ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭೆ ಚುನಾವಣೆ: ಬಿಜೆಪಿಗೆ ಉಲ್ಲಾಸ, ಕಾಂಗ್ರೆಸ್‌ಗೆ ಆಘಾತ

ಎರಡು ಹೆಚ್ಚುವರಿ ಸ್ಥಾನ ಗೆದ್ದ ಕಮಲ ಪಾಳಯ
Last Updated 11 ಜೂನ್ 2022, 19:31 IST
ಅಕ್ಷರ ಗಾತ್ರ

ನವದೆಹಲಿ: ರಾಜ್ಯಸಭಾ ಚುನಾವಣೆ ಯಲ್ಲಿ ತಂತ್ರಗಾರಿಕೆ ಬಳಸಿ ಎರಡು ಹೆಚ್ಚುವರಿ ಸ್ಥಾನಗಳಲ್ಲಿ ಗಳಿಸಿದ ಗೆಲುವು ಬಿಜೆಪಿ ಪಾಳಯದಲ್ಲಿ ಮತ್ತಷ್ಟು ಹುರುಪು ಮೂಡಿಸಿದೆ. ಹರಿಯಾಣದಲ್ಲಿ ಪಕ್ಷದ ಅಭ್ಯರ್ಥಿ ಅಜಯ್‌ ಮಾಕನ್‌ ಅವರ ಸೋಲು ಕಾಂಗ್ರೆಸ್‌ಗೆ ಆಘಾತ ಉಂಟುಮಾಡಿದೆ.

ಹರಿಯಾಣ ಹಾಗೂ ಮಹಾರಾಷ್ಟ್ರ ದಲ್ಲಿಮತದಾನದ ವೇಳೆ ನಿಯಮ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ವಿವಿಧ ಪಕ್ಷಗಳು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದವು. ಹೀಗಾಗಿ ಈ ರಾಜ್ಯಗಳಲ್ಲಿ ಮತ ಎಣಿಕೆ ಆರಂಭವಾಗಿದ್ದು ಮಧ್ಯರಾತ್ರಿಯ ಬಳಿಕ ವಷ್ಟೇ.

ಹರಿಯಾಣ ವಿಧಾನಸಭೆಯಲ್ಲಿ ಕೈ ಪಾಳಯ 31 ಸದಸ್ಯರನ್ನು ಹೊಂದಿದೆ. ಮಾಕನ್‌ ಗೆಲುವಿಗೆ 31 ಮತಗಳು ಬೇಕಿದ್ದವು. ಆದರೆ, ಅವರು ಗಳಿಸಿದ್ದು 29 ಮತಗಳನ್ನು ಮಾತ್ರ. ಕಾಂಗ್ರೆಸ್‌ನ ಅತೃಪ್ತ ಶಾಸಕ ಕುಲದೀಪ್‌ ಬಿಷ್ಣೋಯಿ ಅವರು ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಕಾರ್ತಿಕೇಯ ಶರ್ಮಾ ಅವರಿಗೆ ಮತ ಹಾಕಿದರು. ಕಾಂಗ್ರೆಸ್‌ನ ಮತ್ತೊಬ್ಬ ಶಾಸಕನ ಮತ ಅಸಿಂಧುವಾಯಿತು. ಇದರಿಂದಾಗಿ, ಮಾಕನ್‌ ಅವರಿಗೆ 29 ಮತಗಳಷ್ಟೇ ದೊರೆತವು.

ಬಿಜೆಪಿಯ ಕೃಷ್ಣಲಾಲ್‌ ಪನ್ವರ್ ಅವರು ಪ್ರಥಮ ಪ್ರಾಶಸ್ತ್ಯದ 36 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಕಾರ್ತಿಕೇಯ ಶರ್ಮಾ ಅವರು ಮೊದಲ ಪ್ರಾಶಸ್ತ್ಯದ 23 ಮತಗಳನ್ನು ಪಡೆದರು. ಶರ್ಮಾ ಅವರಿಗೆ ಎರಡನೇ ಪ್ರಾಶಸ್ತ್ಯದ 6.6 ಮತಗಳು ಸಿಕ್ಕಿದವು. ಇದರಿಂದಾಗಿ ಅವರ ಮತಗಳ ಸಂಖ್ಯೆ 29.6 ಆಯಿತು. ಮಾಕನ್‌ ಅವರಿಗೆ ಎರಡನೇ ಪ್ರಾಶಸ್ತ್ಯದ ಮತಗಳು ಸಿಗಲಿಲ್ಲ. ಶರ್ಮಾ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾ ಆಯೋಗ ಪ್ರಕಟಿಸಿತು.

ಮಹಾರಾಷ್ಟ್ರದಲ್ಲಿ ಶಿವಸೇನಾದ ಎರಡನೇ ಅಭ್ಯರ್ಥಿಗೆ ಸೋಲಾಗಿದೆ. ಬಿಜೆಪಿಯು ತನ್ನ ಹೆಚ್ಚುವರಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡಿದೆ. ಇದರಿಂದಾಗಿ ’ಮಹಾವಿಕಾಸ ಅಘಾಡಿ’ ಸರ್ಕಾರಕ್ಕೆ ಹಿನ್ನಡೆಯಾಗಿದೆ.

ಆರನೇ ಸ್ಥಾನಕ್ಕಾಗಿ ಶಿವಸೇನಾದ ಸಂಜಯ್‌ ಪವಾರ್‌ ಹಾಗೂ ಬಿಜೆಪಿಯ ಧನಂಜಯ ಮಹಾದಿಕ್‌ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿತ್ತು. ಬಿಜೆಪಿಯ ಪೀಯೂಷ್‌ ಗೋಯೆಲ್‌ (48 ಮತ), ಅನಿಲ್‌ ಬೊಂಡೆ (48 ಮತ), ಶಿವಸೇನಾದ ಸಂಜಯ್‌ ರಾವತ್‌ (41 ಮತ), ಕಾಂಗ್ರೆಸ್‌ನ ಇಮ್ರಾನ್‌ ಪ್ರತಾಪ್‌ಗರಿ (44 ಮತ), ಎನ್‌ಸಿಪಿಯ ಪ್ರಫುಲ್‌ ಪಟೇಲ್‌ (43 ಮತ) ಗೆಲುವು ಸಾಧಿಸಿದ್ದರು. ಎರಡನೇ ಪ್ರಾಶಸ್ತ್ಯದ ಮತಗಳ ಎಣಿಕೆಯ ಬಳಿಕ ಮಹಾದಿಕ್ ಗೆಲುವನ್ನು ಪ್ರಕಟಿಸಲಾಯಿತು.

ಫಲಿಸಿದ ಗೆಹಲೋತ್‌ ತಂತ್ರ: ರಾಜಸ್ಥಾನದಲ್ಲಿ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಮೂರು ಸ್ಥಾನಗಳನ್ನು ಗೆದ್ದುಕೊಂಡು ಬೀಗಿತು. ಇಲ್ಲಿ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ತಂತ್ರ ಕೆಲಸ ಮಾಡಿತು. ಬಿಜೆಪಿ ಬೆಂಬಲದಿಂದ ಕಣಕ್ಕೆ ಇಳಿದಿದ್ದ ಝಿ ಸಮೂಹದ ಅಧ್ಯಕ್ಷ ಸುಭಾಷ್‌ಚಂದ್ರ ಅವರಿಗೆ ಸೋಲಾಯಿತು. ಆದರೆ, ಹರಿಯಾಣದಲ್ಲಿ ಕಾಂಗ್ರೆಸ್‌ ಪ್ರಯತ್ನಕ್ಕೆ ಯಶಸ್ಸು ಸಿಗಲಿಲ್ಲ. ಕುಲದೀಪ್‌ ಬಿಷ್ಣೋಯಿ ಅವರ ಮನವೊಲಿಸಲು ಕಾಂಗ್ರೆಸ್‌ ಮುಖಂಡರು ಪ್ರಯತ್ನ ಮಾಡಿ ದ್ದರು. ಅದಕ್ಕೆ ಬಿಷ್ಖೋಯಿ ಮಣಿಯಲಿಲ್ಲ. ಅವರು ಅಡ್ಡ ಮತದಾನ ಮಾಡಿದರು. ‘ಬಿಷ್ಣೋಯಿ ಅವರನ್ನು ಪಕ್ಷದ ಎಲ್ಲ ಹುದ್ದೆಗಳಿಂದ (ಸಿಡಬ್ಲ್ಯುಸಿಯ ವಿಶೇಷ ಆಹ್ವಾನಿತ ಸೇರಿ) ತೆಗೆದು ಹಾಕಲಾಗಿದೆ’ ಎಂದು ಕಾಂಗ್ರೆಸ್‌ ಹೇಳಿದೆ.ಕರ್ನಾಟಕದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಕಿತ್ತಾಟದ ಲಾಭ ಬಿಜೆಪಿಗೆ ದಕ್ಕಿತು. ಕಮಲ ಪಾಳಯದ ಮೂರನೇ ಅಭ್ಯರ್ಥಿ ಲಹರ್ ಸಿಂಗ್‌ ಗೆಲುವಿನ ನಗೆ ಬೀರಿದರು.

15 ರಾಜ್ಯಗಳ 57 ಸ್ಥಾನಗಳ ಪೈಕಿ 22 ಸ್ಥಾನಗಳಲ್ಲಿ ಕಮಲ ಪಾಳಯ ಗೆಲುವು ಸಾಧಿಸಿತು. ವಿಧಾನಸಭೆಗಳ ಸದಸ್ಯರ ಬಲಾಬಲದ ‍ಪ್ರಕಾರ, ಬಿಜೆಪಿ 20 ಸ್ಥಾನಗಳಲ್ಲಿ ಗೆಲ್ಲಲು ಸಾಧ್ಯವಿತ್ತು. ಕಳೆದ ಸಾಲಿಗೆ ಹೋಲಿಸಿದರೆ (ಈಗ ಚುನಾವಣೆ ನಡೆದ ಸ್ಥಾನಗಳ ಲೆಕ್ಕಾಚಾರದಲ್ಲಿ) ಬಿಜೆಪಿಗೆ ಮೂರು ಸ್ಥಾನಗಳ ನಷ್ಟವಾಗಿದೆ. ಉತ್ತರ ಪ್ರದೇಶದಲ್ಲಿ ಕಳೆದ ಸಲ ಪಕ್ಷ 5 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಈ ಸಲ ಸಂಖ್ಯೆ ಎಂಟಕ್ಕೆ ಏರಿದೆ. ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಹೆಚ್ಚುವರಿಯಾಗಿ ಎರಡು ಸ್ಥಾನಗಳನ್ನು ಗೆದ್ದಿದೆ. ಇದರ ಮಧ್ಯೆಯೂ, ರಾಜ್ಯಸಭೆಯಲ್ಲಿ ಪಕ್ಷದ ಸದಸ್ಯರ ಸಂಖ್ಯೆ 95ರಿಂದ 92ಕ್ಕೆ ಇಳಿಯಲಿದೆ.

ಕಾಂಗ್ರೆಸ್‌ ಕಳೆದ ಸಾಲಿನಲ್ಲಿ ಎಂಟು ಸ್ಥಾನಗಳಲ್ಲಿ ಗೆದ್ದಿತ್ತು. ಈ ಸಲ ಒಂಬತ್ತರಲ್ಲಿ ಗೆಲುವು ಸಾಧಿಸಿದೆ. ಆದರೆ, ಹರಿಯಾಣದ ಸೋಲು ಪಕ್ಷಕ್ಕೆ ಮುಜುಗರ ಉಂಟುಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT