ಭಾನುವಾರ, ಫೆಬ್ರವರಿ 28, 2021
21 °C

ಕರ್ನಾಟಕದ 19 ಪೊಲೀಸರಿಗೆ ರಾಷ್ಟ್ರಪತಿ ಪದಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಗಣರಾಜ್ಯೋತ್ಸವದ ಅಂಗವಾಗಿ ನೀಡಲಾಗುವ ರಾಷ್ಟ್ರಪತಿಗಳ ಪದಕಕ್ಕೆ ಕರ್ನಾಟಕದ 19 ಮಂದಿ ಪೊಲೀಸರು ಆಯ್ಕೆಯಾಗಿದ್ದಾರೆ.

ವೃತ್ತಿಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ಇವರಿಗೆ ಮಂಗಳವಾರ ಪದಕ ಪ್ರದಾನ ಮಾಡಲಾಗುತ್ತದೆ.

ಹೋದ ವರ್ಷದ ಫೆಬ್ರುವರಿ 14ರಂದು ಪುಲ್ವಾಮದಲ್ಲಿ ನಡೆದಿದ್ದ ಉಗ್ರರ ದಾಳಿಯಲ್ಲಿ ಹುತಾತ್ಮರಾಗಿದ್ದ ಸಿಆರ್‌ಪಿಎಫ್‌ನ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ ಮೋಹನ್‌ ಲಾಲ್‌, ಜಾರ್ಖಂಡ್‌ನಲ್ಲಿ ಮಾವೋವಾದಿಗಳೊಂದಿಗೆ ನಡೆದಿದ್ದ ಗುಂಡಿನ ಚಕಮಕಿಯಲ್ಲಿ ಮಡಿದಿದ್ದ ಪೊಲೀಸ್‌ ಅಧಿಕಾರಿ ಬನುವಾ ಒರಾವೊನ್‌ ಅವರಿಗೆ ಮರಣೋತ್ತರವಾಗಿ ರಾಷ್ಟ್ರಪತಿಗಳ ಶೌರ್ಯ ಪ್ರಶಸ್ತಿ ಸಂದಿದೆ.

ಒಟ್ಟು 946 ಪೊಲೀಸರು ಈ ಸಲದ ರಾಷ್ಟ್ರಪತಿಗಳ ಪದಕಕ್ಕೆ ಆಯ್ಕೆಯಾಗಿದ್ದಾರೆ. ಈ ಪೈಕಿ 89 ಮಂದಿ ವಿಶಿಷ್ಟ ಸೇವೆಗಾಗಿ ಪದಕ ಗಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರೊಂದಿಗೆ ಹೋರಾಡಿದ್ದ 137 ಮಂದಿ ಸೇರಿದಂತೆ ಒಟ್ಟು 205 ಜನರಿಗೆ ರಾಷ್ಟ್ರಪತಿಗಳ ಶೌರ್ಯ ಪದಕ ಲಭಿಸಿದೆ. ಸಿಆರ್‌ಪಿಎಫ್‌ನ 68 ಸಿಬ್ಬಂದಿ ಹಾಗೂ ಜಮ್ಮು ಮತ್ತು ಕಾಶ್ಮೀರದ 52 ಮಂದಿ ಪೊಲೀಸರು ಈ ಪಟ್ಟಿಯಲ್ಲಿದ್ದಾರೆ. 

ಪುಲ್ವಾಮ ದಾಳಿ ನಡೆದ ದಿನ ಕಾರೊಂದು ತಮ್ಮತ್ತ ವೇಗವಾಗಿ ನುಗ್ಗಿ ಬರುತ್ತಿದ್ದುದ್ದನ್ನು ಗಮನಿಸಿದ್ದ ಮೋಹನ್‌ ಲಾಲ್‌ ಅವರು ಅದರತ್ತ ಗುಂಡು ಹಾರಿಸಿದ್ದರು, ಆ ಘಟನೆಯಲ್ಲಿ ಅವರನ್ನೊಳಗೊಂಡಂತೆ ಒಟ್ಟು 40 ಮಂದಿ ಸಿಆರ್‌ಪಿಎಫ್‌ ಸಿಬ್ಬಂದಿ ಹುತಾತ್ಮರಾಗಿದ್ದರು.

ಜಾರ್ಖಂಡ್‌ ಪೊಲೀಸ್‌ ಇಲಾಖೆಯಲ್ಲಿ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ ಆಗಿ ಸೇವೆ ಸಲ್ಲಿಸುತ್ತಿದ್ದ ಬನುವಾ ಅವರು 2018ರ ಜೂನ್‌ 8ರಂದು ಸಾರಯ್‌ಕೆಲಾ ಜಿಲ್ಲೆಯಲ್ಲಿ ಮಾವೋವಾದಿಗಳೊಂದಿಗೆ ಸುಮಾರು ಮೂರು ಗಂಟೆಗಳ ಕಾಲ ನಡೆದಿದ್ದ ಗುಂಡಿನ ಕಾಳಗದಲ್ಲಿ ವೀರ ಮರಣ ಹೊಂದಿದ್ದರು.

ಅಗ್ನಿಶಾಮಕ ದಳ, ನಾಗರಿಕ ರಕ್ಷಣೆ ಹಾಗೂ ಹೋಂ ಗಾರ್ಡ್‌ ಆಗಿ ಸೇವೆ ಸಲ್ಲಿಸುತ್ತಿರುವ ಒಟ್ಟು 73 ಮಂದಿಗೂ ರಾಷ್ಟ್ರಪತಿ ಪದಕ ಸಂದಿದೆ. ಈ ಪೈಕಿ ಅಗ್ನಿಶಾಮಕ ದಳದ ಎಂಟು ಮಂದಿಗೆ ಶೌರ್ಯ ಪದಕ ಲಭಿಸಿದೆ. 52 ಮಂದಿ ಜೈಲು ಸಿಬ್ಬಂದಿ ರಾಷ್ಟ್ರಪತಿ ಪದಕ ಪಡೆದಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು