ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿಗಳಿಗೆ ಪೂರಕ ಘಟಕ ಸ್ಥಾಪನೆ, ಸಹಕಾರಿ ಸಂಘಗಳಿಗೆ ನೆರವು: ಕರಂದ್ಲಾಜೆ

Last Updated 9 ಜುಲೈ 2021, 21:58 IST
ಅಕ್ಷರ ಗಾತ್ರ

ನವದೆಹಲಿ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಸಹಕಾರಿ ಸಂಘ– ಸಂಸ್ಥೆಗಳ ಸಹಭಾಗಿತ್ವಕ್ಕೆ ಅವಕಾಶ ನೀಡಲು ಕೇಂದ್ರದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಎಪಿಎಂಸಿ ಆವರಣದಲ್ಲೇ ರೈತರಿಗೆ ಎಲ್ಲ ಅಗತ್ಯ ಸೌಲಭ್ಯ ಒದಗಿಸುವತ್ತ ಸರ್ಕಾರ ಆದ್ಯತೆ ನೀಡಿದೆ ಎಂದರು.

ಎಪಿಎಂಸಿ ಆವರಣದಲ್ಲಿ ಶೀಥಲೀಕರಣ, ಧಾನ್ಯ ವಿಂಗಡಣೆ ಮತ್ತು ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಇದುವರೆಗೆ ಕೇವಲ ಸರ್ಕಾರಿ ಸಂಸ್ಥೆಗಳಿಗೆ ಮಾತ್ರ ಅವಕಾಶವಿತ್ತು. ಸ್ವ–ಸಹಾಯ ಸಂಘ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಕೃಷಿಕರನ್ನು ಒಳಗೊಂಡ ಇತರೆ ಸಹಕಾರಿ ಸಂಘಗಳಿಗೆ ಈ ಘಟಕಗಳ ಸ್ಥಾಪನೆಗೆ ₹ 2 ಕೋಟಿ ಸಾಲ ಸೌಲಭ್ಯ ನೀಡುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.

ಮಾರುಕಟ್ಟೆ ಆವರಣದಲ್ಲಿ ಮಾತ್ರವಲ್ಲದೆ, ಆಯಾ ಗ್ರಾಮಗಳಲ್ಲೂ ಮಾರುಕಟ್ಟೆಗೆ ಪೂರಕವಾದ ಘಟಕಗಳನ್ನು ಸ್ಥಾಪಿಸಲು ಸಹಕಾರಿ ಸಂಘಗಳಿಗೆ ಹಣಕಾಸಿನ ನೆರವು ನೀಡಲಾಗುವುದು. ನೂತನ ಕೃಷಿ ಕಾಯ್ದೆಯಿಂದ ಎಪಿಎಂಸಿಗಳು ಮಹತ್ವ ಕಳೆದುಕೊಳ್ಳಲಿವೆ ಎಂದು ಆರೋಪಿಸುತ್ತಿರುವ ವಿರೋಧ ಪಕ್ಷಗಳಿಗೆ ಈ ಮೂಲಕ ತಕ್ಕ ಉತ್ತರ ನೀಡಲಾಗಿದೆ ಎಂದು ಅವರು ತಿಳಿಸಿದರು.

ಕೊಬ್ಬರಿ ರಫ್ತಿಗೆ ಕ್ರಮ: ದರ ಕುಸಿತದಿಂದ ಕಂಗಾಲಾಗಿರುವ ತೆಂಗು ಬೆಳೆಗಾರರಿಗೆ ನೆರವು ನೀಡಲೆಂದೇ ವಿದೇಶಗಳಿಗೆ ಕೊಬ್ಬರಿಯನ್ನು ರಫ್ತು ಮಾಡಲು ಅನುಮತಿ ನೀಡಲು ಸರ್ಕಾರ ನಿರ್ಧರಿಸಿದೆ. ಇದರಿಂದ ರೈತರಿಗೆ ಉತ್ತಮ ದರ ದೊರೆಯಲಿದೆ ಎಂದು ಅವರು ಹೇಳಿದರು.

ತೆಂಗು ಅಭಿವೃದ್ಧಿ ಮಂಡಳಿಗಳಲ್ಲಿ ಇದುವರೆಗೆ ಐಎಎಸ್‌ ಅಧಿಕಾರಿಗಳು ಮಾತ್ರ ಅಧ್ಯಕ್ಷರಾಗಲು ಇದ್ದ ಅವಕಾಶವನ್ನು ಸಾಮಾನ್ಯ ರೈತರಿಗೂ ವಿಸ್ತರಿಸಲಾಗಿದೆ ಎಂದು ಹೇಳಿದ ಅವರು, ಅಧ್ಯಕ್ಷರನ್ನು ಕೇಂದ್ರ ಸರ್ಕಾರವೇ ನೇಮಕ ಮಾಡಲಿದೆ ಎಂದರು.

ಈ ಮಂಡಳಿಗಳಲ್ಲಿ ತಲಾ 6 ಸದಸ್ಯರ ನೇಮಕಕ್ಕೆ ಇದ್ದ ಹಳೆಯ ನಿಯಮ ಬದಲಿಸಿ, 8 ಜನ ಸದಸ್ಯರ ನೇಮಕಕ್ಕೂ ಅನುವು ಮಾಡಿಕೊಡಲಾಗುವುದು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT