ಸೋಮವಾರ, ಮೇ 23, 2022
21 °C

ಮಳೆಯಿಂದಾಗಿ ಈರುಳ್ಳಿ ಬೆಳೆಗೆ ಹಾನಿ: ಮಹಾರಾಷ್ಟ್ರದಲ್ಲಿ ದಾಖಲೆಯ ಏರಿಕೆ ಕಂಡ ಬೆಲೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನಾಸಿಕ್/ಬೆಂಗಳೂರು: ಲಾಸಗ್ಗಾಂವ್ ಎಪಿಎಂಸಿಯಲ್ಲಿ ಈರುಳ್ಳಿ ಸರಾಸರಿ ಸಗಟು ದರ ಮತ್ತೆ 900 ರೂಪಾಯಿಗಳಷ್ಟು ಏರಿಕೆ ಕಂಡು ಕ್ವಿಂಟಲ್‌ಗೆ ₹ 7,100ಕ್ಕೆ ಮಾರಾಟವಾಗಿದೆ. ನವೆಂಬರ್ ಮಧ್ಯದ ವೇಳೆಗೆ ಹೊಸ ಈರುಳ್ಳಿ ಬೆಳೆ ಮಾರುಕಟ್ಟೆಗಳಿಗೆ ಬರಲು ಪ್ರಾರಂಭವಾಗುವವರೆಗೆ ಬೆಲೆಗಳು ಮತ್ತಷ್ಟು ಏರಿಕೆಯಾಗಬಹುದು ಎಂದು ಮಹಾರಾಷ್ಟ್ರ ರಾಜ್ಯ ಕೃಷಿ ಮಾರುಕಟ್ಟೆ ಮಂಡಳಿ (ಎಂಎಸ್‌ಎಎಂಬಿ) ಅಭಿಪ್ರಾಯಪಟ್ಟಿದೆ.

ಬೆಂಗಳೂರಿನಲ್ಲೂ ಈರುಳ್ಳಿ ದರ ದಿಢೀರ್ ಏರಿಕೆ ಕಂಡಿದ್ದು, ಉತ್ತಮ ಗುಣಮಟ್ಟದ ಈರುಳ್ಳಿ ಸಗಟು ದರದಲ್ಲೇ ಪ್ರತಿ ಕೆ.ಜಿ.ಗೆ ₹ 100ರಂತೆ ಮಂಗಳವಾರ ಮಾರಾಟವಾಗಿತ್ತು.

ಮಂಗಳವಾರದ ಸರಾಸರಿ ಸಗಟು ಈರುಳ್ಳಿ ಬೆಲೆಯು ಕಳೆದ 10 ತಿಂಗಳುಗಳಲ್ಲಿಯೇ ಅತಿ ಹೆಚ್ಚು. ಇದಕ್ಕೂ ಮೊದಲು, 2019ರ ಡಿಸೆಂಬರ್‌ನಲ್ಲಿ ಈರುಳ್ಳಿ ಸರಾಸರಿ ಸಗಟು ಬೆಲೆ ಕ್ವಿಂಟಲ್‌ಗೆ ₹ 8,600 ಆಗಿತ್ತು. ಕನಿಷ್ಠ ಮತ್ತು ಗರಿಷ್ಠ ಸಗಟು ಬೆಲೆ ಕ್ವಿಂಟಲ್‌ಗೆ ಕ್ರಮವಾಗಿ ₹ 1,901 ಮತ್ತು ₹ 7,812 ಮಾರುಕಟ್ಟೆಯಲ್ಲಿ ಸುಮಾರು 7,000 ಕ್ವಿಂಟಾಲ್ ಈರುಳ್ಳಿ ಹರಾಜು ಮಾಡಲಾಯಿತು.

ಇತ್ತೀಚಿನ ಭಾರಿ ಮಳೆಯಿಂದಾಗಿ ಮುಂಗಾರು ಹೊಸ ಈರುಳ್ಳಿ ಬೆಳೆಗೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ. ಮುಂಗಾರು ಬೆಳೆಯು ನವೆಂಬರ್ ಮಧ್ಯದ ವೇಳೆಗೆ ಮಾತ್ರ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ. 

ನಾಸಿಕ್ ಜಿಲ್ಲೆಯ ಎಪಿಎಂಸಿಗಳ ಪ್ರತಿಕ್ರಿಯೆಯ ಪ್ರಕಾರ, ಬೇಸಿಗೆಯಲ್ಲಿ ಬೆಳೆದ ಈರುಳ್ಳಿಯ ಕಡಿಮೆ ಪ್ರಮಾಣದ ದಾಸ್ತಾನನ್ನು ಹೊಂದಿದ್ದಾರೆ. ಹೊಸ ಬೆಳೆಯು ಬರುವವರೆಗೂ ಪೂರೈಕೆಯು ಕೂಡ ಕಡಿಮೆಯಾಗಲಿದೆ ಎಂದು ಎಂಎಸ್‌ಎಎಂಬಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಖಾರಿಫ್ (ಮುಂಗಾರು) ಈರುಳ್ಳಿಯ ಮೇಲೆ ಪರಿಣಾಮ ಬೀರಿದೆ. ರಾಜಸ್ಥಾನದಿಂದ ಹೊಸ ಬೆಳೆಗಳ ಆಗಮನ ಪ್ರಾರಂಭವಾಗಿದ್ದು, ದೇಶೀಯ ಮಾರುಕಟ್ಟೆಯ ಅವಶ್ಯಕತೆಗೆ ತಕ್ಕಷ್ಟು ಪೂರೈಸಲು ಸಾಧ್ಯವಿಲ್ಲದಂತಾಗಿದೆ. ಮಧ್ಯಪ್ರದೇಶದಿಂದ ಹೊಸ ಈರುಳ್ಳಿ ಬೆಳೆಯು ಡಿಸೆಂಬರ್‌ನಲ್ಲಿ ಪ್ರಾರಂಭವಾಗಲಿದೆ.

ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಕೊಯ್ಲು ಮಾಡಲಾಗಿದ್ದ ಈರುಳ್ಳಿಯು ಪ್ರಸ್ತುತ ಮಾರುಕಟ್ಟೆಗೆ ಸರಬರಾಜಾಗುತ್ತಿದೆ. ಹೊಸ ಖಾರಿಫ್ ಈರುಳ್ಳಿಯ ಆಗಮನ ಮಳೆಯಿಂದಾಗಿ ವಿಳಂಬವಾಗಿದೆ. ಹೆಚ್ಚುತ್ತಿರುವ ಈರುಳ್ಳಿಯ ಬೇಡಿಕೆಗೆ ತಕ್ಕಂತೆ ಈರುಳ್ಳಿ ಪೂರೈಕೆ ಕುಸಿದಿದ್ದರಿಂದಾಗಿ ಬೆಲೆ ಏರಿಕೆಗೆ ಕಾರಣವಾಗುತ್ತದೆ. ನವರಾತ್ರಿ ಕಳೆದ ಬಳಿಕ ಮತ್ತಷ್ಟು ಬೇಡಿಕೆ ಹೆಚ್ಚಾಗಲಿದೆ ಎಂದು ಈರುಳ್ಳಿ ವ್ಯಾಪಾರಿ ಮನೋಜ್ ಜೈನ್ ತಿಳಿಸುತ್ತಾರೆ.

ರಾಜ್ಯದಲ್ಲಿ ಈರುಳ್ಳಿ ದರ ₹100ಕ್ಕೆ ಜಿಗಿತ!

ಈರುಳ್ಳಿಯ ಸೋಮವಾರದ ದರ ₹60ರಿಂದ ₹70ರಷ್ಟಿತ್ತು. ಒಂದೇ ದಿನದಲ್ಲಿ ದಿಢೀರ್ ದರ ಏರಿಕೆ ಕಂಡಿದ್ದು, ಪ್ರತಿ ಕೆ.ಜಿ.ಗೆ ಕನಿಷ್ಠ ₹80ರಿಂದ ಗರಿಷ್ಠ ₹100ಕ್ಕೆ ತಲುಪಿದೆ. ಹಾಪ್‍ಕಾಮ್ಸ್‌ನಲ್ಲಿ ಈರುಳ್ಳಿ ದರ ಪ್ರತಿ ಕೆ.ಜಿ.ಗೆ ₹85 ಹಾಗೂ ಚಿಲ್ಲರೆ ದರ ₹120ರವರೆಗೆ ದಾಟಿದೆ. 

ಇಂದು ದಾವಣಗೆರೆಯಲ್ಲಿ ಕ್ವಿಂಟಲ್ ಈರುಳ್ಳಿ ಕನಿಷ್ಠ ₹ 300 ರಿಂದ ಗರಿಷ್ಠ ₹3,800ದವರೆಗೆ ಮಾರಾಟವಾಗಿದೆ. ನಂಜನಗೂಡಿನಲ್ಲಿ ಕ್ವಿಂಟಲ್ ಈರುಳ್ಳಿಗೆ ಕನಿಷ್ಠ ₹1,300ರಿಂದ ಗರಿಷ್ಠ ₹2,100 ಸಗಟು ದರ ಇತ್ತು. ಬೆಂಗಳೂರಿನಲ್ಲಿ ಪೂನಾದಿಂದ 5,659 ಕ್ವಿಂಟಲ್ ಈರುಳ್ಳಿ ಆವಕವಾಗಿದ್ದು, ಕ್ವಿಂಟಲ್‌ಗೆ ಕನಿಷ್ಠ ₹7,000 ದಿಂದ ಗರಿಷ್ಠ 7,500ದಷ್ಟಿದೆ. 

'ಈರುಳ್ಳಿ ಹೆಚ್ಚಾಗಿ ಆವಕವಾಗುತ್ತಿದ್ದ ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಭಾರಿ ಮಳೆಯಿಂದ ಈರುಳ್ಳಿ ಬೆಳೆಗಳು ಹಾನಿಗೊಂಡಿವೆ. ಉತ್ತಮ ಗುಣಮಟ್ಟದ ಈರುಳ್ಳಿಗೆ ಬೇಡಿಕೆ ಸೃಷ್ಟಿಯಾಗಿರುವುದರಿಂದ ಬೆಲೆ ದಿಢೀರ್ ಏರಿದೆ. 'ಮಹಾರಾಷ್ಟ್ರದಿಂದ ಈಗ ಈರುಳ್ಳಿ ಪೂರೈಕೆಯಾಗುತ್ತಿಲ್ಲ. ರಾಜ್ಯದ ಚಿತ್ರದುರ್ಗ, ದಾವಣಗೆರೆ, ಗದಗ, ಹುಬ್ಬಳ್ಳಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಮಾತ್ರ ಈರುಳ್ಳಿ ಬರುತ್ತಿದೆ. ಆವಕವಾಗುವ ಒಟ್ಟು ಈರುಳ್ಳಿಯಲ್ಲಿ ಶೇ 70ರಷ್ಟು ಪ್ರಮಾಣ ಹಾನಿಯಾಗಿವೆ. ರೈತರಿಗೂ ಈ ಸ್ಥಿತಿ ಕಬ್ಬಿಣದ ಕಡಲೆಯಂತಾಗಿದೆ' ಎಂದು ಬೆಂಗಳೂರು ಆಲೂಗಡ್ಡೆ ಮತ್ತು ಈರುಳ್ಳಿ ವರ್ತಕರ ಸಂಘದ ಕಾರ್ಯದರ್ಶಿ ಉದಯ ಶಂಕರ್ 'ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು