ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಂಕುಶ ಪ್ರಭುತ್ವದತ್ತ ಭಾರತ: ವಿಪಕ್ಷ ನಾಯಕರಿಂದ ಪ್ರಧಾನಿ ನರೇಂದ್ರ ಮೋದಿಗೆ ಪತ್ರ

Last Updated 5 ಮಾರ್ಚ್ 2023, 18:56 IST
ಅಕ್ಷರ ಗಾತ್ರ

ನವದೆಹಲಿ: ‘ಬಿಜೆಪಿ ಆಡಳಿತದಲ್ಲಿ ಭಾರತದ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಅಪಾಯ ಬಂದೊದಗಿದೆ. ಭಾರತವು ಪ್ರಜಾಪ್ರಭುತ್ವದಿಂದ ನಿರಂಕುಶಪ್ರಭುತ್ವದತ್ತ ಸಾಗುತ್ತಿದೆ’ ಎಂದು ಎಂಟು ವಿರೋಧ ಪಕ್ಷಗಳ ನಾಯಕರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ತನಿಖಾ ಸಂಸ್ಥೆಗಳ ಕಾರ್ಯವೈಖರಿಯನ್ನು ತರಾಟೆಗೆತೆಗೆದುಕೊಂಡಿದ್ದಾರೆ.

ದೆಹಲಿ ಉಪಮುಖ್ಯಮಂತ್ರಿಯಾಗಿದ್ದ ಮನೀಷ್‌ ಸಿಸೋಡಿಯಾ ಅವರನ್ನು ಅಬಕಾರಿ ನೀತಿ ಜಾರಿ ಪ್ರಕರಣದಲ್ಲಿ ಸಿಬಿಐ ಇತ್ತೀಚೆಗೆ ಬಂಧಿಸಿರುವುದನ್ನು ಪ್ರತಿಪಕ್ಷಗಳ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ‘ಎಎಪಿ ಶಾಸಕ ಮತ್ತು ದೆಹಲಿ ಉಪಮುಖ್ಯಮಂತ್ರಿಯಾಗಿದ್ದ
ಮನೀಷ್ ಸಿಸೋಡಿಯಾ ಅವರ ಬಂಧನ ಭಾರತವು ನಿರಂಕುಶ ಪ್ರಭುತ್ವದತ್ತ ಸಾಗುತ್ತಿರುವ ಸೂಚನೆಯಂತಿದೆ. ಭಾರತವು ಇನ್ನೂ
ಪ್ರಜಾಪ್ರಭುತ್ವ ದೇಶವಾಗಿದೆ ಎಂಬುದನ್ನು ನೀವು ಒಪ್ಪುತ್ತೀರಿ ಎಂದು ಭಾವಿಸಿದ್ದೇವೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ವಿರೋಧ ಪಕ್ಷಗಳನ್ನು ನಿರ್ನಾಮ ಮಾಡಲು ನಿಮ್ಮ ಸರ್ಕಾರವು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. 2014ರಲ್ಲಿ ನೀವು ಅಧಿಕಾರಕ್ಕೆ ಬಂದ ನಂತರ ಕೇಂದ್ರೀಯ ತನಿಖಾ ಸಂಸ್ಥೆಗಳ ಶೋಧಕಾರ್ಯ, ಪ್ರಕರಣ, ವಿಚಾರಣೆ ಮತ್ತು ಬಂಧನಕ್ಕೆ ಒಳಗಾದ ಎಲ್ಲಾ ರಾಜಕಾರಣಿಗಳನ್ನು ಪರಿಗಣಿಸಿದರೆ, ಅದರಲ್ಲಿ ವಿರೋಧ ಪಕ್ಷಗಳ ನಾಯಕರ ಸಂಖ್ಯೆಯೇ ಹೆಚ್ಚು. ಆರ್‌ಜೆಡಿಯ ಲಾಲು ಪ್ರಸಾದ್, ಶಿವಸೇನೆಯ ಸಂಜಯ ರಾವುತ್, ಸಮಾಜವಾದಿ ಪಕ್ಷದ ಅಜಂ ಖಾನ್, ಎನ್‌ಸಿಪಿಯ ನವಾಬ್ ಮಲಿಕ್ ಮತ್ತು ಅನಿಲ್ ದೇಶಮುಖ್, ಟಿಎಂಸಿಯ ಅಭಿಷೇಕ್ ಬ್ಯಾನರ್ಜಿ ವಿರುದ್ಧ ತನಿಖಾ ಸಂಸ್ಥೆಗಳು ವಿಚಾರಣೆ ಕೈಗೊಂಡಿವೆ. ದಾಳಿ ನಡೆದ ಸಮಯ ಹಾಗೂ ಬಂಧನಗಳು ಚುನಾವಣೆಯ ಸಮಯದಲ್ಲೇ ಆಗಿರುವುದನ್ನು ಗಮನಿಸಿದರೆ, ಇವೆಲ್ಲವೂ ರಾಜಕೀಯ ಪ್ರೇರಿತ ಎಂಬ ಅನುಮಾನ ಮೂಡಿಸುತ್ತವೆ. ಈ ಬೆಳವಣಿಗೆಗಳು, ತನಿಖಾ ಸಂಸ್ಥೆಗಳು ಕೇಂದ್ರ ಸರ್ಕಾರದ ಬಾಹ್ಯ ಅಂಗವಾಗಿ ಕೆಲಸ ಮಾಡುತ್ತಿರುವ ಸಂಶಯವನ್ನೂ ಹುಟ್ಟುಹಾಕಿವೆ’ ಎಂದೂ ಆರೋಪಿಸಿದ್ದಾರೆ.

‘ಬಿಜೆಪಿ ಸೇರ್ಪಡೆಯಾಗಿರುವ ಮುಖಂಡರ ವಿರುದ್ಧ ತನಿಖಾ ಸಂಸ್ಥೆಗಳ ವಿಚಾರಣೆ ಉದ್ದೇಶಪೂರ್ವಕವಾಗಿ ನಿಧಾನಗತಿಯಲ್ಲಿದೆ. ಬೇರೆ ಪಕ್ಷಗಳಿಂದ ಬಿಜೆಪಿಗೆ ಸೇರ್ಪಡೆಯಾಗಿರುವ ಹಿಮಂತ ಬಿಸ್ವ ಶರ್ಮಾ, ಸುವೇಂದು ಅಧಿಕಾರಿ, ಮುಕುಲ್ ರಾಯ್ ಹಾಗೂ ನಾರಾಯಣ ರಾಣೆ ಅವರ ವಿರುದ್ಧದ ತನಿಖೆ ತ್ವರಿತಗತಿಯಲ್ಲಿ ಏಕೆ ನಡೆಯುತ್ತಿಲ್ಲ? 2014ರ ನಂತರ ಈ ಸಂಸ್ಥೆಗಳನ್ನು ಎಷ್ಟರಮಟ್ಟಿಗೆ ದುರ್ಬಳಕೆ ಮಾಡಿಕೊಳ್ಳಲಾಗಿದೆಯೆಂದರೆ, ಅವುಗಳ ವರ್ಚಸ್ಸಿಗೆ ಧಕ್ಕೆಯಾಗಿದೆ’ ಎಂದಿದ್ದಾರೆ.

‘ಅವುಗಳ ಸ್ವಾಯತ್ತೆ ಮತ್ತು ಪಕ್ಷಾತೀತ ನಿಲುವುಗಳನ್ನು ಪ್ರಶ್ನಿಸಲಾಗುತ್ತಿದೆ. ಈ ಸಂಸ್ಥೆಗಳ ಬಗ್ಗೆ ಜನರಲ್ಲಿ ಇದ್ದ ನಂಬಿಕೆ ಅಳಿಸಿಹೋಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

‘ತನಿಖಾ ಸಂಸ್ಥೆಗಳ ಆದ್ಯತೆ ತಪ್ಪಾಗಿವೆ. ಸಂಸ್ಥೆಯೊಂದರ ಅಕ್ರಮ ವ್ಯವಹಾರಗಳು ಬಹಿರಂಗವಾದ ಬಳಿಕ ಷೇರು ಮಾರುಕಟ್ಟೆಯಲ್ಲಿ ಎಸ್‌ಬಿಐ ಹಾಗೂ ಎಲ್‌ಐಸಿ ₹78,000 ಕೋಟಿ ನಷ್ಟ ಎದುರಿಸಿವೆ. ಜನರ ಹಣವು ಅಪಾಯಕ್ಕೆ ಸಿಲುಕಿದಾಗಲೂ, ಆ ಸಂಸ್ಥೆ ಯ ವಿರುದ್ಧ ತನಿಖಾ ಸಂಸ್ಥೆಗಳು ಏಕೆ ತನಿಖೆಗೆ ಮುಂದಾಗುತ್ತಿಲ್ಲ’ ಎಂದು ಪ್ರಧಾನಿ ಅವರನ್ನು ವಿರೋಧ ಪಕ್ಷಗಳ ನಾಯಕರು ತಮ್ಮ ಜಂಟಿ ಪತ್ರದಲ್ಲಿ ಪ್ರಶ್ನಿಸಿದ್ದಾರೆ.

‘ಸಿಸೋಡಿಯಾ ಅವರನ್ನು ಬಂಧಿ ಸಿದ್ದು ಸಮರ್ಥನೀಯವಲ್ಲ.ದೆಹಲಿಯ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಮೂಲಕ ಜಾಗತಿಕ ಮನ್ನಣೆ ಗಳಿಸಿದ್ದ ಅವರ ಬಂಧನವು ವಿರೋಧಿಗಳ ವಿರುದ್ಧ ನಡೆಸುವ ವ್ಯವಸ್ಥಿತ ಸಂಚು. ಬಿಜೆಪಿಯ ಆಡಳಿತ ಅವಧಿಯಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳು ಕುಸಿಯುತ್ತಿವೆ ಎಂಬುದಾಗಿ ಜಗತ್ತು ಸಂಶಯಪಡುತ್ತಿರುವುದಕ್ಕೆ ಈ ಪ್ರಕರಣ ಪುಷ್ಟಿ ಒದಗಿಸಿದೆ’ ಎಂದೂ ಹೇಳಲಾಗಿದೆ.

ಸಿಸೋಡಿಯಾಗೆ ಚಿತ್ರಹಿಂಸೆ- ಎಎಪಿ: ‘ಮನೀಷ್‌ ಸಿಸೋಡಿಯಾ ಅವರಿಗೆ ಸಿಬಿಐ ಚಿತ್ರ ಹಿಂಸೆ ನೀಡುತ್ತಿದೆ ಮತ್ತು ಸುಳ್ಳು ಆರೋಪಗಳನ್ನು ಒಳಗೊಂಡಿರುವ ಪತ್ರಗಳಿಗೆ ಸಹಿ ಹಾಕುವಂತೆ ಒತ್ತಡ ಹೇರುತ್ತಿದೆ’ ಎಂದು ಆಮ್‌ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ವಕ್ತಾರ ಸೌರಭ್‌ ಭಾರದ್ವಾಜ್‌ ಭಾನುವಾರ ಆರೋಪಿಸಿದರು.

ದೂರ ಉಳಿದ ಕಾಂಗ್ರೆಸ್‌, ಡಿಎಂಕೆ, ಜೆಡಿಯು, ಜೆಡಿಎಸ್
ಬಿಆರ್‌ಎಸ್‌ ಮುಖ್ಯಸ್ಥ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಆರ್‌, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಎಎಪಿ ರಾಷ್ಟ್ರೀಯ ಸಂಚಾಲಕ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಪಂಜಾಬ್‌ ಮುಖ್ಯಮಂತ್ರಿ ಭಗವಂತ್ ಮನ್‌, ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್, ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಎನ್‌ಸಿಯ ಫಾರೂಕ್‌ ಅಬ್ದುಲ್ಲಾ, ಎನ್‌ಸಿಪಿಯ ಶರದ್ ಪವಾರ್ ಮತ್ತು ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಪತ್ರಕ್ಕೆ ಸಹಿ ಮಾಡಿದ್ದಾರೆ. ಕಾಂಗ್ರೆಸ್‌, ಜೆಡಿಎಸ್‌, ಜೆಡಿಯು, ಡಿಎಂಕೆ ಮತ್ತು ಎಡಪಕ್ಷಗಳು ಸಹಿ ಮಾಡಿಲ್ಲ.

‘ರಾಜ್ಯಪಾಲರಿಂದ ಸರ್ಕಾರ ದುರ್ಬಲ’
‘ದೇಶದ ಒಕ್ಕೂಟ ವ್ಯವಸ್ಥೆಯ ವಿರುದ್ಧ ನಡೆಸಲಾಗುತ್ತಿರುವ ಯುದ್ಧಕ್ಕೆ ಇನ್ನೊಂದು ಮುಖವೂ ಇದೆ. ದೇಶದ ಹಲವು ರಾಜ್ಯಗಳಲ್ಲಿ ರಾಜ್ಯಪಾಲರು ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಇದರಿಂದ ರಾಜ್ಯದ ಆಡಳಿತಕ್ಕೆ ಧಕ್ಕೆಯಾಗುತ್ತಿದೆ. ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರಗಳನ್ನು ರಾಜ್ಯಪಾಲರು ದುರ್ಬಲಗೊಳಿಸುತ್ತಿದ್ದಾರೆ. ಪಶ್ಚಿಮ ಬಂಗಾಳ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ, ಪಂಜಾಬ್‌ನ ರಾಜ್ಯಪಾಲರು ಮತ್ತು ದೆಹಲಿಯ ಲೆಫ್ಟಿನೆಂಟ್‌ ಗವರ್ನರ್ ಕೇಂದ್ರ ಸರ್ಕಾರ ಮತ್ತು ಬಿಜೆಪಿಯೇತರ ಪಕ್ಷಗಳ ರಾಜ್ಯ ಸರ್ಕಾರಗಳ ನಡುವಣ ಬಿರುಕನ್ನು ಹೆಚ್ಚಿಸುತ್ತಿದ್ದಾರೆ. ಇದರಿಂದ ಒಕ್ಕೂಟ ಸಹಕಾರದ ತತ್ವಗಳಿಗೆ ಧಕ್ಕೆಯಾಗುತ್ತಿದೆ. ಇದರ ಪರಿಣಾಮವಾಗಿ, ಭಾರತದ ಪ್ರಜಾಪ್ರಭುತ್ವದಲ್ಲಿ ರಾಜ್ಯಪಾಲರ ಅವಶ್ಯಕತೆ ಇದೆಯೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ’ ಎಂದು ಪತ್ರದಲ್ಲಿ ಹೇಳಲಾಗಿದೆ.

ಇವುಗಳನ್ನೂ ಓದಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT