ಬುಧವಾರ, ಫೆಬ್ರವರಿ 1, 2023
18 °C
ಅಪಘಾತದಲ್ಲಿ ಸಾವಿಗೀಡಾದರೆ ಹೆಚ್ಚಿನ ಹಣ ಸಿಗುತ್ತದೆ ಎಂದು ಪತ್ನಿಯನ್ನೆ ಕೊಲೆ ಮಾಡಿಸಿದ ಕಿರಾತಕ

₹1.9 ಕೋಟಿ ವಿಮೆಗಾಗಿ ಪತ್ನಿಯನ್ನು ಸುಪಾರಿ ನೀಡಿ ಕೊಲ್ಲಿಸಿದ ರಾಜಸ್ಥಾನದ ವ್ಯಕ್ತಿ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಜೈಪುರ: ₹ 1.9 ಕೋಟಿ ವಿಮೆಯ ಆಸೆಗೆ ವ್ಯಕ್ತಿಯೊಬ್ಬ ಪತ್ನಿಯನ್ನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿದ ಅಮಾನವೀಯ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ಅಕ್ಟೋಬರ್‌ 5 ರಂದು ಘಟನೆ ನಡೆದಿದ್ದು, ಪತಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಮಹೇಶ್‌ ಚಂದ್‌ ಎಂಬಾತನೇ ಈ ಕೃತ್ಯ ಎಸಗಿದ ದುಷ್ಕರ್ಮಿ.

ಮಹೇಶ್‌ ಚಂದ್‌ನ ‍ಪತ್ನಿ ಶಾಲೂ  ಹಾಗೂ ಆಕೆಯ ಸೋದರ ಸಂಬಂಧಿ ರಾಜು ಎಂಬವರು ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಎಸ್‌ಯುವಿ ಕಾರಿನಿಂದ ಗುದ್ದಿಸಿ ಕೊಲೆ ಮಾಡಲಾಗಿದೆ.

ಘಟನೆಯ ಹಿನ್ನೆಲೆ

ಶಾಲೂ ಹಾಗೂ ಮಹೇಶ್‌ 2015ರಲ್ಲಿ ವಿವಾಹವಾಗಿದ್ದರು. ದಂಪತಿಗೆ ಹೆಣ್ಣಿ ಮಗು ಇದೆ. ಎರಡು ವರ್ಷದ ಬಳಿಕ ಇವರಿಬ್ಬರ ಸಂಬಂಧದಲ್ಲಿ ಒಡಕು ಮೂಡಿತ್ತು. 2019ರಲ್ಲಿ ಮಹೇಶ್‌ ವಿರುದ್ಧ ಶಾಲೂ ದೌರ್ಜನ್ಯದ ಪ್ರಕರಣವನ್ನೂ ದಾಖಲಿಸಿದ್ದಳು.

ಇತ್ತೀಚೆಗಷ್ಟೇ ಮಹೇಶ್‌ ₹ 1 ಕೋಟಿ ಮೌಲ್ಯದ ವಿಮೆ ಮಾಡಿಸಿಕೊಂಡಿದ್ದ. 40 ವರ್ಷದ ಅವಧಿಗೆ ಈ ವಿಮೆ ಮಾಡಿಸಿಕೊಳ್ಳಲಾಗಿತ್ತು. ಸಹಜ ಸಾವಾದರೆ ₹1 ಕೋಟಿ ಹಾಗೂ ಅಪಘಾತದಲ್ಲಿ ಸಾವಿಗೀಡಾದರೆ ₹ 1.9 ಕೋಟಿ ವಿಮಾ ಮೊತ್ತ ಲಭ್ಯವಾಗುತ್ತಿತ್ತು. ಇದೇ ಕಾರಣಕ್ಕಾಗಿ ಮಹೇಶ್‌, ಶಾಲೂ ಕೊಲೆಗೆ ಸಂಚು ರೂಪಿಸಿದ್ದ.

ಇದಕ್ಕಾಗಿ ‍ಪತ್ನಿ ಮುಂದೆ ನಾಟಕವಾಡಿದ್ದ ಮಹೇಶ್‌, ತನಗೊಂದು ಬಯಕೆ ಇರುವುದಾಗಿಯೂ, ಆ ಬಯಕೆ ಈಡೇರಿದರೆ ಹೊಸ ಮನೆ ಕಟ್ಟಿಸುವುದಾಗಿಯೂ ಹೇಳಿ ನಂಬಿಸಿದ್ದ. ಅಲ್ಲದೇ ಈ ಬಯಕೆ ಈಡೇರಿಕೆಗೆ ನೀನು ಸತತ 11 ದಿನ ಹನುಮ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಬೇಕು ಎಂದು ಪತ್ನಿಯನ್ನು ಪುಸಲಾಯಿಸಿದ್ದ.

ಪತಿಯ ಮಾತು ನಂಬಿದ್ದ ಶಾಲೂ, ತನ್ನ ಸೋದರ ಸಂಬಂಧಿ ರಾಜು ಜತೆ ಮುಂಜಾನೆ ದೇಗುಲಕ್ಕೆ ಹೋಗಲು ಆರಂಭಿಸಿದ್ದಾಳೆ. ಅಕ್ಟೋಬರ್‌ 5 ರಂದು ಇಬ್ಬರೂ ಬೈಕ್‌ನಲ್ಲಿ ಹೋಗುತ್ತಿರುವಾಗ ಕಾರಿನಿಂದ ಗುದ್ದಿಸಿದ್ದಾನೆ.

ಘಟನೆಯಲ್ಲಿ ಶಾಲೂ ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ ರಾಜು ಕೆಲ ದಿನಗಳ ಬಳಿಕ ಮೃತಪಟ್ಟಿದ್ದ.

ಕೊಲೆಗೆ ಸುಪಾರಿ ನೀಡಿದ್ದ ಮಹೇಶ್‌

ಹೆಂಡತಿಯ ಕೊಲೆಗೆ ಮಹೇಶ್‌, ರೌಡಿ ಶೀಟರ್ ಮುಕೇಶ್‌ ಸಿಂಗ್‌ ರಾಥೋಡ್‌ ಎಂಬಾತನಿಗೆ ₹ 10 ಲಕ್ಷಕ್ಕೆ ಸುಪಾರಿ ನೀಡಿದ್ದ. ₹ 5.5 ಲಕ್ಷ ಮುಂಗಡ ಹಣವನ್ನೂ ಪಾವತಿ ಮಾಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಕ್ಟೋಬರ್‌ 5 ರಂದು ಮುಂಜಾನೆ ಸುಮಾರು 4.45ರ ವೇಳೆಗೆ ಮಕೇಶ್‌ ಸಿಂಗ್‌ , ಶಾಲೂ ಹಾಗೂ ರಾಜು ಇದ್ದ ಬೈಕ್‌ಗೆ ಎಸ್‌ಯುವಿ ವಾಹನ ಮೂಲಕ ಗುದ್ದಿದ್ದಾನೆ. ಶಾಲೂ ಹಾಗೂ ರಾಜು ಇದ್ದ ಬೈಕನ್ನು ಹಿಂಬಾಲಿಸಿಕೊಂಡು ಹೋಗಿದ್ದ ರೌಡಿ ಶೀಟರ್‌ ಜತೆಗೆ ಇನ್ನೂ ಇಬ್ಬರು ವ್ಯಕ್ತಿಗಳು ಇದ್ದರು. ಕಾರಿನ ಹಿಂದೆ ಮಹೇಶ್‌ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಎನ್ನುವುದು ಪೊಲೀಸರು ನೀಡಿದ ಮಾಹಿತಿ.

ಆರಂಭದಲ್ಲಿ ಕುಟುಂಬಸ್ಥರೂ ಕೂಡ ಈ ಘಟನೆಯನ್ನು ಅಪಘಾತ ಎಂದೇ ತಿಳಿದಿದ್ದರು. ಪೊಲೀಸರ ವಿಚಾರಣೆ ವೇಳೆ ಕೊಲೆಗೆ ಸುಪಾರಿ ನೀಡಿದ್ದು ಬಯಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು