ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರ್ಕಾರದಿಂದ ಜನರ ಧ್ವನಿ ದಮನ’–ಕೇಂದ್ರದ ವಿರುದ್ಧ ರಾಹುಲ್‌ ವಾಗ್ದಾಳಿ

ಬಿಜೆಪಿ, ಕೇಂದ್ರ ಸರ್ಕಾರದ ವಿರುದ್ಧ ರಾಹುಲ್‌ ಗಾಂಧಿ ತೀವ್ರ ವಾಗ್ದಾಳಿ
Last Updated 21 ಮೇ 2022, 19:44 IST
ಅಕ್ಷರ ಗಾತ್ರ

ನವದೆಹಲಿ:ಸರ್ಕಾರದಲ್ಲಿರುವ ಪ್ರಭಾವಿಗಳು, ಸಿಬಿಐ, ಇ.ಡಿ., ಈಗ ಭಾರತವನ್ನು ತಿಂದು ಹಾಕುತ್ತಿವೆ. ಪಾಕಿಸ್ತಾನದಲ್ಲಿ ಆದಂತೆಯೇ ಭಾರತದಲ್ಲಿಯೂ ಆಗುತ್ತಿದೆ ಎಂದುಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಹೇಳಿದ್ದಾರೆ.

ಸರ್ಕಾರದಲ್ಲಿರುವ ಪ‍್ರಭಾವಿ ವ್ಯಕ್ತಿಗಳು ಸಂಸ್ಥೆಗಳ ಮೇಲೆ ದಾಳಿ ನಡೆಸುತ್ತಿದ್ದಾರೆ ಮತ್ತು ಮಾಧ್ಯಮದಂತಹ
ಸಂಸ್ಥೆಗಳನ್ನು ಕೈವಶ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.ಬ್ರಿಡ್ಜ್‌ ಇಂಡಿಯಾ ಸಂಘಟನೆಯು ಲಂಡನ್‌ನಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಐಡಿಯಾಸ್‌ ಫಾರ್‌ ಇಂಡಿಯಾ’ ಸಮಾವೇಶದಲ್ಲಿ ರಾಹುಲ್‌ ಮಾತನಾಡಿದ್ದಾರೆ. ಆಡಳಿತಾರೂಢ ಬಿಜೆಪಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಜನರ ಧ್ವನಿಯನ್ನು ದಮನ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು. ಕಾಂಗ್ರೆಸ್‌ ಪಕ್ಷವು ಜನರ ಬಳಿಗೆ ಹೋಗಲಿದೆ ಮತ್ತು ‘ಭಾರತ ಎಂಬ ಚಿಂತನೆ’ಯನ್ನು ರಕ್ಷಿಸುವುದಕ್ಕಾಗಿ ಹೋರಾಡಲಿದೆ. ಆಡಳಿತಾರೂಢ ಪಕ್ಷದ ವಿರುದ್ಧ ದೊಡ್ಡ ಅಭಿಯಾನ ನಡೆಸುವುದಕ್ಕಾಗಿ ಪ್ರಾದೇಶಿಕ ಪಕ್ಷಗಳನ್ನು ಕಾಂಗ್ರೆಸ್ ಜತೆಗೂಡಿಸಲಿದೆ ಎಂದರು.

‘ಮಾಧ್ಯಮ, ಸಂವಹನ ಮತ್ತು ಸಾಂಸ್ಥಿಕ ವ್ಯವಸ್ಥೆಗಳ ಮೇಲೆ ಬಿಜೆಪಿಗೆ ಶೇಕಡಾ ನೂರರಷ್ಟು ಹಿಡಿತ ಇದೆ. ಬಿಜೆಪಿ ಹೊಂದಿರುವ ಹಣ ಬಲವನ್ನು ಸರಿಗಟ್ಟಲು ನಮಗೆ ಸಾಧ್ಯವಿಲ್ಲ. ಸಂವಹನ ಮತ್ತು ಹಣ ಹೊಂದಿಸುವುದಕ್ಕೆ ಸಂಪೂರ್ಣ ಹೊಸ ವಿಧಾನವನ್ನು ನಾವು ಕಂಡುಕೊಳ್ಳಬೇಕಿದೆ. ಜನರಿಗೆ ಹೆಚ್ಚು ಹತ್ತಿರವಾಗುವಂತಹ ಸಾಂಸ್ಥಿಕ ರಚನೆಯ ಬಗ್ಗೆ ನಾವು ಯೋಚಿಸಬೇಕಿದೆ. ನಿರುದ್ಯೋಗ, ಬೆಲೆ ಏರಿಕೆ ಮತ್ತು ಪ್ರಾದೇಶಿಕ ವಿಚಾರಗಳ ಬಗ್ಗೆ ದೊಡ್ಡ ಮಟ್ಟದ ಚಳವಳಿ ನಡೆಸುವ ಬಗ್ಗೆಯೂ ಚಿಂತಿಸಬೇಕಿದೆ’ ಎಂದು ರಾಹುಲ್‌ ಹೇಳಿದ್ದಾರೆ.

‘ದೇಶದಾದ್ಯಂತ ಸೀಮೆ ಎಣ್ಣೆ ಹರಡಲಾಗಿದೆ. ಈಗ ಬೇಕಿರುವುದು ಒಂದು ಕಿಡಿ ಮಾತ್ರ’ ಎಂದು ರಾಹುಲ್ ಎಚ್ಚರಿಸಿದ್ದಾರೆ.

‘ನೀವು ಇದನ್ನೇ ಹೇಳಬೇಕು ಮತ್ತು ಬೇರೇನನ್ನೂ ಹೇಳಬಾರದು ಎಂದು ಕಾರ್ಯಕರ್ತರಿಗೆ ಹೇಳಲಾಗುತ್ತಿದೆ. ಕಮ್ಯುನಿಸ್ಟ್‌ ಸಿದ್ಧಾಂತವಾಗಲಿ ಆರ್‌ಎಸ್‌ಎಸ್‌ ಸಿದ್ಧಾಂತವಾಗಲಿ ನಿರ್ದಿಷ್ಟ ಸಿದ್ಧಾಂತವನ್ನು ಜನರ ಮೇಲೆ ಹೇರಲಾಗುತ್ತಿದೆ. ನಾವು ಆ ಸ್ವರೂಪವನ್ನು ಹೊಂದಿಲ್ಲ. ನಾವು ಭಾರತದ ಜನರ ಮಾತು ಆಲಿಸಿ, ಅದನ್ನು ಮುನ್ನೆಲೆಗೆ ತಂದು ನಿಲ್ಲಿಸುವ ಮನಸ್ಥಿತಿಯವರು’ ಎಂದು ರಾಹುಲ್‌ ಹೇಳಿದ್ದಾರೆ.

ಉಕ್ರೇನ್‌ನಲ್ಲಿ ನಡೆಯುತ್ತಿರುವುದು ಮತ್ತು ಲಡಾಖ್‌ನಲ್ಲಿ ನಡೆಯುತ್ತಿರುವುದರ ನಡುವಣ ಸಾಮ್ಯವನ್ನು ಗಮನಿಸಿ ಎಂದಿದ್ದಾರೆ.

‘ಅಮೆರಿಕದ ಜತೆಗೆ ನಿಮ್ಮ ಬಾಂಧವ್ಯವನ್ನು ನಾವು ಒಪ್ಪುವುದಿಲ್ಲ. ನಿಮ್ಮ ಭೌಗೋಳಿಕ ಸಮಗ್ರತೆಯನ್ನು ನಾವು ಒಪ್ಪುವುದಿಲ್ಲ’ ಎಂದು ಉಕ್ರೇನ್‌ಗೆ ಪುಟಿನ್‌ ಹೇಳುತ್ತಿದ್ದಾರೆ. ಚೀನೀಯರೂ ಹಾಗೆಯೇ ಹೇಳುತ್ತಿದ್ದಾರೆ. ‘ನಿಮ್ಮ ಭೌಗೋಳಿಕ ಸಮಗ್ರತೆಯನ್ನು ಒಪ್ಪುವುದಿಲ್ಲ, ಅಮೆರಿಕದ ಜತೆಗೆ ನಿಮ್ಮ ಸಂಬಂಧವನ್ನು ಒಪ್ಪುವುದಿಲ್ಲ’ ಎಂದು ಭಾರತಕ್ಕೆ ಚೀನಾ ಹೇಳುತ್ತಿದೆ ಎಂದು ರಾಹುಲ್‌ ಹೇಳಿದ್ದಾರೆ.

‘ಚೀನಾದ ಪಡೆಗಳು ಭಾರತದ ಒಳಗೆ ಇವೆ. ಪ್ಯಾಂಗಾಂಗ್‌ ಸರೋವದಲ್ಲಿ ಚೀನಾ ದೊಡ್ಡ ಸೇತುವೆ ಕಟ್ಟಿದೆ. ಅವರು ಮೂಲಸೌಕರ್ಯ ನಿರ್ಮಿಸುತ್ತಿದ್ದಾರೆ. ಅವರು ಯಾವುದಕ್ಕೋ ಸಿದ್ಧತೆ ನಡೆಸುತ್ತಿದ್ದಾರೆ. ಆದರೆ, ಅದರ ಬಗ್ಗೆ ಮಾತನಾಡುವುದು ಸರ್ಕಾರಕ್ಕೆ ಬೇಕಿಲ್ಲ. ಸಂವಾದವನ್ನು ಹತ್ತಿಕ್ಕಲು ಸರ್ಕಾರ ಬಯಸುತ್ತಿದೆ. ಅದು ಭಾರತಕ್ಕೆ ಒಳ್ಳೆಯದಲ್ಲ’ ಎಂದರು.

ಸಿಪಿಎಂನ ಸೀತಾರಾಮ ಯೆಚೂರಿ, ಟಿಎಂಸಿಯ ಮಹುವಾ ಮೊಯಿತ್ರಾ ಮತ್ತು ಆರ್‌ಜೆಡಿಯ ತೇಜಸ್ವಿ ಯಾದವ್‌ ಅವರೂ ಸಮಾವೇಶದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT