ಮಂಗಳವಾರ, ಮಾರ್ಚ್ 28, 2023
32 °C

ಇ.ಸಿಯಿಂದ ಬಹಿರಂಗಪಡಿಸದ ಸಾಫ್ಟ್‌ವೇರ್‌ ಬಳಕೆ: ಸುಪ್ರೀಂನಿಂದ ಕೇಂದ್ರಕ್ಕೆ ನೋಟಿಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ:  ಚುನಾವಣಾ ಆಯೋಗವು (ಇ.ಸಿ) ಮತದಾರರ ದಾಖಲೆಗಳನ್ನು ಆಧಾರ್‌ ಜೊತೆ ಬೆಸೆಯಲು ಬಹಿರಂಗಪಡಿಸದ ಸಾಫ್ಟ್‌ವೇರ್‌ ಒಂದನ್ನು ಬಳಸುತ್ತಿದೆ ಎಂದು ಆರೋಪಿಸಿ ಸಲ್ಲಿಕೆಯಾಗಿದ್ದ ಅರ್ಜಿ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ಕೇಂದ್ರ ಸರ್ಕಾರ, ಜಾರಿ ನಿರ್ದೇಶನಾಲಯ ಮತ್ತಿತರರಿಗೆ ಸುಪ್ರೀಂ ಕೋರ್ಟ್‌ ನೋಟಿಸ್‌ ನೀಡಿದೆ. 

ಮತದಾರರ ಮಾಹಿತಿ ಪಡೆಯುವ ಸಲುವಾಗಿ ಇ.ಸಿ ಈ ಕ್ರಮ ಕೈಗೊಂಡಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. 

ಹೈದರಾಬಾದ್‌ ಮೂಲದ ಸಾಫ್ಟ್‌ವೇರ್‌ ಇಂಜಿನಿಯರ್‌ ಶ್ರೀನಿವಾಸ್‌ ಕೊಡಾಲಿ ಅವರು ಈ  ಅರ್ಜಿ ಸಲ್ಲಿಸಿದ್ದರು. ಇದು ಅತ್ಯಂತ ಮುಖ್ಯ ಸಮಸ್ಯೆ ಎಂದು ಅವರು ಹೇಳಿದ್ದರು. ಈ ಅರ್ಜಿ ಪರಿಶೀಲಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಮತ್ತು ನ್ಯಾಯಮೂರ್ತಿ ಪಿ.ಎಸ್‌. ನರಸಿಂಹ ಅವರಿದ್ದ ಪೀಠವು ಈ ಅರ್ಜಿಯ ವಿಚಾರಣೆ ನಡೆಸಲು ತೀರ್ಮಾನಿಸಿದೆ.

ಈ ವಿಷಯಕ್ಕೆ ಸಂಬಂಧಿಸಿ 2022ರ ಏಪ್ರಿಲ್‌ 21ರಂದು ತೆಲಂಗಾಣ ಹೈಕೋರ್ಟ್‌ಗೆ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅದನ್ನು ಹೈಕೋರ್ಟ್‌ ತಿರಸ್ಕರಿಸಿತ್ತು. ಹೈಕೋರ್ಟ್‌ ತೀರ್ಪಿನ ಸಿಂಧುತ್ವವನ್ನು ಶ್ರೀನಿವಾಸ್‌ ಅವರು ಪ್ರಶ್ನಿಸಿದ್ದಾರೆ. 

ಮತದಾರರ ಪಟ್ಟಿಯಲ್ಲಿರುವ ನಕಲಿ ಮತದಾರರು, ಮೃತಪಟ್ಟಿರುವವರು ಮತ್ತು ಸ್ಥಳಾಂತರಗೊಂಡಿರುವ ಮತದಾರರನ್ನು ಗುರುತಿಸಲು ಇ.ಸಿ ಬಹಿರಂಗಪಡಿಸದ ಸಾಫ್ಟ್‌ವೇರನ್ನು ಅಳವಡಿಸಿದೆ. ಆದರೆ ಮತದಾರರ ಪಟ್ಟಿ ಪರಿಶೀಲಿಸಲು ಸಾಫ್ಟ್‌ವೇರ್‌ ಅಥವಾ ಅಲ್ಗಾರಿಮ್‌ ಬಳಸುವುದು ಕೂನೂನು ಸಮ್ಮತವಲ್ಲ. ಈ ಅಂಶಗಳನ್ನು ಹೈಕೋರ್ಟ್‌ ಪರಿಗಣಿಸಿಲ್ಲ ಎಂದು ಅವರು ಅರ್ಜಿಯಲ್ಲಿ ಹೇಳಿದ್ದಾರೆ. 

ಮತದಾರರ ಪಟ್ಟಿಯನ್ನು ಪರಿಶೀಲಿಸುವ ನಿಟ್ಟಿನಲ್ಲಿ 2015ರಲ್ಲಿ ಆಯೋಗವು ಸ್ವಯಂ ಪ್ರೇರಿತವಾಗಿ ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಸುಮಾರು 46 ಲಕ್ಷ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಿತ್ತು. ಮತದಾರರ ಗುರುತಿನ ಚೀಟಿಯನ್ನು ಆಧಾರ್‌ ಜೊತೆ ಜೋಡಿಸಿತ್ತು. ರಾಜ್ಯದ ನಿವಾಸಿಗಳ ಮಾಹಿತಿಯನ್ನು ಕಲೆ ಹಾಕಿತ್ತು ಮತ್ತು ಅದು ರಾಜ್ಯ ಸರ್ಕಾರಗಳಿಗೆ ದೊರಕುವಂತೆ ಮಾಡಿತ್ತು. 

ಮತದಾರರ ದಾಖಲೆಗಳನ್ನು ಆಧಾರ್‌ ಕಾರ್ಡ್‌ ಜೊತೆ ಜೋಡಿಸುವ ಕೆಲಸವನ್ನು ‘ರಾಷ್ಟ್ರೀಯ ಮತದಾರರ ಪಟ್ಟಿ ಶುದ್ದೀಕರಣ ಮತ್ತು ದೃಢೀಕರಣ ಕಾರ್ಯಕ್ರಮ’ (ಎನ್‌ಇಆರ್‌ಪಿಎಪಿ) ಅಡಿ ನಡೆಸಲಾಗುತ್ತಿದೆ. ಆದರೆ ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ಇತರ ಕ್ರಮಗಳನ್ನು ಯಾವುದೇ ನಿರ್ದಿಷ್ಟ ನೀತಿ, ನಿಯಮವಿಲ್ಲದೇ ಕೈಗೊಳ್ಳಲಾಗಿದೆ ಎಂದು ಅವರು ಅರ್ಜಿಯಲ್ಲಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು