ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಸ್ಥಿತಿ ಪರಾಮರ್ಶೆ ನಡೆಸಿದ ಪ್ರಧಾನಿ: ಕಠಿಣ ನಿಯಂತ್ರಣ ಕ್ರಮಕ್ಕೆ ಸೂಚನೆ

Last Updated 4 ಏಪ್ರಿಲ್ 2021, 21:18 IST
ಅಕ್ಷರ ಗಾತ್ರ

ನವದೆಹಲಿ: ಆರೋಗ್ಯ ರಕ್ಷಣೆಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಹೆಚ್ಚಿಸುವ ಮೂಲಕ ಮರಣ ಪ್ರಮಾಣವನ್ನು ಕಡಿಮೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಗಳಿಗೆ ಸೂಚಿಸಿದ್ದಾರೆ.

ದೇಶದಲ್ಲಿ ಕೋವಿಡ್‌–19 ಸೋಂಕು ಪ್ರಕರಣಗಳು ತೀವ್ರ ಗತಿಯಲ್ಲಿ ಹೆಚ್ಚುತ್ತಿರುವುದರಿಂದ ಭಾನುವಾರ ಉನ್ನತ ಮಟ್ಟದ ಸಭೆ ನಡೆಸಿದ ಅವರು, ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳು ಮತ್ತು ಲಸಿಕೆ ಅಭಿಯಾನ ಕುರಿತು ಪರಾಮರ್ಶೆ ನಡೆಸಿದರು.

ಕೋವಿಡ್‌–19ನಿಂದ ಮರಣ ಪ್ರಕರಣಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ವೆಂಟಿಲೇಟರ್‌ಗಳ ಕೊರತೆಯಾಗದಂತೆ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.

'ಸೋಂಕು ತೀವ್ರಗತಿಯಲ್ಲಿ ಹಬ್ಬುತ್ತಿರುವ ಸ್ಥಳಗಳಲ್ಲಿ ನಿರ್ಬಂಧಗಳನ್ನು ಜಾರಿಗೊಳಿಸುವುದು ಸೇರಿದಂತೆ ಅಗತ್ಯವಿರುವ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು' ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಹತ್ತು ರಾಜ್ಯಗಳಲ್ಲೇ ಶೇಕಡ 91ರಷ್ಟು ಸೋಂಕು ಮತ್ತು ಸಾವಿನ ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲೂ ಮಹಾರಾಷ್ಟ್ರ, ಪಂಜಾಬ್‌ ಮತ್ತು ಛತ್ತೀಸಗಡದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ಭಾನುವಾರ ಒಂದೇ ದಿನ 93 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಮತ್ತು 500ಕ್ಕೂ ಹೆಚ್ಚು ಸಾವು ಸಂಭವಿಸಿರುವ ಬಗ್ಗೆ ಅಧಿಕಾರಿಗಳು ಸಭೆಯಲ್ಲಿ ವಿವರಿಸಿದರು.

ಅತಿ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿರುವ ಮಹಾರಾಷ್ಟ್ರ, ಪಂಜಾಬ್‌ ಮತ್ತು ಛತ್ತೀಸಗಡಕ್ಕೆ ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ತಜ್ಞರ ತಂಡವನ್ನು ಕಳಹಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಸೋಂಕು ಹೆಚ್ಚಲು ಕಾರಣವಾದ ವಿಷಯಗಳ ಬಗ್ಗೆ ಈ ತಜ್ಞರು ಪರಿಶೀಲಿಸಲಿದ್ದಾರೆ.

ಮಾಸ್ಕ್‌ ಧರಿಸಲು ಮತ್ತು ಸುರಕ್ಷಿತ ಅಂತರ ಕಾಪಾಡಿಕೊಳ್ಳಲು ಜನರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಜತೆಗೆ, ಸೋಂಕು ಹೆಚ್ಚಿರುವ ಪ್ರದೇಶಗಳನ್ನು ಕಂಟೈನ್ಮೆಂಟ್‌ ವಲಯಗಳೆಂದು ಘೋಷಿಸಲು ಕ್ರಮಕೈಗೊಳ್ಳದಿರುವುದರಿಂದ ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿವೆ ಎಂದು ಸಭೆ ಬಳಿಕ ಪ್ರಧಾನಿ ಕಚೇರಿ ಹೊರಡಿಸಿದ ಪ್ರಕಟಣೆ ತಿಳಿಸಿದೆ.

ಜಾಗೃತಿ ಅಭಿಯಾನ: ಕೋವಿಡ್‌–19 ನಿಯಂತ್ರಿಸುವ ಕುರಿತು ಏಪ್ರಿಲ್‌ 6 ರಿಂದ ಒಂದು ವಾರ ಕಾಲ ವಿಶೇಷ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಪ್ರತಿಯೊಬ್ಬರು ಮಾಸ್ಕ್‌ ಧರಿಸುವಂತೆ ಮತ್ತು ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಹಾಗೂ ಸುರಕ್ಷಿತ ಅಂತರ ಕಾಪಾಡಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸುವುದು ಈ ಅಭಿಯಾನದ ಉದ್ದೇಶವಾಗಿದೆ.

ದೇಶದಲ್ಲಿ ಕಳೆದ ಎರಡು ವಾರಗಳಲ್ಲಿ ಪತ್ತೆಯಾದ ಒಟ್ಟು ಸೋಂಕುಪ್ರಕರಣಗಳಲ್ಲಿ ಮಹಾರಾಷ್ಟ್ರದಲ್ಲಿಶೇಕಡ 57ರಷ್ಟು ಇವೆ. ಅಲ್ಲದೆ ಶೇಕಡ 47ರಷ್ಟು ಸಾವಿನ ಪ್ರಕರಣಗಳು ವರದಿಯಾಗಿವೆ. ಹೊಸ ಪ್ರಕರಣಗಳು 47,913 ಪತ್ತೆಯಾಗಿದ್ದು, ಇದು ಕಳೆದ ವರ್ಷ ದಾಖಲಾದ ಪ್ರಕರಣಗಳಿಗಿಂತಲೂ ದುಪ್ಪಟ್ಟು.

ಕಳೆದ 14 ದಿನಗಳಲ್ಲಿನ ಒಟ್ಟು ಪ್ರಕರಣಗಳಲ್ಲಿ ಪಂಜಾಬ್‌ನಲ್ಲಿ ಶೇಕಡ 4.5ರಷ್ಟು ಪತ್ತೆಯಾಗಿವೆ ಮತ್ತು ಶೇಕಡ 16.3ರಷ್ಟು ಸಾವಿನ ಪ್ರಕರಣಗಳು ಸಂಭವಿಸಿವೆ. ಛತ್ತೀಸಗಡನಲ್ಲಿ ಶೇಕಡ 4.3ರಷ್ಟು ಪ್ರಕರಣಗಳು ಪತ್ತೆಯಾಗಿವೆ ಎಂಬುದನ್ನು ಸಭೆಯಲ್ಲಿ ವಿವರಿಸಲಾಯಿತು.

ಲಸಿಕೆಯ ಸಂಶೋಧನೆ ಮತ್ತು ಅಭಿವೃದ್ಧಿ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ದೇಶದಲ್ಲಿ ಲಸಿಕೆ ಕೊರತೆಯಾಗದಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜತೆಗೆ, ‘ವಸುದೈವ ಕುಟುಂಬಕಂ’ ತತ್ವದ ಆಧಾರದಲ್ಲಿ ಇತರ ದೇಶಗಳಿಗೂ ಅಗತ್ಯವಿರುವ ಲಸಿಕೆ ಕಳುಹಿಸಲು ಯೋಜನೆ ರೂಪಿಸಲಾಗಿದೆ. ಲಸಿಕೆ ತಯಾರಕರು ಸಹ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿದ್ದಾರೆ. ಇದಕ್ಕಾಗಿ ದೇಶಿಯ ಮತ್ತು ವಿದೇಶದಲ್ಲಿನ ಕಂಪನಿಗಳ ಜತೆ ಚರ್ಚೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.

‘2–3 ವಾರ ಕಾರ್ಯಕ್ರಮ ನಿರ್ಬಂಧಿಸಿ’
ಬೆಂಗಳೂರು: ‘ನಗರದಲ್ಲಿ ಏ.20ರ ಸುಮಾರಿಗೆ ದಿನಕ್ಕೆ 6,500 ಪ್ರಕರಣಗಳು ವರದಿಯಾಗುವ ಸಾಧ್ಯತೆಯಿದೆ. ಅವರಲ್ಲಿ ಶೇ 10 ರಷ್ಟು ಮಂದಿ ಆಸ್ಪತ್ರೆಗೆ ದಾಖಲಾದರೂ ಆರೋಗ್ಯ ವ್ಯವಸ್ಥೆಯಲ್ಲಿ ಏರುಪೇರಾಗಲಿದೆ’ ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಡಾ.ಗಿರಿಧರ್ ಬಾಬು ಎಚ್ಚರಿಸಿದ್ದಾರೆ.

ಈ ಬಗ್ಗೆ ಅವರು ಸರಣಿ ಟ್ವೀಟ್ ಮಾಡಿದ್ದಾರೆ. ‘ನಗರದಲ್ಲಿ ಸದ್ಯ ಪ್ರತಿನಿತ್ಯ ಮೂರು ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿವೆ. ಕಳೆದ ಎರಡು ವಾರಗಳಿಂದ ಪ್ರಕರಣಗಳ ಸಂಖ್ಯೆ ಏರುಗತಿ ಪಡೆದುಕೊಂಡಿದೆ. ಇದನ್ನು ಆಧರಿಸಿ ಭಾರತೀಯ ವಿಜ್ಞಾನ ಸಂಸ್ಥೆ ಸೇರಿದಂತೆ ವಿವಿಧ ರಾಷ್ಟ್ರ ಮಟ್ಟದ ಸಂಸ್ಥೆಗಳ ವಿಜ್ಞಾನಿಗಳು ಅಧ್ಯಯನ ನಡೆಸಿ, ಪ್ರಕರಣಗಳ ಸಂಖ್ಯೆ ಎಷ್ಟು ತಲುಪಬಹುದು ಎಂಬ ಬಗ್ಗೆ ಊಹೆ ಮಾಡಿದ್ದಾರೆ. ಅವರ ಅನುಸಾರ ಸೋಂಕು ದೃಢ ಪ್ರಮಾಣ ಇದೇ ವೇಗದಲ್ಲಿ ಏರಿಕೆ ಕಂಡಲ್ಲಿ ಮುಂದಿನ 15 ದಿನಗಳ ವೇಳೆಗೆ ಗರಿಷ್ಠ ಸಂಖ್ಯೆ ತಲುಪಲಿದೆ. ಹಾಗಾಗಿ, ಈಗಿನಿಂದಲೇ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಮಹಾರಾಷ್ಟ್ರದ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಲಿದೆ’ ಎಂದು ತಿಳಿಸಿದ್ದಾರೆ.

-ಡಾ.ಗಿರಿಧರ್ ಬಾಬು
-ಡಾ.ಗಿರಿಧರ್ ಬಾಬು

‘ಲಾಕ್‌ಡೌನ್ ಜಾರಿ ಪರಿಹಾರವಲ್ಲ. ಬದಲಾಗಿ ನಾಲ್ಕು ಗೋಡೆಗಳ ಮಧ್ಯೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವುದನ್ನು ತಡೆಯಬೇಕು. ನಿಯಮಗಳು ಕಟ್ಟುನಿಟ್ಟಾಗಿ ಜಾರಿಯಾಗುವಂತೆ ನೋಡಿಕೊಳ್ಳಬೇಕು. ಸಿನಿಮಾ ಮಂದಿರ, ವಿವಾಹ ಸಭಾಂಗಣ, ಜಿಮ್, ಶಾಲಾ–ಕಾಲೇಜು ಸೇರಿದಂತೆ ವಿವಿಧೆಡೆ ನಾಲ್ಕು ಗೋಡೆಗಳ ಮಧ್ಯ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಮುಂದಿನ ಎರಡು ಮೂರು ವಾರ ಕಾರ್ಯಕ್ರಮಗಳನ್ನು ನಿರ್ಬಂಧಿಸಿ, ಕೆಲವೊಂದನ್ನು ಸ್ಥಗಿತ ಮಾಡಬೇಕು. ಆಗ ಸೋಂಕು ಹರಡುವಿಕೆ ತಡೆಯಬಹುದು’ ಎಂದು ಹೇಳಿದ್ದಾರೆ.

ಹಾಸಿಗೆ ಸಮಸ್ಯೆ: ‘ಶೇ 10ರಷ್ಟು ಮಂದಿಗೆ ಸೋಂಕಿನ ಲಕ್ಷಣಗಳು ಬಹಿರಂಗವಾಗಿ ಗೋಚರಿಸಿ, ಅವರು ಆಸ್ಪತ್ರೆಗೆ ದಾಖಲಾದಲ್ಲಿ ಸಮಸ್ಯೆಯಾಗುತ್ತದೆ. ಪ್ರತಿನಿತ್ಯ 6 ಸಾವಿರ ಪ್ರಕರಣಗಳು ವರದಿಯಾಗಿ, 500ರಿಂದ 600 ಮಂದಿ ಆಸ್ಪತ್ರೆ ಸೇರಿದಲ್ಲಿ ಹಾಸಿಗೆ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಳ್ಳಲಿದೆ. ಒಂದು ವಾರದಲ್ಲಿ ಆರೋಗ್ಯ ವ್ಯವಸ್ಥೆ ಸಂಪೂರ್ಣ ತಲೆಕೆಳಗಾಗಲಿದೆ. ಈಗ ಕಚೇರಿಗೆ ಹೋಗುತ್ತಿರುವವರು, ಶಾಲಾ–ಕಾಲೇಜುಗಳಿಗೆ ಹೋಗುತ್ತಿರುವವರು, ಸಾರ್ವಜನಿಕ ಸ್ಥಳದಲ್ಲಿ ಓಡಾಡುತ್ತಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರಾಗುತ್ತಿದ್ದಾರೆ. ಇವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇದ್ದವರಿಗೆ ಸಮಸ್ಯೆಯಾಗುತ್ತದೆ. ಅದೇ ರೀತಿ, ಅವರಿಂದ ಮನೆಯ ಹಿರಿಯರು ಕೂಡ ಸೋಂಕಿತರಾಗುವ ಸಾಧ್ಯತೆ ಇರುತ್ತದೆ’ ಎಂದರು.

‘ಎಲ್ಲರೂ ಕೋವಿಡ್‌ ಲಸಿಕೆ ಪಡೆದುಕೊಳ್ಳಬೇಕು. ಎರಡು ಡೋಸ್‌ ಪಡೆದ ಬಳಿಕ ಸಾವು ಸಂಭವಿಸುವುದಿಲ್ಲ ಎಂಬ ದಾಖಲೆಗಳಿವೆ. ಆದರೆ, ಸೋಂಕು ತಗುಲಲ್ಲ ಎಂದು ಹೇಳಲು ಸಾಧ್ಯವಿಲ್ಲ. ಕೋವಿಡ್ ಪೀಡಿತರಾದರೂ ರೋಗದ ತೀವ್ರತೆ ಕಡಿಮೆ ಇರುತ್ತದೆ. ಮುಖಗವಸು ಧರಿಸುವಿಕೆ, ಅಂತರ ಕಾಯ್ದುಕೊಳ್ಳುವಿಕೆ ಸೇರಿದಂತೆ ವಿವಿಧ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಮನವಿ ಮಾಡಿದ್ದಾರೆ.

ಕೋವಿಡ್‌–19 ದ್ವಿಗುಣಗೊಳ್ಳುವ ಪ್ರಕರಣ
ಕೋವಿಡ್‌–19 ಕುರಿತು ಏಪ್ರಿಲ್‌ 6ರಿಂದ ಒಂದು ವಾರ ಕಾಲ ವಿಶೇಷ ಅಭಿಯಾನ ಹಮ್ಮಿಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಶೇಕಡ 100 ಮಾಸ್ಕ್‌ ಧರಿಸುವಂತೆ ಮತ್ತು ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವುದು ಹಾಗೂ ಸುರಕ್ಷಿತ ಅಂತರ ಕಾಪಾಡಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸುವುದು ಈ ಅಭಿಯಾನದ ಉದ್ದೇಶವಾಗಿದೆ.

ನಿಯಂತ್ರಣಕ್ಕೆ ಐದು ಅಂಶಗಳ ಸೂತ್ರ
ಪರೀಕ್ಷೆ, ಸಂಪರ್ಕಿತರ ಪತ್ತೆ, ಚಿಕಿತ್ಸೆ, ಕೋವಿಡ್‌–19 ನಿಯಂತ್ರಣದ ನಡವಳಿಕೆಗಳು ಮತ್ತು ಲಸಿಕೆ ಹಾಕಿಸಿಕೊಳ್ಳುವ ಸೂತ್ರಗಳನ್ನು ಪಾಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ.

ಈ ಸೂತ್ರಗಳನ್ನು ಗಂಭೀರವಾಗಿ ಮತ್ತು ಬದ್ಧತೆಯಿಂದ ಪಾಲಿಸಿದರೆ ಈ ಸಾಂಕ್ರಾಮಿಕ ಕಾಯಿಲೆ ಹಬ್ಬುವುದನ್ನು ನಿಯಂತ್ರಿಸಬಹುದು. ಈ ಕಾರ್ಯದಲ್ಲಿ ಜನರು ಭಾಗಿಯಾಗಬೇಕು ಮತ್ತು ಜನ ಆಂದೋಲನವಾಗಬೇಕು ಎಂದು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT