ಭಾನುವಾರ, ಮೇ 29, 2022
21 °C

ಪಂಜಾಬ್ ಮುಖ್ಯಮಂತ್ರಿ ಅಭ್ಯರ್ಥಿ ಶೀಘ್ರವೇ ಘೋಷಣೆ- ರಾಹುಲ್ ಗಾಂಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಂಡೀಗಡ/ಜಲಂಧರ್: ‘ಪಂಜಾಬ್ ವಿದಾನಸಭಾ ಚುನಾವಣೆಗೆ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಶೀಘ್ರವೇ ಘೋಷಿಸುತ್ತೇವೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರು ಹೇಳಿದ್ದಾರೆ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುವ ನಿಲುವಿನಿಂದ, ಪಕ್ಷವು ಪಂಜಾಬ್‌ನಲ್ಲಿ ದೂರ ಸರಿಯುವ ಸೂಚನೆಯನ್ನು ಅವರು ನೀಡಿದ್ದಾರೆ.

ಗುರುವಾರ ಇಲ್ಲಿ ಪ್ರಚಾರ ಸಭೆ, ಪಕ್ಷದ ನಾಯಕರ ಜತೆ ಮಾತುಕತೆ ನಡೆಸಿದ ವೇಳೆ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಬೇಕು ಎಂದು ಹಲವರು ಹೇಳಿದರು. ಈ ಒತ್ತಾಯವನ್ನು ಕಾಂಗ್ರೆಸ್ ಮಾನ್ಯ ಮಾಡುವ ಸಾಧ್ಯತೆ ಇದೆ. ಜಲಂಧರ್‌ಗೆ ರಸ್ತೆ ಮಾರ್ಗದಲ್ಲಿ ಸಾಗುವ ವೇಳೆ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರು ರಾಹುಲ್ ಜತೆಗಿದ್ದರು. ಇಬ್ಬರೂ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆಯ ಬಗ್ಗೆ ರಾಹುಲ್ ಅವರ ಜತೆ ಮಾತನಾಡಿದ್ದಾರೆ ಎಂದು ಮೂಲಗಳು ಹೇಳಿವೆ.

ಜಲಂಧರ್‌ನಲ್ಲಿ ನಡೆದ ಸಭೆಯ ವೇದಿಕೆಯಲ್ಲಿ, ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಬೇಕು ಎಂದು ಚನ್ನಿ ಮತ್ತು ಸಿಧು ಇಬ್ಬರೂ ಬಹಿ ರಂಗವಾಗಿ ಒತ್ತಾಯಿಸಿದರು. ನಂತರ ಮಾತನಾಡಿದ ರಾಹುಲ್ ಅವರು, ‘ಕಾಂಗ್ರೆಸ್‌ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಬೇಕು ಎಂದು ಪಂಜಾಬ್‌ನ ಜನರು ಒತ್ತಾಯಿಸುತ್ತಿದ್ದಾರೆ. ನಮ್ಮ ಪಕ್ಷದ ನಾಯಕರೂ ಹೀಗೇ ಹೇಳುತ್ತಿದ್ದಾರೆ. ನೀವು ಬಯಸುವುದಾದರೆ ನಾವು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿ ಸುತ್ತೇವೆ. ಅದು ಶೀಘ್ರವೇ ಆಗಲಿದೆ’ ಎಂದು ರಾಹುಲ್ ಹೇಳಿದ್ದಾರೆ.

ಆದರೆ ಮುಖ್ಯಮಂತ್ರಿ ಅಭ್ಯರ್ಥಿ ಯನ್ನಾಗಿ ಯಾರನ್ನು ಆಯ್ಕೆ ಮಾಡಲಾ ಗುತ್ತದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ನವಜೋತ್ ಸಿಂಗ್ ಸಿಧು ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದರೆ, ಚನ್ನಿ ಅವರ ಬೆಂಬಲಿಗರು ಪಕ್ಷದ ನಾಯಕತ್ವದ ಮೇಲೆ ಮುನಿಸಿಕೊಳ್ಳುವ ಸಾಧ್ಯತೆ ಇದೆ. ಚನ್ನಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದರೆ, ಸಿಧು ಮತ್ತು ಅವರ ಬೆಂಬಲಿಗರು ಬಂಡಾಯ ಏಳುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ಹೇಳಿವೆ.

ಯಾರನ್ನೇ ಅಭ್ಯರ್ಥಿಯನ್ನಾಗಿ ಘೋಷಿಸಿದರೂ ಅದು ಪಕ್ಷದೊಳಗಿನ ಬಣ ರಾಜಕಾರಣವನ್ನು ತೀವ್ರವಾಗಿಸುವ ಅಪಾಯಗಳಿವೆ. ಅಭ್ಯರ್ಥಿಯನ್ನು ಘೋಷಿಸದೇ ಇದ್ದರೆ, ಚುನಾವಣೆ ಎದುರಿಸುವುದು ಕಷ್ಟವಾಗುತ್ತದೆ. ವಿರೋಧ ಪಕ್ಷಗಳು ತಮ್ಮ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿರುವ ಕಾರಣ ಕಾಂಗ್ರೆಸ್‌ ಸಹ ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸಬೇಕಾದ ಒತ್ತಡಕ್ಕೆ ಸಿಲುಕಿದೆ ಎಂದು ಪಕ್ಷದ ಮೂಲಗಳು ಹೇಳಿವೆ.

ಪಕ್ಷದೊಳಗೆ ಭಿನ್ನಮತ: ಪಂಜಾಜ್‌ನ ಐವರು ಕಾಂಗ್ರೆಸ್‌ ಸಂಸದರು ರಾಹುಲ್ ಅವರ ಭೇಟಿಯಲ್ಲಿ ಭಾಗಿಯಾಗಿಲ್ಲ. ರಾಹುಲ್ ಅವರ ಗುರುವಾರದ ಎಲ್ಲಾ ಕಾರ್ಯಕ್ರಮಗಳಿಂದ ಅವರು ಅಂತರ ಕಾಯ್ದುಕೊಂಡಿದ್ದಾರೆ. ಪಕ್ಷದ ನಾಯಕತ್ವದ ವಿರುದ್ಧ ಮಾತನಾಡಿದ್ದ ಈ ಸಂಸದರಿಗೆ ರಾಜ್ಯ ನಾಯಕರು ಮತ್ತು ಉಸ್ತುವಾರಿ ಆಹ್ವಾನವನ್ನೂ ನೀಡಿರಲಿಲ್ಲ ಎಂದು ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು