ಶುಕ್ರವಾರ, ಆಗಸ್ಟ್ 19, 2022
25 °C

30 ವರ್ಷದಲ್ಲಿ 3 ಕಿ.ಮೀ ಉದ್ದದ ಕಾಲುವೆ ಅಗೆದು ಗ್ರಾಮಕ್ಕೆ ನೀರು ಹರಿಸಿದ ಭುಯಾನ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

Laungi Bhuiyan

ಗಯಾ (ಬಿಹಾರ): ಗಯಾ ಜಿಲ್ಲೆಯ ಲಹತುವಾ ಪ್ರದೇಶದ ಕೋಠಿಲ್ವಾ ಗ್ರಾಮದ ವ್ಯಕ್ತಿಯೊಬ್ಬರು ಹತ್ತಿರದ ಬೆಟ್ಟ ಪ್ರದೇಶದಿಂದ ಹರಿದು ಬರುವ ಮಳೆ ನೀರನ್ನು ಗ್ರಾಮದ ಹೊಲಗಳಿಗೆ ಹರಿಸಲು 3 ಕಿಮೀ ಉದ್ದದ ಕಾಲುವೆ ನಿರ್ಮಿಸಿದ್ದಾರೆ.

30 ವರ್ಷಗಳ ಕಾಲ ಏಕಾಂಗಿಯಾಗಿ 3 ಕಿ.ಮೀ ಕಾಲುವೆ ನಿರ್ಮಿಸಿ ಗ್ರಾಮದ ರೈತರಿಗೆ ನೆರವಾದ ಈ ವ್ಯಕ್ತಿಯ ಹೆಸರು ಲೌಂಗಿ ಭುಯಾನ್. ಈ ಕಾಲುವೆಯ ಮೂಲಕ ಹರಿದು ಬರುವ ನೀರಿನಿಂದ ಗ್ರಾಮದ ಕೆರೆಗಳು ತುಂಬಿವೆ.

ಕಳೆದ 30 ವರ್ಷಗಳಿಂದ ಜಾನುವಾರುಗಳನ್ನು ಮೇಯಲು ಕಾಡಿಗೆ ಅಟ್ಟಿ, ಕಾಲುವೆ ಅಗೆಯುವ ಕಾರ್ಯದಲ್ಲಿ ನಿರತನಾಗಿದ್ದೆ. ಯಾರೊಬ್ಬರೂ ನನ್ನ ಸಹಾಯಕ್ಕೆ ಬರಲಿಲ್ಲ. ಗ್ರಾಮದಲ್ಲಿರುವವರು ಪಟ್ಟಣಕ್ಕೆ ಹೋಗಿ ಜೀವನ ನಿರ್ವಹಣೆಯ ದಾರಿ ಕಂಡುಕೊಳ್ಳುತ್ತಾರೆ.   ಆದರೆ ನಾನು ಇಲ್ಲೇ ಇರಲು ತೀರ್ಮಾನಿಸಿದೆ ಅಂತಾರೆ ಭುಯಾನ್.

ಗಯಾದಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಕೋಠಿಲ್ವಾ ಗ್ರಾಮವು ದಟ್ಟ ಅರಣ್ಯ ಮತ್ತು ಬೆಟ್ಟ ಪ್ರದೇಶದಿಂದಾವೃತವಾಗಿದೆ.ಈ ಗ್ರಾಮವು ಮಾವೋವಾದಿಗಳ ಸಂರಕ್ಷಣಾ ತಾಣ ಎಂದೇ ಗುರುತಿಸಲ್ಪಟ್ಟಿದೆ. ಇಲ್ಲಿನ ಜನರು ಜೀವನ ನಿರ್ವಹಣೆಗಾಗಿ ಕೃಷಿ ಮತ್ತು ಹೈನುಗಾರಿಕೆ ಮಾಡುತ್ತಿದ್ದಾರೆ. ಮಳೆಗಾಲದಲ್ಲಿ ಬೆಟ್ಟದಿಂದ ಹರಿದು ಬರುವ ಮಳೆ ನೀರು ನದಿ ಸೇರುತ್ತದೆ. ಈ ನೀರನ್ನು ಗ್ರಾಮದ ಕೆರೆಗಳಿಗೆ ಹರಿಯುವಂತೆ ಮಾಡುವ ಯೋಚನೆ ಮೂಡಿದ್ದೇ ತಡ ಭುಯಾನ್ ಕಾಲುವೆ ನಿರ್ಮಿಸುವ ನಿರ್ಧಾರ ಕೈಗೊಂಡರು.

ಬೆಟ್ಟದಿಂದ ಬರುವ ನೀರನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂಬ ಉದ್ದೇಶ  ಭುಯಾನ್ ಅವರದ್ದಾಗಿತ್ತು. 30 ವರ್ಷಗಳಿಂದ ಅವರೊಬ್ಬರೇ ಕಾಲುವೆ ನಿರ್ಮಾಣ ಮಾಡಿದ್ದಾರೆ.  ಇದರಿಂದ ಗ್ರಾಮದಲ್ಲಿನ ಹೊಲಗಳಿಗೂ, ಜಾನುವಾರುಗಳಿಗೂ ಕುಡಿಯಲು ನೀರು ಲಭಿಸಲಿದೆ. ಅವರು ತಮ್ಮ ಸ್ವಂತಕ್ಕಾಗಿ ಅಲ್ಲ ಇಡೀ ಗ್ರಾಮಕ್ಕಾಗಿ ಈ ಕೆಲಸ ಮಾಡಿದ್ದಾರೆ ಎಂದು ಸ್ಥಳೀಯರಾದ ಪಾಟ್ಟಿ ಮಾಂಝಿ ಹೇಳಿದ್ದಾರೆ .

ಈ ಕಾಲುವೆಯಿಂದ ಹಲವಾರು ಜನರಿಗೆ ಪ್ರಯೋಜನವಾಗಲಿದೆ. ಅವರ ಈ ಕೆಲಸದಿಂದಲೇ ಜನರು ಈಗ ಗುರುತಿಸುತ್ತಿದ್ದಾರೆ ಎಂದು ಗ್ರಾಮದ ಶಿಕ್ಷಕ ರಾಮ್ ವಿಲಾಸ್ ಸಿಂಗ್ ಭುಯಾನ್ ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು