ಶುಕ್ರವಾರ, ಡಿಸೆಂಬರ್ 3, 2021
20 °C
ರೈತರ ಪ್ರತಿಭಟನೆ ವಿರುದ್ಧದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಹೇಳಿಕೆ

ಪ್ರತಿಭಟಿಸಿ, ಆದರೆ ಹೆದ್ದಾರಿ ಬಂದ್ ಮಾಡುವಂತಿಲ್ಲ: ಸುಪ್ರೀಂ ಕೋರ್ಟ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ರೈತರು ಪ್ರತಿಭಟಿಸುವ ಹಕ್ಕನ್ನು ಹೊಂದಿದ್ದಾರೆ. ಆದರೆ ಆ ಹಕ್ಕು ಹೊಂದಿದ ಮಾತ್ರಕ್ಕೆ ಅವರು, ಹೆದ್ದಾರಿಗಳನ್ನು ಅನಿರ್ದಿಷ್ಟಾವಧಿಗೆ ಬಂದ್ ಮಾಡುವ ಹಾಗಿಲ್ಲ’ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ. 

ರೈತರು ಹೆದ್ದಾರಿ ಬಂದ್ ಮಾಡಿರುವುದರಿಂದ ದೆಹಲಿಗೆ ಹೋಗುವುದು ಕಷ್ಟವಾಗುತ್ತಿದೆ ಎಂದು ನೋಯ್ಡಾ ನಿವಾಸಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಎಸ್‌.ಕೆ.ಕೌಲ್ ಮತ್ತು ಎಂ.ಎಂ.ಸುಂದರೇಶ್‌ ಅವರಿದ್ದ ಪೀಠವು ಹೀಗೆ ಹೇಳಿದೆ.

‘ನೀವು ಯಾವುದೇ ರೀತಿಯಲ್ಲಿ ಪ್ರತಿಭಟನೆ ನಡೆಸುವ ಹಕ್ಕನ್ನು ಹೊಂದಿದ್ದೀರಿ. ಆದರೆ ಅನಿರ್ದಿಷ್ಟಾವಧಿಯವರೆಗೆ ಹೆದ್ದಾರಿಗಳನ್ನು ಬಂದ್ ಮಾಡುವಂತಿಲ್ಲ. ಜನರು ರಸ್ತೆ-ಹೆದ್ದಾರಿಗಳನ್ನು ಬಳಸುವ ಹಕ್ಕನ್ನು ಹೊಂದಿದ್ದಾರೆ’ ಎಂದು ಪೀಠವು ಹೇಳಿದೆ.

ಹೆದ್ದಾರಿಗಳನ್ನು ಬಂದ್ ಮಾಡಿರುವ ಬಗ್ಗೆ, ಪೀಠದ ಎದುರು ರೈತ ಸಂಘಟನೆಗಳು ಮತ್ತು ಕೇಂದ್ರ ಸರ್ಕಾರವು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿದವು. 

ರೈತರ ಪ್ರತಿಭಟನೆ ಮತ್ತು ಕೃಷಿ ಕಾಯ್ದೆಗಳ ವಿರುದ್ಧ ಸುಪ್ರೀಂ ಕೋರ್ಟ್‌ನ ಬೇರೊಂದು ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಯುತ್ತಿದೆ. ಈ ಅರ್ಜಿಯನ್ನೂ ಅದೇ ಪೀಠಕ್ಕೆ ವರ್ಗಾಯಿಸಿ ಎಂದು ರೈತ ಸಂಘಟನೆಗಳ ಪರ ವಕೀಲ ದುಶ್ಯಂತ್ ದವೆ ಅವರು ಪೀಠಕ್ಕೆ ಮನವಿ ಮಾಡಿದರು. ಅವರ ಮನವಿಯನ್ನು ಪೀಠವು
ತಿರಸ್ಕರಿಸಿತು.

‘ಇಲ್ಲಿ ಹೆದ್ದಾರಿ ಬಂದ್ ಆಗಿರುವ ಬಗ್ಗೆ ಮಾತ್ರವೇ ವಿಚಾರಣೆ ನಡೆಯುತ್ತಿದೆ. ಹೆದ್ದಾರಿಯನ್ನು ಬಂದ್ ಮಾಡಬಹುದು ಎಂಬುದು ರೈತ ಸಂಘಟನೆಗಳ ನಿಲುವೋ ಅಥವಾ ಹೆದ್ದಾರಿಯನ್ನು ಬಂದ್ ಮಾಡಬಾರದು ಎಂಬುದು ರೈತ ಸಂಘಟನೆಗಳ ನಿಲುವೋ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಪೀಠವು ಹೇಳಿದೆ.

ಈ ಬಗ್ಗೆ ವಿವರಣೆ ನೀಡುವಂತೆ ರೈತ ಸಂಘಟನೆಗಳಿಗೆ ಸೂಚನೆ ನೀಡಿದ್ದು, ಮೂರು ವಾರಗಳ ಕಾಲಾವಕಾಶ ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು