ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಎಸ್ ಶರ್ಮಿಳಾ ಅವರ ಅನಿರ್ದಿಷ್ಟಾವಧಿ ಉಪವಾಸಕ್ಕೆ ಬ್ರೇಕ್ ಹಾಕಿದ ಪೊಲೀಸರು

Last Updated 11 ಡಿಸೆಂಬರ್ 2022, 13:39 IST
ಅಕ್ಷರ ಗಾತ್ರ

ಹೈದರಾಬಾದ್‌: ವೈಎಸ್‌ಆರ್ ತೆಲಂಗಾಣ ಪಕ್ಷದ (ವೈಎಸ್‌ಆರ್‌ಟಿಪಿ) ಅಧ್ಯಕ್ಷೆ ವೈ.ಎಸ್. ಶರ್ಮಿಳಾ ಅವರ ಅನಿರ್ದಿಷ್ಟಾವಧಿ ಉಪವಾಸವನ್ನು ವಿಫಲಗೊಳಿಸಿದ ಪೊಲೀಸರು, ಆರೋಗ್ಯ ಹದಗೆಟ್ಟಿದ್ದ ಅವರನ್ನು ಭಾನುವಾರ ಇಲ್ಲಿನ ಆಸ್ಪತ್ರೆಗೆ ದಾಖಲಿಸಿದ್ದಾರೆ.

ರಾಜ್ಯದಾದ್ಯಂತ ತಮ್ಮ ‘ಪಾದಯಾತ್ರೆ’ಗೆ ಅನುಮತಿ ನಿರಾಕರಿಸಿದ್ದನ್ನು ವಿರೋಧಿಸಿ ಶರ್ಮಿಳಾ ಅವರು ತಮ್ಮ ಪಕ್ಷದ ಕೇಂದ್ರ ಕಚೇರಿಯಲ್ಲಿ ಶುಕ್ರವಾರದಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದರು.

‘ನೆರೆದಿದ್ದ ಮಾಧ್ಯಮ ಪ್ರತಿನಿಧಿಗಳು, ಪಕ್ಷದ ಮುಖಂಡರು ಮತ್ತು ಇತರ ಪದಾಧಿಕಾರಿಗಳನ್ನು ಉಪವಾಸ ನಡೆಸುತ್ತಿದ್ದ ಸ್ಥಳದಿಂದ ತೆರವುಗೊಳಿಸುವಂತೆ ಪೊಲೀಸರು ಒತ್ತಾಯಿಸಿದರು. ಬಳಿಕ ಶರ್ಮಿಳಾ ಅವರ ಉಪವಾಸಕ್ಕೆ ಬಲವಂತವಾಗಿ ತಡೆಯೊಡ್ಡಿ, ಮಧ್ಯಾಹ್ನ 1 ಗಂಟೆಯ ವೇಳೆಗೆ ಅವರನ್ನು ಆಸ್ಪತ್ರೆಗೆ ದಾಖಲಿಸಿದರು’ ಎಂದು ಪಕ್ಷವು ತಿಳಿಸಿದೆ.

‘ನೀರನ್ನೂ ಸೇವಿಸದಿದ್ದ ಶರ್ಮಿಳಾ ಅವರ ಆರೋಗ್ಯ ಸ್ಥಿತಿ ಹದಗೆಡುತ್ತಿದೆ. ಶರ್ಮಿಳಾ ಅವರ ಆರೋಗ್ಯದ ಮೇಲೆ ನಿಗಾಇಟ್ಟಿರುವ ವೈದ್ಯರ ಪ್ರಕಾರ,ಶರ್ಮಿಳಾ ಅವರ ರಕ್ತದೊತ್ತಡ ಮತ್ತು ಗ್ಲುಕೋಸ್ ಮಟ್ಟವು ಅಪಾಯಕಾರಿ ಮಟ್ಟಕ್ಕೆ ಕುಸಿದಿದೆ. ಅವರ ದೇಹದಲ್ಲಿ ನಿರ್ಜಲೀಕರಣ ಉಂಟಾಗಿದೆ. ಇದು ಎಲೆಕ್ಟ್ರೋಲೈಟ್ ಅಸಮತೋಲನಕ್ಕೆ ಕಾರಣವಾಗಿ, ಅವರ ಮೂತ್ರಪಿಂಡಗಳಿಗೆ ಅಪಾಯವನ್ನುಂಟು ಮಾಡುವ ಸಾಧ್ಯತೆ ಇದೆ’ ಎಂದು ಪಕ್ಷದ ಪ್ರಕಟಣೆಯು ತಿಳಿಸಿದೆ. ‌

‘ಶರ್ಮಿಳಾ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಅವರು ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಯಾಗುವ ನಿರೀಕ್ಷೆ ಇದೆ. ಅವರಿಗೆ ಎರಡರಿಂದ ಮೂರು ವಾರಗಳ ಕಾಲ ಪೂರ್ಣ ವಿಶ್ರಾಂತಿಗೆ ಸೂಚಿಸಲಾಗಿದೆ’ ಎಂದು ಶರ್ಮಿಳಾ ದಾಖಲಾಗಿರುವ ಖಾಸಗಿ ಆಸ್ಪತ್ರೆಯ ವರದಿಯು ತಿಳಿಸಿದೆ.

ಶರ್ಮಿಳಾ ಅವರು ಹುಸೇನ್‌ ಸಾಗರದ ಕೆರೆಯ ಬಳಿಯಿರುವ ಅಂಬೇಡ್ಕರ್ ಪ್ರತಿಮೆಯ ಬಳಿ ಉಪವಾಸ ಸತ್ಯಾಗ್ರಹ ಆರಂಭಿಸಲು ಯತ್ನಿಸಿದ್ದರು.

ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ, ಸ್ಮರಣಿಕೆ ಸಲ್ಲಿಕೆ ಮುಂತಾದ ಕಾರ್ಯಕ್ರಮಗಳು ನಡೆಯುವುದರಿಂದ ಸಾಮಾನ್ಯವಾಗಿ ಅಲ್ಲಿ ಉಪವಾಸಕ್ಕೆ ಅವಕಾಶವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT