ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಶೀಲ್ಡ್ ಬೇಕು, ಕೋವ್ಯಾಕ್ಸಿನ್ ಬೇಡ: ವೈದ್ಯರ ಮನವಿ

ರಾಮ್‌ ಮನೋಹರ್ ಲೋಹಿಯಾ ಆಸ್ಪತ್ರೆ ವೈದ್ಯರ ಮನವಿ; ಪ್ರಯೋಗ ಪೂರ್ಣಗೊಳ್ಳದ ಭೀತಿ
Last Updated 16 ಜನವರಿ 2021, 20:20 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್ ಲಸಿಕಾ ಅಭಿಯಾನ ಆರಂಭವಾಗುವುದರೊಂದಿಗೆ ಇಂತಹದ್ದೇ ಲಸಿಕೆ ಬೇಕು ಎಂದು ವೈದ್ಯರೇ ಪಟ್ಟು ಹಿಡಿದ ವಿದ್ಯಮಾನ ದೆಹಲಿಯಲ್ಲಿ ಶನಿವಾರ ವರದಿಯಾಗಿದೆ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಲಸಿಕೆಯನ್ನೇ ತಮಗೆ ನೀಡಿ ಎಂದು ಇಲ್ಲಿನ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಶನ್ (ಆರ್‌ಡಿಎ) ವತಿಯಿಂದ ವೈದ್ಯಕೀಯ ಆಧೀಕ್ಷಕರಿಗೆ ಮನವಿ ಮಾಡಲಾಯಿತು.

‘ಲೋಹಿಯಾ ಆಸ್ಪತ್ರೆ ವೈದ್ಯರು ಕೋವ್ಯಾಕ್ಸಿನ್ ಬಗ್ಗೆ ಸ್ವಲ್ಪ ಭೀತಿ ಹೊಂದಿದ್ದಾರೆ. ಅವರಿಗೆ ಕೋವಿಶೀಲ್ಡ್ ಒದಗಿಸದಿದ್ದಲ್ಲಿ, ಕೋವಿಡ್ ಲಸಿಕೆ ಅಭಿಯಾನದಲ್ಲಿ ಅವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸದೇ ಇರಬಹುದು’ ಎಂದು ವೈದ್ಯಕೀಯ ಅಧೀಕ್ಷಕರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

‘ಲಸಿಕೆ ಅಭಿಯಾನಕ್ಕೆ ಆಸ್ಪತ್ರೆಯಲ್ಲಿ ಚಾಲನೆ ನೀಡಲಾಗಿದೆ. ನಮಗೆ ಸೀರಂ ಇನ್ಸ್‌ಟಿಟ್ಯೂಟ್‌ ತಯಾರಿಸಿದ ಕೋವಿಶೀಲ್ಡ್ ಬದಲಾಗಿ ಭಾರತ್ ಬಯೊಟೆಕ್ ತಯಾರಿಸಿದ ಕೋವ್ಯಾಕ್ಸಿನ್ ಲಸಿಕೆ ನೀಡಲು ಆದ್ಯತೆ ನೀಡಲಾಗುತ್ತಿದೆ. ಕೋವ್ಯಾಕ್ಸಿನ್ ಲಸಿಕೆಯನ್ನು ಮನುಷ್ಯರ ಮೇಲೆ ಪರೀಕ್ಷೆಗೆ ಒಳಪಡಿಸುವ ಪ್ರಕ್ರಿಯೆ ಪೂರ್ಣಗೊಂಡಿಲ್ಲ ಎಂಬ ಕಾರಣಕ್ಕೆ ವೈದ್ಯರು ಕೊಂಚ ಭೀತರಾಗಿದ್ದಾರೆ. ಎಲ್ಲಾ ಹಂತದ ಪ್ರಯೋಗಗಳನ್ನು ಪೂರ್ಣಗೊಳಿಸಿರುವ ಕೋವಿಶೀಲ್ಡ್ ಲಸಿಕೆಯನ್ನು ನಮಗೆ ನೀಡಿ ಎಂದು ನಾವು ನಿಮ್ಮನ್ನು ವಿನಂತಿಸುತ್ತೇವೆ’ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಲಸಿಕೆ ಪರಿಣಾಮಕಾರಿತ್ವ- ಜಟಾಪಟಿ:ದೇಶದಲ್ಲಿ ಕೋವಿಡ್ ಲಸಿಕೆ ಅಭಿಯಾನ ಆರಂಭವಾಗಿದ್ದರೂ ಕಾಂಗ್ರೆಸ್ ಹಾಗೂ ಕೇಂದ್ರ ಸರ್ಕಾರದ ನಡುವೆ ‘ಕೋವ್ಯಾಕ್ಸಿನ್’ ಲಸಿಕೆಯ ಪರಿಣಾಮಕಾರಿತ್ವದ ಕುರಿತು ಜಟಾಪಟಿ ಮುಂದುವರಿದಿದೆ.

ಭಾರತ್ ಬಯೊಟೆಕ್‌ನ ಕೋವ್ಯಾಕ್ಸಿನ್ ಲಸಿಕೆ ಬಗ್ಗೆ ಕಾಂಗ್ರೆಸ್ ಕಳವಳ ವ್ಯಕ್ತಪಡಿಸಿದೆ. ‘ನ್ಯಾಷನಲ್ ಇನ್ಸ್‌ಟಿಟ್ಯೂಟ್‌ ಆಫ್ ವೈರಾಲಜಿ ಸಹಯೋಗದೊಂದಿಗೆ ದೇಶೀಯವಾಗಿ ಅಭಿವೃದ್ಧಿಪಡಿಸಿದ ಲಸಿಕೆಗೆ ಅನುಮತಿ ನೀಡಲಾಗಿದೆ. ಹೀಗಿದ್ದೂ, ಸ್ವದೇಶಿ ಲಸಿಕೆಯನ್ನು ಸರ್ಕಾರಿ ಸಿಬ್ಬಂದಿ ಏಕೆ ಪಡೆಯುತ್ತಿಲ್ಲ’ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ತಿವಾರಿ ಹೇಳಿಕೆಗೆ ಆರೋಗ್ಯ ಸಚಿವ ಹರ್ಷವರ್ಧನ್ ಅವರು ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್‌ನವರು ಅಪನಂಬಿಕೆ ಮತ್ತು ವದಂತಿಗಳನ್ನು ಹರಡುವ ಬಗ್ಗೆ ಮಾತ್ರ ಉತ್ಸಾಹ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಖ್ಯಾತ ವೈದ್ಯರು ಮತ್ತು ಸರ್ಕಾರಿ ಸಿಬ್ಬಂದಿ ಕೋವ್ಯಾಕ್ಸಿನ್ ಲಸಿಕೆ ಪಡೆಯುತ್ತಿರುವ ಚಿತ್ರಗಳನ್ನು ಸಚಿವರು ಹಂಚಿಕೊಂಡಿದ್ದಾರೆ.

‘ಕೋವಿಡ್ 19 ಲಸಿಕೆಗಳ ಹಿಂದಿನ ವಿಜ್ಞಾನ ಸ್ಪಷ್ಟವಾಗಿದೆ. ಅಗತ್ಯವಿರುವ ಯಾವ ಕೆಲಸವನ್ನೂ ಕೈಬಿಡದೆ, ಲಸಿಕೆ ಅಭಿವೃದ್ಧಿ ಕಾರ್ಯಗಳನ್ನು ನಮ್ಮ ವಿಜ್ಞಾನಿಗಳು ಮಿಂಚಿನ ವೇಗದಲ್ಲಿ ಮಾಡಿದ್ದಾರೆ’ ಎಂದು ಸಚಿವರು ಹೇಳಿದರು.

ಲಸಿಕೆಗಳ ಪರಿಣಾಮಕಾರಿತ್ವದ ಬಗ್ಗೆ ನಿಜವಾದ ಕಳಕಳ ವ್ಯಕ್ತಪಡಿಸುವುದು ತಮ್ಮ ಉದ್ದೇಶವೇ ಹೊರತು, ಭಯವನ್ನು ಹೆಚ್ಚಿಸುವುದಲ್ಲ ಎಂದು ತಿವಾರಿ ಸ್ಪಷ್ಟನೆ ನೀಡಿದ್ದಾರೆ.

ಲಸಿಕೆ ರಾಷ್ಟ್ರೀಯತೆ: ತಿವಾರಿ

‘ಲಸಿಕೆ ಕುರಿತ ನನ್ನ ಕಳವಳ ಕೇವಲ ಕಲ್ಪಿತವಲ್ಲ. ನಾರ್ವೆಯಲ್ಲಿ ಏನಾಗುತ್ತಿದೆ ನೋಡಿ. ಅಲ್ಲಿ ಫೈಝಲ್ ಲಸಿಕೆ ಪಡೆದ 23 ಮಂದಿ ಮೃತಪಟ್ಟ ವರದಿಯಾಗಿದೆ’ ಎಂದು ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ ಹೇಳಿದ್ದಾರೆ.

‘ಇದು ವಿಭಿನ್ನ ಲಸಿಕೆಯಾಗಿರಬಹುದು. ಆದರೆ ಲಸಿಕೆ ರಾಷ್ಟ್ರೀಯತೆಯ ಹಿಂದೆ ಅಡಗಿಕೊಳ್ಳಬೇಡಿ’ ಎಂದು ತಿವಾರಿ ಸಲಹೆ ನೀಡಿದರು. ವೈದ್ಯಕೀಯ ಸಮುದಾಯವನ್ನು ಸಹ ಕೋವ್ಯಾಕ್ಸಿನ್‌ನ ಪರಿಣಾಮಕಾರಿತ್ವದ ಮೇಲೆ ವಿಂಗಡಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು.

ರಾಮ್‌ ಮನೋಹರ್ ಲೋಹಿಯಾ ಆಸ್ಪತ್ರೆಯ ವೈದ್ಯರು ಕೋವ್ಯಾಕ್ಸಿನ್‌ನಿಂದ ಲಸಿಕೆ ಪಡೆಯುವ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದ್ದು, ಅವರು ಬರೆದ ಪತ್ರವೊಂದನ್ನು ತಿವಾರಿ ಹಂಚಿಕೊಂಡಿದ್ದಾರೆ.

ಪ್ರಜ್ಞೆ ತಪ್ಪಿದ ನರ್ಸ್‌

ಪಶ್ಚಿಮ ಬಂಗಾಳದ ಬಿ.ಸಿ ರಾಯ್ ಮಕ್ಕಳ ಆಸ್ಪತ್ರೆಯ ನರ್ಸ್‌ ಒಬ್ಬರುಕೋವಿಡ್ ಲಸಿಕೆ ಹಾಕಿಸಿಕೊಂಡ ಬಳಿಕ ಪ್ರಜ್ಞೆ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಪ್ರಜ್ಞಾಶೂನ್ಯರಾಗಿದ್ದ ಅವರನ್ನು ಎನ್‌ಆರ್‌ಎಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ಲಸಿಕೆ ತೆಗೆದುಕೊಂಡಿದ್ದಕ್ಕೆ ಅವರಿಗೆ ಈ ರೀತಿ ಆಯಿತೇ ಎಂಬುದನ್ನು ಇನ್ನಷ್ಟೇ ಸ್ಪಷ್ಟಗೊಳ್ಳಬೇಕಿದೆ.

ದೆಹಲಿಯಲ್ಲೂ ಲಸಿಕೆ ಪಡೆದ ಬಳಿಕ ಅಡ್ಡಪರಿಣಾಮ (ಎಇಎಫ್‌ಐ) ಉಂಟಾದ ನಾಲ್ಕು ಪ್ರಕರಣಗಳು ವರದಿಯಾಗಿವೆ. ಎನ್‌ಡಿಎಂಸಿ ಚರಕ್ ಆಸ್ಪತ್ರೆಯಲ್ಲಿ ಎರಡು ಹಾಗೂ ಉತ್ತರ ರೈಲ್ವೆ ಕೇಂದ್ರೀಯ ಆಸ್ಪತ್ರೆಯಲ್ಲಿ ಎರಡು ಪ್ರಕರಣಗಳಲ್ಲಿ ಈ ರೀತಿ ಆಗಿದೆ. ಅಡ್ಡಪರಿಣಾಮ ಉಂಟಾದಾಗ ರವಾನಿಸಲು ನಿಗದಿ
ಪಡಿಸಿದ್ದ ಕೇಂದ್ರಕ್ಕೆ ಒಬ್ಬ ವ್ಯಕ್ತಿಯನ್ನು ರವಾನಿಸಲಾಯಿತು. ಉಳಿದವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿಲ್ಲ.

ಕೋವ್ಯಾಕ್ಸಿನ್‌: ಅಡ್ಡಪರಿಣಾಮಕ್ಕೆ ಪರಿಹಾರ

ಕೋವ್ಯಾಕ್ಸಿನ್‌ ಲಸಿಕೆ ನೀಡಿಕೆಗೆ ಮುನ್ನ ಫಲಾನುಭವಿಗಳಿಂದ ‘ಸಮ್ಮತಿ ಪತ್ರ’ಕ್ಕೆ ಸಹಿ ಹಾಕಿಸಿಕೊಳ್ಳಲಾಗಿದೆ. ಲಸಿಕೆಯಿಂದಾಗಿ ಯಾವುದೇ ತೀವ್ರ ತೊಂದರೆಗೆ ಒಳಗಾದರೆ ಪರಿಹಾರ ನೀಡಲಾಗುವುದು ಎಂದು ಈ ಸಮ್ಮತಿ ಪತ್ರದಲ್ಲಿ ಭರವಸೆ ನೀಡಲಾಗಿದೆ.

ಈ ಲಸಿಕೆಯು ಕೋವಿಡ್‌ ವಿರುದ್ಧ ಪ್ರತಿಕಾಯಗಳನ್ನು ಸೃಷ್ಟಿಸಬಲ್ಲುದು ಎಂಬುದು ಮೊದಲ ಮತ್ತು ಎರಡನೇ ಹಂತದ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಲಸಿಕೆಯ ಪರಿಣಾಮಕಾರಿತ್ವವನ್ನು ಮೂರನೇ ಹಂತದ ಕ್ಲಿನಿಕಲ್‌ ಟ್ರಯಲ್‌ನಲ್ಲಿಯೂ ಪರಿಶೀಲಿಸಲಾಗುವುದು ಎಂದು ಸಮ್ಮತಿ ಪತ್ರದಲ್ಲಿ ವಿವರಿಸಲಾಗಿದೆ.

ಈ ಲಸಿಕೆ ಪಡೆದವರಿಗೆ ನಮೂನೆಯೊಂದನ್ನು ನೀಡಲಾಗಿದೆ. ಯಾವುದೇ ಅಡ್ಡಪರಿಣಾಮ ಕಂಡುಬಂದರೆ ಏಳು ದಿನಗಳಲ್ಲಿ ತಿಳಿಸುವಂತೆಯೂ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT