ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ನಿಪಥ ವಿರುದ್ಧ ಆಕ್ರೋಶ ತೀವ್ರ, ರೈಲು ಬೋಗಿಗಳಿಗೆ ಬೆಂಕಿ

ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನ, ಹರಿಯಾಣದಲ್ಲಿ ಪ್ರತಿಭಟನೆ,
Last Updated 16 ಜೂನ್ 2022, 20:30 IST
ಅಕ್ಷರ ಗಾತ್ರ

ಪಟ್ನಾ/ಆಗ್ರಾ/ಜೈಪುರ/ಗುರುಗ್ರಾಮ: ಕೇಂದ್ರ ಸರ್ಕಾರವು ಪ್ರಕಟಿಸಿರುವ ಸೈನಿಕರ ನೇಮಕಾತಿಯ ಹೊಸ ನೀತಿ ‘ಅಗ್ನಿಪಥ ಯೋಜನೆ’ ವಿರುದ್ಧ ಉತ್ತರ ಭಾರತದ ವಿವಿಧೆಡೆ ಗುರುವಾರವೂ ಭಾರಿ ಪ್ರತಿಭಟನೆ ನಡೆದಿದೆ. ರಾಜಕೀಯ ಪಕ್ಷಗಳು ಅಗ್ನಿಪಥ ಯೋಜನೆಯ ಪರ ಮತ್ತು ವಿರುದ್ಧ ನಿಲುವು ತಳೆದಿವೆ.

ಬಿಹಾರದಲ್ಲಿ ಆಕ್ರೋಶವು ಉಗ್ರ ರೂಪ ಪಡೆದುಕೊಂಡಿದೆ. ರೈಲು ಬೋಗಿಗಳಿಗೆ ಬೆಂಕಿ ಹಚ್ಚಲಾಗಿದೆ, ಬಸ್‌ಗಳಿಗೆ ಕಲ್ಲು ತೂರಲಾಗಿದೆ. ಕಲ್ಲು ತೂರಾಟದಲ್ಲಿ ಹಲವರು ಗಾಯಗೊಂಡಿದ್ದಾರೆ. ಶಾಸಕಿ ಅರುಣಾ ದೇವಿ ಕೂಡ ಕಲ್ಲು ತೂರಾಟದಲ್ಲಿ ಗಾಯಗೊಂಡಿದ್ದಾರೆ. ರೈಲುಗಳನ್ನು ತಡೆಯಲಾಗಿದೆ, ರಸ್ತೆಯಲ್ಲಿ ಟೈರ್‌ ಸುಡಲಾಗಿದೆ. ಪ್ರತಿಭಟನಕಾರರು ಬೀದಿಗಳಲ್ಲಿ ಕವಾಯತು ನಡೆಸಿ ಕೂಡ ಪ್ರತಿಭಟಿಸಿದ್ದಾರೆ.

ಪೊಲೀಸರು ಲಾಠಿ ಪ್ರಹಾರ, ಅಶ್ರುವಾಯು ಷೆಲ್‌ ಸಿಡಿಸಿ ಉದ್ರಿಕ್ತ ಯುವಕರನ್ನು ಚದುರಿಸಲು ಯತ್ನಿಸಿದರು.

ಭಭುವಾ ಮತ್ತು ಛಪರ ರೈಲು ನಿಲ್ದಾಣಗಳಲ್ಲಿ ಅತಿ ಹೆಚ್ಚಿನ ನಷ್ಟ ಉಂಟಾಗಿದೆ. ಅಲ್ಲಿ ರೈಲು ಬೋಗಿಗಳಿಗೆ ಬೆಂಕಿ ಹಚ್ಚಲಾಗಿದೆ. ಹಾಜಿಪುರ ಕೇಂದ್ರವಾಗಿರುವ ರೈಲ್ವೆ ವಲಯದಲ್ಲಿ ರೈಲು ಸಂಚಾರದಲ್ಲಿ ಅತಿ ಹೆಚ್ಚು ವ್ಯತ್ಯಯ ಉಂಟಾಗಿದೆ. ಹಲವು ರೈಲುಗಳನ್ನು ರದ್ದು ಮಾಡಲಾಗಿದೆ. ಜೆಹಾನಾಬಾದ್‌, ಬಕ್ಸರ್‌, ಕತಿಹಾರ್‌, ಸರಣ್‌, ಭೋಜ್‌ಪುರ, ಕೈಮೂರ್‌ ಜಿಲ್ಲೆಗಳಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಲಾಗಿದೆ.34 ರೈಲುಗಳ ಸಂಚಾರ ರದ್ದು ಮಾಡಲಾಗಿದೆ. 72 ರೈಲುಗಳು ವಿಳಂಬವಾಗಿ ಸಂಚರಿಸಿವೆ.

ಉತ್ತರ ಪ್ರದೇಶದ ಆಗ್ರಾದಲ್ಲಿ ಸರ್ಕಾರಿ ಕಚೇರಿ ಕಟ್ಟಡಗಳಿಗೆ ಕಲ್ಲು ತೂರಲಾಗಿದೆ. ಬುಲಂದ್‌ಶಹರ್‌ ಮತ್ತು ಬಲಿಯಾದಲ್ಲಿ ಪ‍್ರತಿಭಟನೆ ನಡೆದಿದೆ.

ರಾಜಸ್ಥಾನದ ಜೋಧಪುರ, ಸೀಕರ್‌, ಜೈಪುರ, ನಾಗೌರ್‌, ಅಜ್ಮೀರ್‌ ಮತ್ತು ಝುಂಝುನೂ ಜಿಲ್ಲೆಗಳಲ್ಲಿ ರಕ್ಷಣಾ ಪಡೆಗಳಲ್ಲಿನ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸಿದ್ದಾರೆ. ರಾಜಸ್ಥಾನದಲ್ಲಿ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ ಎಂದು ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಹವಾ ಸಿಂಗ್‌ ಗುಮಾರಿಯಾ ತಿಳಿಸಿದ್ದಾರೆ.

ಹರಿಯಾಣದ ಗುರುಗ್ರಾಮ, ರೆವಾಡಿಮತ್ತು ಪಲವಲ್‌ನಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಲಾಗಿದೆ. ಪಲವಲ್‌ನಲ್ಲಿ ಪೊಲೀಸ್‌ ವಾಹನವೊಂದಕ್ಕೆ ಹಾನಿ ಮಾಡಲಾಗಿದೆ ಮತ್ತು ಆಗ್ರಾಚೌಕದಲ್ಲಿ ರಸ್ತೆ ತಡೆ ನಡೆಸಲಾಗಿದೆ. ಗುರುಗ್ರಾಮದಲ್ಲಿ ಬಸ್‌ನಿಲ್ದಾಣಗಳನ್ನು ಪ್ರತಿಭಟನಕಾರರು ಸ್ಥಗಿತಗೊಳಿಸಿದರು ಮತ್ತು ರಸ್ತೆ ತಡೆ ನಡೆಸಿದರು.

ಸೇನಾ ಪಡೆಗಳಿಗೆ ಯುವ ಜನರನ್ನು ನಾಲ್ಕು ವರ್ಷಗಳ ಅವಧಿಗೆ ಗುತ್ತಿಗೆ ನೇಮಕ ಮಾಡಿಕೊಳ್ಳುವ ‘ಅಗ್ನಿಪಥ ಯೋಜನೆ’ಯನ್ನು ಸರ್ಕಾರವು ಮಂಗಳವಾರ ಪ್ರಕಟಿಸಿತ್ತು.


4 ವರ್ಷ ಸೇವೆ ಬಳಿಕ ಅಪಾರ ಅವಕಾಶ: ಸರ್ಕಾರ ಸ್ಪಷ್ಟನೆ

ಪ್ರತಿಭಟನೆಗಳು ತೀವ್ರಗೊಂಡ ಬೆನ್ನಿಗೇ, ಕೇಂದ್ರ ಸರ್ಕಾರವು ಅಗ್ನಿಪಥ ಯೋಜನೆಯ ಬಗ್ಗೆ ಸ್ಪಷ್ಟೀಕರಣ ನೀಡಿದೆ. ಈ ಯೋಜನೆಯು ಸಶಸ್ತ್ರ ಪಡೆಗಳಲ್ಲಿ ಹೊಸ ಸಾಮರ್ಥ್ಯಗಳನ್ನು ತುಂಬಲಿದೆ ಮತ್ತು ಅಗ್ನಿಪಥ ಯೋಜನೆ ಮೂಲಕ ಸೇನೆಗೆ ಸೇರಿದ ಯುವಕರಿಗೆ ಖಾಸಗಿ ಕ್ಷೇತ್ರದಲ್ಲಿ ಅವಕಾಶಗಳನ್ನು ತೆರೆದುಕೊಡಲಿದೆ. ಅದಲ್ಲದೆ, ನಾಲ್ಕು ವರ್ಷಗಳ ಬಳಿಕ ದೊರೆಯುವ ನಿಧಿಯಿಂದಾಗಿ ಅವರು ಉದ್ಯಮಿಗಳಾಗಿ ಬೆಳೆಯುವ ಸಾಧ್ಯತೆಯೂ ಇದೆ ಎಂದು ಸರ್ಕಾರ ಹೇಳಿದೆ.

ಯೋಜನೆಗೆ ಸಂಬಂಧಿಸಿ ‘ಸತ್ಯ ಮತ್ತು ಮಿಥ್ಯೆ’ ಏನು ಎಂಬುದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲಾಗಿದೆ. ‘ಅಗ್ನಿಪಥ ಯೋಜನೆ’ ಜಾರಿಗೆ ಬಂದ ಬಳಿಕ ಸೇನೆಯ ನೇಮಕಾತಿಯು ಈಗ ಇರುವುದಕ್ಕಿಂತ ಮೂರು ಪಟ್ಟು ಹೆಚ್ಚಾಗಲಿದೆ ಎಂದೂ ಹೇಳಲಾಗಿದೆ.

ನಾಲ್ಕು ವರ್ಷಗಳ ಕರ್ತವ್ಯದ ಬಳಿಕ ಸಮಾಜಕ್ಕೆ ಮರಳುವ ‘ಅಗ್ನಿವೀರರು’ ಸಮಾಜಕ್ಕೆ ದೊಡ್ಡ ಅಪಾಯವಾಗಿ ಪರಿವರ್ತನೆ ಆಗಬಹುದು ಎಂಬ ಟೀಕೆಯನ್ನು ಅಧಿಕಾರಿಗಳು ಅಲ್ಲಗಳೆದಿದ್ದಾರೆ. ‘ಈ ಆರೋಪವು ಭಾರತದ ಸಶಸ್ತ್ರ ಪಡೆಗಳ ನೈತಿಕತೆ ಮತ್ತು ಮೌಲ್ಯಗಳಿಗೆ ಮಾಡಿದ ಅಪಮಾನ. ನಾಲ್ಕು ವರ್ಷ ಸೇನೆಯ ಸಮವಸ್ತ್ರ ತೊಟ್ಟ ಯುವಕರು ಜೀವನವಿಡೀ ದೇಶಕ್ಕೆ ಬದ್ಧರಾಗಿ ಇರುತ್ತಾರೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ವಯೋಮಿತಿ23 ವರ್ಷಕ್ಕೆ ಹೆಚ್ಚಳ
ನವದೆಹಲಿ: ‘ಅಗ್ನಿಪಥ’ ಯೋಜನೆಯಡಿ ನೇಮಕಾತಿಗೆ ಗರಿಷ್ಠ ವಯೋಮಿತಿಯನ್ನು 2022ರ ಸಾಲಿಗೆ ಅನ್ವಯಿಸಿ ಕೇಂದ್ರ ಸರ್ಕಾರವು ಗುರುವಾರ 23 ವರ್ಷಕ್ಕೆ ಹೆಚ್ಚಿಸಿದೆ.ಮೊದಲು ಪ್ರಕಟಿಸಿದ ಪ್ರಕಾರ ಗರಿಷ್ಠ ವಯೋಮಿತಿ 21 ವರ್ಷವಾಗಿತ್ತು.


***

'ಪ್ರಧಾನಿ ಮೋದಿ ಅವರು ನಿರುದ್ಯೋಗಿ ಯುವಜನರ ಮಾತು ಕೇಳಬೇಕು. ಅಗ್ನಿಪಥದಲ್ಲಿ ನಡೆಸಿ ಅವರ ತಾಳ್ಮೆಯನ್ನು ಅಗ್ನಿಪರೀಕ್ಷೆಗೆ ಒಳಪಡಿಸಬಾರದು'

-ರಾಹುಲ್‌ ಗಾಂಧಿ, ಕಾಂಗ್ರೆಸ್ ಸಂಸದ

***

'15 ವರ್ಷ ಕರ್ತವ್ಯದಲ್ಲಿದ್ದು ನಿವೃತ್ತರಾದವರಿಗೆ ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ದೊರಕುತ್ತಿಲ್ಲ. ಹೀಗಿರುವಾಗ 4 ವರ್ಷ ಕರ್ತವ್ಯ ಮಾಡಿದವರಿಗೆ ಸಿಗಬಹುದೇ?'

-ವರುಣ್‌ ಗಾಂಧಿ, ಬಿಜೆಪಿ ಸಂಸದ

***
'ಅಗ್ನಿಪಥ ಯೋಜನೆಯಿಂದ ಲಕ್ಷಾಂತರ ಯುವಜನರಿಗೆ ಪ್ರಯೋಜನ ಆಗುವುದಷ್ಟೇ ಅಲ್ಲ, ಅವರಲ್ಲಿನ ರಾಷ್ಟ್ರೀಯತೆಯ ಭಾವನೆಗಳು ಬಲಗೊಳ್ಳಲಿವೆ'

-ಅಶ್ವಿನಿ ಚೌಬೆ,ಕೇಂದ್ರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT