ಭಾನುವಾರ, ಜನವರಿ 16, 2022
28 °C

340 ಕಿ.ಮೀ. ಉದ್ದದ ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇ ಉದ್ಘಾಟಿಸಿದ ಪ್ರಧಾನಿ ಮೋದಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಸುಲ್ತಾನ್‌ಪುರ (ಉತ್ತರ ಪ್ರದೇಶ): ಇಲ್ಲಿನ ಕರ್ವಾಲ್‌ ಖೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇ ಉದ್ಘಾಟಿಸಿದರು.

ಹೆದ್ದಾರಿಯಲ್ಲಿ ಸೇನಾ ಸರಕು ವಿಮಾನದಲ್ಲಿ ಬಂದಿಳಿದ ಮೋದಿ ಅವರನ್ನು ರಾಜ್ಯಪಾಲೆ ಆನಂದಿಬೆನ್‌ ಪಟೇಲ್‌, ಮುಖ್ಯಮಂತ್ರಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬರಮಾಡಿಕೊಂಡರು.

ಎಕ್ಸ್‌ಪ್ರೆಸ್‌ವೇ ಉದ್ಘಾಟನೆ ಬಳಿಕ ವಾಯುಪಡೆಯು ವಿಶೇಷ ವೈಮಾನಿಕ ಹಾರಾಟ ಪ್ರದರ್ಶನ ನಡೆಸಿತು. ಇದನ್ನು ಪ್ರಧಾನಿ ವೀಕ್ಷಿಸಿದರು.

ತುರ್ತು ಸಂದರ್ಭಗಳಲ್ಲಿ ಭಾರತೀಯ ವಾಯು ಪಡೆಯ ಯುದ್ಧ ವಿಮಾನಗಳು ಹಾರಾಟ ಆರಂಭಿಸಲು ಮತ್ತು ಬಂದಿಳಿಯಲು ಸುಲ್ತಾನ್‌ಪುರ ಜಿಲ್ಲೆಯಲ್ಲಿ ನಿರ್ಮಿಸಿರುವ ಏರ್‌ಸ್ಟ್ರಿಪ್‌ ನೆರವಾಗಲಿದೆ. 3.2 ಕಿ.ಮೀ ಉದ್ದದ ವಿಮಾನ ಇಳಿಯುವ ದಾರಿಯನ್ನು ನಿರ್ಮಿಸಲಾಗಿದೆ.

340 ಕಿ.ಮೀ. ಉದ್ದದ ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇ ಲಖನೌದ ಚಾಂದ್‌ಸರಾಯ್‌ ಗ್ರಾಮದಿಂದ ಶುರುವಾಗಿ ರಾಷ್ಟ್ರೀಯ ಹೆದ್ದಾರಿ 31ರ ಗಾಜಿಪುರದ ಹೈದರಿಯಾ ಗ್ರಾಮದಲ್ಲಿ (ಉತ್ತರ ಪ್ರದೇಶ–ಬಿಹಾರ ಗಡಿಯಿಂದ 18 ಕಿ.ಮೀ. ದೂರ) ಕೊನೆಯಾಗುತ್ತದೆ. ಈ ಎಕ್ಸ್‌ಪ್ರೆಸ್‌ವೇನಲ್ಲಿ ಪ್ರಸ್ತುತ ಆರು–ಪಥಗಳಿದ್ದು, ಮುಂದೆ ಎಂಟು ಪಥಗಳಿಗೆ ವಿಸ್ತರಿಸುವ ಅವಕಾಶವಿದೆ.

ಅಂದಾಜು ₹22,500 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇ, ಉತ್ತರ ಪ್ರದೇಶದ ಪೂರ್ವ ಭಾಗದ ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡುವುದಾಗಿ ವಿಶ್ಲೇಷಿಸಲಾಗಿದೆ. 2018ರ ಜುಲೈನಲ್ಲಿ ಆಜಂಗಡದಲ್ಲಿ ಪ್ರಧಾನಿ ಮೋದಿ ಅವರು ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಕಾರ್ಯಕ್ಕೆ ಅಡಿಗಲ್ಲು ಹಾಕಿದ್ದರು.


ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು