ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್ ನಿಧನ: ಮೊಯ್ಲಿ, ಮೋದಿ ಸೇರಿ ಗಣ್ಯರ ಸಂತಾಪ

Last Updated 13 ಸೆಪ್ಟೆಂಬರ್ 2021, 13:06 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್ ನಾಯಕ ಎಂ.ವೀರಪ್ಪ ಮೊಯ್ಲಿ ಅವರು ಸೋಮವಾರ ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ರಾಷ್ಟ್ರವು ಒಬ್ಬ ಮಹಾನ್ ನಾಯಕನನ್ನು ಕಳೆದುಕೊಂಡಿದೆ ಎಂದು ಹೇಳಿದ್ದಾರೆ.

ಮಾಜಿ ಕೇಂದ್ರ ಸಚಿವ ಹಾಗೂ ರಾಜ್ಯಸಭಾ ಸದಸ್ಯರಾಗಿದ್ದ ಫರ್ನಾಂಡಿಸ್ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

'ನಾವಿಂದು ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಲ್ಲಿ ಒಬ್ಬರನ್ನು ಕಳೆದುಕೊಂಡಿದ್ದೇವೆ. ಅವರು ಐದು ದಶಕಗಳಿಗೂ ಹೆಚ್ಚು ಕಾಲ ಪಕ್ಷಕ್ಕೆ ಸೇವೆ ಸಲ್ಲಿಸಿದ್ದಾರೆ. ಪಕ್ಷಕ್ಕೆ ನಿಷ್ಠರಾಗಿದ್ದ ಅವರು ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪಕ್ಷಕ್ಕಾಗಿ ನನ್ನೊಂದಿಗೆ ಒಟ್ಟಾಗಿ ಕೆಲಸ ಮಾಡಿದವರು' ಎಂದು ಕರ್ನಾಟಕದಲ್ಲಿ ಫರ್ನಾಂಡಿಸ್ ಜೊತೆ ನಿಕಟವಾಗಿ ಕೆಲಸ ಮಾಡಿದ ಮೊಯ್ಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

'ಪಕ್ಷದಲ್ಲಿ ಯಾವುದೇ ಬಿಕ್ಕಟ್ಟು ಎದುರಾದರೂ ಕೂಡ ನಾವು ಯಾವಾಗಲೂ ಅವರನ್ನು ಅವಲಂಬಿಸಿದ್ದೆವು ಮತ್ತು ಅವರು ಎಂಥದ್ದೇ ಬಿಕ್ಕಟ್ಟನ್ನು ನಿವಾರಿಸುವುದರಲ್ಲಿ ನಿಸ್ಸೀಮರಾಗಿದ್ದರು. ವೈಯಕ್ತಿಕವಾಗಿ ನಾನೊಬ್ಬ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ. ರಾಷ್ಟ್ರವು ಒಬ್ಬ ಮಹಾನ್ ನಾಯಕನನ್ನು ಕಳೆದುಕೊಂಡಿದೆ ಮತ್ತು ಪಕ್ಷವು ಒಬ್ಬ ನಿಷ್ಠಾವಂತ ನಾಯಕನನ್ನು ಕಳೆದುಕೊಂಡಿದೆ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು' ಎಂದು ಹೇಳಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು, ಆಸ್ಕರ್ ಫರ್ನಾಂಡಿಸ್ ಅವರ ಪತ್ನಿ ಬ್ಲಾಸಂ ಫರ್ನಾಂಡಿಸ್ ಅವರಿಗೆ ಕರೆ ಮಾಡಿ‌ ಸಾಂತ್ವನ ಹೇಳಿದ್ದಾರೆ.

ರಾಜ್ಯಸಭಾ ಸಂಸದ ಆಸ್ಕರ್ ಫರ್ನಾಂಡಿಸ್ ಅವರ ನಿಧನದಿಂದ ದುಃಖವಾಗಿದೆ. ಈ ದುಃಖದ ಸಮಯದಲ್ಲಿ, ಅವರ ಕುಟುಂಬ ಮತ್ತು ಹಿತೈಷಿಗಳೊಂದಿಗೆ ನನ್ನ ಪ್ರಾರ್ಥನೆ ಇದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

'ಆಸ್ಕರ್ ಫರ್ನಾಂಡಿಸ್ ಅವರ ಕುಟುಂಬ ಮತ್ತ ಸ್ನೇಹಿತರಿಗೆ ನನ್ನ ಹೃದಯಪೂರ್ವಕ ಸಂತಾಪಗಳು. ವೈಯಕ್ತಿಕವಾಗಿ ಇದು ನನಗಾದ ನಷ್ಟ. ಅವರು ಕಾಂಗ್ರೆಸ್ ಪಕ್ಷದಲ್ಲಿ ನಮ್ಮಲ್ಲಿ ಅನೇಕರಿಗೆ ಮಾರ್ಗದರ್ಶಕರಾಗಿದ್ದರು. ಅವರು ನೀಡಿರುವ ಕೊಡುಗೆಗಳಿಂದಾಗಿ ಸದಾ ಅವರ ನೆನಪಿನಲ್ಲಿ ಉಳಿಯುತ್ತಾರೆ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್ ಮಾಡಿ, 'ಆಸ್ಕರ್ ಜೀ ಕುಟುಂಬಕ್ಕೆ ಹೃತ್ಪೂರ್ವಕ ಸಂತಾಪಗಳು. ನೀವು ನಮ್ಮ ಹೃದಯ ಮತ್ತು ಪ್ರಾರ್ಥನೆಗಳಲ್ಲಿ ಇದ್ದೀರಿ. ಅವರು ಕಾಂಗ್ರೆಸ್ ಪಕ್ಷದ ಅತ್ಯುತ್ತಮ, ನಿಷ್ಠಾವಂತ ಸೈನಿಕರಲ್ಲಿ ಒಬ್ಬರಾಗಿದ್ದರು, ನಾವೆಲ್ಲರೂ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ' ಎಂದಿದ್ದಾರೆ.

ಹಿರಿಯ ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್ ಅವರ ನಿಧನದ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ದೇಶ ಮತ್ತು ಪಕ್ಷಕ್ಕೆ ವಿವಿಧ ಜವಾಬ್ದಾರಿ ಹೊತ್ತು ಸೇವೆ ಸಲ್ಲಿಸಿದ್ದ ಫರ್ನಾಂಡಿಸ್ ಅವರ ಅವಿರತ ಸಮರ್ಪಣೆ ಮತ್ತು ದೂರದೃಷ್ಟಿಗಾಗಿ ಸದಾ ನೆನಪಿನಲ್ಲಿ ಉಳಿಯುತ್ತಾರೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.

ವಿಧಾನಸಬೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿ, 'ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ಅವರ ನಿಧನದಿಂದ ಆಘಾತವಾಗಿದೆ. ಅವರ ಕುಟುಂಬ ಸದಸ್ಯರಿಗೆ ನನ್ನ ಸಂತಾಪಗಳು ಮತ್ತು ಅವರ ಆತ್ಮಕ್ಕೆ ಶಾಂತಿ ಸಿಗಲಿ' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT