ಸೋಮವಾರ, ಮೇ 23, 2022
30 °C

ಹನುಮಾನ್ ಚಾಲೀಸಾ ವಿವಾದ| ಸಂಸದೆ ನವನೀತ್ ರಾಣಾ ಬಿಡುಗಡೆ, ತಪಾಸಣೆಗಾಗಿ ಆಸ್ಪತ್ರೆಗೆ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಮುಂಬೈ: ಹನುಮಾನ್ ಚಾಲೀಸಾ ಪಠಣ ವಿವಾದದಲ್ಲಿ ಬಂಧಿತರಾಗಿದ್ದ ಮಹಾರಾಷ್ಟ್ರದ ಪಕ್ಷೇತರ ಸಂಸದೆ ನವನೀತ್ ರಾಣಾ ಮತ್ತು ಅವರ ಪತಿ ಶಾಸಕ ರವಿ ರಾಣಾ ಅವರಿಗೆ ಮುಂಬೈ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದು, ಗುರುವಾರ ನವನೀತ್‌ ರಾಣಾ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ.

ಬೈಯ್ಕಳಾ ಜೈಲಿನಿಂದ ಬಿಡುಗಡೆಯಾದ ನಂತರ ನವನೀತ್ ರಾಣಾ ಅವರನ್ನು ವೈದ್ಯಕೀಯ ತಪಾಸಣೆಗಾಗಿ ಮುಂಬೈನ ಲೀಲಾವತಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ರವಿ ರಾಣಾ ಅವರ ಬಿಡುಗಡೆ ಪ್ರಕ್ರಿಯೆಗಾಗಿ ವಕೀಲರ ಮತ್ತೊಂದು ತಂಡ ತಲೋಜಾ ಜೈಲಿಗೆ ತೆರಳಿದೆ.

ಒಂದೇ ಪ್ರಕರಣದಲ್ಲಿ ಬಂಧಿತರಾಗಿದ್ದ ದಂಪತಿಯನ್ನು ಪ್ರತ್ಯೇಕ ಜೈಲುಗಳಲ್ಲಿ ಇರಿಸಲಾಗಿತ್ತು.

ಬಾಂದ್ರಾದಲ್ಲಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಖಾಸಗಿ ನಿವಾಸ ‘ಮಾತೋಶ್ರೀ’ ಎದುರು ಹನುಮಾನ್ ಚಾಲೀಸಾ ಪಠಿಸುವುದಾಗಿ ಘೋಷಿಸಿದ ಹಿನ್ನೆಲೆಯಲ್ಲಿ ದಂಪತಿಯನ್ನು ಬಂಧಿಸಲಾಗಿತ್ತು.

‘ತಲಾ ₹50,000 ಬಾಂಡ್‌ ನೀಡಬೇಕು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಬಾರದು, ಸಾಕ್ಷ್ಯನಾಶ ಮಾಡಬಾರದು ಎಂಬ ಷರತ್ತುಗಳನ್ನು ವಿಧಿಸಿ ಜಾಮೀನು ನೀಡಲಾಗಿದೆ’ ಎಂದು ದಂಪತಿ ಪರ ವಕೀಲ ರಿಜ್ವಾನ್‌ ಮರ್ಚಂಟ್‌ ಹೇಳಿದ್ದಾರೆ.

ರಾಣಾ ದಂಪತಿಯನ್ನು ಏಪ್ರಿಲ್ 23 ರಂದು ಖಾರ್ ಠಾಣೆಯ ಪೊಲೀಸರು ಬಂಧಿಸಿದ್ದರು. ಅವರ ವಿರುದ್ಧ ದೇಶದ್ರೋಹ, ಸಾರ್ವಜನಿಕ ಶಾಂತಿ ಭಂಗ, ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪಗಳೂ ಸೇರಿದಂತೆ ಹಲವು ಪ್ರಕರಣಗಳನ್ನು ಹೊರಿಸಲಾಗಿತ್ತು.

ಹನುಮಾನ್ ಚಾಲೀಸಾ ಪಠಣದಂಥ ನಡೆ ಸಮಾಜದಲ್ಲಿ ಧಾರ್ಮಿಕ ಭಾವನೆಗಳನ್ನು ಪ್ರಚೋದಿಸುತ್ತದೆ ಎಂದು ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಪ್ರದೀಪ್‌ ಘಾರಟ್‌ ಕೋರ್ಟ್‌ನಲ್ಲಿ ವಾದಿಸಿದರು. ಇದನ್ನು ರಾಣಾ ದಂಪತಿ ಪರ ವಕೀಲರು ಬಲವಾಗಿ ವಿರೋಧಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು