ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿಯವರಿಗೆ ರೈಲ್ವೆ ನಿಲ್ದಾಣ ಆಯ್ಕೆ ಸ್ವಾತಂತ್ರ್ಯ

ಕೇಂದ್ರ ರೈಲ್ವೆ ಸಚಿವಾಲಯ ಸಿದ್ಧಪಡಿಸಿರುವ ರಿಯಾಯಿತಿ ಒಪ್ಪಂದದ ಕರಡು ಪ್ರತಿಯಲ್ಲಿ ಉಲ್ಲೇಖ
Last Updated 17 ಆಗಸ್ಟ್ 2020, 3:24 IST
ಅಕ್ಷರ ಗಾತ್ರ

ನವದೆಹಲಿ: ತಾವು ನಿರ್ವಹಣೆ ಮಾಡುವ ರೈಲುಗಳನ್ನು ನಿಲ್ದಾಣದ ಯಾವ ಸ್ಥಳದಲ್ಲಿ ನಿಲುಗಡೆ ಮಾಡಬೇಕು ಎಂಬುದನ್ನು ನಿರ್ಧರಿಸುವ ಸ್ವಾತಂತ್ರ್ಯವನ್ನು ಖಾಸಗಿ ಸಂಸ್ಥೆಯವರಿಗೆ ನೀಡಲಾಗಿದೆ.

ಕೇಂದ್ರ ರೈಲ್ವೆ ಸಚಿವಾಲಯವು ಸಿದ್ಧಪ‍ಡಿಸಿರುವ ರಿಯಾಯಿತಿ ಒಪ‍್ಪ‍ಂದದ ಕರಡು ಪ್ರತಿಯಲ್ಲಿ ಈ ಅಂಶವನ್ನು ಉಲ್ಲೇಖಿಸಲಾಗಿದೆ.

ತಾವು ಆಯ್ಕೆ ಮಾಡಿಕೊಂಡಿರುವ ಮಧ್ಯಂತರ ನಿಲ್ದಾಣಗಳ ಪಟ್ಟಿಯನ್ನು ಖಾಸಗಿ ಸಂಸ್ಥೆಯವರು ಭಾರತೀಯ ರೈಲ್ವೆಗೆ ಸಾಕಷ್ಟು ಮುಂಚಿತವಾಗಿಯೇ ನೀಡಬೇಕೆಂದೂ ಕರಡು ಪ್ರತಿಯಲ್ಲಿ ಹೇಳಲಾಗಿದೆ.

109 ಮಾರ್ಗಗಳಲ್ಲಿ 150 ಖಾಸಗಿ ರೈಲುಗಳು ಚಲಿಸುವ ಯೋಜನೆಗೆ ಕೇಂದ್ರ ಸರ್ಕಾರವು ಒಪ್ಪಿಗೆ ನೀಡಿದ್ದು, ಇದು 2023ಕ್ಕೆ ಕಾರ್ಯಗತಗೊಳ್ಳಲಿದೆ.

‘ಖಾಸಗಿ ಸಂಸ್ಥೆಯವರು ತಾವು ನಿರ್ವಹಣೆ ಮಾಡುವ ರೈಲುಗಳು ಯಾವ ಸಮಯಕ್ಕೆ ನಿಲ್ದಾಣ ಪ್ರವೇಶಿಸುತ್ತವೆ, ಯಾವಾಗ ನಿಲ್ದಾಣ ತೊರೆಯುತ್ತವೆ ಎಂಬ ಮಾಹಿತಿಯನ್ನೂ ರೈಲ್ವೆ ಇಲಾಖೆಯವರಿಗೆ ಮುಂಚಿತವಾಗಿಯೇ ಒದಗಿಸ
ಬೇಕು. ಇದು ರೈಲ್ವೆ ಕಾರ್ಯಾಚರಣೆ ಯೋಜನೆಯ ಭಾಗವಾಗಿರುತ್ತದೆ. ಕನಿಷ್ಠ ಒಂದು ವರ್ಷದವರೆಗೂ ಇದರಲ್ಲಿ ಯಾವ ಬದಲಾವಣೆಯನ್ನೂ ಮಾಡುವಂತಿಲ್ಲ. ಬಳಿಕ ಇದನ್ನು ಪರಿಷ್ಕರಿಸಬಹುದು’ ಎಂದೂ ಕರಡಿನಲ್ಲಿ ತಿಳಿಸಲಾಗಿದೆ.

ಮಾರ್ಗವೊಂದರಲ್ಲಿ ಈಗಾಗಲೇ ಸಂಚರಿಸುತ್ತಿರುವ ವೇಗದ ರೈಲುಗಳ ನಿಲುಗಡೆಗಿಂತಲೂ ಖಾಸಗಿ ರೈಲುಗಳ ನಿಲುಗಡೆ ಸಂಖ್ಯೆ ಹೆಚ್ಚಿರಬಾರದು ಎಂದೂ ಭಾರತೀಯ ರೈಲ್ವೆ ತಿಳಿಸಿದೆ. ಯಾವ ನಿಲ್ದಾಣಗಳಲ್ಲಿ ರೈಲಿನ ನೀರಿನ ಟ್ಯಾಂಕರ್‌ಗಳನ್ನು ಭರ್ತಿ ಮಾಡಲಾಗುತ್ತದೆ, ಯಾವ ಮಾರ್ಗದಲ್ಲಿ ರೈಲು ಬೋಗಿಗಳನ್ನು ಸ್ವಚ್ಛಗೊಳಿಸಲಾಗುತ್ತದೆ ಎಂಬ ಮಾಹಿತಿಯನ್ನೂ ರೈಲ್ವೆ ಕಾರ್ಯಾಚರಣೆ ಯೋಜನೆಯಲ್ಲಿ ನಮೂದಿಸಿರಬೇಕು ಎಂದೂ ಇಲಾಖೆ ಸೂಚಿಸಿದೆ.

ಬಾಂಬರ್ಡಿಯರ್‌ ಟ್ರಾನ್ಸ್‌ಪೋರ್ಟೇಷನ್‌ ಇಂಡಿಯಾ, ಸೀಮನ್ಸ್‌ ಲಿಮಿಟೆಡ್‌, ಅಲ್ಸ್‌ಟಮ್‌ ಟ್ರಾನ್ಸ್‌ಪೋರ್ಟ್‌ ಇಂಡಿಯಾ ಲಿಮಿಟೆಡ್‌ ಸೇರಿದಂತೆ ಒಟ್ಟು 23 ಸಂಸ್ಥೆಗಳು ರೈಲು ನಿರ್ವಹಣೆಗೆ ಆಸಕ್ತಿ ತೋರಿವೆ. ಖಾಸಗಿ ಸಂಸ್ಥೆಗಳು ಅಂದಾಜು ₹30 ಸಾವಿರ ಕೋಟಿ ಹೂಡಿಕೆ ಮಾಡುವ ನಿರೀಕ್ಷೆ ಇದೆ.

ಪ್ರಯಾಣಿಕರಿಗೆ ಗುಣಮಟ್ಟದ ಸೇವೆ ಒದಗಿಸುವುದು, ಆ ಮೂಲಕ ಅವರನ್ನು ರೈಲ್ವೆಯತ್ತ ಆಕರ್ಷಿಸುವುದು ಹಾಗೂ ಭಾರತೀಯ ರೈಲ್ವೆಯ ಜಾಲವನ್ನು ವಿಸ್ತರಿಸುವುದು ಈ ಯೋಜನೆಯ ಮೂಲ ಉದ್ದೇಶ ಎಂದು ಹೇಳಲಾಗಿದೆ.

ಟಿಕೆಟ್‌ ದರ ನಿಗದಿಯ ಸ್ವಾತಂತ್ರ್ಯ

ಕಾಲಕ್ಕನುಗುಣವಾಗಿ ರೈಲ್ವೆ ಟಿಕೆಟ್‌ ದರ ನಿಗದಿ ಮಾಡುವ ಸ್ವಾತಂತ್ರ್ಯವನ್ನೂ ಖಾಸಗಿಯವರಿಗೆ ನೀಡಲು ಭಾರತೀಯ ರೈಲ್ವೆ ನಿರ್ಧರಿಸಿದೆ.

‘ಟಿಕೆಟ್‌ ದರ ಹಾಗೂ ಸುಂಕಗಳನ್ನು ನಿಗದಿ ಮಾಡುವುದಕ್ಕಾಗಿಯೇ ನಿಯಂತ್ರಕ ಪ್ರಾಧಿಕಾರವೊಂದನ್ನು ರಚಿಸಲು ಈ ಮೊದಲು ಭಾರತೀಯ ರೈಲ್ವೆ ಚಿಂತಿಸಿತ್ತು. ಈಗ ಆ ಆಲೋಚನೆಯನ್ನು ಕೈಬಿಟ್ಟಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಖಾಸಗಿ ರೈಲುಗಳು ಸಂಚರಿಸುವ ಮಾರ್ಗಗಳಲ್ಲೇ ಭಾರತೀಯ ರೈಲ್ವೆಯ ಪ್ಯಾಸೆಂಜರ್‌ ರೈಲುಗಳನ್ನೂ ಓಡಿಸಲಾಗುತ್ತದೆ. ಒಂದೊಮ್ಮೆ ಖಾಸಗಿ ಸಂಸ್ಥೆಯವರು ದುಬಾರಿ ಟಿಕೆಟ್‌ ದರ ನಿಗದಿ ಮಾಡಿದರೆ ಪ್ರಯಾಣಿಕರು ಪ್ಯಾಸೆಂಜರ್‌ ರೈಲನ್ನು ಆಯ್ಕೆ ಮಾಡಿಕೊಳ್ಳಲು ಇದರಿಂದ ಅನುಕೂಲವಾಗಲಿದೆ’ ಎಂದೂ ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT