ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಉಪನಾಮದ ವ್ಯಂಗ್ಯ: ರಾಹುಲ್‌ಗೆ 2 ವರ್ಷ ಸಜೆ

Last Updated 23 ಮಾರ್ಚ್ 2023, 19:03 IST
ಅಕ್ಷರ ಗಾತ್ರ

ಸೂರತ್‌ : ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಅವರಿಗೆ ಗುಜರಾತ್‌ನ ನ್ಯಾಯಾಲಯವು 2019ರಲ್ಲಿ ದಾಖಲಾದ ಮಾನನಷ್ಟ ಮೊಕದ್ದಮೆಯಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಗುರುವಾರ ತೀರ್ಪು ನೀಡಿದೆ. ಮಾನನಷ್ಟಕ್ಕೆ ಇರುವ ಗರಿಷ್ಠ ಶಿಕ್ಷೆಯು ಎರಡು ವರ್ಷಗಳಾಗಿವೆ. ‘ಎಲ್ಲ ಕಳ್ಳರಿಗೂ ಮೋದಿ ಎಂಬ ಉಪನಾಮ ಏಕಿದೆ’ ಎಂದು ರಾಹುಲ್‌ ಅವರು ಪ್ರಶ್ನಿಸಿದ್ದರು.

ನ್ಯಾಯಾಲಯವು ತೀರ್ಪು ಪ್ರಕಟಿಸುವಾಗ ರಾಹುಲ್‌ ಅವರು ಹಾಜರಿದ್ದರು. ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 499 ಮತ್ತು 500ರ ಅಡಿಯಲ್ಲಿ ರಾಹುಲ್‌ ಅವರು ತಪ್ಪಿತಸ್ಥರು ಎಂದು ನ್ಯಾಯಾಲಯ ಹೇಳಿದೆ. ಶಿಕ್ಷೆಯನ್ನು 30 ದಿನಗಳವರೆಗೆ ಅಮಾನತಿನಲ್ಲಿ ಇರಿಸಿ, ಮೇಲ್ಮನವಿ ಸಲ್ಲಿಸುವುದಕ್ಕೆ ಅವಕಾಶ ಕಲ್ಪಿಸ ಲಾಗಿದೆ. ಅವರಿಗೆ ಜಾಮೀನನ್ನೂ ನೀಡಲಾಗಿದೆ.

ಈ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಕಾಂಗ್ರೆಸ್‌ ಹೇಳಿದೆ. ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಪ್ರಿಯಾಕಾ ಗಾಂಧಿ ಸೇರಿದಂತೆ ಹಲವರು ಈ ಪ್ರಕರಣದ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಾತ್ಮ ಗಾಂಧಿಯನ್ನು ಉದ್ಧರಿಸಿ ಟ್ವೀಟ್‌ ಮಾಡುವ ಮೂಲಕ ರಾಹುಲ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ನನ್ನ ಧರ್ಮವು ಸತ್ಯ ಮತ್ತು ಅಹಿಂಸೆಯ ಮೇಲೆ ಆಧಾರಿತವಾಗಿದೆ. ಸತ್ಯವೇ ನನ್ನ ದೇವರು, ಅಹಿಂಸೆಯೇ ಅದನ್ನು ಪಡೆಯಲು ಇರುವ ಮಾರ್ಗ– ಮಹಾತ್ಮ ಗಾಂಧಿ’. ಸ್ವಾತಂತ್ರ್ಯ ಹೋರಾಟಗಾರರಿಗೆ ನಮನ ಸಲ್ಲಿಸುವುದಕ್ಕಾಗಿ ಮತ್ತೊಂದು ಟ್ವೀಟ್‌ ಅನ್ನೂ ಅವರು ಮಾಡಿದ್ದಾರೆ. ಭಗತ್‌ ಸಿಂಗ್‌, ಸುಖದೇವ್‌ ಮತ್ತು ರಾಜಗುರು ಅವರನ್ನು ಸ್ಮರಿಸಿದ್ದಾರೆ. ‘ಭಾರತ ಮಾತೆಯ ಈ ದಿಟ್ಟ ಮಕ್ಕಳಿಂದ ದೇಶಕ್ಕಾಗಿ ನಿರ್ಭೀತಿಯಿಂದ ಹೋರಾಡಲು ನಾನು ಕಲಿತಿದ್ದೇನೆ’ ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

ಲೋಕಸಭೆಗೆ 2019ರಲ್ಲಿ ನಡೆದ ಚುನಾವಣಾ ಪ್ರಚಾರ ಸಂದರ್ಭದಲ್ಲಿ ರಾಹುಲ್‌ ಅವರು ಕೋಲಾರದಲ್ಲಿ ಮಾಡಿದ ಭಾಷಣದಲ್ಲಿ ಈ ಹೇಳಿಕೆ ಕೊಟ್ಟಿದ್ದರು. 2019ರ ಏಪ್ರಿಲ್‌ 13ರಂದು ಈ ಹೇಳಿಕೆ ನೀಡಲಾಗಿತ್ತು. ಅದನ್ನು ಪ್ರಶ್ನಿಸಿ ಸೂರತ್‌ (ಪಶ್ಚಿಮ) ಕ್ಷೇತ್ರದ ಶಾಸಕ ಪೂರ್ಣೇಶ್‌ ಮೋದಿ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಸದಸ್ಯತ್ವ ಅನರ್ಹತೆ ಸದ್ಯಕ್ಕೆ ಅನ್ವಯಿಸದು

ರಾಹುಲ್ ಅವರಿಗೆ ಎರಡು ವರ್ಷ ಶಿಕ್ಷೆ ವಿಧಿಸಿರುವುದರಿಂದ ಸದಸ್ಯತ್ವ ಅನರ್ಹತೆಯು ಅವರಿಗೆ ಅನ್ವಯ ಆಗುತ್ತದೆ. ಆದರೆ, ಅದು ತಕ್ಷಣವೇ ಜಾರಿಗೆ ಬರುವುದಿಲ್ಲ.

ಜನ ಪ್ರಾತಿನಿಧ್ಯ ಕಾಯ್ದೆ ಪ್ರಕಾರ, ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚು ಶಿಕ್ಷೆಗೆ ಒಳಗಾದ ಜನಪ್ರತಿನಿಧಿಯು ಶಿಕ್ಷೆ ವಿಧಿಸಲಾದ ದಿನದಿಂದಲೇ ಸದಸ್ಯತ್ವವನ್ನು ಕಳೆದುಕೊಳ್ಳುತ್ತಾರೆ. ಶಿಕ್ಷೆ ಪೂರ್ಣಗೊಳಿಸಿದ ನಂತರ ಆರು ವರ್ಷ ಅವರು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಇಲ್ಲ.

ಆದರೆ, ತೀರ್ಪು ಬಂದು ಮೂರು ತಿಂಗಳವರೆಗೆ ಸದಸ್ಯತ್ವ ಅನರ್ಹತೆಯು ಅನ್ವಯ ಆಗುವುದಿಲ್ಲ. ಈ ಅವಧಿಯ ಒಳಗೆ, ಅವರು ತಪ್ಪಿತಸ್ಥರು ಎಂಬ ತೀರ್ಪಿಗೆ ಅಥವಾ ಅವರಿಗೆ ವಿಧಿಸಲಾದ ಶಿಕ್ಷೆಗೆ ಮೇಲ್ಮನವಿ ನ್ಯಾಯಾಲಯವು ತಡೆ ಕೊಟ್ಟರೆ ಸದಸ್ಯತ್ವದಿಂದ ಅವರು ಅನರ್ಹಗೊಳ್ಳುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ವಕೀಲ ಮಹೇಶ್‌ ಜೇಠ್ಮಲಾನಿ ಹೇಳಿದ್ದಾರೆ.

ಮೇಲ್ಮನವಿ ನ್ಯಾಯಾಲಯವು ಅಪರಾಧ ನಿರ್ಣಯ ಮತ್ತು ಶಿಕ್ಷೆ ಎರಡನ್ನೂ ಅಮಾನತಿನಲ್ಲಿ ಇರಿಸಬಹುದು. ಹಾಗೆ ಆದರೆ, ಮೇಲ್ಮನವಿ ಅರ್ಜಿಯ ವಿಚಾರಣೆ ಪೂರ್ಣಗೊಳ್ಳುವವರೆಗೆ ಅನರ್ಹತೆಯು ಅನ್ವಯ ಆಗುವುದಿಲ್ಲ.

ಸಂಸದ ಅಥವಾ ಶಾಸಕರೊಬ್ಬರು ಅಪರಾಧ ಪ್ರಕರಣದಲ್ಲಿ ತಪ್ಪಿತಸ್ಥರು ಎಂದು ತೀರ್ಪು ಬಂದರೆ, ಅವರ ಸದಸ್ಯತ್ವವು ತಕ್ಷಣದಿಂದಲೇ ಅನರ್ಹಗೊಳ್ಳುತ್ತದೆ ಎಂದು ಸುಪ್ರೀಂ ಕೋರ್ಟ್‌ ಲಿಲ್ಲಿ ಥಾಮಸ್‌ ಪ್ರಕರಣದಲ್ಲಿ 2013ರಲ್ಲಿ ತೀರ್ಪು ನೀಡಿತ್ತು.

ಅದಕ್ಕೂ ಹಿಂದೆ, ಜನಪ‍್ರಾತಿನಿಧ್ಯ ಕಾಯ್ದೆಯ 8(4) ಸೆಕ್ಷನ್‌ ಅನ್ವಯ ಆಗುತ್ತಿತ್ತು. ಶಾಸಕ ಅಥವಾ ಸಂಸದರೊಬ್ಬರು ಅಪರಾಧ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ತೀರ್ಪು ಬಂದರೂ ಅವರು ಮೂರು ತಿಂಗಳೊಳಗೆ ಮೇಲ್ಮನವಿ ಸಲ್ಲಿಸಿದರೆ ಸದಸ್ಯತ್ವವು ಉಳಿಯುತ್ತಿತ್ತು.

ಜನಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್‌ 8(4)ರ ಅಡಿಯಲ್ಲಿನ ಅನರ್ಹತೆಯ ನಿಯಮವು ಎರಡು ವರ್ಷಕ್ಕಿಂತ ಕಡಿಮೆ ಶಿಕ್ಷೆಯಾಗಿದ್ದರೆ ಮಾತ್ರ ಅನ್ವಯ ಎಂದು ಮನೋಜ್‌ ನರೂಲ ಮತ್ತು ಭಾರತ ಸರ್ಕಾರದ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ 2014ರಲ್ಲಿ ತೀರ್ಪು ನೀಡಿತ್ತು ಎಂದು ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್‌ ಸಿದ್ಧಾರ್ಥ ಲೂತ್ರಾ ಹೇಳಿದ್ದಾರೆ.

ಸಂವಿಧಾನದ 101 (3) (ಎ) ಮತ್ತು 190 (3) (ಎ) ವಿಧಿಗಳ ಪ್ರಕಾರ, ಜನಪ‍್ರತಿನಿಧಿಯು ತಪ್ಪಿತಸ್ಥ ಎಂದು ತೀರ್ಪು ಬಂದ ಕೂಡಲೇ ಅವರ ಸದಸ್ಯತ್ವವು ರದ್ದಾಗುತ್ತದೆ ಎಂದು ಲಿಲಿ ಥಾಮಸ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು. ಆದರೆ, ಲೋಕ್‌ ಪ್ರಹಾರಿ ಮತ್ತು ಭಾರತೀಯ ಚುನಾವಣಾ ಆಯೋಗ ನಡುವಣ ಪ್ರಕರಣದಲ್ಲಿ (2018) ಸುಪ್ರೀಂ ಕೋರ್ಟ್‌ ಸ್ಪಷ್ಟೀಕರಣ ಕೊಟ್ಟಿದೆ. ಮೇಲ್ಮನವಿ ನ್ಯಾಯಾಲಯವು ಅಪರಾಧ ನಿರ್ಣಯಕ್ಕೆ ತಡೆ ಕೊಟ್ಟ ದಿನದಿಂದ ಅನರ್ಹತೆಯು ಅನ್ವಯ ಆಗುವುದಿಲ್ಲ. ಹಾಗಾಗಿ, ಜನಪ್ರತಿನಿಧಿಯು ಅನರ್ಹತೆಯಿಂದ ತಪ್ಪಿಸಿಕೊಳ್ಳಬಹುದು ಎಂದು ಲೂತ್ರಾ ಅವರು ವಿವರಿಸಿದ್ದಾರೆ.

ಕೋರ್ಟ್‌ ಹೇಳಿದ್ದೇನು?

ಅಪರಾಧಿಯು ಸಂಸತ್ ಸದಸ್ಯರಾಗಿದ್ದಾರೆ. ಅವರು ಸಾರ್ವಜನಿಕವಾಗಿ ಮಾಡುವ ಭಾಷಣಗಳಿಂದ ವ್ಯಾಪಕ ಪರಿಣಾಮ ಉಂಟಾಗುತ್ತದೆ. ಹಾಗಾಗಿಯೇ ಅವರು ಎಸಗಿದ ಅಪರಾಧವು ಹೆಚ್ಚು ಗಂಭೀರವಾಗಿದೆ ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ಅಪರಾಧಿಗೆ ಕಡಿಮೆ ಶಿಕ್ಷೆ ನೀಡಿದರೆ ಅದು ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನಿಸುತ್ತದೆ. ಮಾನನಷ್ಟ ತಡೆಯ ಉದ್ದೇಶವೇ ಈಡೇರುವುದಿಲ್ಲ. ಯಾರು ಯಾರನ್ನು ಬೇಕಿದ್ದರೂ ಸುಲಭದಲ್ಲಿ ಅವಮಾನಿಸಬಹುದು ಎಂದಾಗುತ್ತದೆ. ‘ಚೌಕೀದಾರ್‌ ಚೋರ್‌ ಹೈ’ ಎಂಬ ಹೇಳಿಕೆಯ ವಿಚಾರದಲ್ಲಿ ರಾಹುಲ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಕ್ಷಮೆ ಯಾಚಿಸಿದ್ದರು. ಮುಂದಿನ ದಿನಗಳಲ್ಲಿ, ಮಾತನಾಡುವಾಗ ಎಚ್ಚರದಿಂದ ಇರಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು. ಹಾಗಿದ್ದರೂ ರಾಹುಲ್ ನಡವಳಿಕೆಯಲ್ಲಿ ಯಾವುದೇ ಬದಲಾವಣೆ ಆದಂತೆ ಕಾಣಿಸುತ್ತಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT