ಬುಧವಾರ, ಮಾರ್ಚ್ 22, 2023
32 °C
ಬಿಜೆಪಿಯಲ್ಲಿ ತನ್ನನ್ನು ಕಡೆಗಣಿಸಿದ್ದಕ್ಕೆ ಮುನಿಸಿಕೊಂಡರಾ ಉಮಾ ಭಾರತಿ?

ರಾಮ, ಹನುಮ ಬಿಜೆಪಿಯ ಕಾಪಿರೈಟ್‌ ಅಲ್ಲ: ಸ್ವಪಕ್ಷದ ವಿರುದ್ಧವೇ ಉಮಾ ಭಾರತಿ ಅಸಮಾಧಾನ

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಚಿಂದ್ವಾರ (ಮಧ್ಯಪ್ರದೇಶ): ಶ್ರೀರಾಮ ಹಾಗೂ ಹನುಮನ ಮೇಲಿನ ಭಕ್ತಿ ಬಿಜೆಪಿಯ ಕಾಪಿರೈಟ್‌ ಅಲ್ಲ ಎಂದು ಬಿಜೆ‍ಪಿ ನಾಯಕಿ ಹಾಗೂ ಕೇಂದ್ರದ ಮಾಜಿ ಸಚಿವೆ ಉಮಾ ಭಾರತಿ ಅವರು ಹೇಳಿದ್ದಾರೆ.

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ನಾಯಕ ಕಮಲ್‌ನಾಥ್‌ ಅವರು ಹನುಮ ಮಂದಿರ ನಿರ್ಮಿಸುತ್ತಿರುವ ಬಗ್ಗೆ, ‌ ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದ್ದಾರೆ.

ಒಂದು ದಿನ ಹಿಂದಷ್ಟೆ ಉಮಾ ಭಾರತಿಯವರು ‘ಬಿಜೆಪಿ ಕಾರ್ಯಕರ್ತರು ತಾವು ಯಾರಿಗೆ ಮಾತದಾನ ಮಾಡಬೇಕು ಎನ್ನುವುದರ ಬಗ್ಗೆ ಯೋಚನೆ ಮಾಡಬೇಕು‘ ಎಂದು ಹೇಳಿಕೆ ನೀಡಿದ್ದರು.

ಮಧ್ಯಪ್ರದೇಶದ ಶಿವರಾಜ್‌ಸಿಂಗ್‌ ಚೌಹಾಣ್‌ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧವೂ ಉಮಾ ಭಾರತಿ ಆಗಾಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಮಧ್ಯಪ್ರದೇಶದಲ್ಲಿ ಮದ್ಯ ನಿಷೇಧ ಹೇರಬೇಕು ಎಂದು ಕೆಲ ದಿನಗಳ ಹಿಂದಷ್ಟೇ ಮದ್ಯದಂಗಡಿಗೆ ಕಲ್ಲೆಸೆದು ಸುದ್ದಿಯಾಗಿದ್ದರು.

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಅವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಲಾಗುತ್ತಿದೆ ಎನ್ನುವುದು ಉಮಾ ಭಾರತಿಯವರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಇನ್ನು ಇದೇ ವೇಳೆ ಹಿಂದೂಗಳು ಮನೆಯಲ್ಲಿ ಆಯುಧ ಇಟ್ಟುಕೊಳ್ಳಬೇಕು ಎನ್ನುವ ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್‌ ಠಾಕೂರ್‌ ಅವರ ವಿವಾದಾತ್ಮಕ ಹೇಳಿಕೆಗೆ ಅವರು ಬೆಂಬಲ ನೀಡಿದ್ದಾರೆ.

‘ಶ್ರೀರಾಮನು ಕೂಡ ತನ್ನ ವನವಾಸದ ಸಮಯದಲ್ಲಿ ಆಯುಧಗಳನ್ನು ತ್ಯಜಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದನು. ಆಯುಧಗಳನ್ನು ಇಟ್ಟುಕೊಳ್ಳುವುದು ತಪ್ಪಲ್ಲ. ಆದರೆ ಹಿಂಸಾತ್ಮಕ ಮನೋಭಾವ ತಪ್ಪು‘ ಎಂದು ಅವರು ಹೇಳಿದ್ದಾರೆ.

ಶಾರುಕ್‌ ಖಾನ್ ಅಭಿನಯದ ಪಠಾಣ್‌ ಸಿನಿಮಾದ ವಿವಾದ ಸಂಬಂಧವೂ ಪ್ರತಿಕ್ರಿಯೆ ನೀಡಿರುವ ಅವರು, ‘ಬಿಜೆಪಿ ಸರ್ಕಾರದ ಸೆನ್ಸಾರ್‌ ಮಂಡಳಿಯು ತಕ್ಷಣವೇ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದುಹಾಕಬೇಕು. ಯಾರದೇ ಭಾವನೆಗಳಿಗೆ ಧಕ್ಕೆಯಾಗುವ ದೃಶ್ಯಗಳನ್ನು ತೆಗೆದುಹಾಕಬೇಕು. ಯಾವುದೇ ಬಣ್ಣಕ್ಕೆ ಆಗುವ ಅವಮಾನವನ್ನು ಭಾರತ ಸಹಿಸುವುದಿಲ್ಲ. ಕೇಸರಿ ಬಣ್ಣ ಭಾರತದ ಸಂಸ್ಕೃತಿಯ ಗುರುತು. ಸೆನ್ಸಾರ್‌ ಮಂಡಳಿ ತಕ್ಷಣವೇ ಆಕ್ಷೇಪಾರ್ಹ ದೃಶ್ಯಗಳನ್ನು ತೆಗಿಸಬೇಕು‘ ಎಂದು ಅವರು ನುಡಿದಿದ್ದಾರೆ.

ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆಯನ್ನು ರಾಮಾಯಣಕ್ಕೆ ಹೋಲಿಕೆ ಮಾಡಿದ ಕಾಂಗ್ರೆಸ್‌ ನಾಯಕ ಸಲ್ಮಾನ್‌ ಖುರ್ಷಿದ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ರಾಹುಲ್‌ ಗಾಂಧಿ ಅವರನ್ನು ಶ್ರೀರಾಮನಿಗೆ ಹೋಲಿಕೆ ಮಾಡುವುದು ತಪ್ಪು. ಹೀಗೆ ಮಾಡುವುದರಿಂದ ಅವರ ವಿಷಯವನ್ನು ಅವರೇ ಅಪಹಾಸ್ಯ ಮಾಡುತ್ತಿದ್ದಾರೆ‘ ಎಂದು ಹೇಳಿದ್ದಾರೆ.

‘ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಒಡಕು ಎಲ್ಲರಿಗೂ ಗೋಚರಿಸುತ್ತಿದೆ. ಸಲ್ಮಾನ್‌ ಖುರ್ಷಿದ್‌ ಅವರನ್ನು ಮೊಹಂಜೆದಾರೋ ನಾಗರಿಕತೆಯ ಆಚೆಗೆ ಬಿಸಾಕಬೇಕು‘ ಎಂದು ಅವರು ಆಕ್ರೋಶಿತರಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು