ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ | ಸೋಮವಾರ ವಿಶ್ವಾಸಮತ ಯಾಚನೆ, ಶಾಸಕರೊಂದಿಗೆ ಶಿಂಧೆ – ಫಡಣವೀಸ್ ಸಭೆ

ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸೋಮವಾರ ವಿಶ್ವಾಸಮತ ಯಾಚನೆ ನಡೆಯಲಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಏಕನಾಥ ಶಿಂಧೆ ಹಾಗೂ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಶಾಸಕರೊಂದಿಗೆ ಶನಿವಾರ ರಾತ್ರಿ ಸಭೆ ನಡೆಸಿದ್ದಾರೆ.

ಗೋವಾದಲ್ಲಿ ಬೀಡುಬಿಟ್ಟಿದ್ದ ಶಿವಸೇನಾ ಬಂಡಾಯ ಶಾಸಕರು ಮಹಾರಾಷ್ಟ್ರಕ್ಕೆ ವಾಪಸ್‌ ಆಗಿದ್ದಾರೆ.

ಏಕನಾಥ ಶಿಂಧೆ ಜತೆಗಿರುವ ಶಿವಸೇನಾದ 39 ಶಾಸಕರು ಮತ್ತು ಬಿಜೆಪಿ ಮೈತ್ರಿ ಸರ್ಕಾರವು ಇದೇ 4ರಂದು (ಸೋಮವಾರ) ವಿಶ್ವಾಸಮತ ಕೋರಲಿದೆ. ಬಿಜೆಪಿ ಶಾಸಕ ರಾಹುಲ್‌ ನಾರ್ವೇಕರ್ ಅವರು ವಿಧಾನಸಭೆಯ ಸ್ಪೀಕರ್‌ ಹುದ್ದೆಗೆ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ.

ಚುನಾವಣೆ ನಡೆಸಬೇಕಾದ ಅಗತ್ಯ ಬಿದ್ದರೆ ಇಂದೇ (ಭಾನುವಾರ) ಚುನಾವಣೆ ನಡೆಯಲಿದೆ. ಎರಡು ದಿನಗಳ ವಿಶೇಷ ಅಧಿವೇಶನ ಆರಂಭವಾಗಲಿದೆ.

ಸ್ಪೀಕರ್‌ ಹುದ್ದೆಗೆ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನಾ, ಎನ್‌ಸಿಪಿ, ಕಾಂಗ್ರೆಸ್‌ ಮೈತ್ರಿಕೂಟವಾದ ಮಹಾ ವಿಕಾಸ ಆಘಾಡಿ (ಎಂವಿಎ) ನಿರ್ಧರಿಸಿದೆ. ಆದರೆ, ಅಭ್ಯರ್ಥಿ ಯಾರು ಎಂಬುದನ್ನು ಇನ್ನೂ ನಿರ್ಧರಿಸಿಲ್ಲ.

ಬಿಜೆಪಿಯು 106 ಶಾಸಕರನ್ನು ಹೊಂದಿದ್ದರೆ, ಶಿವಸೇನಾದ 39 ಶಾಸಕರ ಬೆಂಬಲವೂ ಇದೆ. 10 ಪಕ್ಷೇತರರು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಕೆಲವು ಸಣ್ಣ ಪಕ್ಷಗಳ ಬೆಂಬಲವೂ ಇದೆ. ಹಾಗಾಗಿ, 165 ಶಾಸಕರು ಬೆಂಬಲಕ್ಕೆ ಇದ್ದಾರೆ ಎಂದು ಬಿಜೆಪಿ ಹೇಳಿಕೊಂಡಿದೆ.

ಉದ್ಧವ್ ಠಾಕ್ರೆ ಜತೆಗೆ ಶಿವಸೇನಾದ 16, ಕಾಂಗ್ರೆಸ್‌ನ 44 ಮತ್ತು ಎನ್‌ಸಿಪಿಯ 51 ಶಾಸಕರು ಇದ್ದಾರೆ. ಹೀಗಾಗಿ ಸ್ಪೀಕರ್‌ ಚುನಾವಣೆಯಲ್ಲಿ ಎಂವಿಎ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಕ್ಷೀಣ.

‘ಎಂವಿಎ ಸ್ಪೀಕರ್ ಹುದ್ದೆಗೆ ಸ್ಪರ್ಧಿಸಲಿದೆ. ಶಿವಸೇನಾದಿಂದ ದೂರ ಹೋಗಿರುವ ಶಾಸಕರು ಅನರ್ಹತೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಎಂವಿಎಗೆ ಮತ ಹಾಕಲಿದ್ದಾರೆ. ಅವರು ಮತ ಹಾಕದೇ ಇದ್ದರೆ ಅನರ್ಹತೆ ಪ್ರಕ್ರಿಯೆ ಆರಂಭವಾಗಲಿದೆ’ ಎಂದು ಎನ್‌ಸಿಪಿ ರಾಜ್ಯ ಘಟಕದ ಅಧ್ಯಕ್ಷ ಜಯಂತ್ ಪಾಟೀಲ್‌ ಹೇಳಿಕೊಂಡಿದ್ದಾರೆ.

ಶುಕ್ರವಾರದ ತಡರಾತ್ರಿ ಬೆಳವಣಿಗೆಯಲ್ಲಿ ಪಕ್ಷ ವಿರೋಧಿ ಆರೋಪದ ಮೇಲೆ ಶಿವಸೇನಾ ನಾಯಕ ಸ್ಥಾನದಿಂದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಉದ್ಧವ್ ಠಾಕ್ರೆ ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ.

39 ಶಾಸಕರ ಜೊತೆ ಪಕ್ಷದ ವಿರುದ್ಧ ಬಂಡಾಯವೆದ್ದಿದ್ದ ಏಕನಾಥ ಶಿಂಧೆ, ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದ್ದರು. ಗುರುವಾರ ಸಂಜೆ ಮುಖ್ಯಮಂತ್ರಿಯಾಗಿ ಪ್ರಮಾಣವಚನವಚನ ಸ್ವೀಕರಿಸಿದ್ದರು. ಇದಕ್ಕೂ ಮುನ್ನ, ರಾಜ್ಯಪಾಲರು ಬಹುಮತ ಸಾಬೀತಿಗೆ ಮಹಾ ವಿಕಾಸ ಅಘಾಡಿ ನೇತೃತ್ವದ ಸರ್ಕಾರಕ್ಕೆ ಸೂಚಿಸಿದ್ದ ಹಿನ್ನೆಲೆಯಲ್ಲಿ ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT