ಶನಿವಾರ, ಸೆಪ್ಟೆಂಬರ್ 25, 2021
26 °C

ನ್ಯಾಯಾಧೀಶರ ಭದ್ರತೆಗೆ ರಾಷ್ಟ್ರ ಮಟ್ಟದ ಭದ್ರತಾ ಪಡೆ ಅಗತ್ಯವಿಲ್ಲ: ಕೇಂದ್ರ ಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ನಿರ್ದಿಷ್ಟ ಬೆದರಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಧೀಶರು ಮತ್ತು ನ್ಯಾಯಾಲಯ ಸಂಕೀರ್ಣಗಳ ಭದ್ರತೆಗಾಗಿ ರಾಷ್ಟ್ರೀಯ ಮಟ್ಟದ ಭದ್ರತಾ ಪಡೆಯನ್ನು ನಿಯೋಜಿಸುವುದು ಸೂಕ್ತವಲ್ಲ. ಅದರ ಬದಲಿಗೆ ಸ್ಥಳೀಯ ಪೊಲೀಸರೇ ಸಮರ್ಪಕವಾಗಿ ಈ ಕಾರ್ಯ ನಿಭಾಯಿಸಬಲ್ಲರು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮಂಗಳವಾರ ತಿಳಿಸಿದೆ.

ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು, ಈ ಸಂಬಂಧ ಕೇಂದ್ರ ಸರ್ಕಾರ 2007ರಲ್ಲಿ ಮಾರ್ಗಸೂಚಿ ಹೊರಡಿಸಿದೆ ಎಂದು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಅವರ ನೇತೃತ್ವದ ಪೀಠದ ಗಮನಕ್ಕೆ ತಂದರು.

ಈ ಕಾರ್ಯಕ್ಕಾಗಿ ವಿಶೇಷ ಪೊಲೀಸ್ ಪಡೆಯನ್ನು ನಿಯೋಜಿಸುವ ಬದಲಿಗೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಗೃಹ ಸಚಿವಾಲಯಗಳು ಕೇಂದ್ರದ ಮಾರ್ಗಸೂಚಿಯನ್ನು ಪೂರ್ಣವಾಗಿ ಅನುಷ್ಠಾನಗೊಳಿಸಿದರೆ ಸಾಕು ಎಂದರು.

ಹಿಮಾಚಲ ಪ್ರದೇಶದಲ್ಲಿ ಎದುರಾಗುವ ಭದ್ರತಾ ಸಮಸ್ಯೆಗಳು ಜಾರ್ಖಂಡ್‌ಗಿಂತ ಭಿನ್ನವಾಗಿರಬಹುದು. ಆದ್ದರಿಂದ ನ್ಯಾಯಾಧೀಶರ ರಕ್ಷಣಾ ಕಾರ್ಯವನ್ನು ಕೇಂದ್ರದ ಬದಲಿಗೆ ಆಯಾ ರಾಜ್ಯಗಳೇ ನಿಭಾಯಿಸುವುದು ಸೂಕ್ತ ಎಂದು ಅವರು ಹೇಳಿದರು.

ಆರ್‌ಪಿಎಫ್‌, ಸಿಎಸ್‌ಐಎಫ್‌ ಇತ್ಯಾದಿಗಳಂತೆ ನ್ಯಾಯಾಧೀಶರ ಭದ್ರತೆಗೆ ವಿಶೇಷ ರಾಷ್ಟ್ರೀಯ ಪಡೆಯನ್ನು ನಿಯೋಜಿಸಲು ಸಾಧ್ಯವೇ ಎಂದು ಪೀಠ ಕೇಳಿದ ಪ್ರಶ್ನೆಗೆ ಮೆಹ್ತಾ ಅವರು ಮೇಲ್ಕಂಡಂತೆ ಪ್ರತಿಕ್ರಿಯಿಸಿದರು.

ಈ ಸಂಬಂಧ ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಗಳು ಪಾಲನೆ ಆಗುತ್ತಿವೆಯೇ ಅಥವಾ ಇಲ್ಲವೇ ಎಂದು ನ್ಯಾಯಪೀಠ ಇದೇ ವೇಳೆ ಕೇಳಿತು.

ನ್ಯಾಯಾಧೀಶರ ರಕ್ಷಣೆಗೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಕುರಿತು ಪ್ರಮಾಣ ಪತ್ರ ಸಲ್ಲಿಸುವಂತೆ ಈ ಹಿಂದೆಯೇ ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿತ್ತು. ಆದರೂ ಹಲವು ರಾಜ್ಯಗಳು ಪ್ರತಿಕ್ರಿಯಿಸಿಲ್ಲ ಎಂದು ಪೀಠ ಬೇಸರ ವ್ಯಕ್ತಪಡಿಸಿತು.

ರಾಜ್ಯಗಳಿಗೆ ಈ ಕುರಿತು ಪ್ರತಿಕ್ರಿಯಿಸಲು 10 ದಿನಗಳ ಕಾಲಾವಕಾಶವನ್ನು ನೀಡಿದ ಪೀಠವು, ಪ್ರತಿಕ್ರಿಯಿಸಲು ವಿಫಲವಾದರೆ ಒಂದು ಲಕ್ಷ ರೂಪಾಯಿ ದಂಡ ಪಾವತಿಸಬೇಕಾಗುತ್ತದೆ ಎಂದು ಎಚ್ಚರಿಸಿತು.

ಧನಬಾದ್‌ನ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಉತ್ತಮ್ ಆನಂದ್ ಅವರ ಸಾವಿನ ನಂತರ ಸುಪ್ರೀಂ ಕೋರ್ಟ್‌, ನ್ಯಾಯಾಧೀಶರ ಭದ್ರತೆಗೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ನಡೆಸುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು