ಸೋಮವಾರ, ಮೇ 23, 2022
21 °C

ಕೋವಿಡ್‌ ನೆರಳಲ್ಲಿ ಮುಂಗಾರು ಅಧಿವೇಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನದ ಮೇಲೆ ಕೋವಿಡ್‌–19 ಪಿಡುಗು ಕರಿಛಾಯೆ ಬೀರಿದೆ. ಶಾಸನಗಳಿಗೆ ಸಂಬಂಧಿಸಿ ಸರ್ಕಾರದ ಮೇಲೆ ಒತ್ತಡ ಹೇರಲು ಸದನದಲ್ಲಿಯೇ ತುರ್ತು ಕಾರ್ಯತಂತ್ರ ರೂಪಿಸುವುದು, ಮತದಾನದ ಸಂದರ್ಭದಲ್ಲಿ ಎಲ್ಲ ಸದಸ್ಯರು ಹಾಜರಿರುವಂತೆ ನೋಡಿಕೊಳ್ಳುವುದು ವಿರೋಧ ಪಕ್ಷಗಳಿಗೆ ಸವಾಲಾಗಲಿದೆ. 

ಸಂಸತ್‌ ಸದಸ್ಯರಿಗೆ ಕುಳಿತುಕೊಳ್ಳಲು ಲೋಕಸಭೆ ಮತ್ತು ರಾಜ್ಯಸಭೆಯ ಛೇಂಬರ್‌ಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಹಾಗಾಗಿ, ಅಗತ್ಯಕ್ಕೆ ತಕ್ಕಂತೆ ತುರ್ತು ಸಭೆ ಸೇರಿ ಚರ್ಚಿಸುವುದು ವಿರೋಧ ಪಕ್ಷಗಳಿಗೆ ಕಷ್ಟವಾಗಬಹುದು. ಭಾವನಾತ್ಮಕ ಭಾಷಣಗಳು, ಹರಿತ ತಿರುಗೇಟು, ವಿಡಂಬನೆಗಳು ಸಂಸತ್ತಿನ ಚರ್ಚೆಯ ಹೆಗ್ಗುರುತುಗಳು. ಆದರೆ, ಲೋಕಸಭೆ, ರಾಜ್ಯಸಭೆ ಮತ್ತು ಸಂದರ್ಶಕರ ಗ್ಯಾಲರಿಗಳಲ್ಲಿ ಸದಸ್ಯರು ಹಂಚಿ ಹೋಗುವುದರಿಂದ ಈ ರೀತಿಯ ಮಾತುಗಾರಿಕೆ ಕಾಣಿಸುವುದು ಕಷ್ಟ. ಭಾಷಣ ಮತ್ತು ಹೇಳಿಕೆಗಳಿಗೆ ಸಹೋದ್ಯೋಗಿಗಳ ಪ್ರೋತ್ಸಾಹವೂ ಕಷ್ಟ ಸಾಧ್ಯ. 

ಲೋಕಸಭೆ ಮತ್ತು ರಾಜ್ಯಸಭೆಯು ನಾಲ್ಕು ತಾಸು ಪಾಳಿಯಲ್ಲಿ ಪ್ರತ್ಯೇಕವಾಗಿ ಸಭೆ ಸೇರಲಿದೆ. 

ಎರಡೂ ಸದನಗಳಲ್ಲಿ ಮೊದಲ ಮೂರು ಸಾಲುಗಳು ಪ್ರಧಾನಿ ಮತ್ತು ಸಚಿವ ಸಂಪುಟದ ಸದಸ್ಯರಿಗೆ ಮೀಸಲು. ವಿರೋಧ ಪಕ್ಷಗಳಿಗೆ ಆಸನಗಳನ್ನು ಹಂಚಿಕೆ ಮಾಡಲಾಗಿದೆ. 

ಸದಸ್ಯರು ಬೇರೆ ಬೇರೆ ಕಡೆ ಕುಳಿತುಕೊಳ್ಳುವುದರಿಂದ ಕಾರ್ಯತಂತ್ರ ರೂಪಿಸುವುದು ಕಷ್ಟವಾಗಲಿದೆ ಎಂದು ರಾಜ್ಯಸಭೆಯ ಸದಸ್ಯರೊಬ್ಬರು ಹೇಳಿದ್ದಾರೆ. 

ಲೋಕಸಭೆಯ ಸ್ಪೀಕರ್‌ ಮತ್ತು ರಾಜ್ಯಸಭೆಯ ಸಭಾಪತಿ ಸ್ಥಾನದಲ್ಲಿ ಇರುವವರಿಗೂ ಈ ಬಾರಿ ಕಾರ್ಯನಿರ್ವಹಣೆ ಸುಲಭವಲ್ಲ. ಬೇರೆ ಬೇರೆ ಕಡೆ ಕುಳಿತಿರುವ ಸದಸ್ಯರ ಮೇಲೆ ಅವರು ನಿಗಾ ಇರಿಸಬೇಕಾಗುತ್ತದೆ ಮತ್ತು ಎಲ್ಲರಿಗೂ ಮಾತನಾಡಲು ಅವಕಾಶ ಸಿಗುವಂತೆ ನೋಡಿಕೊಳ್ಳಬೇಕಾಗುತ್ತದೆ. 

ಸಂಸದೀಯ ವ್ಯವಹಾರಗಳ ಸಚಿವರು ಅಧಿವೇಶನದ ಮುನ್ನಾದಿನ ಸರ್ವ ಪಕ್ಷ ಸಭೆ ಕರೆಯುವುದು ರೂಢಿ. ವಿರೋಧ ಪಕ್ಷಗಳ ನಾಯಕರಿಗೆ ತಮ್ಮ ನಿಲುವುಗಳನ್ನು ವ್ಯಕ್ತಪಡಿಸಲು ಈ ಸಭೆಯು ಅವಕಾಶ ಕೊಡುತ್ತಿತ್ತು. ಆದರೆ, ಈ ಬಾರಿ ಸರ್ವಪಕ್ಷ ಸಭೆಯೂ ನಡೆದಿಲ್ಲ. 

ಸಂಸತ್ತಿನ ಆವರಣಕ್ಕೆ ಸಂಸದರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಇದೆ. ಅವರ ಆಪ್ತ ಸಹಾಯಕರು, ಕಾರ್ಯದರ್ಶಿಗಳು ಮತ್ತು ಭದ್ರತಾ ಸಿಬ್ಬಂದಿಗೆ ಪ್ರವೇಶ ಇಲ್ಲ. ಸಚಿವರು ಮಾತ್ರ ಒಬ್ಬ ಸಹಾಯಕರನ್ನು ಕರೆದೊಯ್ಯಬಹುದು.

ಸಂಸತ್ತಿನ ಸೆಂಟ್ರಲ್‌ ಹಾಲ್‌ಗೆ ಕೂಡ ಸಂಸದರಿಗಷ್ಟೇ ‍ಪ್ರವೇಶ ಇದೆ. ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಮಾಜಿ ಸಂಸದರ ಪ್ರವೇಶಕ್ಕೆ ನಿರ್ಬಂಧ ಇದೆ. ಸಂಸದರು ತಮ್ಮ ಕುಟುಂಬದ ಸದಸ್ಯರನ್ನು ಕರೆತರುವುದ್ಕೂ ಅವಕಾಶ ಇಲ್ಲ.

ಮುಂಗಾರು ಅಧಿವೇಶನ ಸೋಮವಾರದಿಂದ ಆರಂಭವಾಗಿ 18 ದಿನ ನಡೆಯಲಿದೆ

 ಸಂಸತ್ತಿನ ಮುಂಗಾರು ಅಧಿವೇಶನ ಸೋಮವಾರದಿಂದ ಆರಂಭವಾಗಿ 18 ದಿನ ನಡೆಯಲಿದೆ. ಲೋಕಸಭೆ ಮತ್ತು ರಾಜ್ಯಸಭೆಯು ಎರಡು ಪಾಳಿಗಳಲ್ಲಿ ಸಭೆ ಸೇರಲಿವೆ. ಕೋವಿಡ್‌ ಪರೀಕ್ಷೆಯಲ್ಲಿ ರೋಗ ಇಲ್ಲ ಎಂದು ದೃಢಪಟ್ಟವರಿಗೆ ಮಾತ್ರ ಸಂಸತ್ತಿಗೆ ಪ್ರವೇಶ ಇದೆ. ಮಾಸ್ಕ್‌ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಸಂಸದರು, ಸಿಬ್ಬಂದಿ, ಮಾಧ್ಯಮ ಪ್ರತಿನಿಧಿಗಳು ಸೇರಿ ನಾಲ್ಕು ಸಾವಿರಕ್ಕೂ ಹೆಚ್ಚು ಜನರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿದೆ. 

ರಾಜ್ಯಸಭೆಯ ಕಲಾಪವು ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಮತ್ತು ಲೋಕಸಭೆಯ ಕಲಾಪವು ಮಧ್ಯಾಹ್ನ 3ರಿಂದ ಸಂಜೆ  7ರವರೆಗೆ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು