ಭಾನುವಾರ, ಮೇ 29, 2022
31 °C

ನಗುವಿನ ಕಾಯಿಲೆಯ ಬಾಲಕಿಗೆ ಯಶಸ್ವಿ ಶಸ್ತ್ರಚಿಕಿತ್ಸೆ: ಏನಿದು ಜೆಲಾಸ್ಟಿಕ್ ಸೀಜರ್?

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ಹೈದರಾಬಾದ್: ಅಪರೂಪದ ನಗುವಿನ ಕಾಯಿಲೆ ‘ಜೆಲಾಸ್ಟಿಕ್ ಸೀಜರ್’ನಿಂದ ಬಳಲುತ್ತಿದ್ದ ಮೂರು ವರ್ಷದ ಮಗುವಿಗೆ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ.

ಇದೊಂದು ಅಪರೂಪದ ನಗುವಿನ ಕಾಯಿಲೆಯಾಗಿದ್ದು, ನವಜಾತ ಶಿಶುಗಳಲ್ಲಿ ಹಾಗೂ ಬಾಲ್ಯದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಜಗತ್ತಿನ ಪ್ರತಿ 2 ಲಕ್ಷ ಮಕ್ಕಳಲ್ಲಿ ಒಬ್ಬರಂತೆ ಈ ಕಾಯಿಲೆಗೆ ಗುರಿಯಾಗುತ್ತಿದ್ದಾರೆ. ಈ ಕಾಯಿಲೆ ಇರುವ ಮಕ್ಕಳು ಪರಿಸ್ಥಿತಿ ಸಂದರ್ಭದ ಪರಿವೆ ಇಲ್ಲದೆ ವಿನಾ ಕಾರಣ ನಗುತ್ತಿರುತ್ತಾರೆ ಎಂಬುದು ಅಧ್ಯಯನಗಳಿಂದ ತಿಳಿದುಬಂದಿದೆ.

‘ಜೆಲಾಸ್ಟಿಕ್ ಸೀಜರ್’ ಎಂದರೆ...

ಈ ಅಪರೂಪದ ನಗುವಿನ ಕಾಯಿಲೆಯನ್ನು ವೈದ್ಯಕೀಯ ಪರಿಭಾಷೆಯಲ್ಲಿ ‘ಜೆಲಾಸ್ಟಿಕ್ ಸೀಜರ್’ ಎಂದು ಕರೆಯುತ್ತಾರೆ. ನಗುವನ್ನು ನಿಯಂತ್ರಿಸುವ ಮಿದುಳಿನ ಭಾಗದಲ್ಲಿ ಉಂಟಾಗುವ ಪ್ರಚೋದನೆಯಿಂದ ಈ ಕಾಯಿಲೆ ಕಂಡುಬರುತ್ತದೆ. ಗ್ರೀಕ್‌ ಭಾಷೆಯಲ್ಲಿ ನಗುವಿಗೆ ‘ಜೆಲಾಸ್ಟಿಕೋಸ್’ ಎಂದು ಕರೆಯಲಾಗುತ್ತಿದ್ದು, ಅದರಿಂದ ‘ಜೆಲಾಸ್ಟಿಕ್ ಸೀಜರ್’ ಉಗಮವಾಗಿದೆ ಎಂದು ಕ್ಯಾಲಿಫೋರ್ನಿಯಾದ ‘ಸೆಡಾರ್ಸ್ ಸೈನಿ ಮೆಡಿಕಲ್ ಸೆಂಟರ್‌’ನ ಜಾಲತಾಣ ಉಲ್ಲೇಖಿಸಿದೆ.

ಮಗುವಿಗೆ ಏನಾಗಿತ್ತು?

ನಗುವಿನ ಕಾಯಿಲೆಯಿಂದ ಬಳಲುತ್ತಿರುವ ಮಗುವಿಗೆ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ ಪಾಲಕರು ಕೊನೆಗೆ ಹೈದರಾಬಾದ್‌ನ ಎಲ್‌ಬಿ ನಗರದ ಕಮಿನೇನಿ ಆಸ್ಪತ್ರೆಗೆ ಕರೆದೊಯ್ದು ವೈದ್ಯರಿಗೆ ತೋರಿಸಿದ್ದಾರೆ.

ಮಗುವನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ, ದೇಹದ ಹಲವು ಕ್ರಿಯೆಗಳನ್ನು ನಿಯಂತ್ರಿಸುವ ಮಿದುಳಿನ ಹೈಪೋಥಲಾಮಸ್ ಭಾಗದಲ್ಲಿ ಹಾನಿಯಾಗಿರುವುದು ಕಂಡುಬಂದಿದೆ.

ವೈದ್ಯರು ಹೇಳುವ ಪ್ರಕಾರ, ಆರು ತಿಂಗಳ ಹಿಂದೆ ತಿಂಗಳಿಗೆ ಒಂದು ಬಾರಿ 10 ಸೆಕೆಂಡ್ ಕಾಲ ವಿನಾಕಾರಣ ನಗುತ್ತಿದ್ದ ಮಗು ಇತ್ತೀಚೆಗೆ ತಿಂಗಳಿಗೆ 5–6 ಬಾರಿ ಕಾರಣವಿಲ್ಲದೇ ನಗಾಡುತ್ತಿತ್ತು. ಒಂದು ಬಾರಿ ನಗುವ ಅವಧಿ ಸುಮಾರು ಒಂದು ನಿಮಿಷದವರೆಗೂ ಇರುತ್ತಿತ್ತು. ಮಗುವಿನ ಎಡ ಕಣ್ಣಿನಲ್ಲಿ ದೃಷ್ಟಿಗೆ ಸಂಬಂಧಿಸಿದ ಸಮಸ್ಯೆಯೂ ಕಂಡುಬಂದಿತ್ತು.

ನರ ಶಸ್ತ್ರಚಿಕಿತ್ಸಾ ತಜ್ಞ, ನರರೋಗ ತಜ್ಞ, ಮಕ್ಕಳ ತಜ್ಞ ಹಾಗೂ ಎಂಡೋಕ್ರಿನಾಲಜಿಸ್ಟ್ ತಜ್ಞರನ್ನೊಳಗೊಂಡ ತಂಡವು ಮಗುವನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದೆ. ಎಂಆರ್‌ಐ ಸ್ಕ್ಯಾನಿಂಗ್ ಮಾಡಿದಾಗ ಮಗುವಿನ ಹೈಪೋಥಲಾಮಸ್‌ನಲ್ಲಿ ಸಮಸ್ಯೆ ಇರುವುದು ಮತ್ತು ಕಣ್ಣು ಹಾಗೂ ದೃಷ್ಟಿಗೆ ಸಂಬಂಧಿಸಿದ ನರಗಳಿಗೂ ಅಡಚಣೆಯಾಗಿರುವುದು ಕಂಡುಬಂದಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಮಗುವಿನ ಸಮಸ್ಯೆ ಏನೆಂದು ತಿಳಿದ ಬಳಿಕ ಅದರ ತೀವ್ರತೆ, ಶಸ್ತ್ರಚಿಕಿತ್ಸೆಯ ಅಗತ್ಯ ಹಾಗೂ ಅದರಿಂದ ಆಗಬಹುದಾದ ಅಪಾಯದ ಸಾಧ್ಯತೆಗಳನ್ನೂ ಪಾಲಕರಿಗೆ ತಿಳಿಸಲಾಯಿತು. ವಿವರವಾದ ಮಾಹಿತಿ ನೀಡಿದ ಬಳಿಕ ಮಗುವನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು ಎಂದು ಆಸ್ಪತ್ರೆಯ ನರ ಶಸ್ತ್ರಚಿಕಿತ್ಸಾ ತಜ್ಞ ಡಾ. ರಮೇಶ್ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು