ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಹೋರಾಟ| ಮುತ್ತಿಗೆ ಬಳಿಕ ರಾಜಧಾನಿಗೆ ಸರ್ಪಗಾವಲು

ದೆಹಲಿಯಲ್ಲಿ ಹೆಚ್ಚುವರಿ ಅರೆಸೇನಾ ಪಡೆ ನಿಯೋಜಿಸಲು ಕೇಂದ್ರ ಸರ್ಕಾರ ನಿರ್ಧಾರ
Last Updated 26 ಜನವರಿ 2021, 19:31 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಗಣರಾಜ್ಯೋತ್ಸವ ದಿನ ರೈತರು ರಾಷ್ಟ್ರ ರಾಜಧಾನಿಯಲ್ಲಿ ನಡೆಸಿದ ಪ್ರತಿಭಟನೆಯು ಹಿಂಸಾರೂಪ ತಾಳಿದ ಬಳಿಕ ದೆಹಲಿಯಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ದೆಹಲಿಗೆ ಹೆಚ್ಚುವರಿ ಅರೆಸೇನಾಪಡೆ ನಿಯೋಜನೆ ಮಾಡಲು ಕೇಂದ್ರ ಸರ್ಕಾರ ಮಂಗಳವಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಕ್ಷಿಪ್ರಕಾರ್ಯಪಡೆಯನ್ನು ಸಹ ರಾಷ್ಟ್ರ ರಾಜಧಾನಿಯಲ್ಲಿ ನಿಯೋಜಿಸಲಾಗಿದೆ. ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ. ಕೇಂದ್ರ ಗೃಹಸಚಿವ ಅಮಿತ್ ಶಾ, ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, ದೆಹಲಿ ಪೊಲೀಸ್ ಆಯುಕ್ತ ಎಸ್.ಎನ್. ಶ್ರೀವಾಸ್ತವ ಅವರಿದ್ದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

ದೆಹಲಿಯ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗುತ್ತದೆ. ಸುಮಾರು 1,500ರಿಂದ 2000 ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ನಿಯೋಜಿಸಲು ಉದ್ದೇಶಿಸಲಾಗಿದೆ. ಗಣರಾಜ್ಯೋತ್ಸವ ನಿಮಿತ್ತ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಈಗಾಗಲೇ 4,500 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಇದಕ್ಕೂ ಮುನ್ನ ಗೃಹಸಚಿವ ಅಮಿತ್ ಶಾ ಅವರಿಗೆ ಗೃಹಕಾರ್ಯದರ್ಶಿ ಅಜಯ್ ಭಲ್ಲಾ ಅವರು ಪರಿಸ್ಥಿತಿಯ ವಿವರಣೆ ನೀಡಿದ್ದರು. ಟ್ರ್ಯಾಕ್ಟರ್ ಮೆರವಣಿಗೆಯು ಹಿಂಸಾಚಾರಕ್ಕೆ ತಿರುಗಿದ ಘಟನೆಯ ವಿವರಗಳನ್ನು ಅಮಿತ್ ಶಾ ತಿಳಿದುಕೊಂಡರು. ಶಾಂತಿ ಕಾಪಾಡಲು ಪೊಲೀಸರು ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಶಾ ಅವರಿಗೆ ಮಾಹಿತಿ ನೀಡಲಾಯಿತು.

ಗೃಹ ಸಚಿವಾಲಯವು ದೆಹಲಿಯ ಸಿಂಘು, ಗಾಜಿಪುರ, ಟಿಕ್ರಿ, ಮುಕರಬ ಚೌಕ್ ಮತ್ತು ನಂಗ್ಲಾಯ್‌ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ಮಂಗಳವಾರ ಮಧ್ಯಾಹ್ನದಿಂದ 12 ಗಂಟೆಗಳ ಕಾಲ ತಾತ್ಕಾಲಿಕವಾಗಿ ಅಂತರ್ಜಾಲವನ್ನು ಸ್ಥಗಿತಗೊಳಿಸಲು ಆದೇಶಿಸಿತ್ತು.

ಭಾರತೀಯ ಟೆಲಿಗ್ರಾಫ್ ಕಾಯ್ದೆ 1855ರ ಸೆಕ್ಷನ್ 7ರ ಪ್ರಕಾರ, ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡಿಕೊಳ್ಳುವ ಮತ್ತು ಸಾರ್ವಜನಿಕ ತುರ್ತು ಪರಿಸ್ಥಿತಿಯನ್ನು ತಪ್ಪಿಸುವ ಹಿತದೃಷ್ಟಿಯಿಂದ, ಈ ಪ್ರದೇಶಗಳಲ್ಲಿ ಅಂತರ್ಜಾಲ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಆದೇಶಿಸುವುದು ಅಗತ್ಯವಾಗಿತ್ತು ಎಂದು ಸಚಿವಾಲಯ ತಿಳಿಸಿದೆ.

ಪ್ರತಿಕ್ರಿಯೆಗಳು

ತಮ್ಮ ಬೇಡಿಕೆ ಈಡೇರಿಕೆಗಾಗಿ ರೈತರು ಇಷ್ಟು ದೀರ್ಘ ಕಾಲ ಹಿಂದೆಂದೂ ಪ್ರತಿಭಟನೆ ನಡೆಸಿರಲಿಲ್ಲ. ಜನರ ಭಾವನೆಯನ್ನು ಗೌರವಿಸಿ ನಿರ್ಧಾರವನ್ನು ಬದಲಾಯಿಸುವುದು ಅಥವಾ ಹಿಂದಕ್ಕೆ ಪಡೆಯುವುದು ವಿಶಾಲ ಹೃದಯವನ್ನು ತೋರಿಸುತ್ತದೆ

- ಅಶೋಕ್‌ ಗೆಹ್ಲೋಟ್‌, ರಾಜಸ್ಥಾನ ಮುಖ್ಯಮಂತ್ರಿ

ಕೆಂಪು ಕೋಟೆಯು ನಮ್ಮ ಪ್ರಜಾಪ್ರಭುತ್ವದ ಘನತೆಯ ಸಂಕೇತ. ಈ ಘನತೆಗೆ ಕುಂದು ತಂದದ್ದನ್ನು ಖಂಡಿಸುತ್ತೇನೆ. ರೈತರು ಅಲ್ಲಿಗೆ ಹೋಗಬಾರದಿತ್ತು. ಇದು ವಿಷಾದನೀಯ ಮತ್ತು ಬೇಸರದ ಘಟನೆ

- ಪ್ರಹ್ಲಾದ ಪಟೇಲ್‌, ಕೇಂದ್ರ ಪ್ರವಾಸೋದ್ಯಮ ಸಚಿವ

ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಭಯೋತ್ಪಾದಕರು ಮತ್ತು ಖಾಲಿಸ್ತಾನಿಗಳು ಎಂಬ ಹಣೆಪಟ್ಟಿ ಕಟ್ಟಲಾಗಿದೆ. ಈ ರೈತರು ಭಯೋತ್ಪಾದಕರಾದರೆ, ಅವರು ಬೆಳೆದ ಧಾನ್ಯವನ್ನು ಬಿಜೆಪಿಯವರು ತಿನ್ನುವುದು ಏಕೆ

- ಅಖಿಲೇಶ್‌ ಯಾದವ್‌, ಎಸ್‌ಪಿ ನಾಯಕ

ಹಿಂಸೆಯು ಯಾವುದೇ ಸಮಸ್ಯೆಗೆ ಪರಿಹಾರ ಅಲ್ಲ. ಯಾರೇ ಗಾಯಗೊಂಡರೂ ಅದು ದೇಶಕ್ಕೆ ಆಗುವ ನಷ್ಟ. ಕೃಷಿ ವಿರೋಧಿ ಕಾಯ್ದೆಗಳನ್ನು ರಾಷ್ಟ್ರದ ಹಿತಾಸಕ್ತಿಯಿಂದ ಹಿಂದಕ್ಕೆ ಪಡೆಯಬೇಕು

- ರಾಹುಲ್‌ ಗಾಂಧಿ, ಕಾಂಗ್ರೆಸ್‌ ಸಂಸದ

ರೈತರು ಶಾಂತಿಯಿತವಾಗಿ ಪ್ರತಿಭಟನೆ ನಡೆಸಬೇಕೆಂದು ನಾವು ವಿನಂತಿಸುತ್ತೇವೆ. ಆದರೆ, ರೈತರ ಒಂದು ಗುಂಪು ಕೆಂಪುಕೋಟೆಯೊಳಗೆ ಪ್ರವೇಶಿಸುವುದನ್ನು ತಡೆಯಲು ಪೊಲೀಸರಿಗೇಕೆ ಸಾಧ್ಯವಾಗಲಿಲ್ಲ? ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವ ವಿಚಾರದಲ್ಲಿ ಕೇಂದ್ರದ ನಿಲುವೇನೆಂಬುದನ್ನು ಮೋದಿ ಅವರು ಯಾಕೆ ದೇಶದ ಜನರಿಗೆ ತಿಳಿಸುತ್ತಿಲ್ಲ?

- ಸೌಗತ ರಾಯ್‌, ಟಿಎಂಸಿ ನಾಯಕ

ಇಡೀ ದಿನ ನಡೆದದ್ದೇನು..?

ಬೆಳಿಗ್ಗೆ 7 –8.30: ದೆಹಲಿ–ಹರಿಯಾಣ ನಡುವಿನ ಟಿಕ್ರಿ ಹಾಗೂ ಸಿಂಘು ಗಡಿಯಲ್ಲಿ ಬ್ಯಾರಿಕೇಡ್ ಮುರಿದು ಒಳನುಗ್ಗಿದ ಪ್ರತಿಭಟನಕಾರರು

9.30: ದೆಹಲಿ–ಉತ್ತರಪ್ರದೇಶ ನಡುವಿನ ಗಾಜಿಪುರ ಗಡಿಯಲ್ಲಿ ನೂರಾರು ರೈತರು ಟ್ರ್ಯಾಕ್ಟರ್, ಕಾರ್ ಹಾಗೂ ಬೈಕ್ ಮೂಲಕ ದೆಹಲಿ ಪ್ರವೇಶ

10 ಗಂಟೆ: ಸಂಜಯ್‌ಗಾಂಧಿ ಟ್ರಾನ್ಸ್‌ಪೋರ್ಟ್‌ ನಗರದಲ್ಲಿ ಪೊಲೀಸರೊಂದಿಗೆ ರೈತರ ಘರ್ಷಣೆ; ಪೊಲೀಸರಿಂದ ಅಶ್ರುವಾಯು ಷೆಲ್‌ ಪ್ರಯೋಗ

10.30: ಅಕ್ಷರಧಾಮ ಇಂಟರ್‌ಸೆಕ್ಷನ್ ಬಳಿ ಪೊಲೀಸರೊಂದಿಗೆ ರೈತರ ಜಟಾಪಟಿ; ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ವಾಹನಗಳಿಗೆ ಹಾನಿ ಮಾಡಿದ ಪ್ರತಿಭಟನಕಾರರು ಡಿಟಿಸಿ ಬಸ್‌ಗಳನ್ನೂ ಜಖಂಗೊಳಿಸಿದರು

11 ಗಂಟೆ: ಗುಂಪು ಚದುರಿಸಲು ಪೊಲೀಸರಿಂದ ಲಘು ಲಾಠಿ ಪ್ರಹಾರ, ಅಶ್ರುವಾಯು ಷೆಲ್‌ ಪ್ರಯೋಗ; ಕತ್ತಿ ಹಿಡಿದಿದ್ದ ಕೆಲವು ರೈತರಿಂದ ಪೊಲೀಸರ ಜೊತೆ ಘರ್ಷಣೆ; ರಾಜಪಥದಲ್ಲಿ ಗಣರಾಜ್ಯೋತ್ಸವ ಮೆರವಣಿಗೆ ಮುಕ್ತಾಯಗೊಳ್ಳುವ ಮುನ್ನವೇ ತಮಗೆ ನಿಗದಿಪಡಿಸಿದ್ದ ಮಾರ್ಗವನ್ನು ಬಿಟ್ಟು, ಸರಾಯ್ ಕಾಲೇ ಖಾನ್ ಮಾರ್ಗದತ್ತ ಸಂಚಾರ; ರೈತರ ಗಣತಂತ್ರ ಪರೇಡ್ ಮಧ್ಯಾಹ್ನ 12ರಿಂದ 5 ಗಂಟೆವರೆಗೆ ನಿಗದಿಯಾಗಿತ್ತು

12 ಗಂಟೆ: ಮುಕರಬ ಚೌಕದಲ್ಲಿ ಮತ್ತೆ ಪೊಲೀಸರು–ರೈತರ ಘರ್ಷಣೆ; ಕೇಂದ್ರ ದೆಹಲಿಯ ಐಟಿಒ ಇಂಟರ್‌ಸೆಕ್ಷನ್ ತಲುಪಿದ ಪ್ರತಿಭಟನಕಾರರಿಂದ ಡಿಟಿಸಿ ಬಸ್ ಹಾಗೂ ವಾಹನಗಳಿಗೆ ಹಾನಿ; ಪೊಲೀಸರ ಮೇಲೆ ದಾಳಿ ನಡೆಸಿದ ಪ್ರತಿಭಟನಕಾರರು; ಗುಂಪು ಚದುರಿಸಲು ಪೊಲೀಸರು ಹಲವು ಬಾರಿ ಅಶ್ರುವಾಯು ಹಾಗೂ ಲಾಠಿ ಪ್ರಹಾರ ನಡೆಸಿದರು

ಟ್ರ್ಯಾಕ್ಟರ್, ಬೈಕ್ ಮತ್ತು ಕಾರುಗಳಲ್ಲಿ ನೂರಾರು ರೈತರಿಂದ ಕೆಂಪುಕೋಟೆ ಆವರಣ ಪ್ರವೇಶ; 17ನೇ ಶತಮಾನದ ಸ್ಮಾರಕ ಕೆಂಪು ಕೋಟೆಯಲ್ಲಿ ಸಿಖ್‌ ಧರ್ಮದ ಪವಿತ್ರ ಧ್ವಜಾರೋಹಣ ಮಾಡಿದರು.

1 ಗಂಟೆ: ಟ್ರ್ಯಾಕ್ಟರ್ ಪಲ್ಟಿಯಾಗಿದ್ದರಿಂದ ರೈತ ನವನೀತ್ ಸಿಂಗ್ ಸಾವು; ಆದರೆ ಗುಂಡಿಟ್ಟು ಕೊಲ್ಲಲಾಗಿದೆ ಎಂದು ರೈತರ ಆಕ್ರೋಶ; ರೈತನ ಮೃತದೇಹ ಇಟ್ಟುಕೊಂಡು ಐಟಿಒ ಬಳಿ ರೈತರ ಧರಣಿ.

2.30: ಐಟಿಒ ಮತ್ತು ಕೆಂಪುಕೋಟೆ ಬಳಿ ರೈತರು ಹಾಗೂ ಪೊಲೀಸ್ ಸಿಬ್ಬಂದಿ ನಡುವೆ ಮತ್ತೆ ಘರ್ಷಣೆ; ಕಲ್ಲು ತೂರಾಟ

ಮಧ್ಯಾಹ್ನ 3 ಗಂಟೆ: ದೆಹಲಿಯ ನಂಗ್ಲಾಯ್‌ ಪ್ರದೇಶದಲ್ಲಿ ಪ್ರತಿಭಟನೆನಿರತ ರೈತರೊಂದಿಗೆ ಪೊಲೀಸರ ಘರ್ಷಣೆ; ಲಾಠಿ ಚಾರ್ಜ್ ಮಾಡಿ, ಪ್ರತಿಭಟನಕಾರರನ್ನು ಹಿಂದಕ್ಕೆ ಕಳುಹಿಸಲು ಭದ್ರತಾ ಸಿಬ್ಬಂದಿ ಯತ್ನ; ಅಶ್ರುವಾಯು ಬಳಕೆ

3.30: ದೆಹಲಿಯ ಸಿಂಘು, ಗಾಜಿಪುರ, ಟಿಕ್ರಿ, ನಂಗ್ಲಾಯ್‌ ಮತ್ತು ಪಕ್ಕದ ಪ್ರದೇಶಗಳು ಸೇರಿದಂತೆ ಕೆಲವು ಭಾಗಗಳಲ್ಲಿ ಅಂತರ್ಜಾಲವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಕೇಂದ್ರ ಗೃಹ ಸಚಿವಾಲಯ ಆದೇಶ

ಸಂಜೆ 4 ಗಂಟೆ: ಹಿಂಸಾತ್ಮಕ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡ ಸಂಯುಕ್ತ ಕಿಸಾನ್ ಮೋರ್ಚಾ

5 ಗಂಟೆ: ದೆಹಲಿಯ ಪರಿಸ್ಥಿತಿಯ ಬಗ್ಗೆ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರಿಂದ ಗೃಹಸಚಿವ ಅಮಿತ್ ಶಾ ಅವರಿಗೆ ವಿವರಣೆ

5.30: ‘ರೈತರು ನಿಗದಿತ ಸಮಯಕ್ಕೆ ಮುಂಚಿತವಾಗಿ ಟ್ರ್ಯಾಕ್ಟರ್ ಮೆರವಣಿಗೆಯನ್ನು ಪ್ರಾರಂಭಿಸಿದರು. ಹಿಂಸೆ ಮತ್ತು ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿದರು. ರೈತರಿಂದ ಸರ್ಕಾರ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗಿದೆ’ ಎಂದು ದೆಹಲಿ ಪೊಲೀಸರು ಆರೋಪಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT