ಸೋಮವಾರ, ಮಾರ್ಚ್ 27, 2023
30 °C
ಮರಳು ಸುಲಭವಾಗಿ ಲಭ್ಯವಾಗುವಂತೆ ಮಾಡುವುದು ಎಷ್ಟು ಮುಖ್ಯವೋ ಪರಿಸರ ಸಂರಕ್ಷಣೆಯೂ ಅಷ್ಟೇ ಮುಖ್ಯ

ಸಂಪಾದಕೀಯ: ಹೊಸ ಮರಳು ನೀತಿ ಸ್ವಾಗತಾರ್ಹ, ಅನುಷ್ಠಾನದಲ್ಲಿ ಬೇಕು ಬದ್ಧತೆ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ರಾಜ್ಯದ ನದಿ, ಹಳ್ಳ, ಕೊಳ್ಳ, ಕೆರೆಗಳು, ಜಲಾಶಯ ಪಾತ್ರಗಳಲ್ಲಿ ಶೇಖರಣೆಯಾಗುವ ಮರಳಿನ ಗಣಿಗಾರಿಕೆ ಮತ್ತು ಸಾಗಣೆಯ ಮೇಲೆ ನಿಯಂತ್ರಣ ಸಾಧಿಸುವುದೇ ಕಷ್ಟಸಾಧ್ಯ ಎಂಬ ಪರಿಸ್ಥಿತಿ ಇತ್ತೀಚಿನ ವರ್ಷಗಳಲ್ಲಿ ನಿರ್ಮಾಣವಾಗಿದೆ. ಲಭ್ಯವಿರುವ ಮರಳಿನ ಪ್ರಮಾಣ ಮತ್ತು ಬೇಡಿಕೆಯ ನಡುವಿನ ಭಾರಿ ಅಂತರವು ಅದರ  ಅಕ್ರಮ ಗಣಿಗಾರಿಕೆ, ಸಾಗಣೆ ಮತ್ತು ದಾಸ್ತಾನು ಹೆಚ್ಚಲು ಕಾರಣವಾಗಿದೆ. ಮರಳು ಗಣಿಗಾರಿಕೆ ಕೆಲವು ದಶಕಗಳಿಂದ ಈಚೆಗೆ ‘ಮಾಫಿಯಾ’ ಸ್ವರೂಪವನ್ನು ಪಡೆದುಕೊಂಡಿದ್ದು, ಅದಕ್ಕೆ ಕಡಿವಾಣ ಹಾಕುವುದು ಸರ್ಕಾರಕ್ಕೂ ಸವಾಲಾಗಿ ಪರಿಣಮಿಸಿದೆ. ಎರಡು ದಶಕಗಳ ಅವಧಿಯಲ್ಲಿ ಹಲವು ಬಾರಿ ‘ಉಪಖನಿಜ (ಮರಳು) ರಿಯಾಯಿತಿ ನೀತಿ’ ಮತ್ತು ‘ಉಪಖನಿಜ (ಮರಳು) ರಿಯಾಯಿತಿ ನಿಯಮ’ಗಳಲ್ಲಿ ಬದಲಾವಣೆ ಮಾಡಿದ್ದರೂ ಅಕ್ರಮಗಳನ್ನು ಸಂಪೂರ್ಣವಾಗಿ ನಿಯಂತ್ರಿಸುವುದಕ್ಕೆ ಸಾಧ್ಯವಾಗಿಲ್ಲ. 2008, 2011 ಮತ್ತು 2017ರಲ್ಲಿ ಮರಳು ನೀತಿಯಲ್ಲಿ ಬದಲಾವಣೆಗಳನ್ನು ತರಲಾಗಿತ್ತು. ನದಿ ಪಾತ್ರದ ಮರಳು ನಿಕ್ಷೇಪಗಳಲ್ಲಿ ಗಣಿಗಾರಿಕೆಗೆ ಗುತ್ತಿಗೆ ನೀಡುವುದು ಹಾಗೂ ಪಟ್ಟಾ ಜಮೀನಿನಲ್ಲಿ ಲಭ್ಯವಿರುವುದನ್ನು ತೆಗೆದು, ಮಾರಾಟ ಮಾಡಲು ಜಮೀನು ಮಾಲೀಕರಿಗೆ ಅನುಮತಿ ನೀಡುವುದಕ್ಕೆ ಅವಕಾಶ ಕಲ್ಪಿಸಿ 2016ರಲ್ಲಿ ನಿಯಮಗಳಿಗೆ ತಿದ್ದುಪಡಿ ತರಲಾಗಿತ್ತು. 2017ರ ಮರಳು ನೀತಿಯಲ್ಲಿ ವಿದೇಶದಿಂದ ಮರಳನ್ನು ಆಮದು ಮಾಡಿಕೊಂಡು ಮಾರಾಟ ಮಾಡುವುದಕ್ಕೂ ಅವಕಾಶ ಕಲ್ಪಿಸಲಾಗಿತ್ತು. ಈ ನೀತಿ ಮತ್ತು ನಿಯಮಗಳಲ್ಲಿನ ಗೊಂದಲಗಳನ್ನೇ ಬಂಡವಾಳ ಮಾಡಿಕೊಂಡ ‘ಮಾಫಿಯಾ’ ಮಂದಿ ನದಿ, ಹಳ್ಳ, ಕೊಳ್ಳ, ಕೆರೆಗಳಲ್ಲಿನ ಮರಳನ್ನು ಬರಿದು ಮಾಡುತ್ತಲೇ ಇದ್ದಾರೆ.

ಮೊದಲು ಲೋಕೋಪಯೋಗಿ ಇಲಾಖೆಯ ಹಿಡಿತದಲ್ಲಿದ್ದ ಮರಳು ಗಣಿಗಾರಿಕೆಯು ನಂತರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕೈಸೇರಿತು. ಆದರೆ, ಯಾವ ಬದಲಾವಣೆಯೂ ಗೋಚರಿಸಲಿಲ್ಲ. ಅಧಿಕೃತವಾಗಿ ಗುತ್ತಿಗೆ ಪಡೆದವರೇ ಕಾನೂನು, ಕಟ್ಟಲೆಗಳನ್ನು ಗಾಳಿಗೆ ತೂರಿ ಜಲಮೂಲಗಳ ಒಡಲು ಬಗೆದು ಥೈಲಿ ತುಂಬಿಸಿಕೊಳ್ಳುತ್ತಿರುವುದು ಯಥಾವತ್ತಾಗಿ ನಡೆದುಕೊಂಡು ಬರುತ್ತಿದೆ. ಮರಳು ಗಣಿಗಾರಿಕೆ ಮತ್ತು ಸಾಗಣೆ ನಡೆಸುವವರ ಹಿಡಿತಕ್ಕೆ ಇಡೀ ವ್ಯವಸ್ಥೆಯೇ ಸಿಲುಕಿ, ಕೆಲವು ಜಿಲ್ಲೆಗಳಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಕಾಮಗಾರಿಗಳಿಗೂ ಮರಳು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದ ನಿದರ್ಶನಗಳು ಬಹಳಷ್ಟಿವೆ. ಮರಳಿನ ದರ ನಿಯಂತ್ರಿ ಸುವುದಕ್ಕೂ ಸರ್ಕಾರಕ್ಕೆ ಈವರೆಗೂ ಸಾಧ್ಯವಾಗಿಲ್ಲ. ಇದು ಸಾಮಾನ್ಯ ಜನರು ಸ್ವಂತ ಸೂರಿನ ಕನಸನ್ನು ನನಸಾಗಿಸಿಕೊಳ್ಳುವುದಕ್ಕೆ ಪ್ರಬಲ ಅಡ್ಡಿಯಾಗಿ ಕಾಡುತ್ತಿದೆ. ಈ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಸುಲಭವಾಗಿ ಮತ್ತು ಕೈಗೆಟುಕುವ ದರದಲ್ಲಿ ಮರಳು ಲಭ್ಯವಾಗುವಂತೆ ಮಾಡಲು ಹಾಗೂ ಪರಿಸರಕ್ಕೆ ಹಾನಿಯಾಗದಂತೆ ವೈಜ್ಞಾನಿಕವಾಗಿ ಅದರ ಗಣಿಗಾರಿಕೆಗೆ ಅವಕಾಶ ಕಲ್ಪಿಸಲು ‘ಹೊಸ ಮರಳು ನೀತಿ–2020’ ಅನ್ನು ರೂಪಿಸಲಾಗಿತ್ತು. 2020ರ ಮೇ 5ರಿಂದಲೇ ಈ ನೀತಿ ಜಾರಿಗೆ ಬಂದಿತ್ತು. ಆದರೆ, ನಿಯಮಗಳನ್ನು ರಚಿಸದ ಕಾರಣ ಅದು ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಂಡಿರಲಿಲ್ಲ. ‘ಹೊಸ ಮರಳು ನೀತಿ–2020’ಕ್ಕೆ ಪೂರಕವಾಗಿ ‘ಕರ್ನಾಟಕ ಉಪಖನಿಜ ರಿಯಾಯಿತಿ (ತಿದ್ದುಪಡಿ) ನಿಯಮ–2021’ಕ್ಕೆ ಸಚಿವ ಸಂಪುಟ ಸಭೆ ಸೋಮವಾರ ಒಪ್ಪಿಗೆ ನೀಡಿದೆ. ಇದರೊಂದಿಗೆ ಹೊಸ ಮರಳು ನೀತಿ ಜಾರಿಯ ವಿಚಾರದಲ್ಲಿ ಒಂದು ರೀತಿಯ ಸ್ಪಷ್ಟತೆ ದೊರಕಿದಂತಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಲಭ್ಯವಾಗುವ ಮರಳಿನಲ್ಲಿ ಒಂದು ಭಾಗವನ್ನು ಸ್ಥಳೀಯ ಬಳಕೆಗೆ ಮೀಸಲಿಡಬೇಕೆಂಬ ಬೇಡಿಕೆಯನ್ನು ಹೊಸ ನೀತಿ ಮಾನ್ಯ ಮಾಡಿದೆ. ಹಳ್ಳ, ತೊರೆ ಮತ್ತು ಕೆರೆಗಳಲ್ಲಿನ ಮರಳಿನ ಹಂಚಿಕೆಯ ಅಧಿಕಾರ ಆಯಾ ಗ್ರಾಮ ಪಂಚಾಯಿತಿಗೆ ಲಭಿಸಲಿದೆ. ನದಿಗಳು, ಜಲಾಶಯಗಳಲ್ಲಿ ಲಭ್ಯವಿರುವ ಮರಳಿನ ಗಣಿಗಾರಿಕೆ ಇನ್ನು ಮುಂದೆ ರಾಜ್ಯ ಸರ್ಕಾರಿ ಸ್ವಾಮ್ಯದ ಹಟ್ಟಿ ಚಿನ್ನದ ಗಣಿ ನಿಗಮ ಹಾಗೂ ಕರ್ನಾಟಕ ರಾಜ್ಯ ಖನಿಜ ನಿಗಮದ ಮೂಲಕವೇ ನಡೆಯಲಿದೆ. ನಿಕ್ಷೇಪಗಳಲ್ಲಿ ಲಭ್ಯವಿರುವ ಮರಳನ್ನು ತೆಗೆದು, ಸಂಗ್ರಹಾಗಾರಗಳಿಗೆ (ಸ್ಟಾಕ್‌ ಯಾರ್ಡ್‌) ಸಾಗಿಸುವ ಕೆಲಸಕ್ಕೆ ಖಾಸಗಿ ಗುತ್ತಿಗೆದಾರರ ಪಾತ್ರ ಸೀಮಿತವಾಗಲಿದೆ. ಗ್ರಾಮ ಪಂಚಾಯಿತಿಗಳು ವಿತರಿಸುವ ಮರಳಿನ ದರ ಪ್ರತೀ ಟನ್‌ಗೆ ₹ 300 ಮತ್ತು ನಿಗಮಗಳು ವಿತರಿಸುವ ಮರಳಿನ ದರ ಪ್ರತೀ ಟನ್‌ಗೆ ₹ 700 ನಿಗದಿಯಾಗಿದೆ. ಬಳಕೆದಾರರ ಹಿತದೃಷ್ಟಿಯಿಂದ ಇವೆಲ್ಲವೂ ಸಕಾರಾತ್ಮಕ ಕ್ರಮಗಳೇ ಆಗಿವೆ. ಆದರೆ, ಈಗಲೂ ರಾಜ್ಯದಲ್ಲಿ ಮರಳಿನ ಬೇಡಿಕೆ ಮತ್ತು ಪೂರೈಕೆ ನಡುವೆ ದೊಡ್ಡ ಅಂತರವಿದೆ. ಎಂ– ಸ್ಯಾಂಡ್‌ನಂತಹ ಪರ್ಯಾಯ ಉತ್ಪನ್ನಗಳ ಬಳಕೆಯಿಂದಲೂ ಅಂತರವನ್ನು ಗಣನೀಯವಾಗಿ ಕುಗ್ಗಿಸಲು ಸಾಧ್ಯವಾಗಿಲ್ಲ. ಮರಳು ಗಣಿಗಾರಿಕೆಯ ಮೇಲುಸ್ತುವಾರಿಗೆ ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟದ ಮೇಲ್ವಿಚಾರಣಾ ಸಮಿತಿಗಳನ್ನು ರಚಿಸಲಾಗುತ್ತಿದೆ. ಹೊಸ ನೀತಿಯಿಂದ ರಾಜ್ಯವು ಮರಳಿನ ಅಕ್ರಮ ಗಣಿಗಾರಿಕೆ ಮತ್ತು ಸಾಗಣೆಯಿಂದ ಸಂಪೂರ್ಣವಾಗಿ ಮುಕ್ತವಾಗುತ್ತದೆ ಎಂದು ಭಾವಿಸುವುದು ಕಷ್ಟ. ನೀತಿಯ ಅನುಷ್ಠಾನದಲ್ಲಿ ಸರ್ಕಾರ ಬದ್ಧತೆಯನ್ನು ಪ್ರದರ್ಶಿಸುವುದು ಅಗತ್ಯ. ಗ್ರಾಮ ಪಂಚಾಯಿತಿಗಳ ಮೂಲಕ ಮರಳು ವಿತರಣೆಗೆ ಅವಕಾಶ ಕಲ್ಪಿಸುವ ವ್ಯವಸ್ಥೆಯು ದುರ್ಬಳಕೆ ಆಗದಂತೆ ನೋಡಿಕೊಳ್ಳಬೇಕು. ಅದು ಸುಲಭವಾಗಿ ಲಭ್ಯವಾಗುವಂತೆ ಮಾಡುವುದಕ್ಕೆ ನೀಡುವುದಕ್ಕಿಂತಲೂ ಪರಿಸರ ಮತ್ತು ಜಲಮೂಲಗಳ ಸಂರಕ್ಷಣೆಗೆ ಹೆಚ್ಚು ಮಹತ್ವ ನೀಡಬೇಕು. ಅಕ್ರಮ ಗಣಿಗಾರಿಕೆ, ಸಾಗಾಣಿಕೆ ಮತ್ತು ದಾಸ್ತಾನು ಪ್ರಕರಣಗಳಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಹೊಣೆಗಾರಿಕೆ ನಿಗದಿ ಮಾಡಬೇಕು. ಮರಳು ದಂಧೆಯಲ್ಲಿ ತೊಡಗಿಕೊಂಡಿರುವವರು ಹಾಗೂ ಅವರ ಜತೆ ಶಾಮೀಲಾಗುವ ಸರ್ಕಾರದ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಂದೇಶವನ್ನು ರವಾನಿಸಿದರೆ ಮಾತ್ರ ಹೊಸ ನೀತಿಯ ಜಾರಿಯಿಂದ ಬದಲಾವಣೆಯನ್ನು ನಿರೀಕ್ಷಿಸಲು ಸಾಧ್ಯವಾಗಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು