ಸೋಮವಾರ, ಸೆಪ್ಟೆಂಬರ್ 20, 2021
20 °C

ವಲಸೆ ಕಾರ್ಮಿಕರ ಸಾವಿನ ಮಾಹಿತಿ ಇಲ್ಲವೆಂದ ಸರ್ಕಾರ; ರಾಹುಲ್‌ ಗಾಂಧಿ ಆಕ್ರೋಶ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ

ನವದೆಹಲಿ: 'ಕೋವಿಡ್‌ ಲಾಕ್‌ಡೌನ್‌ ಅವಧಿಯಲ್ಲಿ ಮನೆಗೆ ಮರಳುವಾಗ ಎಷ್ಟು ಮಂದಿ ವಲಸೆ ಕಾರ್ಮಿಕರು ಸಾವಿಗೀಡಾದರು ಎಂಬುದು ತಿಳಿದಿಲ್ಲ' ಎಂದು ಸಂಸತ್ತಿನಲ್ಲಿ ಹೇಳಿದ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಲಾಕ್‌ಡೌನ್‌ನಲ್ಲಿ ಎಷ್ಟು ಮಂದಿ ವಲಸೆ ಕಾರ್ಮಿಕರು ಸಾವಿಗೀಡಾದರು ಅಥವಾ ಎಷ್ಟು ಮಂದಿ ಕೆಲಸ ಕಳೆದು ಕೊಂಡರು ಎಂಬುದು ಮೋದಿ ಸರ್ಕಾರಕ್ಕೆ ತಿಳಿದಿಲ್ಲ' ಎಂದು ರಾಹುಲ್‌ ಟ್ವೀಟಿಸಿದ್ದಾರೆ.

18 ದಿನಗಳ ಮುಂಗಾರು ಅಧಿವೇಶನ ಸೋಮವಾರದಿಂದ ಆರಂಭವಾಗಿದ್ದು, ಸೋನಿಯಾ ಗಾಂಧಿ ಅವರ ಆರೋಗ್ಯ ತಪಾಸಣೆಗಾಗಿ ರಾಹುಲ್‌ ಗಾಂಧಿ ವಿದೇಶದಲ್ಲಿದ್ದಾರೆ.  

ಮಾರ್ಚ್‌ನಲ್ಲಿ ಶುರುವಾದ ಲಾಕ್‌ಡೌನ್‌ ಅವಧಿಯಲ್ಲಿ ಮೃತಪಟ್ಟ ವಲಸೆ ಕಾರ್ಮಿಕರ ಮಾಹಿತಿಯು ಕೇಂದ್ರದ ಬಳಿ ಇಲ್ಲ ಎಂದು ಕೇಂದ್ರದ ಕಾರ್ಮಿಕ ಸಚಿವ ಸಂತೋಷ್ ಕುಮಾರ್ ಗಂಗ್ವಾರ್‌ ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ. ಅದರ ಸಂಬಂಧ ರಾಹುಲ್‌ ಮಂಗಳವಾರ ಟ್ವೀಟ್‌ ಮಾಡಿದ್ದಾರೆ.

'ನೀವು ಲೆಕ್ಕ ಮಾಡಿಲ್ಲ, ಅಂದರೆ ಯಾರೂ ಸತ್ತಿಲ್ಲವೇ? ದುರದೃಷ್ಟವೆಂದರೆ ಇದರಿಂದ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ವಲಸೆ ಕಾರ್ಮಿಕರು ಮೃತಪಟ್ಟಿದ್ದನ್ನು ಇಡೀ ಜಗತ್ತು ನೋಡಿದೆ, ಆದರೆ ಮೋದಿ ಸರ್ಕಾರಕ್ಕೆ ಯಾವುದರ ಅರಿವೂ ಇಲ್ಲ' ಎಂದು ಟೀಕಿಸಿದ್ದಾರೆ.

ಕೋವಿಡ್‌ ಸಂದರ್ಭದಲ್ಲಿ ವಲಸೆ ಕಾರ್ಮಿಕರು ಕೆಲಸ ಕಳೆದುಕೊಂಡಿರುವ ಬಗ್ಗೆ ಸರ್ಕಾರದಿಂದ ಪರಿಶೀಲನೆ ನಡೆದಿಲ್ಲ ಎಂದು ಮತ್ತೊಂದು ಪ್ರಶ್ನೆಗೆ ಸಚಿವ ಗಂಗ್ವಾರ್‌ ಉತ್ತರಿಸಿದ್ದಾರೆ. ಸಾವಿಗೀಡಾಗಿರುವ ವಲಸೆ ಕಾರ್ಮಿಕ ಲೆಕ್ಕ ಇಲ್ಲದ ಕಾರಣ, ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡುವ ಅಥವಾ ಆರ್ಥಿಕ ಸಹಕಾರ ನೀಡುವ ಪ್ರಶ್ನೆಯೇ ಬರುವುದಿಲ್ಲ ಎಂದೂ ತಿಳಿಸಿದ್ದಾರೆ.

'63,07,000ಕ್ಕೂ ಹೆಚ್ಚು ವಲಸೆ ಕಾರ್ಮಿಕರು ಕೋವಿಡ್‌ ಸಾಂಕ್ರಾಮಿಕದ ಅವಧಿಯಲ್ಲಿ ದೇಶದ ವಿವಿಧ ಭಾಗಗಳಿಗೆ ಸಾಗಿದ್ದಾರೆ. 4,611 ಶ್ರಮಿಕ್‌ ವಿಶೇಷ ರೈಲುಗಳು ವಲಸೆಗರನ್ನು ಕರೆದೊಯ್ಯಲು ಕಾರ್ಯಾಚರಿಸಿವೆ' ಎಂದು ಸಚಿವ ಗಂಗ್ವಾರ ಮಾಹಿತಿ ನೀಡಿದ್ದಾರೆ. ಅಂದಾಜಿನ ಪ್ರಕಾರ, ದೇಶದಲ್ಲಿ ಕೋವಿಡ್‌ನಿಂದಾಗಿ 12.2 ಕೋಟಿ ಜನರು ಕೆಲಸ ಕಳೆದುಕೊಂಡಿದ್ದಾರೆ. ಅವರಲ್ಲಿ ಶೇ 75ರಷ್ಟು ಜನರು ಸಣ್ಣ ವರ್ತಕರು ಹಾಗೂ ದಿನಗೂಲಿ ಕಾರ್ಮಿಕರು ಎಂದು ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು