ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಫೋನ್ ಕದ್ದಾಲಿಸಲಾಗುತ್ತಿದೆ: ಮಮತಾ ಬ್ಯಾನರ್ಜಿ ಆರೋಪ

‘ದೂರವಾಣಿ ಕದ್ದಾಲಿಕೆ ಪ್ರಕರಣ ಕುರಿತು ಸಿಐಡಿಗೆ ತನಿಖೆಗೆ ಆದೇಶಿಸುತ್ತೇನೆ‘
Last Updated 17 ಏಪ್ರಿಲ್ 2021, 11:02 IST
ಅಕ್ಷರ ಗಾತ್ರ

ಗಾಲ್ಸಿ(ಪಶ್ಚಿಮ ಬಂಗಾಳ): ‘ನನ್ನ ದೂರವಾಣಿಯ ಕರೆಗಳನ್ನು ಕದ್ದಾಲಿಸಲಾಗುತ್ತಿದೆ‘ ಎಂದು ಆರೋಪಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಈ ಕುರಿತು ಸಿಐಡಿ ತನಿಖೆಗೆ ಆದೇಶಿಸುವುದಾಗಿ ಹೇಳಿದ್ದಾರೆ.

ಕೂಚ್‌ಬಿಹಾರ್‌ನಲ್ಲಿ ಭದ್ರತಾ ಪಡೆಗಳ ಗುಂಡಿನ ದಾಳಿಯಿಂದ ಮೃತಪಟ್ಟವರ ಶವಗಳೊಂದಿಗೆ ರ‍್ಯಾಲಿ ನಡೆಸುವ ಕುರಿತ ಧ್ವನಿ ಮುದ್ರಿತ ತುಣಕು ಬಹಿರಂಗಗೊಂಡ ಒಂದು ದಿನದ ನಂತರ ಮಮತಾ ಬ್ಯಾನರ್ಜಿ ಈ ಆರೋಪ ಮಾಡಿದ್ದಾರೆ.

ಇಲ್ಲಿ ಶನಿವಾರ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಈ ಧ್ವನಿ ಮುದ್ರಿಕೆ ಬಹಿರಂಗೊಳಿಸಿರುವ ಸಂಚಿನ ಹಿಂದೆ ಬಿಜೆಪಿ ಕೈವಾಡವಿದೆ‘ ಎಂದು ಆರೋಪಿಸಿದರು. ‘ತೃಣಮೂಲ ಕಾಂಗ್ರೆಸ್‌ ರಾಜ್ಯದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳೊಂದಿಗೆ ಪ್ರಚಾರ ಮಾಡುತ್ತಿರುವುದನ್ನು ಸಹಿಸದ ಬಿಜೆಪಿಯವರು ಇಂಥ ಪಿತೂರಿ ಮಾಡುತ್ತಿದ್ದಾರೆ‘ ಎಂದು ಅವರು ಟೀಕಿಸಿದರು.

‘ಬಿಜೆಪಿ ನಾಯಕರು ನನ್ನ ನಿತ್ಯದ ಸಂಭಾಷಣೆಯನ್ನೂ ಕದ್ದಾಲಿಸುತ್ತಿದ್ದಾರೆ. ನಮ್ಮ ಮನೆಯ ಅಡುಗೆಯವರು ಮತ್ತು ಇತರೆ ಮನೆ ಕೆಲಸದವರ ಫೋನ್‌ ಕರೆಗಳನ್ನೂ ಕದ್ದಾಲಿಸುತ್ತಿರಬಹುದು‘ ಎಂದು ಮಮತಾ ಹೇಳಿದ್ದಾರೆ.

‘ಈ ದೂರವಾಣಿ ಕದ್ದಾಲಿಕೆ ಪ್ರಕರಣ ಕುರಿತು ಸಿಐಡಿ ತನಿಖೆಗೆ ಆದೇಶಿಸುತ್ತಿದ್ದೇನೆ. ಇಂಥ ಬೇಹುಗಾರಿಕೆ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಯಾರನ್ನೂ ಬಿಡುವುದಿಲ್ಲ‘ ಎಂದು ಮಮತಾ ತಿಳಿಸಿದ್ದಾರೆ.

‘ಈ ದೂರವಾಣಿ ಕದ್ದಾಲಿಕೆ ಪ್ರಕರಣದಲ್ಲಿ ಯಾರಿದ್ದಾರೆ ಎಂಬುದು ಗೊತ್ತಿದೆ. ಇಂಥ ಕೆಲಸಗಳಲ್ಲಿ ಕೆಲವು ಏಜೆಂಟರೊಂದಿಗೆ ಕೇಂದ್ರದ ಶಕ್ತಿಗಳು ಭಾಗಿಯಾಗಿರುವ ಮಾಹಿತಿಯೂ ಇದೆ‘ ಎಂದು ಅವರು ಹೇಳಿದ್ದಾರೆ.

‘ಈ ಕೃತ್ಯದ ಹಿಂದೆ ತಮ್ಮ ಪಾತ್ರವಿಲ್ಲ ಎಂದು ಬಿಜೆಪಿಯವರು ಹೇಳಿಕೊಂಡರೂ, ಖಂಡಿತಾ ಈ ಕೃತ್ಯದ ಹಿಂದೆ ಅವರ ಪಾತ್ರ ಇರುವುದು ಸ್ಪಷ್ಟವಾಗಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT