ಭಾನುವಾರ, ಸೆಪ್ಟೆಂಬರ್ 19, 2021
23 °C

ದುರ್ಗಾ ದೇವಿ ಜತೆಗೆ ಮಮತಾ ಬ್ಯಾನರ್ಜಿ ಪ್ರತಿಮೆ: ಬಿಜೆಪಿ ಆಕ್ರೋಶ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆ ವೇಳೆ ದುರ್ಗಾದೇವಿಯ ಜೊತೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪ್ರತಿಮೆಯನ್ನು ಪೆಂಡಾಲ್‌ನಲ್ಲಿ ಸ್ಥಾಪಿಸಲು ಸಂಘಟಕರು ನಿರ್ಧರಿಸಿರುವುದು ಈಗ ವಿವಾದಕ್ಕೆಡೆಯಾಗಿದೆ.

ವಿರೋಧ ಪಕ್ಷ ಬಿಜೆಪಿ ಈ ಬಗ್ಗೆ ಕೆಂಡಕಾರಿದ್ದು, ‘ಇದು ವಾಕರಿಕೆ ತರುವಂತದ್ದು ಮತ್ತು ರಾಜ್ಯದ ಹಿಂದೂಗಳ ಸಂವೇದನೆಯನ್ನು ನೋಯಿಸುವಂತಹದ್ದು’ ಎಂದು ಕಿಡಿಕಾರಿದೆ.

ಮಣ್ಣಿನ ಮೂರ್ತಿಯ ಖ್ಯಾತ ಕಲಾವಿದ ಮಿಂಟು ಪೌಲ್‌ ತನ್ನ ಕುಮಾರ್ತುಲಿ ಸ್ಟುಡಿಯೋದಲ್ಲಿ ಟಿಎಂಸಿ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರ ಫೈಬರ್‌ ಗ್ಲಾಸ್‌ ಪ್ರತಿಮೆಯನ್ನು ಅವರ ಟ್ರೇಡ್ ಮಾರ್ಕ್ ಬಿಳಿ ಬಣ್ಣದ ಟಿಂಟ್‌ ಸೀರೆ ಮತ್ತು ಫ್ಲಿಪ್-ಫ್ಲಾಪ್ ಚಪ್ಪಲಿಗಳನ್ನು ಧರಿಸಿರುವಂತೆ ರೂಪಿಸುತ್ತಿದ್ದಾರೆ.

‘ನಾನು ಮುಖ್ಯಮಂತ್ರಿಯವರ ಫೋಟೋಗಳು ಮತ್ತು ವೀಡಿಯೊಗಳನ್ನು ಈ ಪ್ರತಿಮೆಗೆ ಆಕರ ವಸ್ತುವಾಗಿ ಆಗಿ ಅಧ್ಯಯನ ಮಾಡಿದ್ದೇನೆ. ಪ್ರತಿಮೆಯ ಮುಖವನ್ನು ಅಚ್ಚು ಮಾಡುವಾಗ ಅವರು ನಡೆದುಕೊಳ್ಳುವ, ಮಾತನಾಡುವ, ಸಾರ್ವಜನಿಕರೊಂದಿಗೆ ಸಂವಹನ ನಡೆಸುವ ಭಾವಭಂಗಿಯನ್ನೂ ಚಿತ್ರಿಸಿದ್ದೇನೆ’ ಎಂದು ಪೌಲ್ ತಿಳಿಸಿದ್ದಾರೆ.

ದೇವತೆಯ ಹತ್ತು ಕೈಗಳು ಆಯುಧಗಳನ್ನು ಹಿಡಿಯುವ ಬದಲು ಕನ್ಯಾಶ್ರೀ, ಸ್ವಸ್ಥ ಸತಿ, ರೂಪಶ್ರೀ, ಸಾಬುಜಸತಿ ಮತ್ತು ಲಕ್ಷ್ಮಿರ್ ಭಂಡಾರ್‌ನಂತಹ ಯೋಜನೆಗಳ ಚಿತ್ರಣ ಹೊಂದಿರುತ್ತದೆ. ಸರ್ಕಾರವು ಪ್ರಾರಂಭಿಸಿದ ಸಾರ್ವತ್ರಿಕ ಮೆಚ್ಚುಗೆ ಪಡೆದ ವಿವಿಧ ಅಭಿವೃದ್ಧಿ ಯೋಜನೆಗಳ ಬಗ್ಗೆ ಇದು ಜನರಿಗೆ ತಿಳಿಸಲಿದೆ ಎಂದು ಸಂಘಟಕರು ಹೇಳಿದರು.

ಫೈಬರ್‌ ಗ್ಲಾಸ್‌ ಪ್ರತಿಮೆ ಪಕ್ಕದಲ್ಲಿ ಮಣ್ಣಿನಲ್ಲಿ ತಯಾರಿಸಿದ ದುರ್ಗಾದೇವಿ ಮೂರ್ತಿ ಮತ್ತು ಆಕೆಯ ಸಂತತಿಯ ಮೂರ್ತಿಗಳನ್ನು ಪೂಜೆಗೆ ಪ್ರತಿಷ್ಠಾಪಿಸಲಾಗುತ್ತದೆ.

ದುರ್ಗಾದೇವಿಯ ಇಡೀ ಪೆಂಡಾಲ್‌ ಲಕ್ಷ್ಮಿರ್‌ ಭಂಡಾರ್‌ನ ಪರಿಕಲ್ಪನೆಯಲ್ಲಿರಲಿದೆ ಎಂದು ನಗರದ ಉತ್ತರ ಭಾಗದ ಕೇಸ್ತೊಪುರದ ಉನ್ನಯನ ಸಮಿತಿ ಕ್ಲಬ್‌ನ ಪೂಜೆಯ ಸಂಘಟಕರೊಬ್ಬರು ಹೇಳಿದರು.

‘ಲಕ್ಷ್ಮಿರ್‌ ಭಂಡಾರ್’ ಸರ್ಕಾರ ಆರಂಭಿಸಿರುವ ಆದಾಯ ಬೆಂಬಲದ ಯೋಜನೆ. ಇದರ ಅಡಿಯಲ್ಲಿ ಮನೆಯ ಮಹಿಳಾ ಮುಖ್ಯಸ್ಥರು ತಿಂಗಳಿಗೆ ₹500ರಿಂದ ₹1,000 ಧನ ಸಹಾಯ ಪಡೆಯುತ್ತಾರೆ.

ಸತತ ಮೂರನೇ ಅವಧಿಗೆ ಮಮತಾ ಅಧಿಕಾರಕ್ಕೆ ಮರಳಲು ಯಶಸ್ವಿಯಾಗಿರುವುದಕ್ಕೆ ಭವಾನಿಪೋರ್ 75 ಪಲ್ಲಿ ಪೂಜಾ ಸಮಿತಿಯು ಈ ವರ್ಷ ‘ಘೋರರ್ ಮೆಯೆ’ (ಮನೆಯ ಮಗಳು) ಪರಿಕಲ್ಪನೆ ಅಳವಡಿಸಿಕೊಂಡಿದೆ ಎಂದು ಸಮಿತಿಯ ಅಧಿಕಾರಿ ಸುಬ್ರತಾ ದಾಸ್ ತಿಳಿಸಿದ್ದಾರೆ.

‘ಮಮತಾ ಬ್ಯಾನರ್ಜಿ ಭವಾನಿಪೋರ್‌ನ ಘೋರರ್ ಮೆಯೆ. ಭವಾನಿಪೋರ್ ಅವರ ಮಗಳು ಎಂದು ಹೊಗಳುವ ಅನೇಕ ಹೋರ್ಡಿಂಗ್‌ಗಳು ಕಳೆದ ಎರಡು ತಿಂಗಳಲ್ಲಿ ಇಲ್ಲಿ ರಾರಾಜಿಸುತ್ತಿವೆ’ ಎಂದು ಅವರು ಹೇಳಿದರು.

ಮಮತಾ ಬ್ಯಾನರ್ಜಿ ಭವಾನಿಪುರದ ತನ್ನ ಖಾಸಗಿ ಮನೆಯಲ್ಲಿ ವಾಸಿಸುತ್ತಿದ್ದರು. ಈ ಹಿಂದೆ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ನಂದಿಗ್ರಾಮದಲ್ಲಿ ಸೋಲಿನ ನಂತರ, ಮತ್ತೊಮ್ಮೆ ಭವಾನಿಪುರದಿಂದ ಅವರು ಸ್ಪರ್ಧಿಸುವ ಸಾಧ್ಯತೆಯಿದೆ.

ಬಿಜೆಪಿ ಕಿಡಿ

‘ಪಶ್ಚಿಮ ಬಂಗಾಳದಲ್ಲಿ ಚುನಾವಣೆಯ ನಂತರ ನಡೆದ ಭೀಕರ ಹಿಂಸಾಚಾರದಲ್ಲಿ ಅಮಾಯಕ ಬಂಗಾಳಿಗಳ ರಕ್ತದ ಕಲೆ ಮಮತಾ ಬ್ಯನರ್ಜಿಯವರ ಕೈಗಂಟಿದೆ. ಮಮತಾ ಬ್ಯಾನರ್ಜಿಯ ಈ ದೈವೀಕರಣವು ವಾಕರಿಕೆ ತರಿಸುತ್ತದೆ. ಇದು ದುರ್ಗಾ ದೇವಿಗೆ ಮಾಡಿದ ಅವಮಾನ. ಮಮತಾ ಬ್ಯಾನರ್ಜಿ ಇದನ್ನು ನಿಲ್ಲಿಸಬೇಕು’ ಎಂದು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಟ್ವಿಟರ್‌ ಮಾಡಿದ್ದಾರೆ.

ಬಿಜೆಪಿ ನಾಯಕ ಸುವೇಂದು ಅಧಿಕಾರಿ ಕೂಡ ಕೆಂಡ ಕಾರಿದ್ದು, ‘ನಿಮ್ಮನ್ನು ಮೆಚ್ಚಿಸಲು ಯಾರಾದರೂ ನಿಮ್ಮನ್ನು ದೇವರ ಸ್ಥಾನಕ್ಕೆ ಏರಿಸಲು ಪ್ರಯತ್ನಿಸಿದಾಗ ನೀವು ಮೌನವಾಗಿದ್ದರೆ ಅದು ಒಪ್ಪಿಗೆ ಸೂಚಿಸಿದಂತೆಯೇ. ಇದರರ್ಥ ನಿಮ್ಮ ಅಹಂಕಾರವು, ಆತ್ಮಸಾಕ್ಷಿಯು ಅದಕ್ಕೆ ಹೊಣೆಯಾಗಿಸದ ಹಂತ ತಲುಪಿದೆ’ ಎಂದು ಅವರು ಮೈಕ್ರೋಬ್ಲಾಗಿಂಗ್ ವೆಬ್‌ಸೈಟ್‌ನಲ್ಲಿ ಬರೆದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು