ್ಗಿಸಿದ ಘಟನೆಗೆ ಈಗ ಧರ್ಮ ಮತ್ತು ಜಾತಿಯ ಬಣ್ಣ ನೀಡಲಾಗಿದೆ. ಲಖಿಂಪುರದಲ್ಲಿ ಘಟನೆ ನಡೆದಾಗ ಪ್ರತಿಭಟನೆ ನಡೆಸುತ್ತಿದ್ದವರಲ್ಲಿ ಬಹುತೇಕ ರೈತರು ಸಿಖ್ ಧರ್ಮದವರಾಗಿದ್ದಾರೆ. ಅವರು ಯಾರೂ ಬ್ರಾಹ್ಮಣರಾದ ಅಜಯ್ ಮಿಶ್ರಾ ಅವರಿಗೆ ಮತ ನೀಡುವುದಿಲ್ಲ. ಹೀಗಾಗಿ ಮಿಶ್ರಾ ಅವರು, ಸಿಖ್ ರೈತರ ಮೇಲೆ ಜೀಪ್ ನುಗ್ಗಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.

ಬಿಜೆಪಿಯ ಹಲವು ಕಾರ್ಯಕರ್ತರು, ಪ್ರತಿಭಟನೆ ನಡೆಸಿದ ರೈತರು ಖಲಿಸ್ತಾನಿಗಳು. ಹೀಗಾಗಿಯೇ ಅವರು ಕೇಂದ್ರ ಸಚಿವರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಈ ಭಯೋತ್ಪಾದಕರ ಹುಟ್ಟಡಗಿಸಬೇಕು. ಅವರ ಮೇಲೆ ಜೀಪ್ ನುಗ್ಗಿಸಿದ್ದು ಸರಿಯಾಗಿಯೇ ಇದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ರೈತರ ಮೇಲೆ ನುಗ್ಗಿದ ಜೀಪ್‌ನ ಮಾಲೀಕರಾದ ಕೇಂದ್ರ ಸಚಿವ ಅಜಯ್ ಮಿಶ್ರಾ ಸಹ ಇಂತಹದ್ದೇ ಮಾತನ್ನಾಡಿದ್ದಾರೆ. 'ಥಾರ್ ಜೀಪನ್ನು ಅವರು ಉರುಳಿಸಿ ಬೆಂಕಿ ಹಚ್ಚಿದ್ದು, ಫಾರ್ಚೂನರ್‌ಗೆ ಬೆಂಕಿ ಹಚ್ಚಿದ್ದನ್ನು ನೀವೆಲ್ಲಾ ನೋಡಿದ್ದೀರಿ. ಅವರೆಲ್ಲಾ ರೈತರಾಗಿರಲು ಸಾಧ್ಯವೇ ಇಲ್ಲ. ಅವರೆಲ್ಲಾ ಭಯೋತ್ಪಾದಕರು' ಎಂದು ಅವರು ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

***

ಉದ್ದೇಶಪೂರ್ವಕವಾಗಿ ರೈತರ ಮೇಲೆ ವಾಹನ ನುಗ್ಗಿಸುವ ಈ ದೃಶ್ಯವು ಎಂತಹವರ ಎದೆಯನ್ನೂ ನಡುಗಿಸುತ್ತದೆ. ತಪ್ಪಿತಸ್ಥರನ್ನು ತಕ್ಷಣವೇ ಬಂಧಿಸಿ-

-ವರುಣ್ ಗಾಂಧಿ, ಬಿಜೆಪಿ ಸಂಸದ

***

ಸಚಿವ ಅಜಯ್ ಮಿಶ್ರಾ ಅವರ ಮಗ ಆಶಿಶ್ ಮಿಶ್ರಾ ಅವರೇ ಜೀಪ್ ಚಲಾಯಿಸುತ್ತಿದ್ದರು. ನಮ್ಮ ಮೇಲೆ ಜೀಪ್ ಹತ್ತಿಸದ ನಂತರ, ಗುಂಡು ಹಾರಿಸುತ್ತಾ ಅವರು ಓಡಿ ಹೋದರು

-ತೇಜಿಂದರ್ ವಿರ್ಕ್, ಗಾಯಾಳು ರೈತ

***

ಯೋಗಿ ಅವರ ಸರ್ಕಾರ ಅಂಥದ್ದು, ಇಂಥದ್ದು ಎಂದು ಬೇರೆಯವರು ಹೇಳಿದ್ದನ್ನು ಕೇಳಿದ್ದೆ. ಈಗ ಲಖನೌಗೆ ಬಂದಿಳಿದ ಮೇಲೆ ಅವರ ಸರ್ಕಾರ ಎಂಥದ್ದು ಎಂಬುದು ತಿಳಿಯಿತು

-ಭೂಪೇಶ್ ಬಘೇಲ್, ಛತ್ತೀಸಗಡ ಮುಖ್ಯಮಂತ್ರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು