ಮಂಗಳವಾರ, ಜೂನ್ 28, 2022
20 °C

ಶರದ್ ಪವಾರ್ ಮತ್ತು ಫಡಣವಿಸ್ ಭೇಟಿಯಲ್ಲಿ ಯಾವುದೇ ರಹಸ್ಯವಿಲ್ಲ: ಶಿವಸೇನೆ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಮಹಾರಾಷ್ಟ್ರದ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡಣವಿಸ್ ಅವರ ಇತ್ತೀಚಿನ ಭೇಟಿಯಲ್ಲಿ 'ನಿಗೂಢವಾದದ್ದು' ಏನೂ ಇಲ್ಲ ಎಂದಿರುವ ಶಿವಸೇನೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ರಾಜಕಾರಣಿಗಳು ವಿವಿಧ ವಿಷಯಗಳ ಬಗ್ಗೆ ಸಮಾಲೋಚಿಸುತ್ತಲೇ ಇರುವುದರಿಂದಾಗಿ ಈ ಭೇಟಿಯಲ್ಲೂ ವಿಶೇಷತೆ ಇಲ್ಲ ಎಂದಿದ್ದಾರೆ.

ಸೇನಾ ಮುಖವಾಣಿ 'ಸಾಮ್ನಾ'ದಲ್ಲಿನ ಸಂಪಾದಕೀಯವು ಮಹಾರಾಷ್ಟ್ರದಲ್ಲಿ ಉಭಯ ನಾಯಕರ ಭೇಟಿಯಿಂದಾಗಿ 'ಆಪರೇಷನ್ ಕಮಲ' ಅಡಿಯಲ್ಲಿ ರಾಜಕೀಯ ಬದಲಾವಣೆಗಳನ್ನು ಸೂಚಿಸುವ ಊಹಾಪೋಹಗಳನ್ನು ಸೋಮವಾರ ತಳ್ಳಿಹಾಕಿದೆ.

'ಫಡಣವಿಸ್ ಮತ್ತು ಶರದ್ ಪವಾರ್ ನಡುವಿನ ಇತ್ತೀಚಿನ ಭೇಟಿಯಲ್ಲಿ ಯಾವುದೇ ನಿಗೂಢ ಅಥವಾ ರಹಸ್ಯವಿಲ್ಲ. ಹಾಗೆ ಭಾವಿಸುವವರಿಗೆ ಶರದ್ ಪವಾರ್ ಬಗ್ಗೆ ಚೆನ್ನಾಗಿ ತಿಳಿದಿಲ್ಲ' ಎಂದು ಸಂಪಾದಕೀಯ ತಿಳಿಸಿದೆ. ಸೋಮವಾರ ಬೆಳಿಗ್ಗೆ ಮುಂಬೈನ ನಿವಾಸದಲ್ಲಿ ಫಡಣವೀಸ್ ಅವರು ಪವಾರ್ ಅವರನ್ನು ಭೇಟಿಯಾಗಿದ್ದರು.

ಸಭೆಯ ನಂತರ ಫಡಣವಿಸ್ ಅವರು, ಇದು ಕೇವಲ ಸೌಜನ್ಯದ ಭೇಟಿ. ಪವಾರ್ ಅವರು ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡು ಮತ್ತೆ ತಮ್ಮ ಕೆಲಸಗಳಲ್ಲಿ ತೊಡಗಿದ್ದಾರೆ. ಹೀಗಾಗಿ, ಅವರ ಆರೋಗ್ಯ ವಿಚಾರಿಸಲೆಂದು ತೆರಳಿದ್ದಾಗಿ ತಿಳಿಸಿದ್ದರು.

'ವಿಶ್ರಾಂತಿ' ತೆಗೆದುಕೊಳ್ಳುವುದರಲ್ಲಿ ಪವಾರ್ ಅವರಿಗೆ ನಂಬಿಕೆಯಿಲ್ಲ ಮತ್ತು ಅವರ ಬೆಂಬಲಿಗರು ಹಾಗೂ ವಿಮರ್ಶಕರು 'ಅವರನ್ನು ಸಕ್ರಿಯವಾಗಿರುವಂತೆ ನೋಡಿಕೊಳ್ಳುತ್ತಾರೆ' ಎಂದು ಸಂಪಾದಕೀಯವು ಹೇಳಿದೆ.

'ಪ್ರಜಾಪ್ರಭುತ್ವದಲ್ಲಿ ಮಾತುಕತೆ ಮುಖ್ಯವಾಗಿದೆ. ಜೈ ಪ್ರಕಾಶ್ ನಾರಾಯಣ್ ನೇತೃತ್ವದ ವಿರೋಧ ಪಕ್ಷದ ನಾಯಕರ ಮೈತ್ರಿಯು (ಆಗಿನ ಪ್ರಧಾನಿ) ಇಂದಿರಾ ಗಾಂಧಿಯನ್ನು ಸೋಲಿಸಿತ್ತು. ತುರ್ತು ಪರಿಸ್ಥಿತಿಯಲ್ಲಿ ಇಂದಿರಾ ಗಾಂಧಿ ಹಲವಾರು ನಾಯಕರನ್ನು ಜೈಲಿಗೆ ಹಾಕಿದರು, ಆದರೆ ಸೋಲಿನ ನಂತರ ಅವರು ಆಶೀರ್ವಾದ ಪಡೆಯಲು ನಾರಾಯಣ್ ಅವರನ್ನು ಭೇಟಿಯಾಗುತ್ತಿದ್ದರು' ಎಂದು ಸೇನೆ ಹೇಳಿದೆ.

'ಕೆಲವು ನಾಯಕರು ರಾಜಕೀಯಕ್ಕಿಂತ ಮೇಲಿದ್ದಾರೆ ಮತ್ತು ಪವಾರ್ ಕೂಡ ಅವರಲ್ಲಿ ಒಬ್ಬರು. ಫಡಣವಿಸ್ ಅವರನ್ನು ಭೇಟಿಯಾಗಲು ಇದು ಒಂದು ಕಾರಣವಾಗಿದೆ. ಸಕಾರಾತ್ಮಕ ಶಕ್ತಿಯನ್ನು ಪಡೆಯಲು ಫಡಣವಿಸ್ ಸರಿಯಾದ ವ್ಯಕ್ತಿಯನ್ನು ಭೇಟಿ ಮಾಡಿರುವುದು ಒಳ್ಳೆಯದು' ಎಂದು ಹೇಳಿದೆ.

'.... ಬಿಕ್ಕಟ್ಟಿನ ಸಂದರ್ಭದಲ್ಲಿ ಹೇಗೆ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂಬುದರ ಕುರಿತು ಅವರು ಫಡಣವಿಸ್‌ಗೆ ತರಬೇತಿ ನೀಡಿರಬೇಕು ಎಂದು ಪವಾರ್ ಅವರನ್ನು ತಿಳಿದಿರುವವರು ಒಪ್ಪುತ್ತಾರೆ. ಇತ್ತೀಚಿನ ದಿನಗಳಲ್ಲಿ ಸರ್ಕಾರವನ್ನು ವಿರೋಧಿಸಬೇಕೆಂಬ ಉದ್ದೇಶದಿಂದಲೇ ಫಡಣವಿಸ್ ಅವರು ವಿರೋಧಿಸಲು ಬಯಸುತ್ತಾರೆ. ಮಹಾರಾಷ್ಟ್ರ ಮತ್ತು ಭಾರತದ ಇತರ ಭಾಗಗಳಲ್ಲಿ ಏನೇ ನಡೆದರೂ ಕೂಡ ಅವರು ಮಹಾರಾಷ್ಟ್ರ ಸರ್ಕಾರವನ್ನೇ ದೂರುತ್ತಾರೆ' ಎಂದು ಅದು ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು