ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರ ಆರೋಪ: ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‌ಮುಖ್ ರಾಜೀನಾಮೆ

₹100 ಕೋಟಿ ವಸೂಲಿ ಮಾಡುವಂತೆ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದ್ದ ಆರೋಪ
Last Updated 5 ಏಪ್ರಿಲ್ 2021, 21:34 IST
ಅಕ್ಷರ ಗಾತ್ರ

ಮುಂಬೈ: ಹಣ ವಸೂಲಿ ಆರೋಪಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖೆ ನಡೆಸುವಂತೆ ಸಿಬಿಐಗೆ ಬಾಂಬೆ ಹೈಕೋರ್ಟ್‌ ಆದೇಶ ನೀಡಿದ ಬಳಿಕ, ಮಹಾರಾಷ್ಟ್ರ ಗೃಹ ಸಚಿವ ಅನಿಲ್‌ ದೇಶಮುಖ್‌ ಸೋಮವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಮುಂಬೈನಲ್ಲಿರುವ ಬಾರ್‌ ಮತ್ತು ರೆಸ್ಟೋರೆಂಟ್‌ಗಳಿಂದ ಪ್ರತಿ ತಿಂಗಳು ₹100 ಕೋಟಿ ವಸೂಲಿ ಮಾಡುವಂತೆ ಅಮಾನತುಗೊಂಡಿರುವ ಸಚಿನ್‌ ವಾಜೆ ಸೇರಿದಂತೆ ಇತರ ಪೊಲೀಸ್ ಅಧಿಕಾರಿಗಳಿಗೆ ದೇಶಮುಖ್‌ ಸೂಚಿಸಿದ್ದರು ಎಂದು ಹಿರಿಯ ಐಪಿಎಸ್‌ ಅಧಿಕಾರಿ ಮತ್ತು ಮುಂಬೈನ ಮಾಜಿ ಪೊಲೀಸ್‌ ಕಮಿಷನರ್‌ ಪರಮ್‌ ಬೀರ್‌ ಸಿಂಗ್‌ ಆರೋಪಿಸಿದ್ದರು.

ನ್ಯಾಯಾಲಯದ ಆದೇಶದ ಬಳಿಕ ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್‌ ಅವರನ್ನು ಭೇಟಿಯಾದ ಎನ್‌ಸಿಪಿ ನಾಯಕ ದೇಶಮುಖ್‌ ಅವರು, ಸಿಬಿಐ ತನಿಖೆ ನಡೆಸುವುದರಿಂದ ಸಚಿವ ಸ್ಥಾನದಲ್ಲಿ ಮುಂದುವರಿಯುವುದು ಸಮರ್ಪಕವಲ್ಲ. ಹೀಗಾಗಿ, ರಾಜೀನಾಮೆ ನೀಡುವುದಾಗಿ ತಿಳಿಸಿದರು. ಪವಾರ್‌ ಒಪ್ಪಿಗೆ ನೀಡಿದ ಬಳಿಕ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.

‘ನ್ಯಾಯಾಲಯದ ಆದೇಶದ ಬಳಿಕ ಈ ಹುದ್ದೆಯಲ್ಲಿ ಮುಂದುವರಿಯುವ ಯಾವುದೇ ನೈತಿಕತೆ ಇಲ್ಲ. ಹೀಗಾಗಿ, ರಾಜೀನಾಮೆ ನೀಡಿದ್ದೇನೆ’ ಎಂದು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರಿಗೆ ಸಲ್ಲಿಸಿರುವ ಪತ್ರದಲ್ಲಿ ಅನಿಲ್‌ ದೇಶಮುಖ್‌ ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಸಹ ಮಾಡಿರುವ ದೇಶಮುಖ್‌ ಅವರು ವಕೀಲರಾದ ಜಯಶ್ರೀ ಪಾಟೀಲ್‌ ಅವರು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖೆ ನಡೆಸುವಂತೆ ಸಿಬಿಐಗೆ ಹೈಕೋರ್ಟ್‌ ಆದೇಶಿಸಿದೆ ಎಂದು ತಿಳಿಸಿದ್ದಾರೆ.

ಬಾಂಬೆ ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ದೇಶಮುಖ್‌ ಅವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಮಹಾರಾಷ್ಟ್ರ ಸರ್ಕಾರ ಸಹ ತೀರ್ಪಿನ ಬಗ್ಗೆ ಕಾನೂನು ಅಭಿಪ್ರಾಯವನ್ನು ಪಡೆಯುತ್ತಿದೆ.

ಅಸಾಮಾನ್ಯ ಪ್ರಕರಣ: ಬಾಂಬೆ ಹೈಕೋರ್ಟ್‌
ಅನಿಲ್‌ ದೇಶಮುಖ್‌ ವಿರುದ್ಧ ಮುಂಬೈನ ಮಾಜಿ ಪೊಲೀಸ್ ಕಮಿಷನರ್‌ ಪರಮ್ ಬೀರ್ ಸಿಂಗ್ ಮಾಡಿರುವ ಭ್ರಷ್ಟಾಚಾರ ಆರೋಪಗಳ ಬಗ್ಗೆ 15 ದಿನಗಳ ಒಳಗೆ ಪ್ರಾಥಮಿಕ ತನಿಖೆ ನಡೆಸುವಂತೆ ಬಾಂಬೆ ಹೈಕೋರ್ಟ್‌ ಸಿಬಿಐಗೆ ನಿರ್ದೇಶನ ನೀಡಿದೆ.

‘ಇದೊಂದು ಅಸಾಮಾನ್ಯ ಮತ್ತು ಅಪರೂಪದ ಪ್ರಕರಣವಾಗಿದ್ದು, ಸ್ವತಂತ್ರ ತನಿಖೆಯ ಅಗತ್ಯವಿದೆ’ ಎಂದು ಮುಖ್ಯ ನ್ಯಾಯಮೂರ್ತಿ ದೀಪಾಂಕರ್‌ ದತ್ತಾ ಮತ್ತು ನ್ಯಾಯಮೂರ್ತಿ ಜಿ.ಎಸ್‌. ಕುಲಕರ್ಣಿ ಅವರನ್ನೊಳಗೊಂಡ ಪೀಠವು ಹೇಳಿದೆ.

ರಾಜ್ಯದ ಗೃಹ ಸಚಿವರ ವಿರುದ್ಧ ಸೇವೆಯಲ್ಲಿರುವ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಆರೋಪ ಮಾಡಿದ್ದಾರೆ. ಹೀಗಾಗಿ, ನ್ಯಾಯಾಲಯ ಮೂಕ ಪ್ರೇಕ್ಷಕವಾಗಿರಲು ಸಾಧ್ಯವಿಲ್ಲ. ಗಂಭೀರ ಸ್ವರೂಪದ ಆರೋಪಗಳಾಗಿರುವುದರಿಂದ ಸ್ವತಂತ್ರ ತನಿಖೆಯ ಅಗತ್ಯವಿದೆ. ಸಾರ್ವಜನಿಕರ ವಿಶ್ವಾಸ ಉಳಿಸಿಕೊಳ್ಳಲು ಮತ್ತು ನಾಗರಿಕರ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ತನಿಖೆ ಅನಿವಾರ್ಯ ಎಂದು ಪೀಠವು 52 ಪುಟಗಳ ಆದೇಶದಲ್ಲಿ ತಿಳಿಸಿದೆ.

ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸುವಂತೆ ಕಳೆದ ತಿಂಗಳು ಸಲ್ಲಿಸಿದ್ದ ಮೂರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಮತ್ತು ಇನ್ನೊಂದು ಕ್ರಿಮಿನಲ್‌ ರಿಟ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ.

ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಮ್‌ ಬೀರ್‌ ಸಿಂಗ್‌ ಸಲ್ಲಿಸಿದ್ದರು. ಉಳಿದ ಎರಡನ್ನು ವಕೀಲರಾದ ಘನಶ್ಯಾಮ್‌ ಉಪಾಧ್ಯಾಯ ಮತ್ತು ಸ್ಥಳೀಯ ಶಿಕ್ಷಕ ಮೋಹನ್‌ ಭಿಡೆ ಸಲ್ಲಿಸಿದ್ದರು. ಕ್ರಿಮಿನಲ್‌ ರಿಟ್‌ ಅರ್ಜಿಯನ್ನು ವಕೀಲರಾದ ಜಯಶ್ರೀ ಪಾಟೀಲ್‌ ಸಲ್ಲಿಸಿದ್ದರು. ಪಾಟೀಲ್‌ ಅವರ ಅರ್ಜಿ ಆಧರಿಸಿ ಹೈಕೋರ್ಟ್‌ ಸಿಬಿಐ ತನಿಖೆಗೆ ಆದೇಶಿಸಿತು.

ಈ ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಿಸದ ಕಾರಣ ಸಿಬಿಐ ತನಿಖೆಗೆ ಆದೇಶಿಸುವುದು ಅಗತ್ಯವಿಲ್ಲ ಎಂದು ಅಡ್ವೊಕೇಟ್‌ ಜನರಲ್‌ ಅಶುತೋಷ್‌ ಕುಂಭಕೊನಿ ವಾದ ಮಂಡಿಸಿದ್ದರು.

ಆದರೆ, ಮಾರ್ಚ್‌ 21ರಂದೇ ಮಲಬಾರ್‌ ಹಿಲ್‌ ಠಾಣೆಯಲ್ಲಿ ದೇಶಮುಖ್‌ ಮತ್ತು ಸಿಂಗ್‌ ವಿರುದ್ಧ ದೂರು ಸಲ್ಲಿಸಲಾಗಿದೆ. ಆದರೆ, ಪ್ರಾಥಮಿಕ ತನಿಖೆ ನಡೆಸಿ ಎಫ್‌ಐಆರ್‌ ದಾಖಲಿಸಲು ಪೊಲೀಸರು ವಿಫಲರಾಗಿದ್ದಾರೆ ಎಂದು ಜಯಶ್ರೀ ಪಾಟೀಲ್‌ ನ್ಯಾಯಾಲಯಕ್ಕೆ ವಿವರಿಸಿದರು.

ಪೊಲೀಸರ ವೈಫಲ್ಯವನ್ನು ಪರಿಗಣಿಸಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ ಈ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡುವುದು ಅನಿವಾರ್ಯ ಎಂದು ಹೇಳಿತು.

ಪಾಟೀಲ್‌ ಅವರು ದೂರು ನೀಡಿದ್ದರೂ ಪೊಲೀಸರು ಕ್ರಮಕೈಗೊಳ್ಳದಿರುವ ಬಗ್ಗೆಯೂ ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿತು.

ಯಾವುದೇ ಆರೋಪಿ ಯಾವುದೇ ರೀತಿಯ ಉನ್ನತ ಹುದ್ದೆಯಲ್ಲಿ ಇರಲಿ. ಕಾನೂನಿನ ಆಡಳಿತವೇ ಮುಖ್ಯವಾಗಬೇಕು ಮತ್ತು ಸಂವಿಧಾನದ ತತ್ವಗಳ ಉಲ್ಲಂಘನೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದೆ.

ಈ ಪ್ರಕರಣದ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ಆದರೂ, ಕಾನೂನಿನ ಪ್ರಕಾರ ಪಾಟೀಲ್‌ ಅವರು ನೀಡಿದ ದೂರಿನ ಬಗ್ಗೆ ತನಿಖೆ ನಡೆಸಬೇಕಾಗಿತ್ತು ಎಂದು ಹೇಳಿದೆ.

ವಾಲ್ಸೆ ಪಾಟೀಲ್‌ ನೂತನ ಗೃಹ ಸಚಿವ
ಮುಂಬೈ:
ಅನಿಲ್‌ ದೇಶಮುಖ್‌ ಅವರು ರಾಜೀನಾಮೆ ನೀಡಿರುವುದರಿಂದ, ಗೃಹ ಖಾತೆಯನ್ನು ಎನ್‌ಸಿಪಿ ವರಿಷ್ಠ ಶರದ್‌ ಪವಾರ್‌ ಅವರ ಆಪ್ತರಾಗಿರುವ ದಿಲೀಪ್‌ ವಾಲ್ಸೆ ಪಾಟೀಲ್‌ ಅವರಿಗೆ ನೀಡಲಾಗಿದೆ.

ಮಹಾ ವಿಕಾಸ ಅಘಾಡಿ ಸರ್ಕಾರದಲ್ಲಿ ಸಚಿವರಾಗಿರುವ 64 ವರ್ಷದ ವರ್ಷ ದಿಲೀಪ್‌ ಅವರು, ಇದುವರೆಗೆ ಅಬಕಾರಿ ಮತ್ತು ಕಾರ್ಮಿಕ ಖಾತೆಯನ್ನು ನಿಭಾಯಿಸುತ್ತಿದ್ದರು.

ಬಿಜೆಪಿ ವಾಗ್ದಾಳಿ
ನವದೆಹಲಿ (ಪಿಟಿಐ):
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವ ಮತ್ತು ಬಿಜೆಪಿಯ ಹಿರಿಯ ನಾಯಕ ರವಿಶಂಕರ್‌ ಪ್ರಸಾದ್‌, ಅನಿಲ್‌ ದೇಶಮುಖ್‌ ರಾಜೀನಾಮೆ ಬಳಿಕ ಅಧಿಕಾರದಲ್ಲಿ ಮುಂದುವರಿಯುವ ಯಾವುದೇ ನೈತಿಕತೆ ಇಲ್ಲ ಎಂದು ಟೀಕಿಸಿದ್ದಾರೆ. ಹಲವು ಪ್ರಮುಖ ಅಹಿತಕರ ಘಟನೆಗಳು ನಡೆದಿದ್ದರೂ ಉದ್ಧವ್‌ ಠಾಕ್ರೆ ಅಧಿಕಾರಕ್ಕೆ ಅಂಟಿಕೊಂಡಿದ್ದಾರೆ ಎಂದಿದ್ದಾರೆ.

*
ಅನಿಲ್‌ ದೇಶಮುಖ್ ರಾಜೀನಾಮೆ ನೀಡುವುದನ್ನು ಹೊರತುಪಡಿಸಿ ಬೇರೆ ಆಯ್ಕೆ ಇರಲಿಲ್ಲ. ಆರೋಪ ಹೊರಿಸಿದ ಮೊದಲ ದಿನವೇ ಅವರಿಗೆ ನೈತಿಕತೆಯ ಬಗ್ಗೆ ನೆನಪಾಗಬೇಕಾಗಿತ್ತು.
-ದೇವೇಂದ್ರ ಫಡಣವೀಸ್‌, ವಿರೋಧ ಪಕ್ಷದ ನಾಯಕ

*
ಬಾಂಬೆ ಹೈಕೋರ್ಟ್‌ ಆದೇಶದ ಬಗ್ಗೆ ಅಧ್ಯಯನ ನಡೆಸಿದ ಬಳಿಕ ಮಹಾರಾಷ್ಟ್ರ ಸರ್ಕಾರ ಪ್ರತಿಕ್ರಿಯೆ ನೀಡಲಿದೆ. ಇದೊಂದು ರಾಜಕೀಯ ಪ್ರೇರಿತ ವಿಷಯವೂ ಹೌದು. ಆದರೂ, ನ್ಯಾಯಾಲಯದ ಆದೇಶವನ್ನು ಗೌರವಿಸುತ್ತೇವೆ.
-ಸಂಜಯ್‌ ರಾವುತ್‌, ಶಿವಸೇನಾ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT