ಮಂಗಳವಾರ, ಆಗಸ್ಟ್ 9, 2022
23 °C

ಮಹಾರಾಷ್ಟ್ರ: 170 ಶಾಸಕರ ಬೆಂಬಲ ಘೋಷಿಸಿಕೊಂಡ ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಮುಂಬೈ: ತಮ್ಮ ಪಕ್ಷಕ್ಕೆ 170 ಶಾಸಕರ ಬೆಂಬಲವಿದೆ ಎಂದು ಮಹಾರಾಷ್ಟ್ರ ಬಿಜೆಪಿ ನಾಯಕ ಗಿರೀಶ್ ಮಹಾಜನ್ ಗುರುವಾರ ಹೇಳಿದ್ದಾರೆ. ಈ ಮೂಲಕ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವ ಸಾಧ್ಯತೆಗಳು ನಿಚ್ಚಳವಾಗಿವೆ.

ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು 145 ಶಾಸಕರ ಅಗತ್ಯವಿದ್ದು, ಶಿವಸೇನಾ ಬಂಡಾಯ ಶಾಸಕರ ನಾಯಕ ಏಕನಾಥ ಶಿಂಧೆ ಅವರು ಬಿಜೆಪಿ ಮುಖಂಡ ದೇವೇಂದ್ರ ಫಡಣವೀಸ್‌ ಅವರನ್ನು ಮುಂಬೈನಲ್ಲಿ ಭೇಟಿಯಾಗಿದ್ದಾರೆ. 

ಮಹಾರಾಷ್ಟ್ರದ ಬೆಳವಣಿಗೆಗಳ ಕುರಿತು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿರುವ ಮಾಜಿ ಸಚಿವ ಗಿರೀಶ್ ಮಹಾಜನ್, ‘ನಮಗೆ 170 ಶಾಸಕರ ಬೆಂಬಲವಿದೆ. ಒಂದು ವೇಳೆ ಬಹುಮತ ಸಾಬೀತುಪಡಿಸಲು ಹೇಳಿದರೆ, ನಾವು ನಿರಾಯಾಸವಾಗಿ ಜಯಸಾಧಿಸಲಿದ್ದೇವೆ’ ಎಂದು ಹೇಳಿದ್ದಾರೆ. 

ಸದನದಲ್ಲಿ ಪಕ್ಷದ ಬಲ 106 ಆಗಿದ್ದು, ಇತರ 13 ಪಕ್ಷೇತರ ಶಾಸಕರ ಬೆಂಬಲವಿದೆ. ಶಿಂಧೆ ಜೊತೆ ಗುರುತಿಸಿಕೊಂಡಿರುವ ಶಾಸಕರೂ ನಮ್ಮೊಂದಿಗೆ ಬರಲಿದ್ದಾರೆ ಎಂದು ಬಿಜೆಪಿ ಹೇಳಿಕೊಂಡಿದೆ. 

ಶಿಂಧೆ ಅವರು ಬುಧವಾರ ರಾತ್ರಿ ಗುವಾಹಟಿಯಿಂದ 50 ಶಾಸಕರ ಗುಂಪಿನೊಂದಿಗೆ ಗೋವಾಕ್ಕೆ ಬಂದಿಳಿದಿದ್ದಾರೆ. ಅವರಲ್ಲಿ 39 ಶಿವಸೇನಾ ಭಿನ್ನಮತೀಯರು, ಉಳಿದವರು ಇತರ ಸಣ್ಣ ಪಕ್ಷಗಳ ಹಾಗೂ ಸ್ವತಂತ್ರ ಶಾಸಕರಿದ್ದಾರೆ. 

‘ಶಿವಸೇನಾ ಭಿನ್ನಮತೀಯರು ಶಿವಸೈನಿಕರಾಗಿದ್ದಾರೆ ಮತ್ತು ಶಿವಸೇನಾದಲ್ಲಿಯೇ ಇರುತ್ತಾರೆ’ ಎಂದು ಶಿಂಧೆ ಬುಧವಾರ ರಾತ್ರಿ ಪುನರುಚ್ಚರಿಸಿದ್ದಾರೆ.

ಇದನ್ನೂ ಓದಿ– ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚನೆಗೆ ಸಿದ್ಧತೆ: ಫಡಣವೀಸ್‌ರಿಂದ ಹಕ್ಕು ಮಂಡನೆ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು