ಶುಕ್ರವಾರ, ಮಾರ್ಚ್ 31, 2023
32 °C

ಉತ್ತರಾಖಂಡದಲ್ಲಿ ನಾಯಕತ್ವ ಬದಲಾವಣೆ; ಇಸಿ ನಿರ್ಧಾರಕ್ಕೆ ಕಾಯುತ್ತಿರುವ ಬಿಜೆಪಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ/ ಡೆಹ್ರಾಡೂನ್‌: ಉತ್ತಾರಖಂಡದಲ್ಲಿ ನಾಯಕತ್ವದ ಬದಲಾವಣೆ ಕುರಿತು ಚರ್ಚೆ ಜೋರಾಗಿದ್ದು, ಈ ಮಧ್ಯೆ ಬಿಜೆಪಿಯ ಮುಂದಿನ ನಡೆಯ ಕುರಿತು ಮುಖ್ಯಮಂತ್ರಿ ತೀರತ್‌ ಸಿಂಗ್‌ ರಾವತ್‌ ಶುಕ್ರವಾರ ಸುಳಿವು ನೀಡಿದ್ದಾರೆ.

ರಾಜ್ಯದಲ್ಲಿ ಉಪಚುನಾವಣೆ ನಡೆಸುವ ಕುರಿತು ಚುನಾವಣಾ ಆಯೋಗದ ನಿರ್ಧಾರದ ಮೇಲೆ ಬಿಜೆಪಿಯ ಮುಂದಿನ ನಡೆ ಇರಲಿದೆ ಎಂದು ಸಿಎಂ ರಾವತ್‌ ಹೇಳಿದ್ದಾರೆ. ಚುನಾವಣಾ ಆಯೋಗವು ಉಪಚುನಾವಣೆ ಆಯೋಜಿಸದಿರುವ ಸಾಧ್ಯತೆಯ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿ ಹೊಸ ನಾಯಕನನ್ನು ಆಯ್ಕೆ ಮಾಡಲಿದೆ ಎಂದು ಊಹಿಸಲಾಗಿದೆ.

ತೀರತ್‌ ಸಿಂಗ್‌ ರಾವತ್‌ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಲು ಮುಂದಿನ 2 ತಿಂಗಳ ಒಳಗೆ ಶಾಸಕನಾಗಿ ಆಯ್ಕೆಯಾಗಬೇಕಾಗುತ್ತದೆ. ತ್ರಿವೇಂದ್ರ ಸಿಂಗ್‌ ರಾವತ್‌ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ ನಂತರ ತೀರತ್‌ ಸಿಂಗ್ ರಾವತ್‌ ಅವರನ್ನು ಬಿಜೆಪಿ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದೆ.

ವಿಧಾನಸಭೆ ಅವಧಿಯು ಒಂದು ವರ್ಷಕ್ಕಿಂತ ಕಡಿಮೆ ಸಮಯದಲ್ಲಿ ಮುಕ್ತಾಯವಾಗಲಿದ್ದರೆ, ಅಂಥ ಸಂದರ್ಭದಲ್ಲಿ ಖಾಲಿ ಉಳಿದಿರುವ ಸ್ಥಾನಗಳಿಗೆ ಚುನಾವಣಾ ಆಯೋಗವು ಉಪಚುನಾವಣೆಗೆ ಆದೇಶಿಸುವ ಸಾಧ್ಯತೆ ಕಡಿಮೆ ಇರುತ್ತದೆ. ಕೊರೊನಾ ವೈರಸ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ಚುನಾವಣೆ ನಡೆಸಿರುವ ಬಗ್ಗೆ ಕೋರ್ಟ್‌ಗಳಿಂದ ಟೀಕೆ ವ್ಯಕ್ತವಾಗಿರುವುದು ಸಹ ಚುನಾವಣಾ ಆಯೋಗದ ನಿರ್ಧಾರದ ಮೇಲೆ ಪರಿಣಾಮ ಬೀರಬಹುದಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ–ಉತ್ತರಾಖಂಡ: 3ನೇ ಅಲೆಯಲ್ಲಿ ಕೋವಿಡ್‌ ಪೀಡಿತರ ಚಿಕಿತ್ಸೆಗೆ ಸಿಎಂ ನಿವಾಸವೂ ಸಜ್ಜು

ಬಿಜೆಪಿ ಮುಖಂಡರು ದಿಢೀರನೆ ಬುಧವಾರ ತೀರತ್‌ ಸಿಂಗ್ ರಾವತ್‌ ಅವರನ್ನು ದೆಹಲಿಗೆ ಕರೆಸಿಕೊಂಡಿದ್ದರು. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ರಾವತ್‌ ಭೇಟಿ ಮಾಡಿದ್ದರು. ಗುರುವಾರ ರಾಜ್ಯಕ್ಕೆ ಮರಳ ಬೇಕಿದ್ದ ಅವರು ದೆಹಲಿಯಲ್ಲೇ ಉಳಿದರು.

ಪೌಡಿ ಗಡವಾಲ್‌ ಲೋಕಸಭಾ ಕ್ಷೇತ್ರದ ಸಂಸದರಾದ ರಾವತ್‌, 2021ರ ಮಾರ್ಚ್‌ 10ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲು ಸೆಪ್ಟೆಂಬರ್‌ 10ರೊಳಗೆ ವಿಧಾನಸಭೆ ಸದಸ್ಯನಾಗಿ ಆಯ್ಕೆಯಾಗಬೇಕಾಗುತ್ತದೆ.

ಉತ್ತರಾಖಂಡ ವಿಧಾನಸಭೆಯಲ್ಲಿ ಬಿಜೆಪಿ ಸರ್ಕಾರದ ಅವಧಿಯು ಮುಂದಿನ ವರ್ಷ ಮಾರ್ಚ್‌ಗೆ ಅಂತ್ಯವಾಗಲಿದೆ. ಒಂಬತ್ತು ತಿಂಗಳು ಮಾತ್ರ ಅಧಿಕಾರ ಅವಧಿ ಉಳಿದಿದೆ. ಉತ್ತರಾಖಂಡದ ಗಂಗೋತ್ರಿ ಮತ್ತು ಹಲ್‌ದ್ವಾನಿ ವಿಧಾನಸಭೆ ಕ್ಷೇತ್ರಗಳು ಖಾಲಿ ಉಳಿದಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು