ಬುಧವಾರ, ಮೇ 18, 2022
23 °C

ಒಳ್ಳೆ ದಿನಗಳ ಸನಿಹದಲ್ಲಿ ಪಂಜಾಬ್‌- ಎಎಪಿ ಸಿಎಂ ಅಭ್ಯರ್ಥಿ ಮಾನ್ ಜೊತೆ ಮಾತುಕತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟ, ರಾಜಕಾರಣಿ ಭಗವಂತ ಮಾನ್ (48) ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಎಎಪಿ (ಆಮ್ ಆದ್ಮಿ ಪಕ್ಷ) ಘೋಷಿಸಿರುವುದು, ಪಂಜಾಬ್‌ನಲ್ಲಿ ಗೆಲುವಿನ ವಿಶ್ವಾಸವನ್ನು ಹೆಚ್ಚಿಸಿದೆ ಪಕ್ಷ  ಹೇಳಿಕೊಂಡಿದೆ. ಚಿಕ್ಕ ವಯಸ್ಸು, ಜನಪ್ರಿಯತೆ ಹಾಗೂ ಗಮನ ಸೆಳೆಯುವ ಮಾತುಗಾರಿಕೆಯಿಂದ ಅವರು ಪ್ರಶಂಸೆಗೆ ಒಳಗಾಗಿದ್ದಾರೆ. ಅಭಿವೃದ್ಧಿಯ ಕಾರ್ಯಸೂಚಿ ಹೊರತಾಗಿ, ಮಾನ್ ಅವರನ್ನು ಪಂಜಾಬ್‌ ಗೆಲುವಿನ ಅಸ್ತ್ರವಾಗಿ ಎಎಪಿ ಪ್ರಯೋಗಿಸುತ್ತಿದೆ. ‘ಪ್ರಜಾವಾಣಿ’ಯ ಗೌತಮ್ ಧೀರ್ ಜೊತೆ ಮಾತನಾಡಿರುವ ಮಾನ್, ಪಂಜಾಬ್ ಬದಲಾವಣೆಗಾಗಿ ಹಾತೊರೆಯುತ್ತಿದ್ದು, ರಾಜ್ಯದಲ್ಲಿ ಎಎಪಿ ಗೆಲುವು ಅನಿವಾರ್ಯ ಎಂದು ಹೇಳಿದ್ದಾರೆ.

*ಪಂಜಾಬ್‌ನ ಮತದಾರರು ನಿಮ್ಮನ್ನು ಅಥವಾ ಎಎಪಿಯನ್ನು ಈ ಹೊತ್ತಿನಲ್ಲಿ ಪರ್ಯಾಯ ಎಂದು ಏಕೆ ಪರಿಗಣಿಸಬೇಕು?

ದಶಕಗಳ ಕಾಲ ಪಂಜಾಬ್‌ನಲ್ಲಿ ಕಾಂಗ್ರೆಸ್ ಹಾಗೂ ಅಕಾಲಿದಳ–ಬಿಜೆಪಿ ಮೈತ್ರಿಕೂಟ ಆಳ್ವಿಕೆ ನಡೆಸಿವೆ. ಜನರ ಜೀವನದಲ್ಲಿ ಬದಲಾವಣೆ ತರುವಂತಹ ಯಾವುದೇ ಕೆಲಸಗಳನ್ನು ಈ ಎರಡೂ ಪಕ್ಷಗಳು ಮಾಡಿಲ್ಲ. ಪಂಜಾಬ್‌ ಈಗ ಬಿಕ್ಕಟ್ಟು ಎದುರಿಸುತ್ತಿದೆ. ಪಂಜಾಬ್‌ನ ಜನರು ಬದಲಾವಣೆಗೆ ಮನಸ್ಸು ಮಾಡಿದ್ದು, ಪಕ್ಷ ಹಾಗೂ ನಾಯಕತ್ವದ ಮೇಲೆ ವಿಶ್ವಾಸ ಇರಿಸಿದ್ದಾರೆ. ಜನಪರ ನೀತಿಗಳು ಹಾಗೂ ಭ್ರಷ್ಟಾಚಾರ ರಹಿತ ಆಡಳಿತದ ಮೂಲಕ ಪಂಜಾಬ್‌ಗೆ ಒಳ್ಳೆಯ ದಿನಗಳನ್ನು ಕೊಡುವ ನಮ್ಮ ಭರವಸೆಗೆ ಬದ್ಧರಾಗಿದ್ದೇವೆ. 

*ಚುನಾವಣೆಯಲ್ಲಿ ಎಎಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದು, ಪಂಜಾಬ್‌ನಲ್ಲಿ ಅತಂತ್ರ ವಿಧಾನಸಭೆ ಏರ್ಪಡಲಿದೆ ಎಂದು ಅಂದಾಜಿಸಲಾಗಿದೆ. ಒಂದು ವೇಳೆ ಬಹುಮತ ದೊರೆಯದಿದ್ದಲ್ಲಿ, ಚುನಾವಣೋತ್ತರ ಮೈತ್ರಿಗೆ ಎಎಪಿ ಮುಕ್ತವಾಗಿದೆಯೇ?

ಪಂಜಾಬ್‌ನಲ್ಲಿ ಎಎಪಿ ಹಾಗೂ ಉಳಿದ ಎಲ್ಲ ಪಕ್ಷಗಳ ನಡುವೆ ಹಣಾಹಣಿಯಿದೆ. ರಾಜ್ಯದಲ್ಲಿ ಪೂರ್ಣ ಬಹುಮತ ದೊರೆಯುವುದಾಗಿ ನಮಗೆ ವಿಶ್ವಾಸವಿದೆ. ಜನರು ಈಗಾಗಲೇ ಬೇರೆ ಪಕ್ಷಗಳ ಆಡಳಿತವನ್ನು ನೋಡಿದ್ದು, ಬದಲಾವಣೆಗಾಗಿ ಮತ ಚಲಾಯಿಸಲಿದ್ದಾರೆ. 117ರ ಪೈಕಿ 80ಕ್ಕಿಂತಲೂ ಹೆಚ್ಚು ಕ್ಷೇತ್ರಗಳಲ್ಲಿ ನಮಗೆ ಗೆಲುವು ಸಿಗಲಿದೆ.

*ನಿಮ್ಮ ವಿರೋಧಿಗಳು ನಿಮ್ಮನ್ನು ಮದ್ಯವ್ಯಸನಿ ಎಂದು ಆರೋಪಿಸುತ್ತಾರೆ. ಇದಕ್ಕೆ ಹೇಗೆ ಪ್ರತಿಕ್ರಿಯಿಸುವಿರಿ?

ಇದು ಸುಳ್ಳು ಪ್ರಚಾರ. ನಮ್ಮ ಘೋಷಣೆಗಳು ಮತ್ತು ಎಎಪಿಯ ನೆಲೆ ಗಟ್ಟಿಯಾಗುತ್ತಿರುವುದನ್ನು ಅರಿತಿರುವ ರಾಜಕೀಯ ಪಕ್ಷಗಳು ಗಲಿಬಿಲಿಗೊಂಡಿವೆ. ರಾಜ್ಯವನ್ನು ಆಳಿದ್ದರೂ ನೀಡಿದ್ದ ಭರವಸೆಗಳನ್ನು ಈಡೇರಿಸಲು ಪಕ್ಷಗಳಿಂದ ಸಾಧ್ಯವಾಗಿಲ್ಲ. ಪಕ್ಷಗಳ ಬಳಿ ಸ್ಪಷ್ಟ ಕಾರ್ಯಸೂಚಿ ಇಲ್ಲ. ಸಂಸದನಾಗಿ ನಾನು ತಳಮಟ್ಟದಿಂದ ಮಾಡಿದ ಕೆಲಸಗಳನ್ನು ಜನರು ಗಮನಿಸಿದ್ದಾರೆ. ವಿರೋಧಿಗಳ ಆರೋಪಗಳು ನಿಜವಾಗಿದ್ದರೆ, 2014 ಮತ್ತು 2019ರ ಲೋಕಸಭಾ ಚುನಾವಣೆಗಳಲ್ಲಿ ಎರಡು ಬಾರಿ ಆಯ್ಕೆಯಾಗಲು ನನಗೆ ಸಾಧ್ಯವಾಗುತ್ತಿರಲಿಲ್ಲ.

*ಎಲ್ಲ ರಾಜಕೀಯ ಪಕ್ಷಗಳೂ ರಾಜ್ಯದ ಮಾದಕವಸ್ತು ಜಾಲವನ್ನು ಬಗ್ಗುಬಡಿಯುವ ಪಣ ತೊಟ್ಟಿವೆ. ನೀವು ಎಲ್ಲರಿಗಿಂತ ಹೇಗೆ ಭಿನ್ನವಾಗಿ ಕ್ರಮ ತೆಗೆದುಕೊಳ್ಳುವಿರಿ? 

ಪ್ರೋತ್ಸಾಹವಿಲ್ಲದೆ ಯಾವುದೇ ಮಾದಕವಸ್ತು ವ್ಯಾಪಾರ ನಡೆಯುವುದಿಲ್ಲ. ಮಾದಕ ವ್ಯಸನ ಗಂಭೀರ ಆತಂಕವಾಗಿದೆ. ಸಾಕಷ್ಟು ಕಾನೂನುಗಳಿದ್ದರೂ, ಇದನ್ನು ಹತೋಟಿಗೆ ತರಲು ರಾಜಕೀಯ ಇಚ್ಛಾಶಕ್ತಿಯ ಅಗತ್ಯವಿದೆ. ಪಂಜಾಬ್ ಅನ್ನು ಯಾವುದೇ ಕಳಂಕವಿಲ್ಲದ ಡ್ರಗ್ಸ್ ಮುಕ್ತ ರಾಜ್ಯವನ್ನಾಗಿ ಮಾಡಲು ಎಎಪಿ ಬದ್ಧವಾಗಿದೆ.

*ಸಾಲದ ಬಲೆಯಿಂದ ಪಂಜಾಬ್ ಅನ್ನು ಮೇಲೆತ್ತಲು ಉಚಿತ ಕೊಡುಗೆಗಳ ಘೋಷಣೆಗಳು ಅಡ್ಡಿಯಾಗುವುದಿಲ್ಲವೇ? 

ಎಎಪಿ ನೀಡಿದ ಎಲ್ಲ ಭರವಸೆಗಳು ಸಂಪನ್ಮೂಲ ಕ್ರೋಡೀಕರಣ ವಿಚಾರದಲ್ಲಿ ಸಮರ್ಥನೀಯ ಯೋಜನೆಗಳು. ಇವುಗಳನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ಈಗಾಗಲೇ ಕೆಲಸಗಳನ್ನು ಶುರು ಮಾಡಿದ್ದೇವೆ. ದೆಹಲಿ ಸರ್ಕಾರದ ಮುಂಬರುವ ಬಜೆಟ್‌ಗೆ ನಾವು ಸಾರ್ವಜನಿಕರ ಅಭಿಪ್ರಾಯ ಪಡೆಯುತ್ತಿದ್ದೇವೆ. ಅಂತೆಯೇ, ನಮ್ಮ ಯೋಜನೆಗಳು ಜನರ ಒಪ್ಪಿಗೆಯೊಂದಿಗೆ ಚಾಲನೆ ಪಡೆಯುತ್ತವೆ.  ಕಡಿಮೆ ಭರವಸೆ ನೀಡುವುದು ಮತ್ತು ನೀಡಿದ ಭರವಸೆಗಳನ್ನೆಲ್ಲಾ ಈಡೇರಿಸುವುದು ಸರಿಯಾದ ವಿಧಾನ. ಮರಳು ಮಾಫಿಯಾ ಮತ್ತು ಭ್ರಷ್ಟಾಚಾರವನ್ನು ಕೊನೆಗಾಣಿಸಲು ನಮಗೆ ಸಾಧ್ಯವಾಗುವುದಾದರೆ, ಅದರ ಲಾಭವನ್ನು ಸಾರ್ವಜನಿಕರಿಗೆ ಏಕೆ ವರ್ಗಾಯಿಸಬಾರದು? ಮಹಿಳೆಯರಿಗೆ ತಿಂಗಳಿಗೆ ನೀಡುವ ₹1,000 ಭತ್ಯೆಯು ಉಚಿತವಲ್ಲ, ಅದರಲ್ಲಿ ಅವರ ಸಾಮಾಜಿಕ ಭದ್ರತೆಯ ವಿಚಾರ ಅಡಗಿದೆ.

*ಪಂಜಾಬ್‌ ಬಗ್ಗೆ ನಿಮ್ಮ ದೂರದೃಷ್ಟಿ ಏನು? ನೀವು ಬಿಂಬಿಸುತ್ತಿರುವ ದೆಹಲಿ ಆಡಳಿತ ಮಾದರಿಯಿಂದ ಪಂಜಾಬ್‌ನಲ್ಲಿ ಬದಲಾವಣೆಗಳನ್ನು ನಿರೀಕ್ಷಿಸಬಹುದೇ?

ನಾವು ದುಡಿಯುವ ರಾಜನೀತಿಯಲ್ಲಿ ನಂಬಿಕೆ ಇರಿಸಿರುವವರು. ಪಕ್ಷ ಕೆಲಸ ಮಾಡಿದ್ದರೆ ಮಾತ್ರ ಮತ ನೀಡಿ ಎಂದು ನಾವು ದೆಹಲಿ ಚುನಾವಣೆಯ ವೇಳೆ ಜನರಿಗೆ ಹೇಳಿದ್ದೆವು. ರಾಜ್ಯದಲ್ಲಿ ನಮ್ಮ ಅಭಿವೃದ್ಧಿ ಮಾದರಿಯು ಜನಪರವಾಗಿ ಮತ್ತು ಪಂಜಾಬ್ ಪರವಾಗಿ ಇರಲಿದೆ. ಪಂಜಾಬ್‌ಗೆ ಪ್ರತ್ಯೇಕವಾದ ವಿಷಯಗಳಿವೆ. ದೆಹಲಿ ಆಡಳಿತದ ಅವಧಿಯಲ್ಲಿ ಆರೋಗ್ಯ ಮೂಲಸೌಕರ್ಯ ಮತ್ತು ಶಿಕ್ಷಣದಲ್ಲಿ ಆಗಿರುವ ಒಳ್ಳೆಯ ಬೆಳವಣಿಗೆಗಳನ್ನು ಇಲ್ಲಿ ಪುನರಾವರ್ತಿಸಬಹುದು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು