ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ: ‘ಅಸಂಸದೀಯ ಪದ’ಗಳಿಗೆ ಆಕ್ರೋಶ

‘ಪದಗಳಿಗೆ ನಿಷೇಧ’: ವಿರೋಧ ಪಕ್ಷಗಳ ಆಕ್ಷೇಪ l ಲೋಕಸಭೆ ಸ್ಪೀಕರ್ ಸ್ಪಷ್ಟನೆ
Last Updated 14 ಜುಲೈ 2022, 19:06 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾ ಕಾರ್ಯಾಲಯವು ‘ಅಸಂಸದೀಯ ಅಭಿವ್ಯಕ್ತಿ’ಗಳಿಗೆ ಸಂಬಂಧಿಸಿ ರೂಪಿಸಿರುವ ಹೊಸ ಕಿರುಹೊತ್ತಗೆಗೆ ವಿರೋಧ ಪಕ್ಷಗಳಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಾಸ್ತವಗಳನ್ನು ವಿವರಿಸಲು ಬಳಸಲಾದ ಪದಗಳನ್ನು ಅಸಂಸದೀಯ ಅಭಿವ್ಯಕ್ತಿ ಪಟ್ಟಿಗೆ ಸೇರಿಸಲಾಗಿದೆ ಎಂದು ವಿರೋಧ ಪಕ್ಷಗಳು ಗುರುವಾರ ಹೇಳಿವೆ. ಆದರೆ, ಯಾವುದೇ ಪದವನ್ನು ನಿಷೇಧಿಸಲಾಗಿಲ್ಲ ಎಂದು ಲೋಕಸಭೆಯ ಸ್ಪೀಕರ್‌ ಓಂ ಬಿರ್ಲಾ ಸ್ಪಷ್ಟೀಕರಣ ಕೊಟ್ಟಿದ್ದಾರೆ.

‘ಜುಮ್ಲಾ ಜೀವಿ’, ‘ಕೋವಿಡ್‌ ಹರಡುವವನು’, ‘ಸ್ನೂಪ್‌ಗೇಟ್‌’,‘ನಾಚಿಕೆಗೇಡು’, ‘ವಂಚನೆ’, ‘ದುರುಪಯೋಗ’,
‘ಭ್ರಷ್ಟ’, ‘ನಾಟಕ’, ‘ಆಷಾಢಭೂತಿತನ’,‘ಅದಕ್ಷ’ ಪದಗಳನ್ನು ಕೂಡ ಲೋಕಸಭಾ ಕಾರ್ಯಾಲಯವು ಬಿಡುಗಡೆ ಮಾಡಿರುವ ‘ಅಸಂಸದೀಯ ಅಭಿವ್ಯಕ್ತಿಗಳು’ ಎಂಬ ಕಿರುಹೊತ್ತಗೆಯಲ್ಲಿ ಸೇರಿಸಲಾಗಿದೆ.

‘ಜುಮ್ಲಾಜೀವಿ (ಸುಳ್ಳುಗಾರ) ಎಂಬ ಪದದ ಬಗ್ಗೆ ಯಾರಿಗೆ ಭಯ ಇರುತ್ತದೆ– ಸುಳ್ಳು ಭರವಸೆಗಳನ್ನು ನೀಡುವವರಿಗೆ. ‘ಜೈಚಂದ್‌’ ಎಂಬ ಪದದ ಬಗ್ಗೆ ಯಾರಿಗೆ ಭಯ ಇರುತ್ತದೆ– ದೇಶಕ್ಕೆ ದ್ರೋಹ ಎಸಗಿದವರಿಗೆ. ಈ ಪದಗಳನ್ನು ಸಂಸತ್ತಿನಲ್ಲಿ ನಿಷೇಧಿಸಲಾಗಿಲ್ಲ, ಪ್ರಧಾನಿ ಮೋದಿ ಅವರ ಭೀತಿ ಹೊರಬರುತ್ತಿದೆ’ ಎಂದು ಕಾಂಗ್ರೆಸ್‌ ಪಕ್ಷವು ಟ್ವೀಟ್‌ ಮಾಡಿದೆ.

‘ಅಸಂಸದೀಯ ಅಭಿವ್ಯಕ್ತಿಗಳು’ಎಂಬ ಕಿರುಹೊತ್ತಗೆಯನ್ನು ‘ನವ ಭಾರತದ ಹೊಸ ಪದಕೋಶ’ ಎಂದು ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಕರೆದಿದ್ದಾರೆ. ‘ಪ್ರಧಾನಿಯವರು ಸರ್ಕಾರವನ್ನು ನಿಭಾಯಿಸಿದ ರೀತಿಯನ್ನು ಸಮರ್ಪಕವಾಗಿ ವಿವರಿಸುವ ಚರ್ಚೆ ಮತ್ತು ಸಂವಾದಗಳಲ್ಲಿ ಬಳಸುವ ಪದಗಳನ್ನು ಈಗ ನಿಷೇಧಿಸಲಾಗಿದೆ’ ಎಂದು ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ.

‘ಅಸಂಸದೀಯ ವಾಕ್ಯವೊಂದರ ಉದಾಹರಣೆ ಹೀಗಿದೆ: ‘ಸುಳ್ಳುಗಳು ಮತ್ತು ಅದಕ್ಷತೆ ಬಹಿರಂಗವಾದಾಗ ಜುಮ್ಲಾಜೀವಿ ತಾನಾಶಾ (ನಿರಂಕುಶ ಅಧಿಕಾರಿ) ಮೊಸಳೆ ಕಣ್ಣೀರು ಸುರಿಸಿದನು’ ಎಂದೂ ಟ್ವೀಟ್‌ನಲ್ಲಿ ಅವರು ಹೇಳಿದ್ದಾರೆ.

‘ಮೋದಿ ಸರ್ಕಾರದ ವಾಸ್ತವವನ್ನು ವಿವರಿಸಲು ವಿರೋಧ ಪಕ್ಷಗಳು ಬಳಸುತ್ತಿದ್ದ ಎಲ್ಲ ಪದಗಳನ್ನು ಅಸಂಸದೀಯ ಎಂದು ಪರಿಗಣಿಸಲಾಗಿದೆ. ವಿಶ್ವಗುರು ಅವರೇ ಮುಂದೇನು’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಟ್ವೀಟ್‌ ಮಾಡಿದ್ದಾರೆ.

‘ಕೆಲ ದಿನಗಳಲ್ಲಿ ಅಧಿವೇಶನ ಆರಂಭವಾಗಲಿದೆ. ಸಂಸದರಿಗೆ ನಿಷೇಧ ಆದೇಶ ಹೊರಡಿಸಲಾಗಿದೆ. ಸಂಸತ್ತಿನಲ್ಲಿ ಭಾಷಣ ಮಾಡುವಾಗ ಈ ಮುಂದಿನ ಮೂಲ ಪದಗಳನ್ನೇ ಬಳಸಲು ಅವಕಾಶ ಇಲ್ಲ: ನಾಚಿಕೆಗೇಡು, ದುರುಪಯೋಗಪಡಿಸಿಕೊಳ್ಳಲಾಗಿದೆ, ವಂಚಿಸಲಾಗಿದೆ, ಭ್ರಷ್ಟ, ಅದಕ್ಷ. ನಾನು ಈ ಎಲ್ಲ ಪದಗಳನ್ನು ಬಳಸಲಿದ್ದೇನೆ. ನನ್ನನ್ನು ಅಮಾನತು ಮಾಡಿ’ ಎಂದು ತೃಣಮೂಲ ಕಾಂಗ್ರೆಸ್‌ ಮುಖಂಡ ಡೆರೆಕ್‌ ಒಬ್ರಯಾನ್‌ ಟ್ವೀಟ್‌ ಮಾಡಿದ್ದಾರೆ.

‘ಅಸಂಸದೀಯ ಅಭಿವ್ಯಕ್ತಿಗಳು’ ಕಿರುಹೊತ್ತಗೆ ಪ್ರಕಟಿಸಲು 1954ರಲ್ಲಿಯೇ ಆರಂಭಿಸಲಾಗಿದೆ. 2010ರ ಬಳಿಕ ಪ್ರತಿ ವರ್ಷವೂ ಪ್ರಕಟಿಸುವ ಪದ್ಧತಿಯನ್ನು ಅನುಸರಿಸಿಕೊಂಡು ಬರಲಾಗುತ್ತಿದೆ.

ಯಾವ ಪದಕ್ಕೂ ನಿಷೇಧವಿಲ್ಲ: ಬಿರ್ಲಾ

ಯಾವುದೇ ಪದವನ್ನು ನಿಷೇಧಿಸಲಾಗಿಲ್ಲ.ಕಡತದಿಂದ ಅಭಿವ್ಯಕ್ತಿಗಳನ್ನು ಸಂದರ್ಭಾನುಸಾರ ಕಿತ್ತು ಹಾಕಲಾಗುವುದು ಎಂದು ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಹೇಳಿದ್ದಾರೆ.

ಕಿರುಹೊತ್ತಗೆ ರೂಪಿಸುವಲ್ಲಿ ಸರ್ಕಾರದ ಪಾತ್ರ ಏನೂ ಇಲ್ಲ. ಸಂಸತ್ತು ಮತ್ತು ವಿಧಾನಸಭೆಗಳು ಭಾರತದ ಪ್ರಜಾಪ್ರಭುತ್ವದ ಸ್ವತಂತ್ರ ಅಂಗಗಳು ಎಂದೂ ಅವರು ಹೇಳಿದ್ದಾರೆ.

‘ಲೋಕಸಭೆ, ರಾಜ್ಯಸಭೆ ಅಥವಾ ರಾಜ್ಯ ವಿಧಾನಸಭೆಗಳು ಹಾಗೂ ಕಾಮನ್‌ವೆಲ್ತ್ ದೇಶಗಳ ಸಂಸತ್ತಿನಲ್ಲಿ ಅಳಿಸಿ ಹಾಕಲಾದ ಪದಗಳನ್ನು ಪಟ್ಟಿ ಮಾಡಲಾಗಿದೆ. ಇಂತಹ ಪಟ್ಟಿಯನ್ನು ಪ್ರತಿ ವರ್ಷವೂ ಹೊರತರಲಾಗುತ್ತಿದೆ. ಇದೊಂದು ಪಟ್ಟಿಯೇ ಹೊರತು ಸಲಹೆ ಅಥವಾ ಆದೇಶ ಅಲ್ಲ’ ಎಂದು ಬಿರ್ಲಾ ತಿಳಿಸಿದ್ದಾರೆ. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಸಂಸದರು ಬಳಸಿದ ಪದಗಳು ಈ ಪಟ್ಟಿಯಲ್ಲಿ ಸೇರಿವೆ ಎಂದು ಅವರು ಹೇಳಿದ್ದಾರೆ.

***

ಸಂಸದರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಸ್ವತಂತ್ರರು. ಆ ಹಕ್ಕನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಆದರೆ, ಮಾತುಗಳು ಸಂಸತ್ತಿನ ಘನತೆಗೆ ತಕ್ಕಂತಿರಬೇಕು

-ಓಂ ಬಿರ್ಲಾ, ಲೋಕಸಭೆ ಸ್ಪೀಕರ್

***

ಏನು ಮಾಡಬೇಕು, ಏನು ಮಾತನಾಡಬೇಕು, ವಾಹ್‌ ಮೋದೀಜಿ, ವಾಹ್‌ ಎಂಬ ಜನಪ್ರಿಯ ಮೀಮ್‌ ಈಗ ನಿಜವಾಗುತ್ತಿರುವಂತೆ ಕಾಣಿಸುತ್ತಿದೆ

-ಪ್ರಿಯಾಂಕಾ ಚತುರ್ವೇದಿ, ರಾಜ್ಯಸಭೆಯಲ್ಲಿ ಶಿವಸೇನಾ ಉಪನಾಯಕಿ

***

ಈ ಪದಗಳನ್ನು ಸಂಸತ್ತಿನಲ್ಲಿ ಬಳಸದಂತೆ ಸರ್ಕಾರ ನಿಷೇಧ ಹೇರಿರಬಹುದು: ಜುಮ್ಲಾಜೀವಿ, ಭ್ರಷ್ಟ, ನಾಟಕ, ಆಷಾಢಭೂತಿತನ. ಆದರೆ, ಈ ಮುಂದಿನವುಗಳ ಬಗ್ಗೆ ಸರ್ಕಾರ ಉತ್ತರ ನೀಡಬೇಕಾಗುತ್ತದೆ: ಎಲ್‌ಪಿಜಿ ಮತ್ತು ದರ ಏರಿಕೆ, ನಿರುದ್ಯೋಗ, ಅಗ್ನಿಪಥ

ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆ ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT