ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎತ್ತಿನಗಾಡಿ ಓಟದ ಸ್ಪರ್ಧೆಗೆ ‘ಸುಪ್ರೀಂ’ ಅಸ್ತು

Last Updated 16 ಡಿಸೆಂಬರ್ 2021, 10:48 IST
ಅಕ್ಷರ ಗಾತ್ರ

ನವದೆಹಲಿ: ಮಹಾರಾಷ್ಟ್ರದಲ್ಲಿ ಎತ್ತಿನಗಾಡಿ ಓಟದ ಸ್ಪರ್ಧೆಯನ್ನು ಆಯೋಜಿಸಲು ಸುಪ್ರೀಂ ಕೋರ್ಟ್‌ ಗುರುವಾರ ಅನುಮತಿ ನೀಡಿದೆ. ರಾಜ್ಯದಲ್ಲಿ 2017ರಿಂದ ಈ ಸ್ಪರ್ಧೆಯನ್ನು ನಿಷೇಧಿಸಲಾಗಿದೆ.

ಈ ಕುರಿತು ಬಾಕಿ ಇದ್ದ ಎಲ್ಲ ಅರ್ಜಿಗಳನ್ನು ಸಂವಿಧಾನ ಪೀಠದ ಪರಾಮರ್ಶೆಗೆ ಪೀಠ ಒಪ್ಪಿಸಿತು. ‘ಪ್ರಾಣಿ ಹಿಂಸೆ ತಡೆ ಕಾಯ್ದೆ 1960’ಕ್ಕೆ ತಂದಿರುವ ತಿದ್ದುಪಡಿ ಮತ್ತು ಈ ಸಂಬಂಧ ಮಹಾರಾಷ್ಟ್ರ ಸರ್ಕಾರ ರೂಪಿಸಿರುವ ನಿಯಮಗಳು ವಿಚಾರಣೆ ಬಾಕಿ ಉಳಿದಿರುವ ಅವಧಿಯಲ್ಲಿ ಚಾಲ್ತಿಯಲ್ಲಿರುತ್ತವೆ ಎಂದೂ ಕೋರ್ಟ್ ತಿಳಿಸಿತು.

ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್ ನೇತೃತ್ವದ ತ್ರಿಸದಸ್ಯ ಪೀಠವು, ‘ಇದೇ ರೀತಿಯ ಸ್ಪರ್ಧೆಗಳು ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ನಡೆಯುತ್ತಿವೆ. ಆ ರಾಜ್ಯಗಳಲ್ಲಿ ಕಾಯ್ದೆಗೆ ತಂದಿರುವ ತಿದ್ದುಪಡಿ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಯಾವುದೇ ಮಧ್ಯಂತರ ಆದೇಶ ನೀಡಿಲ್ಲ’ಎಂದು ಉಲ್ಲೇಖಿಸಿತು.

ಆ ಎರಡು ರಾಜ್ಯಗಳಲ್ಲಿ ತಂದಂತೆಯೇ ಮಹಾರಾಷ್ಟ್ರದಲ್ಲಿಯೂ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಹೀಗಾಗಿ, ಅದೇ ಮಾನದಂಡವನ್ನು ಇಲ್ಲೂ ಅಳವಡಿಸಬೇಕು ಎಂದು ಪೀಠ ಅಭಿಪ್ರಾಯಪಟ್ಟಿತು. ನ್ಯಾಯಮೂರ್ತಿಗಳಾದ ದಿನೇಶ್‌ ಮಹೇಶ್ವರಿ ಮತ್ತು ಸಿ.ಟಿ.ರವಿಕುಮಾರ್‌ ಅವರು ಈ ಪೀಠದ ಇತರ ಸದಸ್ಯರು.

ಕರ್ನಾಟಕ ಮತ್ತು ತಮಿಳುನಾಡು ಪ್ರಕರಣ ಉಲ್ಲೇಖಿಸಿ ಅರ್ಜಿ ಸಲ್ಲಿಸಿದ್ದ ಮಹಾರಾಷ್ಟ್ರ ಸರ್ಕಾರ, ರಾಜ್ಯದಲ್ಲಿ ಎತ್ತಿನಗಾಡಿ ಓಟದ ಸ್ಪರ್ಧೆಯ ಮೇಲೆ ವಿಧಿಸಿರುವ ನಿಷೇಧವನ್ನು ಹಿಂಪಡೆಯಬೇಕು ಎಂದು ಕೋರಿತ್ತು.

ಎತ್ತಿನಗಾಡಿ ಓಟದ ಸ್ಪರ್ಧೆಗೆ ಬಾಂಬೆ ಹೈಕೋರ್ಟ್‌2017ರಲ್ಲಿ ನಿಷೇಧ ಹೇರಿದ್ದು, ಹಿಂಪಡೆಯಲು ನಿರಾಕರಿಸಿದೆ. ಇಂತಹದೇ ಸ್ಪರ್ಧೆ ಇರುವ ಕರ್ನಾಟಕ, ತಮಿಳುನಾಡಿನಲ್ಲಿ ನಿರ್ಬಂಧ ಇಲ್ಲ ಎಂದು ಮಹಾರಾಷ್ಟ್ರ ಹೇಳಿತ್ತು.

ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಇದರೊಂದಿಗೆ ನಡೆಸಬೇಕು. ಸಂಬಂಧಿತ ವಾದಿಗಳು ಈ ಸಂಬಂಧ ಮುಖ್ಯ ವಿಷಯದ ವಿಚಾರಣೆಗೆ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಅವರಿಗೇ ಮನವಿ ಸಲ್ಲಿಸಬಹುದು ಎಂದು ಪೀಠವು ಸಲಹೆ ಮಾಡಿತು.

ಹಿರಿಯ ವಕೀಲ ಮುಕುಲ್ ರೋಹಟಗಿ ಅವರು ಮಹಾರಾಷ್ಟ್ರ ಸರ್ಕಾರವನ್ನು ಪ್ರತಿನಿಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT