ಏಕರೂಪ ನಾಗರಿಕ ಸಂಹಿತೆ: ಪಿಐಎಲ್ ವಜಾಗೊಳಿಸಿದ ‘ಸುಪ್ರೀಂ’

ನವದೆಹಲಿ: ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅನುಷ್ಠಾನಕ್ಕೆ ಸಮಿತಿಗಳನ್ನು ರಚಿಸಿರುವ ಗುಜರಾತ್ ಮತ್ತು ಉತ್ತರಾಖಂಡ ಸರ್ಕಾರಗಳ ನಿರ್ಧಾರವನ್ನು ಪ್ರಶ್ನಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆಗೆ ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
ಇಂತಹ ಸಮಿತಿಗಳನ್ನು ರಚಿಸಲು ರಾಜ್ಯ ಸರ್ಕಾರಗಳಿಗೆ ಸಂವಿಧಾನವು 162ನೇ ವಿಧಿಯಡಿ ಅಧಿಕಾರ ನೀಡಿದೆ. ಇದು ತಪ್ಪಲ್ಲ. ಹಾಗಾಗಿ ಈ ಅರ್ಜಿ ವಿಚಾರಣೆಗೆ ಪರಿಗಣಿಸಲಾಗದು ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ.ಎಸ್.ನರಸಿಂಹ ಅವರಿದ್ದ ಪೀಠವು ಅರ್ಜಿದಾರರಾದ ವಕೀಲ ಅನೂಪ್ ಬರನ್ವಾಲ್ ಮತ್ತು ಇತರರಿಗೆ ಹೇಳಿದೆ.
ಯುಸಿಸಿ ಅನುಷ್ಠಾನದ ಪರಿಶೀಲನೆಗಾಗಿ ಎರಡೂ ರಾಜ್ಯ ಸರ್ಕಾರಗಳು ಸಮಿತಿಗಳನ್ನು ರಚಿಸಿರುವುದನ್ನು ಪಿಐಎಲ್‌ನಲ್ಲಿ ಪ್ರಶ್ನಿಸಲಾಗಿತ್ತು.
ವಿಚ್ಛೇದನ, ದತ್ತು ಸ್ವೀಕಾರ, ಪಿತ್ರಾರ್ಜಿತ, ಪಾಲನೆ ವಿಷಯದಲ್ಲಿ ಧರ್ಮ, ಲಿಂಗಭೇದವಿಲ್ಲದೆ ಎಲ್ಲ ನಾಗರಿಕರಿಗೂ ಒಂದೇ ರೀತಿಯ ಕಾನೂನು ಅನ್ವಯಿಸುವುದು ಯುಸಿಸಿಯ ಉದ್ದೇಶವಾಗಿದ್ದು, ಇದರ ಅನುಷ್ಠಾನಕ್ಕೆ ಕಾನೂನುಗಳ ತಿದ್ದುಪಡಿ ಪರಿಶೀಲನೆಗಾಗಿ ಗುಜರಾತ್ ಮತ್ತು ಉತ್ತರಾಖಂಡ ರಾಜ್ಯ ಸರ್ಕಾರಗಳು ತಜ್ಞರ ಸಮಿತಿಗಳನ್ನು ರಚಿಸಿವೆ.
ಏಕರೂಪದ ನಾಗರಿಕ ಸಂಹಿತೆಯ ವಿಷಯವು ಶಾಸಕಾಂಗದ ವ್ಯಾಪ್ತಿಗೆ ಬರುತ್ತದೆ ಎಂದು ಕೇಂದ್ರ ಸರ್ಕಾರವು ಸಮರ್ಥಿಸಿಕೊಂಡಿದೆ. ಯುಸಿಸಿ ಜಾರಿಗೆ ಸಂಬಂಧಿಸಿದ ಹಲವು ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.