ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಲೈ 18ಕ್ಕೆ ರಾಷ್ಟ್ರಪತಿ ಚುನಾವಣೆ; 21ಕ್ಕೆ ಮತ ಎಣಿಕೆ

ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರಪತಿ ಚುನಾವಣೆಗೆ ಚುನಾವಣಾ ಆಯೋಗವು ಗುರುವಾರ ವೇಳಾಪಟ್ಟಿ ಪ್ರಕಟಿಸಿದ್ದು, ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರ ಉತ್ತರಾಧಿಕಾರಿ ಆಯ್ಕೆಗೆ ವೇದಿಕೆ ಸಿದ್ಧವಾಗಿದೆ.

ಸುದ್ದಿಗೋಷ್ಠಿಯಲ್ಲಿ ಗುರುವಾರಮಾತನಾಡಿದ ಮುಖ್ಯ ಚುನಾವಣಾಧಿಕಾರಿ ರಾಜೀವ್‌ ಕುಮಾರ್‌, ‘ಜುಲೈ 18ರಂದುಮತದಾನ ನಡೆಯಲಿದೆ. ಲೋಕಸಭೆ, ಹಾಗೂ ರಾಜ್ಯಸಭೆಯ ಸದಸ್ಯರು, ದೆಹಲಿ, ಪುದುಚೇರಿ ಕೇಂದ್ರಾಡಳಿತ ಪ್ರದೇಶಗಳು ಮತ್ತು ಎಲ್ಲ ರಾಜ್ಯಗಳ ವಿಧಾನಸಭೆಯ ಸದಸ್ಯರು ಸೇರಿ 4,809 ಚುನಾಯಿತ ಸದಸ್ಯರು ಮತ ಚಲಾಯಿಸಲಿದ್ದಾರೆ. ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಚುನಾವಣೆ ನಡೆಸಲಾಗುವುದು’ ಎಂದರು.

2017ರಲ್ಲಿ ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ರಾಮನಾಥ ಕೋವಿಂದ್‌ (7,02,044 ಮತಗಳು) ಅವರು ವಿರೋಧ ಪಕ್ಷಗಳ ಅಭ್ಯರ್ಥಿಯಾಗಿದ್ದ ಲೋಕಸಭೆಯ ಮಾಜಿ ಸಭಾಧ್ಯಕ್ಷೆ ಮೀರಾ ಕುಮಾರ್‌ (3,67,314 ಮತಗಳು ) ಅವರನ್ನು 3,34,730 ಮತಗಳ ಅಂತರದಿಂದ ಸೋಲಿಸಿದ್ದರು.

ಈ ಸಲದ ಚುನಾವಣೆಯಲ್ಲಿ ಸಂಸದರ ಮತ ಮೌಲ್ಯ 700. ಆದರೆ, ಶಾಸಕರ ಮತ ಮೌಲ್ಯ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ.

ಉದಾಹರಣೆಗೆ, ಕರ್ನಾಟಕದ ಶಾಸಕರು 131 ಮತ ಮೌಲ್ಯ ಹೊಂದಿದ್ದರೆ, ಉತ್ತರ ಪ್ರದೇಶದ ಶಾಸಕರ ಮತ ಮೌಲ್ಯ 208 ಆಗಿರಲಿದೆ. ಸಿಕ್ಕಿಂನ ಶಾಸಕರ ಮತ ಮೌಲ್ಯ 7 ಆಗಿರಲಿದೆ. ಕೋವಿಡ್‌ ಮಾರ್ಗಸೂಚಿಗಳ ಅನ್ಚಯವೇ ಚುನಾವಣಾ ಪ್ರಕ್ರಿಯೆ ನಡೆಸಲಾಗುವುದು ಎಂದು ರಾಜೀವ್‌ ಕುಮಾರ್‌ ತಿಳಿಸಿದರು.

ಸಾಮಾನ್ಯವಾಗಿ ಸಂಸದರು ಪಾರ್ಲಿಮೆಂಟ್‌ನಲ್ಲಿ ಹಾಗೂ ಶಾಸಕರು ವಿಧಾನಸಭೆಗಳಲ್ಲಿ ಮತ ಚಲಾಯಿಸಲಿದ್ದಾರೆ.

ವಿರೋಧಪಕ್ಷದಿಂದ ಜಂಟಿ ಅಭ್ಯರ್ಥಿ?
ಚುನಾವಣಾ ವೇಳಾಪಟ್ಟಿ ಪ್ರಕಟವಾದ ಬೆನ್ನಲ್ಲೇ, ಸಂಭಾವ್ಯ ಅಭ್ಯರ್ಥಿಗಳ ಆಯ್ಕೆಗಾಗಿ ಆಡಳಿತ ಹಾಗೂ ವಿರೋಧ ಪಕ್ಷಗಳಲ್ಲಿ ಚಟುವಟಿಕೆ ಆರಂಭವಾಗಿದೆ.

ರಾಷ್ಟ್ರಪತಿ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದಾಗಿ ವಿರೋಧ ಪಕ್ಷಗಳ ಮುಖಂಡರು ಈಗಾಗಲೇ ಪ್ರಕಟಿಸಿದ್ದಾರೆ.

ಈಗಿನ ಲೆಕ್ಕಾಚಾರದ ಪ್ರಕಾರ, ಆಡಳಿತಾರೂಢ ಬಿಜೆಪಿಯ ಅಭ್ಯರ್ಥಿಯು 5.39 ಲಕ್ಷ ಮತಗಳನ್ನು ಪಡೆಯಲಿದ್ದಾರೆ. ವಿರೋಧ ಪಕ್ಷಗಳ ಅಭ್ಯರ್ಥಿ 4.47 ಲಕ್ಷ ಮತಗಳನ್ನು ಪಡೆಯಬಹುದು. ವೈಎಸ್‌ಆರ್ ಕಾಂಗ್ರೆಸ್‌ ಹಾಗೂ ಬಿಜೆಡಿ ಸದ್ಯ ಯಾವುದೇ ಗುಂಪಿನ ಜತೆಗೆ ಗುರುತಿಸಿಕೊಂಡಿಲ್ಲ. ಈ ಪಕ್ಷಗಳು 75,136 ಮತಗಳನ್ನು ಹೊಂದಿವೆ.

ಅಭ್ಯರ್ಥಿ ಸ್ಥಾನಕ್ಕೆ ಬಿಜೆಪಿ ವಲಯದಲ್ಲಿ ಏಳು– ಎಂಟು ಮಂದಿಯ ಹೆಸರು ಹರಿದಾಡುತ್ತಿದ್ದರೆ, ವಿರೋಧ ಪಕ್ಷಗಳು ಜಂಟಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಸಾಧ್ಯತೆ ಇದೆ.

ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌, ಕರ್ನಾಟಕ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌, ಜಾರ್ಖಂಡ್‌ ರಾಜ್ಯಪಾಲ ದ್ರೌಪದಿ ಮುರ್ಮು, ತೆಲಂಗಾಣ ರಾಜ್ಯಪಾಲರಾದ ತಮಿಳಿಸೈ ಸೌಂದರರಾಜನ್‌, ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್‌ ಪಟೇಲ್‌, ಕೇಂದ್ರ ಸಚಿವ ಮುಖ್ತಾರ್‌ ಅಬ್ಬಾಸ್‌ ನಖ್ವಿ, ಲೋಕಸಭೆಯ ಮಾಜಿ ಸಭಾಧ್ಯಕ್ಷರಾದ ಸುಮಿತ್ರಾ ಮಹಾಜನ್‌ ಪೈಕಿ ಒಬ್ಬರನ್ನು ಬಿಜೆಪಿ ಕಣಕ್ಕೆ ಇಳಿಸಬಹುದು. ಕೊನೆಯ ಕ್ಷಣದಲ್ಲಿ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಮೂಲಗಳು ಹೇಳಿವೆ.

ಜಂಟಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ವಿರೋಧ ಪಕ್ಷಗಳು ಕಾರ್ಯಪ್ರವೃತ್ತವಾಗಿವೆ. ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ವಿವಿಧ ಪಕ್ಷಗಳ ಮುಖಂಡರ ಜತೆಗೆ ಈ ಸಂಬಂಧ ಸಮಾಲೋಚನೆ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT