ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಮಹಾ' ಸಂಚಲನ: ಶಿವಸೇನೆ ಶಾಸಕಾಂಗ ಪಕ್ಷದ ನಾಯಕತ್ವದಿಂದ ಏಕನಾಥ್ ಶಿಂಧೆ ಹೊರಕ್ಕೆ

ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದ 'ಮಹಾ ವಿಕಾಸ್ ಅಘಾಡಿ' ಸರ್ಕಾರದ ವಿರುದ್ಧ ಅಸಮಾಧಾನಗೊಂಡು ಶಿವಸೇನಾದ 25 ಶಾಸಕರು ಗುಜರಾತ್‌ನ ಸೂರತ್‌ನಲ್ಲಿ ಬೀಡುಬಿಟ್ಟಿದ್ದಾರೆ. ಈ ಮೂಲಕ ಮೈತ್ರಿ ಸರ್ಕಾರಕ್ಕೆ ಬಂಡಾಯದ ಬಿಸಿ ಮುಟ್ಟಿಸಿರುವ ಮಹಾರಾಷ್ಟ್ರದ ನಗರಾಭಿವೃದ್ಧಿ ಸಚಿವ ಏಕನಾಥ್ ಶಿಂಧೆ ಅವರನ್ನು ಶಿವಸೇನಾ ಶಾಸಕಾಂಗ ಪಕ್ಷದ ನಾಯಕತ್ವದಿಂದ ತೆಗೆದು ಹಾಕಿದೆ.

ಶಿವಡಿ ಶಾಸಕ ಅಜಯ್‌ ಚೌಧರಿ ಅವರನ್ನು ಶಿವಸೇನಾ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಪಕ್ಷ ಮಂಗಳವಾರ ಮಧ್ಯಾಹ್ನ ಘೋಷಿಸಿದೆ.

ಏಕನಾಥ್ ಶಿಂಧೆ ಕುರಿತು ಚರ್ಚೆ ನಡೆದಿರುವಾಗಲೇ ಟ್ವಿಟರ್‌ ಮೂಲಕ ಪ್ರತಿಕ್ರಿಯೆ ನೀಡಿರುವ ಅವರು, ಬಾಳಾಸಾಹೇಬ್‌ ಅವರ ಆದರ್ಶಗಳಿಗೆ ದ್ರೋಹ ಮಾಡುವುದಿಲ್ಲ ಎಂದು ಪ್ರಕಟಿಸಿದ್ದಾರೆ. 'ನಾವು ಬಾಳಾಸಾಹೇಬ್‌ ಠಾಕ್ರೆ ಅವರ ಶಿವ ಸೈನಿಕರು. ಬಾಳಾಸಾಹೇಬ್‌ ಅವರು ನಮಗೆ ಹಿಂದುತ್ವದ ಕುರಿತು ಕಲಿಸಿದರು. ಅಧಿಕಾರಕ್ಕೋಸ್ಕರ ಅವರ ಆದರ್ಶಗಳಿಗೆ ಹಾಗೂ ಧರ್ಮವೀರ ಆನಂದ ದಿಘೆ ಅವರ ಬೋಧನೆಗಳಿಗೆ ನಾವು ದ್ರೋಹ ಬಗೆಯುವುದಿಲ್ಲ' ಎಂದಿದ್ದಾರೆ.

ಈ ಬೆಳವಣಿಗೆಗಳ ಕುರಿತು ದೆಹಲಿಯಲ್ಲಿ ಪ್ರತಿಕ್ರಿಯಿಸಿರುವ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌, 'ಮಹಾರಾಷ್ಟ್ರ ಸರ್ಕಾರವನ್ನು ಅಭದ್ರಗೊಳಿಸುವ ಪ್ರಯತ್ನ ನಡೆದಿದೆ. ಮೂರನೇ ಬಾರಿಗೆ ಇಂಥ ಪ್ರಯತ್ನ ನಡೆಯುತ್ತಿದೆ. ಇದು ಶಿವಸೇನೆಯ ಆಂತರಿಕ ವಿಚಾರವಾಗಿದ್ದು, ಉದ್ಧವ್‌ ಠಾಕ್ರೆ ಅವರು ಪರಿಸ್ಥಿತಿಯನ್ನು ನಿರ್ವಹಿಸಲಿದ್ದಾರೆ' ಎಂದಿದ್ದಾರೆ.

ಮಹಾರಾಷ್ಟ್ರದ ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷವು ಕಮಲ್‌ ನಾಥ್‌ ಅವರನ್ನು ಪಕ್ಷದ ವೀಕ್ಷಕರನ್ನಾಗಿ ನೇಮಕ ಮಾಡಿದೆ. ಕಾಂಗ್ರೆಸ್‌, ಎನ್‌ಸಿಪಿ ಸೇರಿ ಮಹಾ ಮೈತ್ರಿಯ ಇತರೆ ಪಕ್ಷಗಳ ಮುಖಂಡರು ಸರ್ಕಾರದ ಭದ್ರತೆಗೆ ತೊಂದರೆ ಇಲ್ಲ ಎಂದಿದ್ದಾರೆ.

288 ಸದಸ್ಯರನ್ನು ಒಳಗೊಂಡಿರುವ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶಿವಸೇನೆ 55 ಶಾಸಕರ ಬಲ ಹೊಂದಿದೆ. ಎನ್‌ಸಿಪಿ 53, ಕಾಂಗ್ರೆಸ್‌ನ 44, ಬಹುಜನ ವಿಕಾಸ ಅಘಾಡಿ 3, ಸಮಾಜವಾದಿ ಪಕ್ಷ, ಎಐಎಂಐಎಂ ಹಾಗೂ ಪ್ರಹಾರ್‌ ಜನಶಕ್ತಿ ಪಾರ್ಟಿಯ ತಲಾ ಇಬ್ಬರು ಶಾಸಕರಿದ್ದಾರೆ. ಎಂಎನ್‌ಎಸ್‌, ಸಿಬಿಐ–ಎಂ, ಪಿಡಬ್ಲ್ಯುಪಿ, ಸ್ವಾಭಿಮಾನಿ ಪಕ್ಷ, ರಾಷ್ಟ್ರೀಯ ಸಮಾಜ ಪಾರ್ಟಿ, ಜನಸೂರ್ಯ ಶಕ್ತಿ ಪಾರ್ಟಿ ಹಾಗೂ ಕ್ರಾಂತಿಕಾರಿ ಶೆತಕರಿ ಪಕ್ಷದಿಂದ ತಲಾ ಒಬ್ಬರು ಶಾಸಕರಿದ್ದಾರೆ.

13 ಮಂದಿ ಪಕ್ಷೇತರ ಶಾಸಕರು ಹಾಗೂ ವಿರೋಧ ಪಕ್ಷ ಬಿಜೆಪಿಯಲ್ಲಿ 106 ಶಾಸಕರಿದ್ದಾರೆ.

ಪರಿಷತ್‌ ಚುನಾವಣೆ ಅಡ್ಡಮತದಾನ ಮತ್ತು ನಂತರದ ಬೆಳವಣಿಗೆ...

ಮಹಾರಾಷ್ಟ್ರ ವಿಧಾನಪರಿಷತ್‌ಗೆ ಸೋಮವಾರ ನಡೆದ ಚುನಾವಣೆಯಲ್ಲಿ ‘ಮಹಾ ವಿಕಾಸ್ ಅಘಾಡಿ’ ಮೈತ್ರಿಕೂಟದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಚಂದ್ರಕಾಂತ್ ಹಂಡೊರೆಗೆ ಸೋಲಾಗಿತ್ತು. ಆಡಳಿತಾರೂಢ ಮೈತ್ರಿಕೂಟ 6 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಐವರು ಮಾತ್ರ ಜಯಗಳಿಸಿದ್ದರು. ಹೀಗಾಗಿ ಅಡ್ಡಮತದಾನವಾಗಿರುವ ಶಂಕೆ ವ್ಯಕ್ತವಾಗಿತ್ತು. ಬಿಜೆಪಿಯ ಎಲ್ಲ ಐವರು ಅಭ್ಯರ್ಥಿಗಳು ಜಯಗಳಿಸಿದ್ದರು.

ಅಡ್ಡಮತದಾನದ ಶಂಕೆ ವ್ಯಕ್ತವಾದ ಬೆನ್ನಲ್ಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಶಿವಸೇನಾ ಶಾಸಕರ ತುರ್ತು ಸಭೆ ಕರೆದಿದ್ದರು. ಈ ಮಧ್ಯೆ ಶಿವಸೇನೆಯ ಶಾಸಕರ ಒಂದು ಗುಂಪು ಸಂಪರ್ಕಕ್ಕೆ ಸಿಕ್ಕಿರಲಿಲ್ಲ.

ಸಚಿವ ಏಕನಾಥ್ ಶಿಂಧೆ ನೇತೃತ್ವದಲ್ಲಿ ಶಿವಸೇನೆಯ ಶಾಸಕರು ಸೂರತ್‌ನ 'ಲಿ ಮೆರಿಡಿಯನ್' ಹೋಟೆಲ್‌ನಲ್ಲಿ ಬೀಡು ಬಿಟ್ಟಿದ್ದಾರೆ. ಒಟ್ಟು 25 ಶಾಸಕರು ಗುಜರಾತ್‌ನಲ್ಲಿರುವುದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT