ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಯೊಂದು ಮಸೀದಿಯಲ್ಲೂ ಶಿವಲಿಂಗ ಹುಡುಕುವ ಅಗತ್ಯವಿಲ್ಲ: ಮೋಹನ್‌ ಭಾಗವತ್‌

Last Updated 3 ಜೂನ್ 2022, 13:39 IST
ಅಕ್ಷರ ಗಾತ್ರ

ನಾಗಪುರ: ‘ಜ್ಞಾನವಾಪಿ ವಿವಾದವು ಕೆಲವು ನಂಬಿಕೆಯ ವಿಚಾರಗಳನ್ನು ಒಳಗೊಂಡಿದೆ. ನ್ಯಾಯಾಲಯದ ತೀರ್ಪನ್ನು ಎಲ್ಲರೂ ಒಪ್ಪಬೇಕು. ಆದರೆ, ಪ್ರತಿ ಮಸೀದಿಯಲ್ಲಿ ಶಿವಲಿಂಗ ಹುಡುಕುವ ಮತ್ತುಪ್ರತಿ ದಿನ ಹೊಸ ವಿವಾದ ಸೃಷ್ಟಿಸುವ ಅಗತ್ಯವಿಲ್ಲ’ ಎಂದುಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ.

ಗುರುವಾರ ಇಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂರನೇ ವರ್ಷದ ಅಧಿಕಾರಿ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಜ್ಞಾನವಾಪಿ ಆವರಣದ ಕೊಳದಲ್ಲಿ ಶಿವಲಿಂಗ ಕಂಡುಬಂದಿದೆ ಎಂದು ಜ್ಞಾನವಾಪಿ ಪ್ರಕರಣದಲ್ಲಿ ಹಿಂದೂ ಅರ್ಜಿದಾರರು ನೀಡಿರುವ ಹೇಳಿಕೆ ಉಲ್ಲೇಖಿಸಿ, ‘ನಮಗೆ ಅಂತಹ ಸ್ಥಳಗಳಲ್ಲಿ ವಿಶೇಷ, ಸಾಂಕೇತಿಕ ನಂಬಿಕೆ ಇರುವುದು ನಿಜ. ಆದರೆ, ಪ್ರತಿದಿನ ಹೊಸ ವಿಷಯ ಎತ್ತಬಾರದು. ವಿವಾದಗಳನ್ನು ಏಕೆ ಉಲ್ಬಣಗೊಳಿಸಬೇಕು’ ಎಂದು ಭಾಗವತ್‌ ಪ್ರಶ್ನಿಸಿದರು.

‘ಅಯೋಧ್ಯೆ ಹೋರಾಟದಲ್ಲಿ ಭಾಗವಹಿಸಿದ್ದು ಒಂದು ಅಪವಾದ. ಭವಿಷ್ಯದಲ್ಲಿ ಇಂತಹ ಹೋರಾಟಗಳನ್ನು ಕೈಗೊಳ್ಳುವುದಿಲ್ಲವೆಂದುಆರೆಸ್ಸೆಸ್‌ಈಗಾಗಲೇ ಸ್ಪಷ್ಟಪಡಿಸಿದೆ. ಈಗವಾರಾಣಸಿಯ ಜ್ಞಾನವಾಪಿ ಮಸೀದಿ ಕುರಿತು ಚರ್ಚೆ ನಡೆಯುತ್ತಿದೆ. ಇದಕ್ಕೆ ಇತಿಹಾಸವಿದೆ, ಅದನ್ನು ನಾವು ಬದಲಿಸಲು ಸಾಧ್ಯವಿಲ್ಲ. ಆ ಇತಿಹಾಸವನ್ನು ನಾವು ಅಥವಾ ಇಂದಿನ ಹಿಂದೂಗಳು ಅಥವಾ ಮುಸ್ಲಿಮರು ಮಾಡಿದ್ದಲ್ಲ. ಇದು ಇಸ್ಲಾಂ ಭಾರತಕ್ಕೆ ಬಂದಾಗ ಸಂಭವಿಸಿದೆ. ಆಕ್ರಮಣಕಾರರು, ಸ್ವಾತಂತ್ರ್ಯ ಬಯಸುವವರ ಸ್ಥೈರ್ಯ ಕುಂದಿಸಲು ದೇವಾಲಯಗಳನ್ನು ನಾಶಪಡಿಸಿದರು. ಅಂತಹ ಭಗ್ನಗೊಂಡ ಸಾವಿರಾರು ದೇವಾಲಯಗಳು ಈಗಲೂ ಇವೆ. ಆದರೆ ಆರೆಸ್ಸೆಸ್‌ ಈ ವಿಷಯದ ಬಗ್ಗೆ ಏನನ್ನೂ ಹೇಳಲು ಬಯಸುವುದಿಲ್ಲ’ ಎಂದು ಭಾಗವತ್‌ ಹೇಳಿದರು.

‘ನವೆಂಬರ್ 9ರ ರಾಮಜನ್ಮಭೂಮಿ ಆಂದೋಲನ ಸಂಬಂಧ ನಾವು ಹೇಳಬೇಕಾದ್ದನ್ನು ಹೇಳಿದ್ದೆವು. ಅದು ನಮ್ಮ ಸ್ವಭಾವಕ್ಕೆ ವಿರುದ್ಧವಾಗಿದ್ದರೂ ನಾವು ಅದರಲ್ಲಿ ಭಾಗಿಯಾದೆವು. ಕೆಲವು ಐತಿಹಾಸಿಕ ಕಾರಣಗಳಿಗಾಗಿ ಮತ್ತು ಅಂದಿನ ಪರಿಸ್ಥಿತಿಯಿಂದಾಗಿ ನಾವು ಆ ಕೆಲಸ ಪೂರ್ಣಗೊಳಿಸಿದೆವು. ಆದರೆ, ಪ್ರತಿ ಬಾರಿಯೂ ಇದು ಸಂಭವಿಸುವುದಿಲ್ಲ. ಜನರು ನ್ಯಾಯಾಲಯಗಳ ಮೊರೆ ಹೋಗುತ್ತಾರೆ.ನ್ಯಾಯಾಂಗ ವ್ಯವಸ್ಥೆಯನ್ನು ಪವಿತ್ರ ಮತ್ತು ಸರ್ವೋಚ್ಚವೆಂದು ಪರಿಗಣಿಸಿ ನ್ಯಾಯಾಲಯದ ಆದೇಶವನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ಜ್ಞಾನವಾಪಿ ಮಸೀದಿ-ಕಾಶಿ ವಿಶ್ವನಾಥ ದೇವಾಲಯ ವಿವಾದದಲ್ಲಿ ಎಲ್ಲರೂ ಪರಸ್ಪರ ಒಪ್ಪಿಗೆಯೊಂದಿಗೆ ಪರಿಹಾರ ಕಂಡುಕೊಳ್ಳಬೇಕು’ ಎಂದು ಭಾಗವತ್‌ ಸಲಹೆ ನೀಡಿದ್ದಾರೆ.

ಭಯೋತ್ಪಾದನೆ ಬೇಡ: ಭಾಗವತ್‌

‘ಯಾವುದೇ ಸಮುದಾಯವು ಭಯೋತ್ಪಾದನೆಯನ್ನು ಬೆಂಬಲಿಸಬಾರದು’ ಎಂದು ಮೋಹನ್‌ ಭಾಗವತ್‌ ಹೇಳಿದ್ದಾರೆ.

‘ಹಿಂದೂ ಸಮುದಾಯವು ಯಾವುದೇ ರೀತಿಯ ಉಗ್ರವಾದ ಸ್ವೀಕರಿಸುವುದಿಲ್ಲ. ಹಾಗಾಗಿಯೇ ಯಹೂದಿಗಳು ಅಥವಾ ಪಾರ್ಸಿಗಳು ಸೇರಿಎಲ್ಲ ರೀತಿಯ ಜನರು ಹಿಂದೂ ಸಮುದಾಯದ ಆಶ್ರಯ ಪಡೆದರು. ಹಿಂದೂಗಳು ತಮ್ಮ ಹಿಂದೂ ಗುಣ ಸುಧಾರಿಸಿಕೊಳ್ಳಬೇಕು. ಹೆಚ್ಚು ಶಕ್ತಿಶಾಲಿಯಾಗಬೇಕು. ಒಗ್ಗಟ್ಟಿನ ಹಿಂದೂ ಸಮುದಾಯವು ಜಾಗತಿಕ ಸಂಘರ್ಷಗಳನ್ನು ಪರಿಹರಿಸುವ ಮೂಲಕ ಹೊಸ ಜಗತ್ತನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿದೆ’ ಎಂದು ಅವರು ಹೇಳಿದರು.

‘ಎಲ್ಲರೂ ಪರಸ್ಪರರ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಗೌರವಿಸಬೇಕು. ಹೃದಯದಲ್ಲಿ, ಮಾತಿನಲ್ಲಿ ಅಥವಾ ಕೆಲಸದಲ್ಲಿ ಯಾವುದೇ ಉಗ್ರವಾದ ಇರಬಾರದು. ಎರಡೂ ಕಡೆಯಿಂದ ಬೆದರಿಕೆಯ ಮಾತುಗಳು ಇರಬಾರದು.ಹಿಂದೂಗಳ ಕಡೆಯಿಂದ ಬೆದರಿಕೆ ಕಡಿಮೆಯಾಗಿದೆ.ಹಿಂದೂಗಳು ಸಂಯಮ ಕಾಪಾಡಿಕೊಂಡಿದ್ದಾರೆ. ದೇಶ ವಿಭಜನೆಯ ವೇಳೆ ಹಿಂದೂಗಳು ಅಪಾರ ಬೆಲೆ ತೆತ್ತಿದ್ದಾರೆ’ ಎಂದರು.

‘ಮುಸ್ಲಿಮರ ಆರಾಧನಾ ವಿಧಾನ ಹೊರಗಿನಿಂದ ಬಂದಿದ್ದರೂ ಮುಸ್ಲಿಮರು ಹೊರಗಿನವರಲ್ಲ. ಅವರ ಮತ್ತು ನಮ್ಮ ಸಂಪ್ರದಾಯವು ಒಂದೇ ಆಗಿದೆ. ಕೆಲವು ರಾಷ್ಟ್ರೀಯವಾದಿ ಮುಸ್ಲಿಮರು ಅನೇಕ ಸ್ವಾತಂತ್ರ್ಯ ಹೋರಾಟಗಳಲ್ಲಿ ಹಿಂದೂಗಳೊಂದಿಗೆ ಕೈಜೋಡಿಸಿದ್ದಾರೆ. ಅವರು ನಮ್ಮ ದೇಶದ ಮುಸ್ಲಿಮರಿಗೆ ಆದರ್ಶಪ್ರಾಯರಾಗಿದ್ದಾರೆ’ ಎಂದೂ ಭಾಗವತ್ ಹೇಳಿದರು.

‘ಮುಸ್ಲಿಮರು ತಮ್ಮ ಸ್ವಂತ ಪೂರ್ವಜರ ವಂಶಸ್ಥರು ಮತ್ತು ರಕ್ತ ಸಂಬಂಧದಿಂದ ಸಹೋದರರು ಎಂಬುದನ್ನು ಹಿಂದೂಗಳು ಅರ್ಥ ಮಾಡಿಕೊಳ್ಳಬೇಕು. ಅವರು ಮಾತೃ ಧರ್ಮಕ್ಕೆ ವಾಪಸಾಗಲು ಬಯಸಿದರೆ ಅವರನ್ನುನಾವು ಮುಕ್ತವಾಗಿ ಸ್ವಾಗತಿಸುತ್ತೇವೆ. ಅವರು ಹಿಂತಿರುಗದಿದ್ದರೂ ಪರವಾಗಿಲ್ಲ,ಎಲ್ಲರೂ ಅವರವರ ಧರ್ಮ ಅನುಸರಿಸಲಿ. ನಮ್ಮಲ್ಲಿ ಈಗಾಗಲೇ 33 ಕೋಟಿ ದೇವರುಗಳಿವೆ. ಇನ್ನಷ್ಟು ಸೇರಿಸಿಕೊಳ್ಳುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT