ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಹೆಚ್ಚಿನ ಕಡೆಗಳಲ್ಲಿ 6 – 8 ವಾರಗಳ ಲಾಕ್‌ಡೌನ್‌ ಅಗತ್ಯ: ಐಸಿಎಂಆರ್ ಮುಖ್ಯಸ್ಥ

Last Updated 12 ಮೇ 2021, 9:26 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ವೈರಸ್ ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರಿರುವ ಜಿಲ್ಲೆಗಳಲ್ಲಿ 6ರಿಂದ 8 ವಾರಗಳ ಕಾಲ ಲಾಕ್‌ಡೌನ್ ಘೋಷಿಸಬೇಕು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮುಖ್ಯಸ್ಥ ಡಾ. ಬಲರಾಮ ಭಾರ್ಗವ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಪರೀಕ್ಷೆಗೆ ಒಳಗಾದವರಲ್ಲಿ ಶೇ 10ಕ್ಕಿಂತಲೂ ಹೆಚ್ಚು ಮಂದಿಯಲ್ಲಿ ಸೋಂಕು ದೃಢಪಡುತ್ತಿರುವುದು ಯಾವ ಜಿಲ್ಲೆಯಲ್ಲಿ ಕಂಡುಬರುತ್ತಿದೆಯೋ ಅಲ್ಲಿ ಲಾಕ್‌ಡೌನ್ ಅಗತ್ಯವಿದೆ ಎಂದು ಹೇಳಿದ್ದಾರೆ.

ಇದರೊಂದಿಗೆ, ಈಗಾಗಲೇ ದೇಶದ ಹಲವು ಕಡೆಗಳಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್‌ ಇನ್ನಷ್ಟು ಸಮಯದ ವರೆಗೆ ಮಂದುವರಿಯಬೇಕಾಗಬಹುದು ಎಂದು ಸರ್ಕಾರಿ ಅಧೀನದ ಸಂಸ್ಥೆಯೊಂದರ ಹಿರಿಯ ಅಧಿಕಾರಿಯೊಬ್ಬರು ಮೊದಲ ಬಾರಿಗೆ ಬಹಿರಂಗವಾಗಿ ಹೇಳಿದಂತಾಗಿದೆ.

‘ಹೆಚ್ಚು ಪಾಸಿಟಿವಿಟಿ ದರ ಇರುವ ಜಿಲ್ಲೆಗಳನ್ನು ಸಂಪೂರ್ಣ ಬಂದ್ ಮಾಡಬೇಕು. ಪಾಸಿಟಿವಿಟಿ ದರ ಶೇ 5ರಿಂದ 10ರ ಒಳಗೆ ಇದ್ದರೆ ಅಂತಹ ಜಿಲ್ಲೆಗಳಲ್ಲಿ ಚಟುವಟಿಕೆಗಳಿಗೆ ಅವಕಾಶ ನೀಡಬಹುದು. ಆದರೆ, ಸೊಂಕು ಪತ್ತೆ ಪ್ರಮಾಣ ಈ ಪ್ರಮಾಣಕ್ಕೆ ಇಳಿಯಬೇಕು. ಇದು ಆರರಿಂದ ಎಂಟು ವಾರಗಳ ವರೆಗೆ ಸಾಧ್ಯವಿಲ್ಲ’ ಎಂದು ಬಲರಾಮ ಭಾರ್ಗವ ಹೇಳಿದ್ದಾರೆ.

ಪ್ರಸ್ತುತ ದೇಶದ 718 ಜಿಲ್ಲೆಗಳ ಪೈಕಿ ನಾಲ್ಕನೇ ಮೂರರಷ್ಟು ಜಿಲ್ಲೆಗಳಲ್ಲಿ ಪಾಸಿಟಿವಿಟಿ ಪ್ರಮಾಣ ಶೇ 10ಕ್ಕಿಂತ ಹೆಚ್ಚಿದೆ. ಇದರಲ್ಲಿ ಮಹಾನಗರಗಳಾದ ದೆಹಲಿ, ಮುಂಬೈ ಹಾಗೂ ಬೆಂಗಳೂರು ಸಹ ಸೇರಿವೆ.

ಆರ್ಥಿಕತೆಗೆ ಹೊಡೆತ ಬೀಳುವ ಕಾರಣಕ್ಕಾಗಿ ದೇಶವ್ಯಾಪಿ ಲಾಕ್‌ಡೌನ್ ಮಾಡುವುದಿಲ್ಲ ಎಂದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಲಾಕ್‌ಡೌನ್ ನಿರ್ಧಾರವನ್ನು ಆಯಾ ರಾಜ್ಯ ಸರ್ಕಾರಗಳಿಗೆ ಬಿಟ್ಟಿದೆ.

ಸೋಂಕು ಹರಡುವುದನ್ನು ತಡೆಯಲು ಹಲವಾರು ರಾಜ್ಯಗಳು ಈಗಾಗಲೇ ಆರ್ಥಿಕ ಚಟುವಟಿಕೆ ಮತ್ತು ಸಾರ್ವಜನಿಕ ಸಂಚಾರದ ಮೇಲೆ ವಿವಿಧ ಹಂತದ ನಿರ್ಬಂಧಗಳನ್ನು ವಿಧಿಸಿವೆ. ವಾರಕ್ಕೊಮ್ಮೆ ಅಥವಾ ಹದಿನೈದು ದಿನಗಳಿಗೊಮ್ಮೆ ಪರಿಸ್ಥಿತಿ ಅವಲೋಕಿಸಿ ಈ ನಿರ್ಧಾರಗಳನ್ನು ಪುನರ್‌ ಪರಿಶೀಲಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT