ಸೋಮವಾರ, ಆಗಸ್ಟ್ 15, 2022
23 °C

ರೈಲು ತಡೆ ಚಳವಳಿಗೆ ರೈತರ ನಿರ್ಧಾರ: ಶೀಘ್ರ ದಿನಾಂಕ ನಿಗದಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೃಷಿ ಕಾಯ್ದೆ ರದ್ದುಪಡಿಸಲು ಆಗ್ರಹಿಸಿ ಕಳೆದ ಎರಡು ವಾರಗಳಿಂದ ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ತಮ್ಮ ಹೋರಾಟದ ಮುಂದಿನ ಹಂತವನ್ನು ಪ್ರಕಟಿಸಿದ್ದಾರೆ. ಸರ್ಕಾರವು ಬೇಡಿಕೆಗಳನ್ನು ಈಡೇರಿಸದೇ ಇದ್ದಲ್ಲಿ, ದೇಶದಾದ್ಯಂತ ರೈಲು ಸಂಚಾರಕ್ಕೆ ಅಡ್ಡಿ ಮಾಡುವುದಾಗಿ ಘೋಷಿಸಿದ್ದಾರೆ.

ಗುರುವಾರ ಸಭೆ ನಡೆಸಿದ ರೈತ ಸಂಘಟನೆಗಳು, ದೇಶಾದ್ಯಂತ ರೈಲು ಹಳಿಗಳನ್ನು ಬಂದ್ ಮಾಡುವ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ತಿಳಿಸಿದವು.

‘ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಲಿದ್ದೇವೆ. ಅದರ ಅಂಗವಾಗಿ ರೈಲುಗಳು ರಾಜಧಾನಿ ಪ್ರವೇಶಿಸುವುದಕ್ಕೆ ತಡೆ ಒಡ್ಡಲಾಗುವುದು. ಈ ಪ್ರತಿಭಟನೆ ಹರಿಯಾಣ ಹಾಗೂ ಪಂಜಾಬ್‌ಗೆ ಮಾತ್ರ ಸೀಮಿತವಾಗಿರುವುದಿಲ್ಲ. ದೇಶದಾದ್ಯಂತ ರೈ‌ಲು ತಡೆ ಚಳುವಳಿ ಹಮ್ಮಿಕೊಳ್ಳುತ್ತೇವೆ’ ಎಂದು ರೈತ ನಾಯಕ ಬೂಟಾ ಸಿಂಗ್ ಹೇಳಿದ್ದಾರೆ.

‘ವ್ಯಾಪಾರಿಗಳಿಗಾಗಿ ಕೃಷಿ ಕಾಯ್ದೆಗಳನ್ನು ತರಲಾಗಿದೆ ಎಂದು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಕೃಷಿಯು ರಾಜ್ಯಪಟ್ಟಿಯಲ್ಲಿ ಬರುತ್ತದೆ. ಹೀಗಿರುವಾಗ ಕೇಂದ್ರ ಸರ್ಕಾರಕ್ಕೆ ಕಾಯ್ದೆಗಳನ್ನು ರೂಪಿಸುವ ಅಧಿಕಾರ ಇಲ್ಲ’ ಎಂದು ರೈತ ಮುಖಂಡ ಬಲ್ಬೀರ್ ಸಿಂಗ್ ರಾಜೇವಾಲ ತಿಳಿಸಿದ್ದಾರೆ.

ಆನ್‌ಲೈನ್ ಉಪನ್ಯಾಸಕ್ಕೆ ಅಡ್ಡಿ

ರೈತರ ಪ್ರತಿಭಟನೆ ಬಗ್ಗೆ ಕಿಸಾನ್ ಸಭಾ ಮುಖಂಡ ವಿಜೂ ಕೃಷ್ಣನ್ ಅವರು ಆನ್‌ಲೈನ್‌ ಮೂಲಕ ಉಪನ್ಯಾಸ ನೀಡುತ್ತಿದ್ದಾಗ ಕೆಲವು ವ್ಯಕ್ತಿಗಳು ಅದಕ್ಕೆ ಅಡ್ಡಿಪಡಿಸಿದ ಘಟನೆ ನಡೆದಿದೆ.

ಬುಧವಾರ ರಾತ್ರಿ 7.30ಕ್ಕೆ ವೆಬಿನಾರ್ ನಿಗದಿಯಾಗಿತ್ತು. ಕಾರ್ಯಕ್ರಮ ಶುರುವಾದ ಕೆಲ ನಿಮಿಷಗಳಲ್ಲಿ ಐದಾರು ವ್ಯಕ್ತಿಗಳು ಕಿರುಚಾಡಲು ಶುರುಮಾಡಿದರು. ಉಪನ್ಯಾಸಕರು ಏನು ಮಾತನಾಡುತ್ತಿದ್ದಾರೆ ಎಂಬುದು ಇತರ ವೀಕ್ಷಕರಿಗೆ ತಿಳಿಯದಾಯಿತು. ಹೀಗಾಗಿ ವೆಬಿನಾರ್‌ನಲ್ಲಿ ಆಯ್ದ ಕೆಲವರು ಮಾತ್ರ ಪಾಲ್ಗೊಳ್ಳಲು ವ್ಯವಸ್ಥೆ ಮಾಡಲಾಯಿತು. ‘ಅಭಿಪ್ರಾಯಗಳನ್ನು ಸಹಿಸದ ಸಂಘ ಪರಿವಾರದವರು ಈ ಯತ್ನ ನಡೆಸಿದ್ದಾರೆ’ ಎಂದು ವಿಜೂ ಆರೋಪಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು