ಶನಿವಾರ, ಜೂನ್ 25, 2022
25 °C

ರಾಜಸ್ಥಾನ: ದಲಿತ ಕಾರ್ಮಿಕನಿಗೆ ಸರಪಳಿ ಬಿಗಿದು ದನದ ಕೊಟ್ಟಿಗೆಯಲ್ಲಿ ಕಟ್ಟಿ ಹಿಂಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಟಾ: ಸಾಲ ವಸೂಲಿ ವಿಚಾರಕ್ಕೆ 35 ವರ್ಷದ ದಲಿತ ಕಾರ್ಮಿಕನನ್ನು ಅಪಹರಿಸಿ, ದನದ ಕೊಟ್ಟಿಗೆಯಲ್ಲಿ ಸರಪಳಿಯಿಂದ ಕಟ್ಟಿಹಾಕಿ ಚಿತ್ರಹಿಂಸೆ ನೀಡಿದ ಘಟನೆ ರಾಜಸ್ಥಾನದ ಬುಂಡಿ ಜಿಲ್ಲೆಯಲ್ಲಿ ನಡೆದಿದೆ.

ವಾರ ಕಳೆದರೂ ಇನ್ನೂ ಆರೋಪಿಗಳ ಬಂಧನವಾಗಿಲ್ಲ. ‘ಘಟನೆಯ ಹಿಂದೆ ಹಣದ ವಿವಾದವಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಎರಡು ತಂಡಗಳನ್ನು ರಚಿಸಲಾಗಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

‘ಮೇ 22ರಂದು ಪರಮ್‌ಜಿತ್ ಸಿಂಗ್ ಮತ್ತು ಇತರ ಐವರು ನನ್ನನ್ನು ಅಪಹರಿಸಿ, ಅಲ್ಫಾ ನಗರದಲ್ಲಿರುವ ಅವರ ಮನೆಗೆ ಕರೆದೊಯ್ದು, ದನದ ಕೊಟ್ಟಿಗೆಯಲ್ಲಿ ಕಟ್ಟಿಹಾಕಿ, ಆಹಾರ ಮತ್ತು ನೀರು ಕೊಡದೆ, ಸುಮಾರು 31 ಗಂಟೆಗಳ ಕಾಲ ಚಿತ್ರಹಿಂಸೆ ನೀಡಿದ್ದರು’ ಎಂದು ರಾಧೇಶ್ಯಾಮ್ ಮೇಘವಾಲ್ ಎಂಬುವವರು ಮೇ 24ರಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಸಿಂಗ್ ಮತ್ತು ಇತರ ಐವರ ವಿರುದ್ಧ ಐಪಿಸಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಡಿವೈಎಸ್‌ಪಿ ಶಂಕರ್ ಲಾಲ್ ತಿಳಿಸಿದ್ದಾರೆ.

ಘಟನೆ ಹಿನ್ನೆಲೆ: ಜಿಲ್ಲೆಯ ತಲೇರಾ ಪೊಲೀಸ್ ಠಾಣಾ ವ್ಯಾಪ್ತಿಯ ಬಿಲುಬಾ ಗ್ರಾಮದ ರಾಧೇಶ್ಯಾಮ್ ಮೇಘವಾಲ್ ಅವರನ್ನು ಮೂರು ವರ್ಷಗಳ ಹಿಂದೆ ₹70,000 ಮುಂಗಡ ನೀಡಿ, ಪರಮ್‌ಜಿತ್‌ ಸಿಂಗ್ ಅವರು ತಮ್ಮ ಫಾರ್ಮ್‌ಹೌಸ್‌ನಲ್ಲಿ ಕೆಲಸಕ್ಕೆ ನೇಮಿಸಿಕೊಂಡಿದ್ದರು. ತರುವಾಯ, ಮೇಘವಾಲ್ ತನ್ನ ಸಹೋದರಿಯ ಮದುವೆಗಾಗಿ ಸಿಂಗ್ ಅವರಿಂದ ₹30 ಸಾವಿರ ಹೆಚ್ಚುವರಿಯಾಗಿ ಪಡೆದಿದ್ದರು.

‘ಸಿಂಗ್‌ ಅವರಿಗೆ ₹50 ಸಾವಿರ ಮರುಪಾವತಿಸಿ, ಅವರ ಫಾರ್ಮ್‌ಹೌಸ್‌ನಲ್ಲಿ 10 ದಿನ ಕೂಲಿ ಪಡೆಯದೇ ಕೆಲಸ ಮಾಡಿದ್ದೆ. ಬಾಕಿ ಹಣ ಹಿಂತಿರುಗಿಸಲು ಸಾಧ್ಯವಿಲ್ಲವೆಂದೆ. ಆಗ ಸಿಂಗ್‌ ₹1.10 ಲಕ್ಷ ಬಾಕಿ ಮರುಪಾವತಿಸಲು ಒತ್ತಡ ಹೇರಿ, ನನ್ನನ್ನು ಅಪಹರಿಸಿದ್ದರು. ನನ್ನ ತಮ್ಮ ಸಿಂಗ್ ಅವರಿಗೆ ಸ್ವಲ್ಪ ಹಣ ನೀಡಿದ ಮೇಲೆ ನನ್ನನ್ನು ಬಿಡುಗಡೆ ಮಾಡಿದರು’ ಎಂದು ಮೇಘವಾಲ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹೇಳಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು