ಗುರುವಾರ , ಮಾರ್ಚ್ 23, 2023
28 °C

ಕ್ಯಾಲೆಂಡರ್, ಡೈರಿ ಪ್ರಕಟಣೆ ಕೈಬಿಟ್ಟ ಕೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: 2021ರಿಂದ ಅಧಿಕೃತ ಕ್ಯಾಲೆಂಡರ್‌, ಡೈರಿ, ಗ್ರೀಟಿಂಗ್‌ ಕಾರ್ಡ್‌ಗಳು, ಟೇಬಲ್‌ ಟಾಪ್‌ ಪುಸ್ತಕಗಳ ಮುದ್ರಣವನ್ನು ಕೈಬಿಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಇವೆಲ್ಲವುಗಳ ಮುದ್ರಣಕ್ಕೆ ಕೇಂದ್ರವು ‘ಕೆಲವು ಕೋಟಿಗಳಷ್ಟು’ ಹಣವನ್ನು ಖರ್ಚು ಮಾಡುತ್ತಿತ್ತು. ‘ಕಾಗದರಹಿತ ಆಗಿ’ ಎಂಬ ಸೂಚನೆಯನ್ನು ಕೇಂದ್ರವು ತನ್ನೆಲ್ಲ ಸಚಿವಾಲಯಗಳಿಗೆ, ಇಲಾಖೆಗಳಿಗೆ ಹಾಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ರವಾನಿಸಿದೆ.

‘ಗೋಡೆ ಕ್ಯಾಲೆಂಡರ್‌ಗಳು, ಟೇಬಲ್‌ ಕ್ಯಾಲೆಂಡರ್‌ಗಳು, ಡೈರಿಗಳು, ಹಬ್ಬಗಳ ಸಂದರ್ಭದಲ್ಲಿ ಹೊರತರುತ್ತಿದ್ದ ಗ್ರೀಟಿಂಗ್‌ ಕಾರ್ಡ್‌ಗಳು ಹಾಗೂ ಈ ರೀತಿಯ ಇತರ ಪ್ರಕಟಣೆಗಳು ಇನ್ನು ಮುಂದೆ ಇರುವುದಿಲ್ಲ’ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.

‘ಕಾಫಿ ಟೇಬಲ್‌ ಪುಸ್ತಕಗಳ ಪ್ರಕಟಣೆ ಕೂಡ ಇನ್ನು ಮುಂದೆ ಇರುವುದಿಲ್ಲ. ಅವುಗಳ ಬದಲು ಇ–ಪುಸ್ತಕ ಪ್ರಕಟಿಸುವುದನ್ನು ಪ್ರೋತ್ಸಾಹಿಸಲಾಗುತ್ತದೆ. ಹಾಗಾಗಿ, ಸಂಬಂಧಪಟ್ಟ ಎಲ್ಲರೂ ಇ–ಪುಸ್ತಕಗಳ ಪ್ರಕಟಣೆಗೆ ಯತ್ನಿಸಬೇಕು’ ಎಂದು ಸಚಿವಾಲಯವು ಸೂಚಿಸಿದೆ.

ಉತ್ಪಾದಕತೆಯನ್ನು ಹೆಚ್ಚು ಮಾಡಲು ಇಡೀ ಜಗತ್ತು ವೇಗವಾಗಿ ಡಿಜಿಟಲ್‌ ಸಲಕರಣೆಗಳ ಕಡೆ ಮುಖ ಮಾಡುತ್ತಿದೆ. ಕೆಲಸಗಳನ್ನು ಯೋಜಿಸಲು, ಕೆಲಸಗಳು ಆಗಬೇಕಾದ ಸಮಯವನ್ನು ನಿಗದಿ ಮಾಡಲು ತಾಂತ್ರಿಕ ಆವಿಷ್ಕಾರಗಳನ್ನು ಬಳಸಿಕೊಳ್ಳುವುದು ಕಡಿಮೆ ಖರ್ಚಿನದ್ದು, ಹೆಚ್ಚು ದಕ್ಷ, ಹೆಚ್ಚು ಪರಿಣಾಮಕಾರಿ ಎಂದು ಸಚಿವಾಲಯ ಹೇಳಿದೆ.

ಇವುಗಳ ಮುದ್ರಣವನ್ನು ಸಂಪೂರ್ಣವಾಗಿ ನಿರ್ಬಂಧಿಸುವ ಮೊದಲು ಕೇಂದ್ರ ಸರ್ಕಾರವು ಇನ್ನೊಂದು ಕ್ರಮವನ್ನು ತೆಗೆದುಕೊಂಡಿತ್ತು. ಎಲ್ಲ ಸಚಿವಾಲಯಗಳು ತಮ್ಮವೇ ಆದ ಕ್ಯಾಲೆಂಡರ್‌ಗಳನ್ನು ಹಾಗೂ ಡೈರಿಗಳನ್ನು ಮುದ್ರಿಸುವ ಬದಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಪ್ರಕಟಿಸುವ ಕ್ಯಾಲೆಂಡರ್ ಹಾಗೂ ಡೈರಿಗಳನ್ನು ಬಳಸಲು ಸೂಚಿಸಿತ್ತು.

ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು ಹಾಗೂ ಸ್ವಾಯತ್ತ ಸಂಸ್ಥೆಗಳಿಗೆ ಶುಲ್ಕ ಪಡೆದು ಡೈರಿಗಳು ಮತ್ತು ಕ್ಯಾಲೆಂಡರ್‌ಗಳನ್ನು ಪೂರೈಸಲಾಗುತ್ತದೆ ಎಂದು ಕೇಂದ್ರ ಹೇಳಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು