ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ರೈತರ ಪ್ರತಿಭಟನಾ ಮೆರವಣಿಗೆಗೆ ಪೊಲೀಸರು ಒಡ್ಡಿದ ಹೊಸ ತಡೆಗಳು

Last Updated 30 ನವೆಂಬರ್ 2020, 9:57 IST
ಅಕ್ಷರ ಗಾತ್ರ

ದೇಶದಲ್ಲಿ ಈ ಹಿಂದಿನ ವಾರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚರ್ಚಿತವಾದ ವಿಷಯ ರೈತರ ‘ದೆಹಲಿ ಚಲೊ’ ಪ್ರತಿಭಟನಾ ಮೆರವಣಿಗೆಯದ್ದು. ಕೇಂದ್ರ ಸರ್ಕಾರ ಈಚೆಗೆ ಜಾರಿಗೆ ತಂದಿರುವ ಮೂರು ಕೃಷಿ ಸುಧಾರಣಾ ಕಾನೂನುಗಳನ್ನು ರದ್ದು ಮಾಡುವಂತೆ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನ ರೈತರು ಆರಂಭಿಸಿದ ಪ್ರತಿಭಟನೆ ಇದು. ಹಿಂದಿನ ವಾರದಲ್ಲಿ ಪ್ರತಿಭಟನೆಗೆ ಸಂಬಂಧಿಸಿದ ವಿಚಾರ ಚರ್ಚೆಯಾಗಿದ್ದಕ್ಕಿಂತ, ಪ್ರತಿಭಟನೆಯನ್ನು ತಡೆಯಲು ಪೊಲೀಸರು ಕೈಗೊಂಡ ಕ್ರಮಗಳು ಹೆಚ್ಚು ಚರ್ಚೆಯಾಯಿತು. ರೈತರ ಮೆರವಣಿಗೆ ತಡೆಯಲು ಪೊಲೀಸರು ಇದೇ ಮೊದಲ ಬಾರಿ ಅಂತಹ ಕ್ರಮಗಳನ್ನು ತೆಗೆದುಕೊಂಡಿದ್ದರು.

ಪಂಜಾಬ್‌ನ ರೈತರ ಮೆರವಣಿಗೆ ಹರಿಯಾಣದ ಮೂಲಕ ದೆಹಲಿ ತಲುಪಬೇಕಿತ್ತು. ಪಂಜಾಬ್‌ನಿಂದ ರೈತರ ಮೆರವಣಿಗೆ ಹೊರಟಿತ್ತು, ಹರಿಯಾಣದ ಗಡಿ ತಲುಪಿದ ನಂತರ ಪರಿಸ್ಥಿತಿ ಬದಲಾಯಿತು. ಹರಿಯಾಣ ಪೊಲೀಸರು ಪಂಜಾಬ್‌ನ ರೈತರು ಹರಿಯಾಣವನ್ನು ಪ್ರವೇಶಿಸಲು ಅವಕಾಶ ನೀಡಲಿಲ್ಲ. ಎರಡೂ ರಾಜ್ಯಗಳ ಗಡಿಗಳಲ್ಲಿ ಹರಿಯಾಣ ಪೊಲೀಸರು ಟನ್‌ಗಟ್ಟಲೆ ಬಾರದ ಕಾಂಕ್ರೀಟ್‌ ಬ್ಲಾಕ್‌ಗಳನ್ನು ಹೆದ್ದಾರಿಗಳಿಗೆ ಅಡ್ಡವಾಗಿ ಇರಿಸಿದ್ದರು. ಈ ಕಾಂಕ್ರೀಟ್ ಬ್ಲಾಕ್‌ಗಳನ್ನು ರಸ್ತೆಗೆ ಅಡ್ಡವಾಗಿ ಇರಿಸಲು ಕ್ರೇನ್‌ಗಳನ್ನು ಬಳಸಲಾಗಿತ್ತು.

ಟ್ರ್ಯಾಕ್ಟರ್‌ಗಳ ಮೂಲಕ ಕಾಂಕ್ರೀಟ್ ಬ್ಲಾಕ್‌ಗಳನ್ನು ಸರಿಸಲು ಯತ್ನಿಸಿದ ರೈತರ ಮೇಲೆ ಹರಿಯಾಣ ಪೊಲೀಸರು ಜಲಫಿರಂಗಿ ಬಳಸಿದ್ದರು. ಕೊರೆಯುವ ಚಳಿಯಲ್ಲಿ ರೈತರ ಮೇಲೆ ಜಲಫಿರಂಗಿ ಬಳಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ನಂತರದ ಎರಡೂ ದಿನಗಳಲ್ಲಿ ಪೊಲೀಸರು ರೈತರ ಮೇಲೆ ಜಲಫಿರಂಗಿಯನ್ನು ಪದೇ-ಪದೇ ಬಳಸಿದರು.

ಪಂಜಾಬ್‌ನಿಂದ ರೈತರು ದೆಹಲಿಯತ್ತ ಬರುತ್ತಲೇ ಇದ್ದರು.ಹರಿಯಾಣ ಗಡಿಯಲ್ಲಿ ಪೊಲೀಸರು ನೂರಾರು ಬ್ಯಾರಿಕೇಡ್‌ ಹಾಕಿ ಹೆದ್ದಾರಿ ಬಂದ್ ಮಾಡಿದ್ದರು. ಜತೆಗೆ ಹೆದ್ದಾರಿಗೆ ಅಡ್ಡವಾಗಿ ಮರಳು ತುಂಬಿದ ಟಿಪ್ಪರ್‌ಗಳನ್ನು ನಿಲ್ಲಿಸಿದ್ದರು. ಖಾಸಗಿ ಟಿಪ್ಪರ್‌ಗಳನ್ನು ಇದಕ್ಕಾಗಿ ಬಳಸಿಕೊಳ್ಳಲಾಗಿತ್ತು.

ಹರಿಯಾಣ, ಉತ್ತರಪ್ರದೇಶದಿಂದ ದೆಹಲಿಗೆ ಪ್ರವೇಶಿಸುವ ಎಲ್ಲಾ ಹೆದ್ದಾರಿಗಳನ್ನು ದೆಹಲಿ ಪೊಲೀಸರು ಬಂದ್ ಮಾಡಿದ್ದರು. ಹರಿಯಾಣ ಪೊಲೀಸರಂತೆಯೇ ದೆಹಲಿ ಪೊಲೀಸರು ಸಹ ಮರಳು ತುಂಬಿದ ಲಾರಿಗಳನ್ನು ಬಳಸಿದ್ದರು. ಕಾಂಕ್ರೀಟ್ ಬ್ಲಾಕ್‌ಗಳನ್ನು ಇರಿಸಿದ್ದರು. ಕಂಟೇನರ್‌ಗಳನ್ನು ಇರಿಸಿದ್ದರು. ಜತೆಗೆ ಮುಳ್ಳುತಂತಿಗಳನ್ನು ರಸ್ತೆಗೆ ಅಡ್ಡವಾಗಿ ಇರಿಸಿದ್ದರು.

ಪ್ರತಿಭಟನಾಕಾರರನ್ನು ತಡೆಯಲು ಹೀಗೆ ಮುಳ್ಳುತಂತಿಗಳನ್ನು ಬಳಸುತಿದ್ದದ್ದು ಕಾಶ್ಮೀರದಲ್ಲಿ ಮಾತ್ರ. ರೈತರನ್ನು ತಡೆಯಲು ಈ ಸ್ವರೂಪದ ಮುಳ್ಳುತಂತಿ ಬಳಸಿದ್ದು, ರೈತರ ಆಕ್ರೋಶಕ್ಕೆ ಕಾರಣವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಈ ಸಂಬಂಧ ಭಾರಿ ಚರ್ಚೆ ನಡೆಯಿತು. ಕೆಲವರು ಪ್ರತಿಭಟನಾನಿರತ ರೈತರನ್ನು ಖಲಿಸ್ತಾನ ಉಗ್ರರು ಎಂದು ಕರೆದರು. ಇದು ವಿವಾದಕ್ಕೆ ಕಾರಣವಾಯಿತು. ರೈತರನ್ನು ಖಲಿಸ್ತಾನ ಉಗ್ರರು ಎಂದು ಕರೆದದ್ದು ಮತ್ತು ಅವರನ್ನು ತಡೆಯಲು ಕಾಶ್ಮೀರದಲ್ಲಿ ಬಳಸುತ್ತಿದ್ದಂತೆ ಮುಳ್ಳುತಂತಿ ಬೇಲಿ ಬಳಸಿದ್ದನ್ನು ಹೋಲಿಸಿಕೊಂಡು ಹಲವರು, ರೈತರನ್ನು ಉಗ್ರರಂತೆ ನಡೆಸಿಕೊಳ್ಳಲಾಗುತ್ತಿದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಎಲ್ಲಾ ತಡೆಗಳನ್ನು ರೈತರು ತೊಡೆದುಹಾಕಿದ ರೀತಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಇದಕ್ಕೆ ಸಂಬಂಧಿಸಿದ ಹಲವು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಈ ಎಲ್ಲಾ ತಡೆಗಳನ್ನು ಮೀರಿ ರೈತರು ದೆಹಲಿ ತಲುಪಿದ್ದಾರೆ. ಅಲ್ಲಿ ಬೇರೊಂದು ಸ್ವರೂಪದ ಹೋರಾಟ ಆರಂಭವಾಗಿದೆ. ನೂತನ ಕಾಯ್ದೆಗಳನ್ನು ಹಿಂಪಡೆಯುವವರೆಗೂ ಧರಣಿ ಕೈಬಿಡುವುದಿಲ್ಲ ಎಂದು ರೈತರು ಹೇಳಿದ್ದಾರೆ. ದೆಹಲಿಯ ಬುರಾಡಿ ಮೈದಾನದಲ್ಲಿ ಅಡುಗೆ ಮಾಡಿಕೊಂಡು, ಸಾಮೂಹಿಕ ಭೋಜನ ಮಾಡಲಾಗುತ್ತಿದೆ. ರೈತರು ಎರಡು ತಿಂಗಳಿಗೆ ಆಗುವಷ್ಟು ದಿನಸಿ ಮತ್ತು ಅಗತ್ಯ ವಸ್ತುಗಳನ್ನು ಅಲ್ಲಿ ಸಂಗ್ರಹಿಸಿದ್ದಾರೆ. ಇದರ ಮಧ್ಯೆಯೇ ರೈತರ ಟ್ರ್ಯಾಕ್ಟರ್‌ ಅನ್ನು ಸರಿಪಡಿಸಲು ಬಂದಿದ್ದ ಮೆಕ್ಯಾನಿಕ್ ಒಬ್ಬರು ಬೆಂಕಿ ಅವಘಡದಲ್ಲಿ ಮೃತಪಟ್ಟಿದ್ದಾರೆ. ಈ ಹೋರಾಟದ ಮೊದಲ ಹುತಾತ್ಮ ಎಂದು ಆ ಮೆಕ್ಯಾನಿಕ್ ಅವರನ್ನು ಕರೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT