ಮಂಗಳವಾರ, ಮೇ 18, 2021
28 °C
ರೈಲ್ವೆ ಮಂಡಳಿ ಅಧ್ಯಕ್ಷ ಸುನೀತ್ ಶರ್ಮಾ ಹೇಳಿಕೆ

ಯಾವ ರಾಜ್ಯವೂ ರೈಲು ಸೇವೆಗಳ ಸ್ಥಗಿತಗೊಳಿಸಲು ಕೇಳಿಲ್ಲ: ರೈಲ್ವೆ ಮಂಡಳಿ ಅಧ್ಯಕ್ಷ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿದ್ದರೂ, ಯಾವುದೇ ರಾಜ್ಯ ಸರ್ಕಾರ ರೈಲು ಸೇವೆಯನ್ನು ಸ್ಥಗಿತಗೊಳಿಸುವಂತೆ ಕೇಳಿಲ್ಲ ಎಂದು ಹೇಳಿದ ರೈಲ್ವೆ ಮಂಡಳಿ ಅಧ್ಯಕ್ಷ ಸುನೀತ್ ಶರ್ಮಾ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಐಆರ್‌ಸಿಟಿಸಿಯ ಇ– ಟಿಕೆಟಿಂಗ್ ವೆಬ್‌ಸೈಟ್‌ ನಲ್ಲಿ ‘ಕೋವಿಡ್‌ 19‘ಗೆ ಸಂಬಂಧಿಸಿದ ಎಲ್ಲ ರೀತಿಯ ಶಿಷ್ಟಾಚಾರಗಳನ್ನು ಹೈಲೈಟ್ ಮಾಡಲಾಗಿದೆ. ಇದರ ಜತೆಗೆ, ಪ್ರಯಾಣಿಕರು ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕು ಅಥವಾ ಕೆಲವು ಪ್ರದೇಶಗಳಿಗೆ ತೆರಳುವವರು ಕೊರೊನಾ ಸೋಂಕಿನ ನೆಗೆಟಿವ್ ಪ್ರಮಾಣಪತ್ರಗಳನ್ನು ಕೊಂಡೊಯ್ಯಬೇಕೆಂದು ಸಲಹೆ ನೀಡಲಾಗಿದೆ‘ ಎಂದು ಹೇಳಿದರು. 

ಇಲ್ಲಿವರೆಗೂ ಯಾವುದೇ ರಾಜ್ಯ ಸರ್ಕಾರಗಳು ರೈಲ್ವೆ ಸೇವೆಯನ್ನು ಸ್ಥಗಿತಗೊಳಿಸುವಂತೆ ಕೇಳಿಲ್ಲ. ಆದಾಗ್ಯೂ ಸಮಸ್ಯೆಗಳಿದ್ದಾಗ ರಾಜ್ಯ ಸರ್ಕಾರಗಳು ನಮ್ಮೊಂದಿಗೆ ಚರ್ಚಿಸಿವೆ. ಕಂಟೈನ್‌ಮೆಂಟ್ ವಲಯಗಳು ಹೆಚ್ಚಿರುವ ರಾಜ್ಯಗಳಲ್ಲಿ ಪ್ರಯಾಣಿಕರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಹೇಳಿದರು.

ರೈಲ್ವೆ ಇಲಾಖೆ ಎಲ್ಲಾ ನಿಲ್ದಾಣಗಳಲ್ಲೂ ಪ್ರಯಾಣಿಕರಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡುತ್ತಿದೆ. ಕೋವಿಡ್ ನಿಯಮಗಳನ್ನು ಪಾಲಿಸದ ಪ್ರಯಾಣಿಕರಿಗೆ ದಂಡವನ್ನು ವಿಧಿಸುತ್ತಿದೆ ಎಂದು ಶರ್ಮಾ ಹೇಳಿದರು. ‘

ಶ್ರಮಿಕ್ ವಿಶೇಷ ರೈಲುಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಸದ್ಯಕ್ಕೆ ಶ್ರಮಿಕ್ ರೈಲು ಸಂಚರಿಸುತ್ತಿಲ್ಲ. ಬೇಡಿಕೆ ಇದ್ದರೆ ಮಾತ್ರ ವಿಶೇಷ ರೈಲುಗಳನ್ನು ಓಡಿಸಲಾಗುತ್ತದೆ‘ ಎಂದು ಅವರು ಸ್ಪಷ್ಟಪಡಿಸಿದರು.

ರೈಲ್ವೆ ಬೋಗಿಗಳನ್ನು ಕೋವಿಡ್‌ ಕೇರ್‌ ಕೇಂದ್ರಗಳಾಗಿ ಪರಿವರ್ತಿಸಿರುವುದರ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ದೇಶದಾದ್ಯಂತ ವಿವಿಧ ಪ್ರದೇಶಗಳಲ್ಲಿ ಕೋವಿಡ್‌ 19 ರೋಗಿಗಳಿಗಾಗಿ 4 ಸಾವಿರ ರೈಲು ಬೋಗಿಗಳನ್ನು ಐಸೋಲೇಷನ್ ಕೋಚ್‌ಗಳಾಗಿಸಲಾಗಿದೆ. ಈಗ ಮಹಾರಾಷ್ಟ್ರದ ನಂದುರ್ಬಾರ್‌ ನಿಂದ 100 ಐಸೊಲೇಷನ್ ಕೋಚ್‌ಗಳಿಗೆ ಬೇಡಿಕೆ ಇದೆ. ಈಗಾಗಲೇ 20 ಕೋಚ್‌ಗಳನ್ನು ಪೂರೈಸಿದ್ದೇವೆ‘ ಎಂದು ವಿವರಿಸಿದರು.

ಮುಂಬೈ, ಗುಜರಾತ್, ಕರ್ನಾಟಕ ಸೇರಿದಂತೆ ದೇಶದ ಎಲ್ಲಾ ನಿಲ್ದಾಣಗಳ ಬಗ್ಗೆ ರೈಲ್ವೆ ನಿಗಾವಹಿಸುತ್ತಿದೆ ಎಲ್ಲೆಲ್ಲಿ ಬೇಡಿಕೆ ಹೆಚ್ಚಿದೆಯೋ ಅಲ್ಲಿಗೆ ಹೆಚ್ಚಿನ ರೈಲುಗಳನ್ನು ಓಡಿಸಲು ವಲಯ ಪ್ರಧಾನ ವ್ಯವಸ್ಥಾಪಕರಿಗೆ ಅಧಿಕಾರ ನೀಡಲಾಗಿದೆ ಎಂದು ಶರ್ಮಾ ಹೇಳಿದರು.

‘ರೈಲು ಸೇವೆಯಲ್ಲಿ ಯಾವುದೇ ಕೊರತೆಯಿಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಎಲ್ಲ ಕಡೆ ಪರಿಸ್ಥಿತಿ ಸಾಮಾನ್ಯವಾಗಿದೆ. ಅದರಲ್ಲೂ ಮುಂಬೈ, ಸೂರತ್ ಮತ್ತು ಬೆಂಗಳೂರಿನಲ್ಲಿ ಯಾವುದೇ ತೊಂದರೆ ಇಲ್ಲ‘ ಎಂದು ಅವರು ಹೇಳಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು