ಮಂಗಳವಾರ, ಸೆಪ್ಟೆಂಬರ್ 29, 2020
23 °C

ಹಾಂಗ್‌ಕಾಂಗ್: ‌ರಾಷ್ಟ್ರೀಯ ಭದ್ರತಾ ಕಾನೂನು ಉಲ್ಲಂಘಿಸಿದ 280 ಜನರ ಬಂಧನ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಹಾಂಗ್‌ಕಾಂಗ್‌: ಚೀನಾ ಜಾರಿಗೊಳಿಸಿರುವ ಕಠಿಣ ಕಾನೂನನ್ನು ವಿರೋಧಿಸಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದ ಸುಮಾರು 280ಕ್ಕೂ ಹೆಚ್ಚು ಜನರನ್ನು ರಾಷ್ಟ್ರೀಯ ಭದ್ರತಾ ಕಾನೂನು ಉಲ್ಲಂಘಿಸಿದ ಆರೋಪದಡಿ ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್‌ ವರದಿ ಪ್ರಕಾರ, ಸುಮಾರು 50 ಸಾವಿರ ಜನರನ್ನು ಒಗ್ಗೂಡಿಸುವ ಉದ್ದೇಶದೊಂದಿಗೆ ಅಪರಿಚಿತ ಕಾರ್ಯಕರ್ತರು ಆನ್‌ಲೈನ್‌ ಮೂಲಕ ಕರೆ ನೀಡಿದ್ದರು. ಅದರಂತೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವರು ‘ಹಾಂಗ್‌ಕಾಂಗ್‌ ಅನ್ನು ಮುಕ್ತಗೊಳಿಸಿ’ ಎಂಬ ಘೋಷಣೆಗಳನ್ನು ಕೂಗಿ ಚೀನಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಅನುಮಾನಾಸ್ಪದವಾಗಿ ಹಾಗೂ ಕಾನೂನುಬಾಹಿರವಾಗಿ ಗುಂಪುಗೂಡಿದ ಆರೋಪದಡಿ 270 ಜನರನ್ನು, ದುರ್ವರ್ತನೆ ತೋರಿದ ಕಾರಣ ಐವರನ್ನು, ಗುರುತಿನ ಚೀಟಿ ತೋರಿಸದ ಐವರನ್ನು ವಶಕ್ಕೆ ಪಡೆಯಲಾಗಿದೆ. ಹಾಂಗ್‌ಕಾಂಗ್‌ ಸ್ವಾತಂತ್ರ್ಯದ ಪರವಾಗಿ ಘೋಷಣೆಗಳನ್ನು ಕೂಗುವ ಮೂಲಕ ಭದ್ರತಾ ಕಾನೂನು ಉಲ್ಲಂಘಿಸಿದ ಓರ್ವ ಮಹಿಳೆಯನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.

ಇದಕ್ಕೂ ಮೊದಲು, ಪ್ರತಿಭಟನೆ ಸಂಬಂಧ ಪೂರ್ವ ಕೌಲೂನ್‌ ಸುತ್ತಲೂ ಜಲಫಿರಂಗಿ ಹಾಗೂ ಶಸ್ತ್ರಸಜ್ಜಿತ ವಾಹನಗಳೊಂದಿಗೆ ಸುಮಾರು 2,000 ರಕ್ಷಣಾ ಸಿಬ್ಬಂದಿಯನ್ನು ನೇಮಿಸುವುದಾಗಿ ಪೊಲೀಸ್‌ ಮೂಲಗಳು ತಿಳಿಸಿದ್ದವು.

ಮುಂದಿನ ಅವಧಿಗೆ ಶಾಸಕರನ್ನು ಆಯ್ಕೆ ಮಾಡಲು ಹಾಂಗ್‌ಕಾಂಗ್‌ನಲ್ಲಿ ಮತದಾನ ನಡೆಯಬೇಕಿದ್ದ ಸಂದರ್ಭದಲ್ಲೇ ಪ್ರತಿಭಟನೆಗಳು ಆರಂಭವಾಗಿದ್ದವು. ಇದರ ನಡುವೆ ಜುಲೈ ಅಂತ್ಯದಲ್ಲಿ ಕೋವಿಡ್–19 ಪ್ರಕರಣಗಳು ಹೆಚ್ಚುತ್ತಿರುವುದನ್ನು ಪರಿಗಣಿಸಿ ಚೀನಾ ಪರ ಹಾಂಗ್‌ಕಾಂಗ್ ಆಡಳಿತವು ಚುನಾವಣೆಯನ್ನು ಮುಂದೂಡಿತ್ತು.

ಹಾಂಗ್‌ಕಾಂಗ್‌ನಲ್ಲಿ ಚೀನಾ ರೂಪಿಸಿರುವ ರಾಷ್ಟ್ರೀಯ ಭದ್ರತಾ ಕಾನೂನು ಜುಲೈ 1ರಿಂದ ಜಾರಿಗೆ ಬಂದಿದೆ. ಪ್ರತ್ಯೇಕತಾವಾದ, ವಿಧ್ವಂಸಕ ಕೃತ್ಯಗಳು, ಭಯೋತ್ಪಾದನೆ ಮತ್ತು ವಿದೇಶಿ ಪಡೆಗಳೊಂದಿಗಿನ ಒಡನಾಟದಂತಹ ಗಂಭೀರ ಅಪರಾಧಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲು ಈ ಕಾನೂನು ಅವಕಾಶ ಕಲ್ಪಿಸುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು